ಹಲಸು ಪಶ್ಚಿಮಘಟ್ಟದ ವೃಕ್ಷ ಸಂಪತ್ತು

ನಮ್ಮತನದ ಅಪಾರ ಭಂಡಾರ ಆಗಿರುವ ಹಲಸು ಉಗಮವಾಗಿರುವುದು ಪಶ್ಚಿಮಘಟ್ಟದಲ್ಲಿ. ಇದರ ಮೌಲ್ಯ ಅರಿತು ಉಪಯೋಗಿಸುವುದು, ಮೌಲ್ಯವರ್ಧನೆ ಮಾಡುವುದು, ಜೀವ ಸಂಕುಲ ಸಂರಕ್ಷಣೆ ಮಾಡುವುದು ಅಗತ್ಯ. ಸ್ಥಳೀಯರ ಪ್ರಯತ್ನ ಅದನ್ನು ಪರದೇಶದ ಪಾಲಾಗದಂತೆ ಉಳಿಸಿಕೊಳ್ಳುವುದು.

ಹಲಸಿನ ಮೌಲ್ಯ ಅಪಾರ

ಹವಾಮಾನ ವ್ಯತಿಯಾನದ ಹಿನ್ನೆಲೆಯಲ್ಲಿ ಬಹುಶಃ ಮುಂದಿನ ಕೆಲವು ದಶಕಗಳ ನಂತರ ನಮ್ಮ ಪ್ರದೇಶಕ್ಕೆ ಹಲಸು ಒಂದು ಮುಖ್ಯ ಬೆಳೆಯಾಗಿ ಹಾಗೂ ಒಂದು ಆಹಾರ ಪದಾರ್ಥವಾಗಿ ಬರುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಅಂದಿಗೆ ನಮ್ಮ ವೈವಿಧ್ಯತೆಯನ್ನು ಕಳಕೊಳ್ಳಬಾರದು ಎಂಬ ಈ ಮಾತುಗಳು ಡಾ. ಚಂದ್ರಶೇಖರ ಚೌಟ, ಸಸ್ಯ ಶಾಸ್ತೃಜ್ಞ ಹಾಗೂ ಪ್ರಗತಿಪರ ಕೃಷಿಕರಾದ ಅವರ ಅನುಭವದ ಹಾಗೂ ನಿರೀಕ್ಷೆಯ ಅಭಿಪ್ರಾಯಗಳು. ಪಯಸ್ವಿನಿ ಕ್ಲಬ್ ಹೌಸ್ ನ ಹಲಸು ಕೃಷಿ ಹಾಗೂ ಮೌಲ್ಯವರ್ಧನೆಯ ಎರಡನೇ ಕಂತು ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಅವರು ತಮ್ಮ ಅನಿಸಿಕೆಯನ್ನು ತಿಳಿಯಪಡಿಸಿದರು. ಉತ್ತಮ ಆದಾಯ ನೀಡುವ ಬೆಳೆಗಳು ಫಲ ಉಳಿಸಿಕೊಳ್ಳಲಾರದ ಸ್ಥಿತಿ ಉಂಟಾದರೆ ನಾವು ಏನು ತಾನೇ ಮಾಡಬಹುದು?

ಪಯಸ್ವಿನಿ ಕ್ಲಬ್ ಹೌಸ್ ನ ಹಲಸು ಕೃಷಿ ಹಾಗೂ ಮೌಲ್ಯವರ್ಧನೆಯ ಎರಡನೇ ಕಂತು ಕಾರ್ಯಕ್ರಮದ ವೃತ್ತಾಂತಕ್ಕೆ ಇಲ್ಲಿ ಕ್ಲಿಕ್ ಮಾಡಿ.

ಹಲಸು ನಮ್ಮದೇ ಪ್ರದೇಶದಲ್ಲಿ ಉಗಮಗೊಂಡ ಹಾಗೂ ಇಲ್ಲಿನ ಪ್ರತ್ಯೇಕ ನೈಸರ್ಗಿಕ ವ್ಯವಸ್ಥೆಗೆ ಒಗ್ಗಿಕೊಂಡು ಅಭಿವೃದ್ಧಿಗೊಂಡ (endemic) ಒಂದು ಮರ. ಇದರ ಉಗಮವನ್ನು ಹಿಂಬಾಲಿಸಿದರೆ ಪಶ್ಚಿಮ ಘಟ್ಟಗಳಲ್ಲಿ ಕಾಣಲು ಸಾಧ್ಯವಾದೀತು. ಇದರ ತಳಿಯು ವೈವಿಧ್ಯತೆಯನ್ನು ಗಮನಿಸಿದಾಗಲೂ ಪಶ್ಚಿಮಘಟ್ಟದ ಶ್ರೇಣಿಯಲ್ಲಿ ಅಪಾರ ವೈವಿಧ್ಯತೆಯನ್ನು ನಾವು ಕಾಣಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ನಾವು ಬೆಳೆಯ ಗುಣಮಟ್ಟ ಮಾತ್ರ ನೀಡುವ ತಳಿಗಳ ಹಿಂದೆ ಬೀಳದೆ ಇರುವ ವೈವಿಧ್ಯತೆಯನ್ನು ಮುಂಬರುವ ಪ್ರತಿಕೂಲ ಹವಾಮಾನದ ವಿಷಯವನ್ನು ಗಮನವಿಟ್ಟುಕೊಂಡು ಸಂರಕ್ಷಿಸುವುದು ಮುಖ್ಯ. ನಮ್ಮದೇ ಖಾಸ್ ಸಂಪತ್ತು ಉಳಿಸಿಕೊಳ್ಳಲು ಇಷ್ಟವೇ ಅಲ್ಲವೇ? ನಾಸ್ಟಾಲ್ಜಿಯಾ ಅನಿಸುತ್ತದೆಯೇ?

