ಪವಿತ್ರವಾದ ದರ್ಭೆಹುಲ್ಲಿನ ಮಹಿಮೆ ವೇದದಿಂದ ಈ-ಕಾಮರ್ಸ್ ತನಕ

ನಿಮ್ಮ ಮೇಲೆ ಎಂದಾದರೂ ಯಾವುದಾದರೂ ಒಂದು ಗಂಟು ಹುಲ್ಲನ್ನು ಇಟ್ಟು ನೀರು ಸುರಿದಿದ್ದಾರೆಯೇ, ಅಥವಾ ತಲೆಯ ಮೇಲೆ ಹುಲ್ಲು ಹಿಡಿದು ಕತ್ತರಿಸಿದ್ದಾರೆಯೇ, ಅಥವಾ ಸೊಂಟಕ್ಕೆ ಹುಲ್ಲಿನ ಹಗ್ಗ ಕಟ್ಟಿ ಹುಲ್ಲಿನ ಮೇಲೆ ಕುಳ್ಳಿರಿಸಿ ನಿಮ್ಮನ್ನೇ ನೂಲಿನಿಂದ ಕಟ್ಟಿದ್ದಾರೆಯೇ? ಹೊಸ ಮನೆ ಕಟ್ಟಿದಾಗ ಅದರ ಸುತ್ತ ಹುಲ್ಲಿನ ಹಗ್ಗ ಕಟ್ಟಿದ್ದಾರೆಯೇ?

ಸರಿಯಾಗಿ ಗ್ರಹಿಸಿದಿರಿ. ಅದುವೇ ದರ್ಭೆಹುಲ್ಲು. ದರ್ಭಾ, ಕುಶ ಎಂಬ ಹೆಸರಲ್ಲೂ ಇದು ಅರಿಯಲ್ಪಟ್ಟಿದೆ. ಮಣ್ಣು ಸಂರಕ್ಷಣೆಯಲ್ಲಿ ಭೂಮಿಗೆ ಹಸಿರು ಹೊದಿಕೆಯಾಗಿಯೂ, ಹಿಂದೂ ಧರ್ಮದ ಕವಚವಾಗಿಯೂ ದರ್ಭೆಗೆ ವಿಶೇಷ ಸ್ಥಾನವಿದೆ.

ಇಂತಹ ಉಪಯೋಗಕ್ಕಾಗಿ ನಮ್ಮ ಹಿತ್ತಿಲಿನಲ್ಲಿ ಒಂದಷ್ಟು ಜಾಗದಲ್ಲಿ ದರ್ಬೆ ಹುಲ್ಲು ಬೆಳೆಯುತ್ತಿದ್ದೇವೆ. ಈಗ ಅದಕ್ಕೂ ಏನೋ ಒಂದು ರೋಗ. ಭತ್ತಕ್ಕೆ ಬರುವ ಹಳದಿ ಎಲೆ ರೋಗದಂತೆ ಇದು ಕೂಡ ಎಲ್ಲಾ ಹಳದಿಯಾಗಿ ವಿಚಿತ್ರವಾಗಿ ಕಾಣುತ್ತದೆ. ಈ ರೋಗಕ್ಕೆ ಆಂಟಿಬಯೋಟಿಕ್ ಸಿಂಪಡಿಸಬೇಕೋ ಅಥವಾ ಪೂರ್ತಿಯಾಗಿ ಒಂದುಬಾರಿ ಕತ್ತರಿಸಿ ನೋಡುವುದೋ ಎಂದು ತಳಮಳ ಮನಸ್ಸಿನಲ್ಲಿ ಇತ್ತು. ಈಗ ಸಂಪೂರ್ಣವಾಗಿ ಕತ್ತರಿಸಿ ಬಿಟ್ಟಿದ್ದೇನೆ, ನೋಡಬೇಕು, ಏನಾಗುತ್ತದೆಂದು.

