Kasaragod cow

ಗೋಆಧಾರಿತ ಕೃಷಿಯಿಂದ ಅಡಿಕೆ ತೋಟಕ್ಕೆ ರೋಗ ಕಡಿಮೆ — ಆದಾಯ ಹೆಚ್ಚು

ಗೋವಿನ ಆಧಾರಿತ ಕೃಷಿಯ ಮಹತ್ವಕ್ಕೆ ಹೆಚ್ಚು ಜನರು ಪ್ರಭಾವಿತಾರಾಗುತ್ತಿದ್ದಾರೆ. ಅದೇ ರೀತಿ ಅವರ ಆಸಕ್ತಿಯನ್ನು ಉಳಿಸಿಕೊಳ್ಳುವ ಪ್ರಯತ್ನ ಆಗಬೇಕಾಗಿದೆ.

 • ಗೋ ಆಧಾರಿತ ಕೃಷಿ ಪೋಷಕಾಂಶದ ಪೂರೈಕೆಯ ಸ್ರೋತಸ್ಸು.
 • ಗೋವಿನ ಹಾಲು ಕೃಷಿಕನಿಗೆ ಅಮೃತ ಸಮಾನವಾಗಿದ್ದು ಆರೋಗ್ಯ ನೀಡುತ್ತದೆ.
 • ಗವ್ಯೋತ್ಪನ್ನಗಳ ಉದ್ಯಮ ಹೆಚ್ಚುವರಿ ಆದಾಯಕ್ಕೆ ದಾರಿಮಾಡಿಕೊಟ್ಟಿದೆ.
 • ಭಾರತೀಯ ಸಂಪ್ರದಾಯದಲ್ಲಿ ಗೋವು ಅತಿಮುಖ್ಯ ಸ್ಥಾನ ವಹಿಸುತ್ತದೆ.

ಗಾವೋಮೇ ಮಾತರಃ ಸಂತು ಪಿತರಃ ಸಂತು ಗೋ ವೃಷಃ |
ಗ್ರಾಸ ಮುಷ್ಟಿಮ್ ಮಯಾದತ್ತಂ ಪ್ರತಿ ಗೃಹ್ಣಂತು ಮಾತರಃ ||

ಎಂದು ಗೋವಿಗೆ ಮಾತೃದೇವತಾ ಸ್ಥಾನವನ್ನು ಕೊಡಲಾಗಿದೆ.

ಕೃಷಿಕರ ಕ್ಲಬ್ ಹೌಸ್ ಸಂವಾದವು ಪಯಸ್ವಿನಿ ವೇದಿಕೆಯಲ್ಲಿ  2021 ಸೆಪ್ಟೆಂಬರ್ 26ರಂದು ಜರಗಿತುಇದರಲ್ಲಿ ಭಾಗವಹಿಸಿದ ಸಂಪನ್ಮೂಲ ವ್ಯಕ್ತಿಗಳು:

 1. ಡಾ ಮನೋಹರ್ ಉಪಾಧ್ಯಾಯ ಮಂಗಳೂರು
 2. ಶ್ರೀ ನಿಶ್ಚಲ್ ಶೆಟ್ಟಿ, ಕಲ್ಲಾಡಿ, ಇರಾ, ಬಂಟ್ವಾಳ
 3. ಶ್ರೀ ಎ.ಪಿ. ಸದಾಶಿವ ಮರಿಕೆ, ಪುತ್ತೂರು
 4. ಶ್ರೀ ವಿಷ್ಣು ಭಟ್ ಸಾಂದೀಪಿನಿ, ವೀರಕಂಬ
 5. ಶ್ರೀ ಸತ್ಯಶಂಕರ ದೇವಪೂಜಿತ್ತಾಯ, ಕುಂಬಳೆ
 6. ಶ್ರೀ ವೀರಣ್ಣ ಮಸ್ಕಿ ರಾಯಚೂರು
 7. ಶ್ರೀ ಪ್ರಸನ್ನ, ಉತ್ತರ ಕನ್ನಡ
 8. ಶ್ರೀ ಎಕ್ಕಡ್ಕ ಗಣಪತಿ ಭಟ್

