ಬಹು ಬೆಳೆ, ಎಡೆ ಬೆಳೆ, ಅಂತರ ಬೆಳೆ, ಏನೇ ಅನ್ನಿ, ಅಡಿಕೆ ತೋಟದಲ್ಲಿ ಕಪ್ಪು ಚಿನ್ನವೇ ರಾಜ. ಆದರೆ ಅಂತರ್ರಾಷ್ಟ್ರೀಯ ಮಾರುಕಟ್ಟೆಯನ್ನು ಅವಲಂಬಿಸಿ ಅದುವೇ ಅತೀ ಹೆಚ್ಚು ಏರು ಪೇರುಗಳಿಂದ ದಮನಿಸಲ್ಪಡುತ್ತಿರುವ ಬಡಪಾಯಿ ಕೂಡಾ. ಇದನ್ನೆಲ್ಲ್ಲಾ ಗಮನಿಸಿದಾಗ, ಕೃಷಿಕರ ಮುತುವರ್ಜಿ ಜಾಸ್ತಿ ಬೇಕಾಗಿರುವುದು ಇದೇ ಬೆಳೆಯ ಕೃಷಿಗೆ ಅಷ್ಟೇ ಅಲ್ಲ, ಮೌಲ್ಯವರ್ಧನೆಗೆ ಕೂಡಾ. ಆದ್ದರಿಂದ ಕೊಯ್ಲಿಗೆ ಮುಂಚಿತವಾಗಿ ಒಂದಷ್ಟು ಪ್ಲಾನ್ ಮಾಡಿ ಉತ್ತಮ ಸಂಸ್ಕರಣೆಗೆ ಒಳಪಡಿಸಿದಾಗ ಕಾಳುಮೆಣಸು ಅಷ್ಟಾಗಿ ಏರು ಪೇರಿಗೆ ಅಳುಕದು.
ಬಳಕೆದಾರರ ಅಪೇಕ್ಷೆಗೆ ಹೊಂದುವಂತೆ ಉತ್ತಮ ಕಾಳುಮೆಣಸಿನ ಸಂಸ್ಕರಣೆಯ ಮೂಲಕ ಲಾಭದಾಯಕ ಆದಾಯ ಪಡೆಯಬಹುದು ಎಂದು ಪ್ರಗತಿಪರ ಕೃಷಿಕರಾದ ಶ್ರೀ ಶ್ರೀಧರ ಭಟ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಪಯಸ್ವಿನಿ ಗುಂಪಿನ ಕ್ಲಬ್ ಹೌಸ್ ಕಾರ್ಯಕ್ರಮ ಕಾಳುಮೆಣಸಿನ ಮೌಲ್ಯವರ್ಧನೆ ಯಿಂದ ಅಧಿಕ ಆದಾಯ ಎಂಬ ಸಂವಾದದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಡಾ. ಅಂಕೇಗೌಡ, ಭಾರತೀಯ ಸಂಬಾರ ಪದಾರ್ಥಗಳ ಸಂಶೋಧನಾ ಸಂಸ್ಥೆ ಅಪ್ಪಂಗಳ ಪ್ರಾದೇಶಿಕ ಕೇಂದ್ರದ ಮುಖ್ಯಸ್ಥರು ಮಾತನಾಡಿ ಉತ್ತಮ ಬಲಿತ ಕಾಳುಗಳನ್ನು ಸಂಗ್ರಹಿಸುವುದರಿಂದ ಒಳ್ಳೆಯ ಭಾರ ಹಾಗೂ ಗುಣಮಟ್ಟ ಲಭಿಸುವುದು. ದಕ್ಷಿಣ ಕನ್ನಡ ಹಾಗೂ ಉತ್ತರಕನ್ನಡ ಗಳಲ್ಲಿ ಪ್ರತಿಯೊಂದು ಮನೆಯಲ್ಲಿಯೂ ಮುತುವರ್ಜಿಯಿಂದ ಒಳ್ಳೆಯ ಉತ್ಪನ್ನಗಳನ್ನು ತಯಾರಿಸುತ್ತಾರೆ. ಒಳ್ಳೆಯ ಕಾಳಜಿವಹಿಸಿ ಗುಣಮಟ್ಟ ಕಾಪಾಡಲು ಮಾರುಕಟ್ಟೆಯಲ್ಲಿ ಒಂದುವರೆ ಪಟ್ಟಿನಷ್ಟು ಆದಾಯ ಲಭಿಸಲು ಸಾಧ್ಯವಿದೆ. ಅಷ್ಟೇ ಅಲ್ಲ ವ್ಯಾಪಾರಸ್ಥರು ಅಂತಹ ಉತ್ಪನ್ನಗಳನ್ನು ತಯಾರಿಸುವವರ ನೇರ ಸಂಪರ್ಕ ಇಟ್ಟುಕೊಂಡು ಅಲ್ಲಿಂದಲೇ ಖರೀದಿಯನ್ನು ಮಾಡುತ್ತಾರೆ. ಈ ಬಗ್ಗೆ ತಿಳುವಳಿಕೆ ಮೂಡಿಸುವುದು ಅಗತ್ಯ ಎಂದು ಡಾ. ಅಂಕೇಗೌಡ ಅಭಿಪ್ರಾಯಪಟ್ಟರು.