ದರ್ಭೆಯನ್ನು ಸಂಗ್ರಹಿಸಲು ಪಾತಿಗಳಲ್ಲಿ ಬೆಳೆಯಬಹುದು

ಇದು ಕಳೆ ಹುಲ್ಲಾಗಿ ತೇವಾಂಶವಿರುವ ಕ್ಷಾರೀಯ ಮಣ್ಣಿನಲ್ಲಿ ಬೆಳೆಯುತ್ತದೆಯಾದರೂ ಉತ್ತಮ ಭೂಮಿಯಲ್ಲಿ ನೆಡುವುದರಿಂದ ಪವಿತ್ರತೆ ಕಾಪಾಡಬಹುದು.

ಕೆಲವು ದರ್ಭೆ ಉದ್ದುದ್ದ, ಅಗಲ ಇದ್ದು ಬೈಹುಲ್ಲಿನಂತೆಯೂ, ಇನ್ನೂ ಕೆಲವು ಉರುಟಾಗಿ ಚೂಪಾಗಿಯೂ ಕಾಣುತ್ತವೆ. ಇವೆಲ್ಲಾ ಬೇರೆ ಬೇರೆ ತಳಿಗಳೇ?

ಉಶೀರ, ಕಾಶ, ಕುಶ, ಕುಂದರ, ಗೋಧೂಮಾ, ಪುಂಡರೀಕ, ಬಲ್ಬಜ, ಮೂಂಜ್ಯ, ಯವ, ವಿಶ್ವಾಮಿತ್ರ, ವ್ರೀಹಿ, ಶರ ಎಂಬ ಹನ್ನೆರಡು ಜಾತಿಯ ದರ್ಭೆಗಳು ಇವೆಯಾದರೂ, ಕುಶ ಹಾಗೂ ವಿಶ್ವಾಮಿತ್ರ ಜಾತಿಯ ದರ್ಭೆಗಳು ಉತ್ತಮವಂತೆ. ಕುಶ ದರ್ಭೆಯನ್ನು ಬ್ರಹ್ಮದರ್ಭೆ ಎಂತಲೂ, ರಜೋದರ್ಭೆ ಎಂತಲೂ ಹೇಳುತ್ತಾರೆ. ವಿಶ್ವಾಮಿತ್ರ ದರ್ಭೆ ವೈಷ್ಣವಕರ್ಮಗಳಿಗೆ ಉತ್ತಮವಂತೆ.

ದರ್ಭೆ ಹೇಗೆ ನೆಡುವುದು

ದರ್ಭೆಯನ್ನು ಬೇರು ಇರುವ ಟಿಸಿಲುಗಳ ಮೂಲಕ ವೃದ್ಧಿ ಮಾಡಿಕೊಳ್ಳಬಹುದು. ತಿಂಗಳಿಗೊಮ್ಮೆ ಕತ್ತರಿಸಿ ಚೆನ್ನಾಗಿ ಒಣಗಿಸಿ ಶೇಖರಿಸಬಹುದು.