ಬಹು ಉಪಯೋಗಿ ವೃಕ್ಷ ಸಂಪತ್ತು

ಹಲಸು ತನ್ನ ಕಳೆದುಕೊಂಡ ಹಳೆಯ ಕಾಲದ ಮೆರಗನ್ನು ಪುನಃ ಪಡೆದುಕೊಳ್ಳುತ್ತಿದೆ.

ಹಲಸನ್ನು ತರಕಾರಿಯ ರೀತಿಯಲ್ಲಿ ಬಳಸಲು ಬಹುಶಃ ಹಲವಾರು ತಳಿಗಳು, ಹಿಟ್ಟು ತಯಾರಿಸಲೂ ಹಲವಾರು ತಳಿಗಳು ಉಪಯೋಗಕಾರಿ ಆಗಬಹುದು. ಆದರೂ ಹೆಚ್ಚು ಇಷ್ಟಪಡುವ ತಳಿಗಳು ಇದ್ದೇ ಇರುತ್ತವೆ.

ಉಪ್ಪುಸೊಳೆ ಹಾಕುವುದಕ್ಕೂ (brining), ಕರಿಯುವುದಕ್ಕೆ (frying), ದೋಸೆಗೆ (non-sticking), ಇದೇ ರೀತಿ ಹಣ್ಣಿನ ಉಪಯೋಗಕ್ಕಾಗಿ ಇಷ್ಟಪಡುವ ತಳಿಗಳು ಗುರುತಿಸಲ್ಪಟ್ಟಿರುತ್ತದೆ. ಒಂದೇ ಮರದಲ್ಲಿ ಇವೆಲ್ಲಾ ಗುಣ ಒಂದಾಗಿ ಸಿಗಲು ಸಾಧ್ಯತೆ ಕಡಿಮೆ.

ಡಾ. ಡಿ.ಸಿ. ಚೌಟ ಅವರು ಈ ನಿಟ್ಟಿನಲ್ಲಿ ಹಲಸು ಮೇಳಗಳ ಪಾತ್ರ ಮನಗಂಡು ಮೀಯಪದವು, ಮಂಗಳೂರುಗಳಲ್ಲಿ ಮೇಳ ಆಯೋಜಿಸುತ್ತಿರುವ ವಿಚಾರ ತಿಳಿಯಪಡಿಸಿದರು.

ಮೌಲ್ಯವರ್ಧನೆಯಲ್ಲಂತೂ ಸಾಂಪ್ರದಾಯಿಕ ಹಾಗೂ ವೈವಿಧ್ಯಮಯ ತಿಂಡಿ ತಿನಿಸುಗಳು ನಮ್ಮ ಪ್ರದೇಶದಲ್ಲಿ ಅಪಾರ. ಇದಕ್ಕಾಗಿ ಅಡುಗೆಯಲ್ಲಿ ಮುಂದಿನ ಜನಾಂಗಕ್ಕೆ ಅದರಲ್ಲೂ ಮುಖ್ಯವಾಗಿ ಅಡುಗೆಯ ವೃತ್ತಿಪರ ಶೆಫ್ ಗಳಿಗೆ ಇದರ ಪರಿಚಯ ಹಾಗೂ ತರಬೇತಿ ಅಷ್ಟೇ ಅಲ್ಲ ಅವರ ಮನಸ್ಸಿನಲ್ಲಿ ಇದರ ಬಗ್ಗೆ ಗೌರವ ಬೇಕು. ಇದನ್ನು ಬಡಿದೆಬ್ಬಿಸುವಲ್ಲಿ ಹಲವಾರು ಪ್ರಯತ್ನಗಳನ್ನು ತಾವು ನಡೆಸಿದ್ದಾಗಿಯೂ ಇದರಲ್ಲಿ ಮುಖ್ಯವಾಗಿ ಕೆ.ಎಸ್ ಹೆಗ್ಡೆ ಮ್ಯಾನೇಜ್ಮೆಂಟ್ ಕಾಲೇಜಿನಲ್ಲಿ ನಡೆದ ಹಲಸು ಮೇಳದಲ್ಲಿ ಹೋಟೆಲ್ ಮ್ಯಾನೇಜ್ಮೆಂಟ್ ವಿದ್ಯಾರ್ಥಿಗಳನ್ನೂ, ಸ್ಟಾರ್ ಹೋಟೆಲ್ ನ ಶೆಫ್ ಗಳನ್ನೂ ಭಾಗವಹಿಸುವಂತೆ ಮಾಡಿದ್ದಾಗಿಯೂ ಡಾ. ಚೌಟರು ಸ್ಮರಿಸಿಕೊಂಡರು.

