ಪಯಸ್ವಿನಿ. com ಕ್ಲಬ್ ಹೌಸ್ ನ ನಾಲ್ಕನೇ ವಾರ್ಷಿಕ ಕಾರ್ಯಕ್ರಮ 6-7-2025ರಂದು ಸಂಪನ್ನವಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶ್ರೀ ಶ್ರೀಧರ ಭಟ್, ತೊಟ್ಟುಂಗುಳಿ, ಕಾರಡ್ಕ ಇವರು ಭಾಗವಹಿಸಿದರು. ಶ್ರೀಯುತರು ತಮ್ಮ ಆವಿಷ್ಕಾರವಾದ ಅಡಿಕೆಯ ಮರಕ್ಕೆ ಔಷಧಿ ಸಿಂಪರಣೆಯ ರಿಮೋಟ್ ಚಾಲಿತ ಉಪಕರಣವನ್ನು ವಿವರಿಸಿದರು. ಅಡಿಕೆಯ ಮರಕ್ಕೆ ಹೆಚ್ಚು ಎತ್ತರಕ್ಕೆ ಏರಿ ಅಲ್ಲಿಂದ ಗೊನೆಗೆ ಮೇಲಿನಿಂದ ಔಷಧಿ ಬೀಳುವಂತೆ ನೀಡುವುದೇ ರೋಗ ತಡೆಗಟ್ಟಲು ಸೂಕ್ತ ಮಾರ್ಗ ಎಂದು ಅವರ ತಂದೆಯವರು ಹೇಳುತ್ತಿದ್ದುದಾಗಿ ತಿಳಿಸಿದರು. ತಾನು ಸ್ವತಃ ಅವಘಡಕ್ಕೊಳಗಾಗಿ ಊರಿನಲ್ಲಿದ್ದಾಗ ಕೃಷಿಕರ ಸೌಲಭ್ಯಕ್ಕಾಗಿ ಇದನ್ನು ಮಾಡುವ ಪ್ರೇರಣೆ ಉಂಟಾಗಿ, ಸುಮಾರು 8 ವರ್ಷಗಳ ಸತತ ಪ್ರಯತ್ನದಿಂದ ಈ ಆವಿಷ್ಕಾರ ಉತ್ಪಾದನೆಯ ಹಂತವನ್ನು ತಲುಪಿರುವುದಾಗಿ ತಿಳಿಸಿದರು. ಅದರ ನಂತರ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ ಕೃಷಿಕರ ಸಂಶಯಗಳಿಗೆ ಉತ್ತರಿಸಿದರು.
ರಿಮೋಟ್ ಚಾಲಿತ ಸ್ಪ್ರೇಯರ್
ಇದೊಂದು ಮಾನವ ರಹಿತ ಅಡಿಕೆ ಮರವೇರುವ ಯಂತ್ರವಾಗಿದ್ದು ಇಲೆಕ್ಟ್ರಿಕ್ ಮೋಟಾರ್ ಹಾಗೂ ಸ್ವಿಚ್ ಗಳನ್ನು ಹೊಂದಿದೆ. ಕೇವಲ 4 ಕೆಜಿ ಭಾರವಿದ್ದು ಅಳವಡಿಸುವುದು ಸುಲಭ. ಅಗತ್ಯದ ಬ್ಯಾಟರಿ ಅಥವಾ ಪವರ್ ಸಪ್ಲೈ ನೀಡಬೇಕು. ಸಿಂಪರಣೆಗೆ ನೋಜಲ್ ಇದ್ದು ಅದು ಜಾಯ್ ಸ್ಟಿಕ್ ಮೂಲಕ ಸುತ್ತುವುದು ಹಾಗೂ ಮೇಲ್ಮುಖ-ಕೆಳಮುಖ ಚಲನೆಯನ್ನು ಮಾಡಿ ಗುರಿಯತ್ತ ಸ್ಪ್ರೇ ನೆಲದಿಂದಲೇ ಆಪರೇಟ್ ಮಾಡಬಹುದು. ಹತ್ತು ಲೀಟರ್ ನಷ್ಟು ಔಷಧಿ ಯನ್ನು ಈ ಯಂತ್ರಕ್ಕೆ ಅಡಿಕೆಯ ಮರದ ತುದಿಯ ತನಕ ಒಯ್ಯಲು ಸಾಮರ್ಥ್ಯವ ಹೊಂದಿದೆ. ಸಾಮಾನ್ಯ ಸುತ್ತಲಿನ ಹತ್ತು ಮರಗಳಿಗೆ ಅಲ್ಲಿಂದಲೇ ಸ್ವಿಚ್ ಒತ್ತಿದಾಗ ಔಷಧಿ ಸಿಂಪಡಿಸಬಲ್ಲದು.