Halfa grass - Kusham

ಒಳ್ಳೆಯ ಸಂದರ್ಭದಲ್ಲಿ ಕತ್ತರಿಸಿಕೊಳ್ಳಿ

ಆಚರಣೆಗಳಲ್ಲಿ ನಂಬಿಕೆ ಇರುವವರು ಹೇಳುತ್ತಾರೆ, ದರ್ಬೆಯನ್ನು ಯಾವಾಗ ಕತ್ತರಿಸಬೇಕು ಮತ್ತೆ ಯಾವಾಗ ಕತ್ತರಿಸಬಾರದು ಎಂದು. ಆದಿತ್ಯವಾರ, ಸೋಮವಾರ ಅಥವಾ ಗುರುವಾರ ಮಾತ್ರವೇ ದರ್ಬೆಯನ್ನು ಕತ್ತರಿಸಬಹುದು ಎನ್ನುತ್ತಾರೆ. ಹುಣ್ಣಿಮೆಯ ನಂತರದ (ಕೃಷ್ಣ ಪಕ್ಷ) ಪ್ರತಿಪತ್ (ಪಾಡ್ಯ) ದಿನ ದರ್ಭಾಹರಣ ಯೋಗ್ಯವಾದ ದಿನವೆಂದೂ ಹೇಳುತ್ತಾರೆ. ಶ್ರಾವಣ ಮಾಸದ ಅಮಾವಾಸ್ಯೆಗೆ ದರ್ಭಾಹರಣ ಅಮಾವಾಸ್ಯೆಯೆಂದು ಹೆಸರು. ನಮ್ಮೂರಲ್ಲಿ ಅದನ್ನು ತೀರ್ಥ ಅಮಾವಾಸ್ಯೆ ಅಂತಾನು ಹೇಳ್ತಾರೆ. ಆ ದಿವಸ ದರ್ಬೆ ಕತ್ತರಿಸಲು ವಾರ ಯಾವುದೆಂದು ನೋಡಬೇಕಾಗಿಲ್ಲ. ತೀರ್ಥ ಅಮಾವಾಸ್ಯೆಯಂದು ಕತ್ತರಿಸಿದ ದರ್ಭೆಗೆ ಕ್ಷಯ ಇಲ್ಲದಿದ್ದುದರಿಂದ ಔಪಾಸನಾ ಸಾಮಗ್ರಿಗೆ ಇಂತಹ ದರ್ಭೆಯೇ ಉತ್ತಮವೆಂಬ ನಂಬಿಕೆ ಇದೆ. ಅಪರಾಹ್ನ ಕಾಲದಲ್ಲೂ ದರ್ಭೆ ಕತ್ತರಿಸುವಂತಿಲ್ಲವಂತೆ.

ವಿರಿಂಚಿನಾ ಸಹೋತ್ಪನ್ನ ಪರಮೇಷ್ಠಿ ನಿಸರ್ಗಜ |
ನುದ ಸರ್ವಾಣಿ ಪಾಪಾನಿ ದರ್ಭ ಸ್ವಸ್ತಿ ಕರೋ ಭವ ||

ಈ ರೀತಿ ಸ್ಮರಿಸುತ್ತಾ ಅಥವಾ ಹೇಳುತ್ತಾ ದರ್ಭೆ ಕತ್ತರಿಸುವುದರಿಂದ ದರ್ಭೆ ಮಹತ್ವದ ಸ್ಮರಣೆಯಾಗುತ್ತದೆ.

Desmostachya bipinnata
ದಕ್ಷಿಣ ಭಾರತದ ದರ್ಭೆಯ ಮಡಿ

ಶೇಖರಣೆ

ಹೆಚ್ಚಿನ ಬಿಸಿಲಿನಲ್ಲಿ ಒಣಗಿಸುವಾಗ ಅದು ಮೆತ್ತಗಾಗಿಯೂ ವರ್ಣ ಕಳೆದುಕೊಂಡು ಕಂದು ಬೂದು ಬಣ್ಣದ್ದಾಗಿಯೂ ಇರುತ್ತದೆ. ಇದಕ್ಕಾಗಿ ಕಡಿಮೆ ಬಿಸಿಲಿನಲ್ಲಿ ಮಧ್ಯೆ ಮಧ್ಯೆ ಕೈಯಾಡಿಸಿ ಹರಡುತ್ತಾ ಇರುವುದರಿಂದ ಉತ್ತಮ ವರ್ಣದ ಉರುಟಾದ ದರ್ಭೆ ಲಭಿಸುತ್ತದೆ. ದರ್ಭೆಯು ತುದಿ ಚೂಪಾಗಿರುವ ಭಾಗವನ್ನು ಹೊಂದಿರುವುದೇ ಹಲವಾರು ಕ್ರಿಯೆಗಳಿಗೆ ಬೇಕಾಗುತ್ತದೆ. ಒಣಗಿದ ದರ್ಭೆಯನ್ನು ತೇವಾಂಶವಿಲ್ಲದ ಜಾಗದಲ್ಲಿ ಕಟ್ಟುಗಳಾಗಿ ಇಡಬಹುದು. ಸುಮಾರು ಆರು ತಿಂಗಳುಗಳಷ್ಟು ದರ್ಭೆ ಚೆನ್ನಾಗಿರುತ್ತದೆ. ಆದರೆ ಅಗತ್ಯವಿಲ್ಲದೇ ಹೆಚ್ಚು ದರ್ಭೆಯನ್ನು ಮನೆಗಳಲ್ಲಿ ಶೇಖರಿಸುವುದು ಯೋಗ್ಯವಲ್ಲ. ದರ್ಭೆಯ ತುದಿ ಪೂರ್ವಕ್ಕೆ ಇರುವಂತೆ ಇರಿಸುವುದು ಯೋಗ್ಯ.