ಅಡಿಕೆ ಬೆಳೆಗಾರರಿಗೆ ಕಾಸರಗೋಡು ದಕ್ಷಿಣ ಕನ್ನಡ ಉತ್ತರ ಕನ್ನಡ ಕೊಡಗು ಚಿಕ್ಕಮಗಳೂರು ಶಿವಮೊಗ್ಗ ಮುಂತಾದ ಜಿಲ್ಲೆಗಳಲ್ಲಿ ಎಲ್ಲ ಸುಪರಿಚಿತ ಎಡೆ ಬೆಳೆ ಕಾಳು ಮೆಣಸು.
ಅಧಿಕ ಇಳುವರಿಗಾಗಿ ವಿವಿಧ ತಳಿ ಅಭಿವೃದ್ಧಿ ಮಾಡಲಾಗಿದ್ದು ಇವುಗಳಲ್ಲಿ ಕೆಲವು ರೋಗಪ್ರತಿರೋಧಕ ತಳಿಗಳು ಕೂಡ ಇವೆ.
ಅಡಿಕೆ ಬೆಳೆಗೆ ಅಷ್ಟೇ ಸೀಮಿತವಾಗದೆ ಕಾಫಿತೋಟದಲ್ಲಿ ಏಕಬೆಳೆಯಾಗಿಯೂ, ಕಾಡುತ್ಪತ್ತಿ ಯಾಗಿಯೂ ಕಾಳುಮೆಣಸಿನ ಬೆಳೆ ತೆಗೆಯಲಾಗುತ್ತದೆ.
ವಿಶ್ವದಲ್ಲಿ ಅತಿ ಹೆಚ್ಚು ಕಾಳುಮೆಣಸು ರಫ್ತು ಮಾಡುತ್ತಿರುವ ದೇಶ ವಿಯೆಟ್ನಾಮ್. ಅಲ್ಲಿ ವಾಣಿಜ್ಯ ದೃಷ್ಟಿಯಿಂದಲೇ ಕಾಳುಮೆಣಸು ಬೆಳೆಯಲಾಗುತ್ತಿದೆ. ಅಲ್ಲಿನ ಹವಾಮಾನ ಕಾಳುಮೆಣಸಿಗೆ ಹೆಚ್ಚು ಸೂಕ್ತವಾದ ಇರುವುದರಿಂದ ಉತ್ಪಾದನೆಯು ಸುಲಭವಾಗಿ ನಡೆಯುತ್ತದೆ.
ಭಾರತಕ್ಕೆ ಪೈಪೋಟಿ ನೀಡುವ ಇನ್ನೆರಡು ದೇಶಗಳು ಇಂಡೋನೇಷಿಯಾ ಹಾಗೂ ಬ್ರೆಝಿಲ್. ಇವುಗಳಿಗೆ ಭಾರತಕ್ಕೆ ದೊಡ್ಡ ಹೊಡೆತ ಕೊಡಲಾಗದಿದ್ದರೂ ಬೆಲೆ ಏರುಪೇರು ಅಂತರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುತ್ತದೆ.