ಒಂದೇ ವೇದಿಕೆಯಲ್ಲಿ ಬಹಳಷ್ಟು ಹೈನುಗಾರಿಕಾ ಅದರಲ್ಲೂ ಸಾವಯವ ಕೃಷಿಗೆ ಒಲವು ಇರುವ ಕೃಷಿಕರನ್ನು ಕಂಡು ಸಂತಸ ವ್ಯಕ್ತ ಪಡಿಸಿದ ಪಶು ವೈದ್ಯ ಹಾಗೂ ಅಂಕಣಕಾರರಾದ ಡಾ| ಮನೋಹರ ಉಪಾಧ್ಯಾಯ ಅವರು ಕೆಲವು ಮಹತ್ವಪೂರ್ಣ ಅಂಶಗಳನ್ನು ಹೇಳಿಕೊಂಡರು.
ಸಾಕಷ್ಟು ಹಸಿ ಹುಲ್ಲು ಇದ್ದಾಗ ನಾರಿನ ಅಂಶ ತನಗೆ ಅಗತ್ಯ ಕಂಡಲ್ಲಿ ಮಾತ್ರ ಹಸುಗಳು ಒಣ ಹುಲ್ಲು ತಿನ್ನುತ್ತವೆ. ಹತ್ತು ಲೀ . ಗಿಂತ ಹೆಚ್ಚು ಹಾಲು ಕರೆಯುವ ಹಸುಗಳಿಗೆ ಪೋಷಕಾಂಶ ಕೊರತೆಯುಂಟಾಗದಿರಲು ವಿಟಮಿನ್ ಎ ಮತ್ತು ಡಿ ಮಾತ್ರೆಗಳು ದಿನಕ್ಕೆ ಹತ್ತರಂತೆಯೂ, ಕ್ಯಾಲ್ಸಿಯಂ ಖನಿಜ-ಲವಣ ಮಿಶ್ರಣ 30 ಗ್ರಾಂ ನಂತೆಯೂ ದಿನಕ್ಕೊಂದು ಬಾರಿ ಕೊಡುವುದರಿಂದ ಹಸುಗಳ ಆರೋಗ್ಯ ಕಾಪಾಡಬಹುದು. ಡಾ| ಮನೋಹರ ಉಪಾಧ್ಯಾಯ ಅವರ ಅನಿಸಿಕೆಯ ಪ್ರಕಾರ ಸಾವಯವ ಕೃಷಿಕರಿಗೆ ಗವ್ಯೋತ್ಪನ್ನ ಮುಖ್ಯ ಉತ್ಪನ್ನವೂ ಹಾಲು ಉಪ ಉತ್ಪನ್ನವೂ ಆಗಿರುತ್ತದೆ.

ತಳಿಗಳು

ಹೈನುಗಾರಿಕೆ ಕೃಷಿಕರು ಮಲೆನಾಡು ಗಿಡ್ಡ, ಕಾಸರಗೋಡು, ಸಿಂಧಿ, ಕಾಂಕ್ರೇಜ್, ಗಿರ್, ಶಾಹಿವಾಲ್, ಥಾರ್ಪಾರ್ಕರ್, ಹೋಸ್ಟೀನ್, ಜರ್ಸಿ ಮುಂತಾದ ಕರುಗಳನ್ನು ಮತ್ತು ಹಸುಗಳನ್ನು ಸಾಕುವುದಾಗಿ ತಿಳಿಸಿದರು. ಎರಡು ಹಸುಗಳಿಂದ 70 ಹಸುಗಳ ವರೇಗೆ ಸಾಕುವ ಕೃಷಿಕರು ತಮ್ಮ ಮಾಹಿತಿಯನ್ನು ಕೇಳುಗರೊಂದಿಗೆ ಹಂಚಿಕೊಂಡರು. ಸ್ಥಳೀಯವಾಗಿ ಹೆಚ್ಚು ಒಗ್ಗಿಕೊಳ್ಳುವ ನಾಟಿ ತಳಿಗಳಿಗೆ ಮಹತ್ವ ನೀಡುವುದರಿಂದ ಖರ್ಚುವೆಚ್ಚ ಕಡಿಮೆ ಹಾಗೂ ಅವುಗಳ ಉತ್ಪನ್ನಗಳು ಹೆಚ್ಚು ಮೌಲ್ಯಯುತ ಎಂಬ ಅಭಿಪ್ರಾಯ ಒಟ್ಟಿನಲ್ಲಿ ಕೇಳಿಬಂತು.