ಶಾಸ್ತ್ರೋಕ್ತವಾದ ಹಿಂದೂಆಚರಣೆ ಕ್ರಮಗಳಲ್ಲಿ ದರ್ಭೆಹುಲ್ಲಿನ ಮಹತ್ವ

ಮನುಷ್ಯನ ಹುಟ್ಟಿನಿಂದ ಹಿಡಿದು ಸಾವಿನವರೆಗೆ ದರ್ಭೆಯ ಉಪಯೋಗದಿಂದ ಪವಿತ್ರವಾಗಿದೆ.

ಅಪವಿತ್ರ: ಪವಿತ್ರೋವಾ ಸರ್ವಾವಸ್ಥಾಂ ಗತೋಪಿವಾ.. ಎಂದು ಮಂತ್ರವನ್ನು ಉಚ್ಛರಿಸಿ ದರ್ಭೆಯಿಂದ ಮಾಡಿದ ಉದ್ಧರಣೆಯಲ್ಲಿ ಪಂಚಗವ್ಯ ಪ್ರೋಕ್ಷಣೆ ಮಾಡಿದಾಗ ಸ್ಥಳ ಶುದ್ಧೀಕರಣವಾಗುತ್ತದೆ. ಕಲಶೋದಕ, ಅಭಿಷೇಕ ಜಲ, ಜಲಪಾತ್ರ, ನೈವೇದ್ಯಗಳಲ್ಲಿ ದರ್ಭೆಯನ್ನು ನಿಕ್ಷೇಪಿಸುವುದರಿಂದ ಅವು ಪರಿಶುದ್ಧವಾಗುವುವು.

ಅದೇ ರೀತಿ ಹೋಮಕುಂಡದಲ್ಲಿ ಉರಿಯುವ ಅಗ್ನಿಗೆ ತುಪ್ಪದೊಂದಿಗೆ ದರ್ಭೆ ಹಾಕಿದಾಗ ಅದು ವಾತಾವರಣದ ವಾಯುವನ್ನು ಶುದ್ಧೀಕರಿಸುತ್ತದೆ. ಇತ್ತೀಚಿನ ಕೊರೋನಾ ಸಂಬಂಧವಾದ ಅಧ್ಯಯನದಲ್ಲಿ ದರ್ಭೆ, ತುಪ್ಪ, ಮುಷ್ಠಕಾ ಮುಂತಾದ ಹವಿಸ್ಸುಗಳಿಂದ ಸತತವಾಗಿ ಅಗ್ನಿಕಾರ್ಯ ಮಾಡುವವರಿಗೆ ಈ ವೈರಾಣು ಬಾಧೆ ಬಾರದು ಎಂಬ ಅಭಿಪ್ರಾಯವಿದೆ. ಇದೇ ರೀತಿ ವಿವಿಧ ವೈದಿಕ ಕಾರ್ಯಗಳಲ್ಲಿ ದರ್ಭೆಗೆ ಶ್ರೇಷ್ಠವಾದ ಸ್ಥಾನವಿದೆ.