ಇವುಗಳ ಕೈವಾಡ ದಿಂದಲೇ ಹಲವಾರು ಬಾರಿ ನಮ್ಮ ನಮ್ಮ ಕಾಳುಮೆಣಸು ಕೀಟನಾಶಕ ರೆಸಿಡ್ಯೂ ಇದೆ ಎಂತಲೂ ಸೆಗಣಿಯ ತುಣುಕುಗಳು ಇವೆ ಅಂತಲೂ ವಾಪಸಾಗಿದೆ.
ಭಾರತದ ಆಂತರಿಕ ಮಾರುಕಟ್ಟೆಯಲ್ಲಿ ಆಯುರ್ವೇದಿಕ್ಕೆ ಆಗಿಯೂ ಅಡುಗೆ ಮಸಾಲೆ ಗಳಿಗಾಗಿಯೂ ಕಾಳುಮೆಣಸು ಉಪಯೋಗಿಸಲ್ಪಡುತ್ತದೆ.
ಲಕ್ಷಗಟ್ಟಲೆ ಕೃಷಿಕರು ಕೈಜೋಡಿಸಿ ನಡೆಯುತ್ತಿರುವ ಕಾಳುಮೆಣಸು ವ್ಯವಹಾರದಲ್ಲಿ ಭಾರತದ ರಾಜ್ಯಗಳಾದ ಕೇರಳ ಕರ್ನಾಟಕ ತಮಿಳುನಾಡು ರಾಜ್ಯಗಳ ಕೃಷಿಕರ ಪಾತ್ರ ಅತಿಮುಖ್ಯ.
ದೇಶದ ಸ್ಥಾನಮಾನ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಉಳಿಸಿಕೊಳ್ಳುವ ಸಾಮರ್ಥ್ಯ ನಮ್ಮ ಕೃಷಿಕರಲ್ಲಿ ಇದೆ.
ಕಪ್ಪು ಚಿನ್ನಕ್ಕೆ ಒಪ್ಪ ಹಚ್ಚಿ
ಕಾಳುಮೆಣಸಿನ ಗುಣಮಟ್ಟಕ್ಕೆ ಕೊಯಿಲಿನ ಸಂದರ್ಭದಿಂದಲೇ ಆರಂಭಿಸಬೇಕು. ಬಳ್ಳಿಗಳಲ್ಲಿ 20 ಶತಾಂಶ ದಷ್ಟು ಕಾಳುಗಳು ಹಣ್ಣಾದಾಗ ಕೊಯ್ಲು ಮಾಡುವುದರಿಂದ, 35 ರಿಂದ 42% ಒಣ ಕಾಳುಮೆಣಸು ಸಿಗುತ್ತದೆ. ಸೋಲರೈಸೇಷನ್ ಅಥವಾ ಕುದಿಯುವ ನೀರಿನಲ್ಲಿ ಒಂದು ನಿಮಿಷ ಅದ್ದಿ ತೆಗೆದು ಅದನ್ನು ಅರ್ಧ ಇಂಚು ದಪ್ಪಕ್ಕೆ ಹರಡಿ ಅದರ ಮೇಲೆ ಪಾಲಿಥಿನ್ ಕವರ್ ಹಾಕಿ ಗಾಳಿಯಾಡದಂತೆ ಒಂದು ದಿವಸ ಬಿಸಿಲಿನಿಂದ ಆನಂತರ ಬಟ್ಟೆಯಿಂದ ಗಟ್ಟಿಯಾಗಿ ಕಟ್ಟಿಟ್ಟು ರಾತ್ರಿ ನೀಡುವುದರಿಂದ ಕಪ್ಪು ಕಾಳುಮೆಣಸು ತಯಾರಿಸುವುದು ಸಾಧ್ಯ. ಇದುವೇ ನಿಜವಾದ ಬ್ಲಾಕ್ ಪೆಪ್ಪರ್. ಅದಕ್ಕೆ ಮುಂಚೂಣಿ ಮಾರುಕಟ್ಟೆ ಇದೆ.