ಕೃಷಿಕರ ಅವಶ್ಯಕತೆಗೆ ಅನುಸರಿಸಿ ಸಾಮರ್ಥ್ಯ ಹೆಚ್ಚು ಕಡಿಮೆ ಮಾಡಬಹುದು. ಇದಕ್ಕಾಗಿ ಕೃಷಿಕರು ಸಲಹೆ ಸೂಚನೆಗಳನ್ನಿತ್ತು ಆದಷ್ಟು ಬೇಗ ಉಪಕರಣ ಮಾರುಕಟ್ಟೆ ಕಾಣಲು ಸಹಕರಿಸಬೇಕು. ಇದಕ್ಕಾಗಿ ಒಂದೆರಡು ಪ್ರಾತ್ಯಕ್ಷಿಕೆಗಳನ್ನು ನೀಡಲು ಸಿದ್ಧರಿರುವುದಾಗಿ ಶ್ರೀಧರ ಭಟ್ ತಿಳಿಸಿದರು.
ವಾರ್ಷಿಕ ಕಾರ್ಯಕ್ರಮದಲ್ಲಿ ಕೋಡಪದವು ಸಾಂದೀಪಿನಿ ಶ್ರೀ ವಿಷ್ಣು ಭಟ್, ಕೈಲಾರು ಶ್ರೀ ಸುಬ್ರಹ್ಮಣ್ಯ ಭಟ್, ಇಂದೋರ್ ಶ್ರೀ ಪಿ.ಎನ್. ಭಟ್, ಮೈಸೂರು ಶ್ರೀ ಪ್ರಶಾಂತ ವೈದ್ಯ, ಮುಳ್ಳಂಕೊಚ್ಚಿ ಶ್ರೀ ಅರವಿಂದ ಭಟ್, ಶ್ರೀ ಶಶಿಧರ ಭಟ್, ನೋಯಿಡಾ, ಶ್ರೀ ಆತ್ರೇಯ ಚಿಕ್ಕಮಗಳೂರು, ಶ್ರೀ ಪಿ.ಎಸ್. ಶರ್ಮ, ಶ್ರೀ ಶ್ರೀಷ ಐತಾಳ, ಮುಂತಾದವರು ಸಲಹೆ ನೀಡಿ ಶುಭಾಶಂಸನೆಗೈದರು.
ಅಡಿಕೆ ತೋಟಗಳಲ್ಲಿ ಮಳೆಗಾಲದ ಕಾರ್ಯಾಚರಣೆಗಳು
ಅಡಿಕೆಯ ಮರಗಳಲ್ಲಿ ಹವಾಮಾನ ವೈಪರೀತ್ಯದಿಂದಾಗಿ ತೀವ್ರವಾಗಿ ಕೊಳೆರೋಗ ಹಬ್ಬುತ್ತಿರುವುದು ಕಳಕಳಿಯ ವಿಚಾರ. ಇದು ಉಲ್ಬಣಗೊಂಡು ತಿರಿ ಕೊಳೆಯುವ ರೋಗ ಉಂಟಾಗುವ ಸಾಧ್ಯತೆ ಇದೆ.
ಕೃಷಿಕರು ಕಾಳು ಮೆಣಸಿಗೆ ಪ್ರೋತ್ಸಾಹಕ ದರ ಇರುವುದರಿಂದ ತುಂಬಾ ಕಾಳುಮೆಣಸಿನ ನಾಟಿ ಮಾಡಿರುವುದು ಕಂಡುಬರುತ್ತದೆ. ಇದರ ಸಂರಕ್ಷಣೆ ಕೂಡ ಮಳೆಗಾಲದಲ್ಲಿ ತುಂಬಾ ಮುಖ್ಯ.
ಕೋಕೋ ಬೆಳೆ ಉತ್ತಮವಾಗಿದೆ ಆದರೂ ಕೂಡ ಅದರಲ್ಲಿ ಹಲವಾರು ಕಡೆ ಕೋಡು ಕೊಳೆಯುವ ರೋಗ ಕಂಡುಬರುತ್ತದೆ.
ಸೂಕ್ತ ಶಿಲೀಂದ್ರ ನಾಶಕಗಳ ಬಳಕೆಯಿಂದ ಈ ಮೇಲಿನ ಕೊಳೆ ರೋಗಗಳ ಹತೋಟಿ ಸಾಧ್ಯ. ಆದರೆ ಕಾರ್ಮಿಕರ ಅಭಾವದಿಂದ ಇದು ಸಾಧ್ಯವಾಗುತ್ತಿಲ್ಲ.