ಹಸುವಿನ ಮೇವು

ತೋಟದ ಕಳೆಹುಲ್ಲನ್ನು ಹೆಚ್ಚಿನ ಕೃಷಿಕರು ಮೇವಾಗಿ ಬಳಸುತ್ತಾರೆ ಅದಕ್ಕೆ ಹೊರತಾಗಿ ಮೇವಿನ ಹುಲ್ಲುಗಳಾದ ಸಂಪೂರ್ಣ, ಬಿಹೆಚ್-18, ಹೈಬ್ರಿಡ್ ನೇಪಿಯರ್, ಕಸ್ತೂರಿ, coFS-29 ಮುಂತಾದ ಉತ್ತಮ ಪೋಷಕಾಂಶಯುಕ್ತ ಹುಲ್ಲುಗಳನ್ನು ಮೇವಾಗಿ ಕೊಡುವುದರಿಂದ ಹೆಚ್ಚು ಪ್ರಮಾಣದಲ್ಲಿ ಕೊಬ್ಬಿನ ಅಂಶ ಹಾಲಿನಲ್ಲಿ ಲಭಿಸುವುದು.

ಮೆಕ್ಕೆಜೋಳಕ್ಕೆ ಹುಳಿ ಮಜ್ಜಿಗೆ, ಉಪ್ಪು, ಕಾಕಂಬಿ ಗಳನ್ನು ಸೇರಿಸಿ ಕಂಪ್ರೆಸ್ ಮಾಡಿ, ನಿರ್ವಾತವಾಗಿ ವಾರಗಳ ಕಾಲ ಹುದುಗಿಸಿ ವರ್ಷಕ್ಕೆ ಎರಡು ಬಾರಿ 30 ಟನ್ ಸೈಲೆಜ್ ಮೇವು ಉತ್ಪಾದನೆ ಮಾಡುವುದಾಗಿ ಶ್ರೀಮತಿ ವೇದಾ ತಿಳಿಸಿದರು. ಇವರೆಲ್ಲರ ಹೇಳಿಕೆಯ ಪ್ರಕಾರ ಗೋಆಧಾರಿತ ಕೃಷಿಯಲ್ಲಿ ರೋಗರುಜಿನಗಳ ತೊಂದರೆಗಳು ಬಹಳ ಕಡಿಮೆ.
ಉದ್ದಿನ ಗಿಡಗಳು, ಹೆಸರು ಗಿಡಗಳು, ಕಳೆಗಿಡಗಳು ಇವುಗಳ ಹೊರತಾಗಿ ಮರ ಮೇವುಗಳಾಗಿ ಹಾಲುವಾನ, ನುಗ್ಗೆ, ಹೊಂಗೆ, ಮುಂತಾದ ಮರ ಮೇವುಗಳನ್ನು ಹಸುಗಳಿಗೆ ನೀಡುವುದಾಗಿ ಶ್ರೀಮತಿ ವೇದಾ ತಿಳಿಸಿದರು.
ಅವರು ಸಾವಯವ ಉತ್ಪಾದನೆಯ ಹಾಲಿಗೆ ಉತ್ತಮ ಮಾರುಕಟ್ಟೆಯನ್ನು ಕಂಡುಕೊಂಡಿದ್ದಾರೆ. ಇನ್ನಷ್ಟು ವಿವರಕ್ಕೆ ಕ್ಲಿಕ್ ಮಾಡಿ: ಪಂಚಮವೇದ.

ಎಕ್ಕಡ್ಕ ಗಣಪತಿ ಭಟ್ಟರ ನಾಟಿ ಹಸುಗಳ ಗೋಶಾಲೆ

ಸಾಂದೀಪಿನಿ ವಿಷ್ಣು ಭಟ್ಟರ ಥಾರ್ಪಾರ್ಕರ್ ಹಸು ಮತ್ತು ಕರು

ಗವ್ಯೋತ್ಪನ್ನಗಳಿಂದ ಅಧಿಕ ಆದಾಯ

ಹಸುಗಳ ಹಾಲು ಎಷ್ಟು ಮುಖ್ಯವೋ ಅದಕ್ಕಿಂತ ಹೆಚ್ಚು ಪ್ರಾಮುಖ್ಯತೆಯನ್ನು ಇಂದು ಇತರ ಗವ್ಯೋತ್ಪನ್ನಗಳು ಮಾರುಕಟ್ಟೆಯಲ್ಲಿ ಪಡೆಯುತ್ತಿವೆ. ಹಸುವಿನ ಸಗಣಿ ಹಲವಾರು ಗೊಬ್ಬರಗಳಿಗೆ ಮೂಲಾಧಾರ ಅಷ್ಟೇ ಅಲ್ಲ ಗೋಬರ್ ಗ್ಯಾಸ್ ನಿವ್ವಳ ಆದಾಯ ಎನ್ನುತ್ತಾರೆ ಶ್ರೀ ಎಪಿ ಸದಾಶಿವ ಮರಿಕೆ. ಗೋಬರ್ ಗ್ಯಾಸ್ ಗೆ ಕಂಪ್ರೆಸರ್ ಬಳಸುವುದರಿಂದ ಕೇವಲ ತಮಗೆ ಅಷ್ಟೇ ಅಲ್ಲ ಕೆಲಸಗಾರರಿಗೂ ಕೊಠಡಿಗಳಿಗೆ ಗೋಬರ್ ಗ್ಯಾಸ್ ಪೂರೈಕೆ ಎಲ್ ಪಿ ಜಿ ಗಿಂತ ಸಕ್ಷಮವಾಗಿ ಸಾಧ್ಯವಾಗುತ್ತಿದೆ ಎನ್ನುತ್ತಾರೆ ಶ್ರೀಮತಿ ವೇದಾ ಮನೋಹರ್.