ಗಾರ್ಬಲ್ ಕಾಳುಮೆಣಸಿನ ತಯಾರಿ
ಗಾಢವಾದ ಕಪ್ಪು ಬಣ್ಣವನ್ನೇ ಹೊಂದಿದ ಕಾಳುಮೆಣಸಿಗೆ ಮಾರುಕಟ್ಟೆಯಲ್ಲಿ ಹೆಚ್ಚು ಬೆಲೆ ಲಭಿಸುವುದು. ಅದೇ ರೀತಿ ಸಾವಯವ ಉತ್ಪನ್ನಕ್ಕೂ ಬೆಲೆ ಮುಂಚೂಣಿಯಲ್ಲಿ ಲಭಿಸುತ್ತದೆ.
- ಕಪ್ಪು ಕಾಳುಮೆಣಸಿನ ತಯಾರಿಗೆ ಉತ್ತಮ ಸಂಸ್ಕರಣೆ ಅತ್ಯಗತ್ಯ. ಇದರಲ್ಲಿ ಮೊದಲನೆಯದಾಗಿ ಬಲಿತ ಕಾಳು ಮೆಣಸನ್ನು ಕೊಯ್ಲು ಮಾಡಿದ ನಂತರ ಒಂದೆರಡು ದಿನ ಕೂಡಿಡಬೇಕು.
- ನಂತರ ಯಂತ್ರದಿಂದ ಅಥವಾ ಕೈಗಳಿಂದಲೋ ಕಾಳುಗಳನ್ನು ಬೇರ್ಪಡಿಸಿ ಕಸಕಡ್ಡಿಗಳನ್ನು ತೆಗೆದು ಹಾಕಬೇಕು.
- ನಂತರ ಕುದಿಯುತ್ತಿರುವ ನೀರಿನಲ್ಲಿ ಕಾಳನ್ನು ಗೋಣಿಗಳಲ್ಲಿ ತುಂಬಿ ಒಂದೇ ಒಂದು ನಿಮಿಷ ಅದ್ದಿ ತೆಗೆಯಬೇಕು.
- ಆಮೇಲೆ ಬಿಸಿಲಿನಲ್ಲಿ ಹರಡಿ ಅದರ ಮೇಲಿಂದ ಪಾರದರ್ಶಕ ಪ್ಲಾಸ್ಟಿಕ್ ಹಾಳೆ ಮುಚ್ಚಬೇಕು.
ಗಾಳಿಯಾಡದಂತೆ ಮುಚ್ಚಿದ ಈ ಪದರದ ಅಡಿಯಲ್ಲೆ ಕಾಳುಮೆಣಸಿನ ಬೆವರು ಸಲೀಸಾಗಿ ಹೊರ ಹೋಗುವಂತೆ ವ್ಯವಸ್ಥೆ ಮಾಡಬೇಕು. - ಸಂಜೆ ಕಾಳುಮೆಣಸನ್ನು ಬಟ್ಟೆಯಲ್ಲಿ ಗಟ್ಟಿಯಾಗಿ ಕಟ್ಟಿ ಒತ್ತಡದಲ್ಲಿ ಇರಿಸಬೇಕು.
- ಮರುದಿನ ಇವನು ಬಿಡಿಸಿ ಉತ್ತಮ ಬಿಸಿಲಿನಲ್ಲಿ ಒಣಗಿಸಬೇಕು.
- ಈ ರೀತಿಯ ಒಳ್ಳೆಯ ಬಿಸಿಲಿನಲ್ಲಿ ಒಣಗಿಸುವುದರಿಂದ ಎರಡು-ಮೂರು ದಿನಗಳಲ್ಲಿ ತೇವಾಂಶ ಹತ್ತು ಪರ್ಸೆಂಟ್ ಇರುತ್ತದೆ.
- ಅತಿಯಾಗಿ ಆರುವುದರಿಂದ ಪುಡಿಯಾಗುತ್ತದೆ ಕಾಳುಮೆಣಸಿನ ಭಾರ ಕಡಿಮೆಯಾಗುತ್ತದೆ ಮಾತ್ರವಲ್ಲದೆ ಅದು ಚೆನ್ನಾಗಿರುವುದಿಲ್ಲ.
- ಈ ರೀತಿ ತಯಾರಿಸಿದ ಗಾಢ ಕಪ್ಪು ಬಣ್ಣದ ಕಾಳುಮೆಣಸಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಲಭಿಸುತ್ತದೆ. ಇದನ್ನು ಗಾರ್ಬಲ್ಡ್ ಕಾಳುಮೆಣಸು ಅಂತ ಕರೆಯುತ್ತಾರೆ.