ಅಡಿಕೆಗೆ ಕೂಡ ಉತ್ತಮ ದರವಿದ್ದು ಉತ್ತಮ ನಾಟಿಯ ಗಿಡಗಳನ್ನು ಸ್ಥಳಿಯವಾಗಿ ಸಂಗ್ರಹಿಸಿ ನೆಡುವುದು ಸೂಕ್ತ. ಇದರಿಂದ ಸಹಿಷ್ಣು ಗಿಡಗಳು ಲಭಿಸಿ ಹೆಚ್ಚಿನ ತೊಂದರೆ ಆಗಲಾರದು.
ಇತರ ಲಾಭದಾಯಕ ಎಡೆಬೆಳೆಗಳಾದ ಬಾಳೆ, ದಾಲ್ಚೀನಿ, ಲವಂಗ, ಜಾಯಿಕಾಯಿ, ಮುಂತಾದ ವಾಣಿಜ್ಯ ಬೆಳೆಗಳನ್ನು, ಅದೇ ರೀತಿ ಹೊರಭಾಗಗಳಲ್ಲಿ ಮೋಪಿನ ಮರದ ಗಿಡಗಳನ್ನು ನೆಡಲು ಈಗ ಸಮಯ ಸೂಕ್ತವಾಗಿದೆ.
ಅಡಿಕೆ ಹಣ್ಣಾಗಲು ಆರಂಭವಾಗಿದ್ದು ಅತಿಯಾದ ಮಳೆಯಿಂದ ಅತಿಯಾಗಿ ಬೆಳೆದ ಕಳೆ ತೊಂದರೆ ನೀಡುತ್ತಿದೆ. ಕಳೆ ಹಾಗೂ ಪೋಷಕಾಂಶದ ನಿರ್ವಹಣೆಗೆ ಸರಿಯಾದ ನಿರ್ವಹಣಾ ಕಾರ್ಯಗಳನ್ನು ನಡೆಸಬೇಕಾದ್ದು ಅಗತ್ಯ.
ಗೇರು ಕೃಷಿಯಲ್ಲಿ ಬೇರು ಹಾಗೂ ಕಾಂಡಕೊರೆಯುವ ಹುಳದ ತೀವ್ರ ತೊಂದರೆ ಕಾಣುತ್ತಿದ್ದು ಅದಕ್ಕೆ ಸೂಕ್ತ ಕೀಟನಾಶಕಗಳ ಬಳಕೆ ಅಗತ್ಯ.
ಗದ್ದೆ ಬೇಸಾಯಕ್ಕೆ ಈಗಿನ ಹವಾಮಾನ ಹಾಗೂ ಮಳೆ ಸೂಕ್ತವಾಗಿ ಕಂಡುಬರುತ್ತದೆ. ಗದ್ದೆಯಿದ್ದವರೆಲ್ಲರೂ ಭತ್ತದ ಕೃಷಿಗೆ ಮುಂದಾಗಿ ಎಂದು ಕಾರ್ಯಕ್ರಮ ಸಂಯೋಜಿಸಿದ ಶ್ರೀ ಹಳೆಮನೆ ಮುರಲೀಕೃಷ್ಣ ಅಭಿಪ್ರಾಯಪಟ್ಟರು.
ಸುಮಾರು ಒಂದುವರೆ ತಾಸುಗಳಷ್ಟು ನಡೆದ ಈ ಸಂವಾದ ಕಾರ್ಯಕ್ರಮವು ಪ್ರಸಕ್ತವಾದ ವಿಚಾರಗಳಲ್ಲಿ ಅಡಿಕೆ ಕೃಷಿಕರ ವೇದಿಕೆಯಾಗಿ ಮುಂದುವರಿಯುತ್ತಿದೆ. ಈಗ ತಿಂಗಳಿಗೆ ಒಂದರಂತೆ ಪ್ರಥಮ ರವಿವಾರ ಸಂಜೆ 7 ಕ್ಕೆ ಆನ್ಲೈನ್ ಕಾರ್ಯಕ್ರಮ ನಡೆಸುತ್ತಿದ್ದು 126ನೇ ಕಾರ್ಯಕ್ರಮ ಇದಾಗಿತ್ತು.
– ಹಳೆಮನೆ ಮುರಲೀಕೃಷ್ಣ