ಕೌಪೀನಮ್ ಭಸ್ಮನಾ ಲೇಪೋ ದರ್ಭಾ ರುದ್ರಾಕ್ಷ ಮಾಲಿಕಾ |
ಮೌನ ಮೇಕಾಂತಿಕಾ ಚೇತಿ ಮೂರ್ಖ ಸಂಜೀವನಾನಿ ಷಟ್ ||

ಜೀವನಕ್ಕಾಗಿ ಹೆಡ್ಡರು ಕೌಪೀನ, ಭಸ್ಮ ಲೇಪನ, ದರ್ಭೆ, ರುದ್ರಾಕ್ಷೆಯ ಮಾಲೆ, ಮೌನ, ಏಕಾಂತ ಎಂಬ ಆರು ವಿಷಯಗಳಿಂದ ಸಂಜೀವಿನಿ ಪ್ರಾಪ್ತಿ ಹೊಂದುವರು. 

Kushaagra
twisted grass
ದರ್ಭೆಯ ಸಾಂದರ್ಭಿಕ ಚಿತ್ರಗಳು

ಬುದ್ಧನಿಗೆ ಬೋಧಿ ಮರದ ಕೆಳಗೆ ದರ್ಭೆಯ ಮೇಲೆ ಕುಳಿತುಕೊಂಡು ಧ್ಯಾನದಲ್ಲಿದ್ದಾಗ ಜ್ಞಾನೋದಯವಾಯಿತು. ಇದಕ್ಕೋಸ್ಕರ ದರ್ಭೆಗೆ ಆದರ ಸೂಚಕ ಸ್ಮರಣೆಗಾಗಿ ಆ ಸ್ಥಳವನ್ನು ಬೌದ್ಧರು ಕುಶೀನಗರ ಎಂದು ಕೊಂಡಾಡಿದರಂತೆ.

ಇನ್ನಷ್ಟು ದರ್ಭೆಯ ಮಾಹಿತಿ

Desmostachya bipinnata ಎಂಬ ಸಸ್ಯಶಾಸ್ತ್ರೀಯ ಹೆಸರಿರುವ ಇದು ಒಂದು ಏಕದಳ ಹುಲ್ಲು. ಇದನ್ನು ಉಳಿದ ಹುಲ್ಲುಗಳೊಂದಿಗೆ ಹಸುಗಳಿಗೆ ಮೇವಾಗಿಯೂ ಉಪಯೋಗಿಸುತ್ತಾರೆ.

ಆಯುರ್ವೇದದಲ್ಲಿ ಉದರ ಸಂಬಂಧವಾದ ಕೆಲವು ಕಾಯಿಲೆಗಳಿಗೆ ಔಷಧವಾಗಿ ದರ್ಭೆಯ ಕಷಾಯವನ್ನು ಉಪಯೋಗ ಮಾಡಲಾಗುತ್ತದೆ. ದರ್ಭೆಯ ಮಸಿಯಿಂದ ಅಗ್ಗದ ಕಾರ್ಬನ್ ನ್ಯಾನೋ ಟ್ಯೂಬ್ ತಯಾರಿಸಲೂ ಪ್ರಯತ್ನ ನಡೆದಿದೆ.

ಸಾಹಿತ್ಯ, ಅಧ್ಯಯನ ಗಳಲ್ಲಂತೂ ದರ್ಭೆಗೆ ವಿಶೇಷ ಮಾದರಿ ಕೊಟ್ಟಿದ್ದಾರೆ. ದರ್ಭೆಯ ತುದಿಯನ್ನು ಜ್ಞಾನ ಸಾಮರ್ಥ್ಯದ ನಿಖರತೆಗೆ ಹೋಲಿಸುತ್ತಾರೆ. ಕುಶಾಗ್ರಮತಿಗಳಾದ ವಿದ್ಯಾರ್ಥಿಗಳು ಗುರುಕುಲ ವಿದ್ಯಾಭ್ಯಾಸದಲ್ಲಿ ಏಕಸಂಧಿಗ್ರಾಹಿಗಳಾಗಿದ್ದರಂತೆ. ಈಗ ನಮಗೆಲ್ಲ ಹತ್ತುಸಾರಿ ಹೇಳಿದರೂ ಉಚ್ಚಾರಣೆ, ಸ್ವರಗಳ ಶುದ್ಧಿಯಲ್ಲಿ ಏರುಪೇರು ಆಗುತ್ತದೆ ಎಂದರೆ ಲಜ್ಜಾಸ್ಪದವಲ್ಲವೇ!