ಒಂದು ಲೀಟರ್ ಅಳತೆಯ ಕಾಳುಮೆಣಸು 550ರಿಂದ 650 ಗ್ರಾಂ ತೂಕ ಬರುವುದು ಎಂದು ಶ್ರೀ ಶ್ರೀಧರ ಭಟ್ ತಿಳಿಸಿದರು.
ಬಿಳಿ ಕಾಳು ಅಥವಾ ಬೋಳಕಾಳು ತಯಾರಿ ವಿಧಾನವನ್ನು ಅವರು ತಿಳಿಸಿಕೊಟ್ಟರು.


ಬಿಳಿ ಕಾಳುಮೆಣಸಿನ ತಯಾರಿ
ಹಣ್ಣಾದ ಕಾಳುಮೆಣಸುಗಳನ್ನು ಆರಿಸಿ ಕೊಯ್ಲು ಮಾಡುವುದು ಸಾಧ್ಯವಾದಲ್ಲಿ ಉತ್ತಮ.
- ಸಾಕಷ್ಟು ಬಲಿತು ಹಣ್ಣಾದ ಕಾಳು ಗಳಿದ್ದರೆಅವುಗಳಿಂದ ಬಿಳಿ ಕಾಳುಮೆಣಸನ್ನು ತಯಾರಿಸಬಹುದು. ಇದನ್ನು ಬೋಳು ಕಾಳುಮೆಣಸು ಎಂತಲೂ ಕರೆಯುತ್ತಾರೆ.
- ಇದಕ್ಕಾಗಿ ಕಾಳು ಮೆಣಸನ್ನು ನೀರಿನಲ್ಲಿ ಹಾಕಬೇಕು.
- ದಿನನಿತ್ಯ ಅಡಿಯಿಂದ ನೀರನ್ನು ಬಸಿದು ತೆಗೆದು ಹೊಸ ನೀರನ್ನು ಹಾಕಬೇಕು.
- ಹೀಗೆ ಎರಡು ಮೂರು ದಿನ ಮಾಡಿದ ನಂತರ ಹೊಸಕಿ ದಾಗ ಕಾಳುಗಳಿಂದ ಸಿಪ್ಪೆ ಬೇರ್ಪಡುತ್ತದೆ.
- ಹೀಗೆ ತಯಾರಿಸಿದ ಬಿಳಿ ಕಾಳುಗಳಲ್ಲಿ ಕಪ್ಪು ಕಾಳುಗಳು ಬೆರೆತಿರ ಬಾರದು.
- ಇದನ್ನು ಚೆನ್ನಾಗಿ ಒಣಗಿಸಿದಾಗ ಉತ್ತಮ ಬಿಳಿ ಕಾಳುಮೆಣಸು ಲಭಿಸುತ್ತದೆ.
ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಖಾತ್ರಿ ಪಡಿಸಿಕೊಂಡು ಬಿಳಿ ಕಾಳುಮೆಣಸಿನ ಮಾರಾಟ ಮಾಡಬೇಕು. ಕಪ್ಪು ಕಾಳುಮೆಣಸಿಗಿಂತ 15% ಹೆಚ್ಚು ಬೆಲೆ ಸಿಕ್ಕರೆ ಮಾತ್ರ ಬಿಳಿ ಕಾಳುಮೆಣಸನ್ನು ತಯಾರಿಸಲು ಪಟ್ಟ ಪಾಡು ಫಲಿಸುತ್ತದೆ, ಇಲ್ಲವಾದರೆ ಉಪಯೋಗ ಇಲ್ಲ.
ಅಂತಾರ್ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹಸಿರು ಕಾಳುಮೆಣಸು ಕೂಡಾ ಇದೆ, ಆದರೆ ಅದರ ಖರೀದಿ ಮಾಡುವವರು ನಮ್ಮ ಮಾರುಕಟ್ಟೆಯಲ್ಲಿ ಇಲ್ಲ.
