ಇದರ ಪರಿಣಾಮವೇ ಮಾರುಕಟ್ಟೆಯ ಗುಣಮಟ್ಟದ ಕೊರತೆ ಹಾಗೂ ಕಲಬೆರಕೆಗೆ ಆಹ್ವಾನ ನೀಡುತ್ತದೆ. ನಮ್ಮ ಮಾರುಕಟ್ಟೆಗಳಲ್ಲಿ ಇಂದು ಗ್ರಾಹಕರಿಗೆ ಪೂರೈಸುವಷ್ಟು ಮಟ್ಟಿಗೆ ಅರಸಿನ ಲಭ್ಯವಿಲ್ಲ. ಸಾಂಪ್ರದಾಯಿಕ ಮಾರುಕಟ್ಟೆಯಲ್ಲಿ ಅರಸಿನದಲ್ಲಿ ಭಾರತದ್ದೇ ಮೇಲುಗೈ (ಕಳಪೆ ಗುಣಮಟ್ಟದಲ್ಲೂ?).
ಇದಕ್ಕೆಲ್ಲಾ ಕಚ್ಚಾ ವಸ್ತುವಾದ ಉತ್ತಮ ಗುಣಮಟ್ಟದ ಅರಿಶಿಣ ಗಡ್ಡೆಯನ್ನು ಪೂರೈಸಬೇಕಾದವರು ನಾವು ಕೃಷಿಕರು ಏನು ಮಾಡುತ್ತಿದ್ದೇವೆ ಮತ್ತು ಮಾಡಬಹುದು?
ನಾನು ಕಳೆದ ಕೆಲ ವರ್ಷಗಳಿಂದ ಕೆಲವು ಸಾಲು ಅರಶಿನದ ಕೃಷಿ ಮಾಡುತ್ತಾ ಬಂದಿದ್ದೇನೆ. ಹಿಂದಿನ ಕೆಲ ವರ್ಷಗಳಲ್ಲಿ ಬೇಯಿಸಿ, ಕುಯ್ದು, ಒಣಗಿಸಿ, ಪುಡಿ ಮಾಡಿಸುತ್ತಿದ್ದುದಾದರೂ, ಈ ವರ್ಷ ಹಸಿಯನ್ನೇ ತುಂಡರಿಸಿ, ಒಣಗಿಸಿ, ಪುಡಿ ಮಾಡುವ ಯೋಚನೆ ಇದೆ.
ನನ್ನ ಮಿತ್ರರೊಬ್ಬರು ಸ್ವಲ್ಪ ಹೆಚ್ಚೇ ಕೃಷಿ ಮಾಡಿ ಪುಡಿ ತಯಾರಿಸಿ ಮಾರುತ್ತಾರೆ. ಅವರಿಗಂತೂ ಸ್ಥಿರವಾದ ಅಡ್ವಾನ್ಸ್ ಬುಕಿಂಗ್ ಮಾಡಿಕೊಂಡು ಖರೀದಿಸುವ ಗಿರಾಕಿಗಳಿದ್ದಾರೆ. ಅವರು ಮಾಂಸಾಹಾರಿಗಳಾದ್ದರಿಂದ ಅವರಿಗೆ ಇದರ ಉಪಯೋಗವೂ ಜಾಸ್ತಿಯೇ ಇದೆ.
ಶುದ್ಧ ಅರಶಿನದ ಗಡ್ಡೆ , ಪುಡಿ, ಅದರಲ್ಲಿ ತಯಾರಿಸಿದ ಉಪ್ಪಿನಕಾಯಿ, ಪದಾರ್ಥಗಳ ಘಮ-ಘಮ ಪರಿಮಳವೋ, ರುಚಿಯೋ, ಆಹಾ.. ಅಪರಂಪಾರ.