ಮಳೆಯಿಂದ ಸುರಕ್ಷಿತವಾಗಿ ಅಡಿಕೆ ಒಣಗಿಸುವುದು

ತಾರೀಕು 25, ಜುಲಾಯಿ 2021: ಅಡಿಕೆಯ ಬೆಳೆಯನ್ನು ಮಳೆಗಾಲದಲ್ಲಿ ಕೊಯ್ಲಿನ ನಂತರ ಮಳೆಯಿಂದ ಹಾಳಾಗದಂತೆ ಸಂಸ್ಕರಿಸುವುದು ಎಂಬ ವಿಚಾರದ ಮೇಲೆ ಕ್ಲಬ್ ಹೌಸ್ ಸಂವಾದ ಪರಸ್ಪರ ಅಡಿಕೆ ಬೆಳೆಗಾರರ ಮಧ್ಯೆ ನಡೆಯಿತು.

ವಿವಿಧ ಡ್ರೈಯರ್ ಗಳು ಚಾಲ್ತಿಯಲ್ಲಿವೆ. ಆದರೂ ಪ್ಲಾಸ್ಟಿಕ್ ಹೊದಿಸಿದ ಸೋಲಾರ್ ಟನೆಲ್ ಡ್ರೈಯರ್ ಹೆಚ್ಚು ಉಪಯುಕ್ತ. ಜಿನೆಗರ್ ಶೀಟ್ ಹೆಚ್ಚು ಬಾಳುವಿಕೆ ಹಾಗೂ ಹೆಚ್ಚಿನ ಶಾಖ ಹಿಡಿದಿಟ್ಟುಕೊಳ್ಳಲು ಅನುಕೂಲಕರ ಎಂದು ಭಾವನೆ ವ್ಯಕ್ತವಾಯಿತು. ದಪ್ಪವಾದ ೨೦೦ ಜಿ.ಎಸ.ಎಂ. ಶೀಟ್ಗಳು ಛಾವಣಿ ಹೊದಿಕೆಗೆ ಉತ್ತಮ ಎಂಬ ಅಭಿಪ್ರಾಯ ಎಲ್ಲರಿಂದ ವ್ಯಕ್ತವಾಯಿತು.

ಶ್ರೀ ರಾಮಪ್ರಸಾದ್ ಕರಿಯಾಲ್ ಇವರು ತಮ್ಮ ಹೈಬ್ರಿಡ್ ಡ್ರೈಯರ್ ನ ಪರಿಕಲ್ಪನೆ ಅಡಿಕೆ ಬೆಳೆಗಾರರ ಮುಂದಿಟ್ಟರು. ಇದು ಆಶಾದಾಯಕ ಆಗಬಹುದೆಂಬ ಅಭಿಪ್ರಾಯ ಬಂತು.

ನೀರಡಿಕೆ ಎಂಬ ರೀತಿಯಲ್ಲಿ ಅಡಿಕೆಯನ್ನು ಹರಿವ ನೀರಿನಲ್ಲಿ ಇಟ್ಟು ಆಮೇಲೆ ಒಣಗಿಸುವ ಬಗ್ಗೆ ಶ್ರೀ ಮಹೇಶ್ ಪುಚ್ಚಪ್ಪಾಡಿ ಸೂಚಿಸಿದರಾದರೂ ಅದು ಅಷ್ಟು ಉತ್ತಮ ಸಂಸ್ಕರಿಸಲ್ಪಟ್ಟ ಅಡಿಕೆ ನೀಡುವುದಿಲ್ಲ ಎಂಬ ಅಭಿಪ್ರಾಯ ಇನ್ನು ಕೆಲವು ಅನುಭವಸ್ಥ ಕೃಷಿಕರಿಂದ ಕೇಳಿ ಬಂತು.