ಮೌಲ್ಯ ವರ್ಧನೆಯಿಂದ ವೈವಿಧ್ಯಮಯ ಮಾರುಕಟ್ಟೆ
ಅವಶ್ಯಕ ಫ್ಯಾಟಿ ಆಯಿಲ್ ಆದ ಪೈಪೆರಿನ್ ಒಂದು ಅಮೂಲ್ಯ ಮೂಲವಸ್ತು. ಆದರೆ ಇದನ್ನು ಉತ್ಪಾದಿಸುವ ಕಂಪೆನಿಗೆ ಕೃಷಿಕರ ಜೊತೆ ನೇರ ಸಂಪರ್ಕ ಇನ್ನೂ ಇಲ್ಲ.
ಕಾಳುಮೆಣಸಿನ ಜೊತೆ ಅರಸಿನ ಬ್ಲೆಂಡಿಂಗ್ ಮಾಡುವಂತ ವಿಧಾನ ಉತ್ತಮವಾಗಿ ಕಂಡುಬಂದಿದೆ. ಈ ರೀತಿ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕೆಯಿಂದ ಉತ್ತಮ ಮಾರುಕಟ್ಟೆ ಕಂಡುಕೊಳ್ಳಬಹುದು. ಇದಕ್ಕೆ ಉದ್ಯಮಶೀಲ ಪ್ರಯತ್ನ ಅಗತ್ಯವಿದೆ.
ಎಳೆಯ ಹಸಿ ಕಾಳುಮೆಣಸನ್ನು ಉಪ್ಪಿನಕಾಯಿಗೆ ಬಳಸುತ್ತಾರೆ. ಇದಕ್ಕೆ ಮೊದಲೇ ಒಪ್ಪಂದ ಮಾಡಿಕೊಂಡು ಕೊಯ್ಲು ಮಾಡಬೇಕಾಗುತ್ತದೆ. ಇಲ್ಲವಾದರೆ ಮೆಣಸಿನ ಕಾಳುಗಳು ಕೊಳೆತು ಹೋಗುವ ಸಾಧ್ಯತೆ ಇದೆ.
ಕಾಳುಮೆಣಸಿನ ಕೊಯ್ಲು ಮಾಡಲು ಉತ್ತಮ ಸಲಹೆ ಕೇಳುಗರಿಂದ ಮೂಡಿಬಂತು. ಮೇಲ್ಭಾಗದ ಗೊಂಚಲುಗಳು ಬಳ್ಳಿಗಳಲ್ಲಿ ಮೊದಲು ಹಣ್ಣಾಗುವುದರಿಂದ ಅವನ್ನು ಮೊದಲು ಕೊಯ್ದುಕೊಂಡು ಆನಂತರ ಬಳ್ಳಿಗಳ ಕೆಳಭಾಗದ ಗೊಂಚಲುಗಳನ್ನು ಕೊಯ್ಯುವುದರಿಂದ ಅವು ಚೆನ್ನಾಗಿ ಬಲಿತು ಭಾರವಾಗುತ್ತವೆ. ಇದರಿಂದ ಲೀಟರ್ ಅಳತೆಯ ಕಾಳುಮೆಣಸಿನ ತೂಕ ಜಾಸ್ತಿ ಇರುತ್ತದೆ.
ಉತ್ತಮ ಕೃಷಿಕರ ತಳಿಗಳ ಅಭಿವೃದ್ಧಿ
ರೋಗಮುಕ್ತ ನರ್ಸರಿ ತಯಾರಿಸಲು ಈಗಲೇ ಹೆಚ್ಚಬೇಕು ಇದಕ್ಕಾಗಿ ಮಣ್ಣು ಮತ್ತು ನಾಟಿ ವಸ್ತುವಿನ ತಯಾರಿ ಈಗಲೇ ಆರಂಭಿಸಬೇಕು ಎಂದು ಕೂಡ ಅವರು ತಿಳಿಸಿದರು.
ಮಣ್ಣು ಹಾಗೂ ನೆಡುಬಳ್ಳಿಗಳ ತಯಾರಿ ನವೆಂಬರ್ – ಡಿಸೆಂಬರ್ ನಲ್ಲೂ ನರ್ಸರಿ ತಯಾರಿ ಫೆಬ್ರವರಿ – ಮಾರ್ಚ್ ನಲ್ಲೂ ಮಾಡುವುದರಿಂದ ಉತ್ತಮ ಗಿಡ ತಯಾರಿಸಬಹುದು.