ಆನ್ಲೈನ್ ದರ್ಭೆ

ಈಗ ಆನ್ಲೈನ್ ಮಾರುಕಟ್ಟೆಯಲ್ಲಿ ದರ್ಭೆ, ದರ್ಭೆಯ ಮ್ಯಾಟ್, ಹಗ್ಗ, ಕರಕುಶಲ ಸಾಮಗ್ರಿಗಳು ಉತ್ತಮ ಮೌಲ್ಯದಲ್ಲಿ ಲಭ್ಯವಿವೆ. ದರ್ಭೆಯನ್ನು ನೆರಳಿನಲ್ಲಿ ಹರಡಿ ಬಣ್ಣ ಕಳಕೊಳ್ಳದಂತೆ ಒಣಗಿಸುವುದು ಒಂದು ರೀತಿ ಆದರೆ ಒಣಗಿದ ದರ್ಭೆಗೆ ಹಸಿರುಬಣ್ಣ ಹಚ್ಚುವುದು ಕೂಡ ಇನ್ನೊಂದಾಗಿ ಕಂಡುಬರುತ್ತದೆ.

ಎಷ್ಟಾದರೂ ಚಿತ್ರ ನೋಡಿ ತಾನೇ ಖರೀದಿಸುವುದು!

ಯತ್ಕಶ್ಚಿತ್ ಕಳೆ ಹುಲ್ಲೆಂದು ಪರಿಗಣಿಸುವ ಈ ದರ್ಭೆಯ ವೈದಿಕ ಮಹತ್ವ ಹಾಗೂ ಅದನ್ನವಲಂಬಿಸಿ ನಡೆಯುವ ಸಂಶೋಧನೆಗಳು ಹಾಗು ಈಕಾಮರ್ಸ್ ಮಾರುಕಟ್ಟೆಯನ್ನು ನೋಡಿದರೆ ನಮ್ಮ ಆಧ್ಯಾತ್ಮ ಪರಂಪರೆಯ ಬಗ್ಗೆ ಹೆಮ್ಮೆಯೆನಿಸುತ್ತದೆ.

ಕೊನೆಯ ಮಾತು

ನಮಗೆಲ್ಲಾ ಮಳೆಗಾಲ ಬಂತೆಂದರೆ ಏನೇನೋ ಹೊಸತು ನೆಟ್ಟು ಮಾಡಬೇಕೆಂಬ ಆಸಕ್ತಿ. ಅಂತಹುದರಲ್ಲಿ ಈ ಬಾರಿ ಒಂದು ವೈದಿಕ ನಾಟಿ ಮಾಡಿ ಬಿಡೋಣವೇ? ಪರಿಸರ ಸಂರಕ್ಷಣೆಯಲ್ಲಿ ಪ್ರತ್ಯಕ್ಷವಾಗಿಯೂ, ಪರೋಕ್ಷವಾಗಿಯೂ ಒಂದು ಹುಲ್ಲಿನ ಕ್ರಾಂತಿ ಎಂದರೆ ತಪ್ಪಾಗಲಾರದು. ನಮಗೆ ಆಗಾಗ ಬೇಕಾಗುವ ಹಲವಾರು ಸಸ್ಯಗಳು ನಮಗೆ ಮರೆತು ಹೋಗಿ ನಾವು ಏನೇನೋ ವಿಷಯುಕ್ತವಾದ ಅಸಮರ್ಪಕ ಕ್ರೋಟನ್ ಗಿಡಗಳನ್ನು ನೆಡುವ ಬದಲು ಉತ್ಸಾಹದಲ್ಲಿ ಉಪಯೋಗಿ ಸಸ್ಯಗಳನ್ನು ಬೆಳೆದು ಕೃತಾರ್ಥರಾಗೋಣ.

Leave a Comment

Your email address will not be published. Required fields are marked *

Scroll to Top