ಶ್ರೀ ರಾಜೇಶ್ ನಾಯಕ್ ಅವರು ಸುಮಾರು ೯೦ ಮೂಟೆ ಅಡಿಕೆ ೨೫ ದಿನಗಳ ಕಾಲ ಅಂಗಳದ ಒಣಗಿಸುವಿಕೆಯ ನಂತರ ೧೫೦೦ ಚದರ ಅಡಿ ವಿಸ್ತೀರ್ಣದ ಡ್ರೈಯರ್ ನಲ್ಲಿ ಮುಂದುವರಿದ ಒಣಗಿಸುವಿಕೆ ಮಾಡಬಹುದು ಎಂದು ವ್ಯಕ್ತಪಡಿಸಿದರು. ಅಂತೆಯೇ ಅಡಿಕೆಯನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿ ಅದರ ಬಾಯಿ ಕಟ್ಟುವಾಗ ಇನ್ನೊಂದು ತೊಟ್ಟೆಯನ್ನು ಅದರ ಬಾಯಿಗೆ ಟೊಪ್ಪಿಯಂತೆ ಹಾಕಿ ಕಟ್ಟುವುದರಿಂದ ತೇವಾಂಶ ಒಳಹೋಗುವಿಕೆ ತಡೆಗಟ್ಟಬಹುದೆಂದು ತಿಳಿಸಿದರು. ದಪ್ಪವಾಗಿ ಒಣಅಡಿಕೆಯ ಪದರ ಹಾಕುವ ಬಗ್ಗೆ ಹಾಗೂ ವಾಯುಚಾಲನೆಗೆ ಅವಕಾಶ ಕಲ್ಪಿಸುವುದು, ಉತ್ತಮ ಒಣಗುವಿಕೆಗೆ ಸಹಾಯಕವೆಂದು ಶ್ರೀ ಸತ್ಯನಾರಾಯಣ ಪ್ರಸಾದ್ ಇವರು ತಿಳಿಸಿದರು.

ಅಡಿಕೆಯು ಮಳೆಗಾಲದಲ್ಲಿ ಒದ್ದೆಯಾಗಿ ಮೊಳಕೆ ಬರುವುದನ್ನು ತಡೆಯಲು ಅವನ್ನು ತೆರೆದ ಅಂಗಳದಲ್ಲಿ ಹರಡುವುದರಿಂದ ಮಾಡಬಹುದು. ಅಡಿಕೆಯ ಒಣಗುವಿಕೆ ಸಿಮ್ಮೆಟ್ರಿಕ್ ಆಗಿರುವುದರಿಂದ ಅವುಗಳನ್ನು ಅಡಿ ಮೇಲು ಮಾಡುವ ಯಾವುದೇ ಅಗತ್ಯ ಇಲ್ಲವೆಂದು ಶ್ರೀ ರಮೇಶ್ ದೇಲಂಪಾಡಿ ತಿಳಿಸಿದರು.

ಈ ರೀತಿ ಮಾಡುವುದರಿಂದ ಅಡಿಕೆ ಫಟೋರಾ ಆಗಿ ಒಡೆದುಕೊಳ್ಳುವುದು ಕಡಿಮೆ ಎಂದೂ ತಿಳಿಸಿದರು.

ಅಡಿಕೆಯ ಬೆಳೆಗಾರರ ಇಂತಹಾ ಮುಕ್ತ ವಿಚಾರ ವಿನಿಮಯ ಪರಸ್ಪರ ಒಬ್ಬರಿಗೊಬ್ಬರು ಪೂರಕ ಮಾಹಿತಿ ನೀಡುವುದರ ಮೂಲಕ ಹೆಚ್ಚು ಹೆಚ್ಚು ಫಲದಾಯಕ ಆಗುವುದೆಂಬ ಕನಸು ವ್ಯಕ್ತವಾಗಿ ಇನ್ನು ಹೆಚ್ಚು ಕೃಷಿಕರು ನಿರಂತರ ಪ್ರತೀ ವಾರ ಭಾಗವಹಿಸುವಂತೆ ವಿಚಾರ ಪಸರಿಸುವಂತೆ ಕೋರಿಕೆ ವ್ಯಕ್ತಪಡಿಸಲಾಯಿತು.

ವರದಿ: ಮುರಳೀಕೃಷ್ಣ ಎಡನಾಡು

Leave a Comment

Your email address will not be published. Required fields are marked *