ನರ್ಸರಿ ತೋಟಗಳಲ್ಲಿ ತುಂಬಲು ಒಳ್ಳೆಯ ಮಣ್ಣು ಮಿಶ್ರಣ ತಯಾರಿಸಿಕೊಳ್ಳಬೇಕು. ಇದಕ್ಕಾಗಿ ಎರಡು ಪಾಲು ಸೇಂದ್ರಿಯ ಮಣ್ಣಿಗೆ ಒಂದು ಪಾಲು ಸಾವಯವ ಗೊಬ್ಬರ ಹಾಗು ಒಂದು ಪಾಲು ಹೊಯಿಗೆ ಮಿಶ್ರ ಮಾಡಿ ಅದನ್ನು ಪ್ಲಾಸ್ಟಿಕ್ ನ ಮೇಲೆ ಹರಡಿ ನಂತರ ಅದಕ್ಕಿಂತ ಅರ್ಧ ಅಡಿ ಬಿಟ್ಟು ಪಾಲಿಥೀನ್ ಮುಚ್ಚಿಗೆ ಹಾಕಬೇಕು. ಈ ರೀತಿ ಕೆಲವು ವಾರಗಳಷ್ಟು ಬಿಸಿಲು ತಾಗಿದಾಗ ಮಣ್ಣಿನ ಆಕ್ರಮಣಕಾರಿ ಕೀಟಗಳು, ಹುಲ್ಲುಗಳು, ನೆಮೆಟೋಡ್ ಗಳು, ಕೆಟ್ಟ ಶಿಲಿಂಧ್ರ ಹಾಗು ಬ್ಯಾಕ್ಟೀರಿಯಾ ಗಳು ನಾಶವಾಗುತ್ತವೆ. ಅದೇ ರೀತಿ ನೆಲದಲ್ಲಿ ಬೆಳೆಯುತ್ತಿರುವ ಬಳ್ಳಿಗಳನ್ನು ಗೂಟ ಹಾಕಿ ಕಟ್ಟುವುದರಿಂದ ಹಾಗು ಅವುಗಳಿಗೆ ಶಿಲಿಂಧ್ರ ನಾಶಕ ಸಿಂಪಡಿಸುವುದರಿಂದ ರೋಗಮುಕ್ತ ಬಳ್ಳಿಗಳೂ ಲಭಿಸುತ್ತವೆ.
ಕ್ಲಬ್ ಹೌಸ್ ಸಂವಾದದ ಪುನಃ ಶ್ರವಣಕ್ಕೆ ಈ ಕೊಂಡಿಯನ್ನು ಒತ್ತಿ:
https://www.clubhouse.com/room/xBZGjLeY
ಕ್ಲಬ್ ಹೌಸ್ ಸಂವಾದ ಆಲಿಸಲು ಮೊಬೈಲ್ ಆಪ್ ಅಗತ್ಯ
ಕೊನೆಯ ಮಾತು
ಒಳ್ಳೆಯ ಬೆಳೆಗೆ ಒಳ್ಳೆಯ ತಳಿ ಅದೇ ರೀತಿ ಸರಿಯಾದ ಸಮಯಕ್ಕೆ ಮಾಡುವ ಕೊಯಿಲು ಮುಖ್ಯ. ಮಾರುಕಟ್ಟೆಯ ಅಗತ್ಯವನ್ನರಿತು ಅದಕ್ಕೆ ಪೂರಕವಾಗಿ ಸರಕನ್ನು ಸಿದ್ಧಪಡಿಸುವುದರಿಂದ ಲಾಭದಾಯಕ ವ್ಯವಹಾರ ಮಾಡಿ ಕೃಷಿಯಲ್ಲಿ ವಿಜಯಶಾಲಿಗಳಾಗಬಹುದು ಎಂದು ಅನುಭವಿ ತಜ್ಞರು ಹಾಗು ಕೃಷಿಕರು ಅಭಿಪ್ರಾಯಪಟ್ಟರು.
ವರದಿ: ಮುರಲೀಕೃಷ್ಣ ಎಡನಾಡು.