ಮುಖ್ಯ ಪಾತ್ರದ ಮಹನೀಯರು

ನಮ್ಮ ಈ ಪ್ರಯತ್ನಗಳ ಹೊರತಾಗಿ  ಹಲಸಿನ ಆಂದೋಲನ ಮಾಡುವ ಮೂಲಕ ಸಂಚಲನ ಮೂಡಿಸಿದ ಶ್ರೀ ಪಡ್ರೆ ಅವರು, ಗಿಡ ಉತ್ಪಾದಿಸಿ ನೀಡುವ ಶ್ರೀ ಅನಂತಮೂರ್ತಿ ಜವಳಿ, ಶ್ರೀ ಗುರುರಾಜ ಬಾಳ್ತಿಲ್ಲಾಯ, ಶ್ರೀ ಅನಿಲ್ ನಿಂತಿಕಲ್, ಮುಂತಾದವರು, ವ್ಯವಸ್ಥಿತ ಕೃಷಿಯ ರೀತಿಯಲ್ಲಿ ಮಾಡುತ್ತಿರುವ ಶ್ರೀ ಅಶೋಕ್ ಕುಮಾರ್ ಕರಿಕ್ಕಳ, ಶ್ರೀ ಗಾಬ್ರಿಯಲ್ ವೇಗಸ್, ಮಾರುಕಟ್ಟೆಯಲ್ಲಿ ಸಕ್ರಿಯ ಆಗಿರುವವರು, ಇವರೆಲ್ಲರೂ ತಮ್ಮದೇ ಆ ಬಹು ಮುಖ್ಯ ಪಾತ್ರ ವಹಿಸುವ ಸರಪಳಿಯ ಕೊಂಡಿಗಳು. ಇಲ್ಲಿ ಒಟ್ಟಾದ ಪ್ರಯತ್ನ ಬಹಳ ಮುಖ್ಯ. 

ಜೈವಿಕ ಸಂಕುಲದ ಸಂಪತ್ತು

ನಮ್ಮ ದೇಶದ ಸಸ್ಯ ಜೀವ ಸಂಕುಲದ ಸಂರಕ್ಷಣೆ, ಅದರ ಮೇಲಿನ ಸಂಶೋಧನೆ, ಅದರ ಉತ್ಪನ್ನಗಳ ಪೇಟೆಂಟ್ ಮುಂತಾದುವುಗಳನ್ನು ದೇಶದ ಒಳಗೆಯೇ ಇರಿಸಿಕೊಳ್ಳುವುದು, ಅದರ ಅಭಿವೃದ್ಧಿಯಿಂದ ದೇಶಕ್ಕೆ ಹೆಮ್ಮೆ ತರುವುದು, ದೇಶೀಯ ಮೌಲ್ಯ ಎತ್ತಿ ಹಿಡಿಯುವುದು ನಮ್ಮೆಲ್ಲರ ಹೊಣೆಯಾಗಿದೆ. ಉದ್ದ, ಉರುಟು, ಕೆಂಪು, ಹಳದಿ, ರುಚಿ, ಪರಿಮಳ, ಮಯಣ ಇಲ್ಲದಿರುವುದು, ಬೆಳೆ ನೀಡುವ ಕಾಲ, ಹೀಗೆ ವೈವಿಧ್ಯತೆ ಅಪಾರ. ಆದ್ದರಿಂದ ಇದನ್ನು ಅಭಿವೃದ್ಧಿ ಮಾಡುವಲ್ಲಿ ಮುಂದುವರಿಯುವುದರೊಂದಿಗೆ ಅಂಕಿ ಅಂಶಗಳನ್ನು ನಮ್ಮದೇ ಚೌಕಟ್ಟಿನಲ್ಲಿ ಪ್ರಕಟಿಸುವುದೂ ಮುಖ್ಯ.
ನಮ್ಮದಾದ ವಸ್ತು ಹಾಗೂ ಅದರ ಮೌಲ್ಯ ಇವೆಲ್ಲಾ ಕಾಪಾಡುವುದು ನಮಗೆ ಹೆಮ್ಮೆಯ ವಿಚಾರ, ಅಲ್ಲವೇ?

Leave a Comment

Your email address will not be published. Required fields are marked *

Scroll to Top