ಪ್ರಕೃತಿದತ್ತ ಮೂಲವಸ್ತು ಹಾಗೂ ಗೋಜನ್ಯ ವಸ್ತುಗಳನ್ನು ಬಳಸಿ ರಾಸಾಯನಿಕ ರಹಿತ ಕೃಷಿಯನ್ನು ಮಾಡಬಹುದು ಎನ್ನುತ್ತಾರೆ ಪ್ರಶಸ್ತಿ ವಿಜೇತ ಶ್ರೀ ನಿಶ್ಚಲ್ ಶೆಟ್ಟಿ. ಒಂದು ಮಲೆನಾಡು ಗಿಡ್ಡ ಹಸುವಿನಿಂದ ಆರಂಭಿಸಿ ಮಿಶ್ರ ತಳಿ ದನಗಳನ್ನು ಮಾಡುತ್ತಾ 35 ಆಕಳುಗಳ ಗೋಶಾಲೆ ಮಾಡಿದ ಹೆಗ್ಗಳಿಕೆ ಇವರದ್ದು. 8ಕುಡ್ತೆ ಹಾಲಿನ ಆ ದನದಿಂದ 18ಲೀ. ಹಾಲು ಕರೆವ ದನ ಸ್ವಂತ ಹಟ್ಟಿ ಯಲ್ಲೇ ಪಡೆಯಲು ಸಾಧ್ಯವಾಯಿತೆಂದು ಹೆಮ್ಮೆ ಪಡುತ್ತಾರೆ ಶ್ರೀ ನಿಶ್ಚಲ್ ಶೆಟ್ಟಿ.

ಇದೇ ರೀತಿ ಎಲ್ಲರೂ ಕೈಜೋಡಿಸಿದರೆ ರಾಸಾಯನಿಕ ಮುಕ್ತ ಭಾರತವನ್ನು ನಾವು ಕಾಣಬಹುದು ಎಂಬ ಆಶಾವಾದವನ್ನು ವ್ಯಕ್ತಪಡಿಸುತ್ತಾರೆ ಶ್ರೀ ಪ್ರಭು ಸ್ವದೇಶಿ ಇವರು. ಗೋಬರ್ ಗ್ಯಾಸಿನ ಸ್ಥಾವರದಿಂದ ಹೊರ ಹೊಮ್ಮಿದ ಸ್ಲರಿಯನ್ನು ನೀರಿನೊಂದಿಗೆ ಬೆರೆಸಿ 30,000 ಲೀ. ಗಾತ್ರದ ಎತ್ತರದ ಟಾಂಕಿಯ ಸಹಾಯದಿಂದ ತಮ್ಮ 12 ಎಕರೆ ತೋಟಕ್ಕೆ ತಿಂಗಳಿಗೊಮ್ಮೆ ಸ್ಲರಿಗೇಶನ್ ನೀರಾವರಿ ಸಾಧ್ಯವಾಗುವುದಾಗಿ ಶ್ರೀ ಎಕ್ಕಡ್ಕ ಗಣಪತಿ ಭಟ್ ಹೇಳಿಕೊಂಡರು.

ಡಾ. ಶ್ರೀ ಕೃಷ್ಣ ಭಟ್ ಅವರು ಹೇಳುವಂತೆ, ಸೆಗಣಿ ಹಲವಾರು ಸೂಕ್ಷ್ಮಣು ಬ್ಯಾಕ್ಟೀರಿಯಾಗಳನ್ನು ಹೊಂದಿದ್ದು ಅವು ರೋಗಕಾರಕ ಬ್ಯಾಕ್ಟೀರಿಯಾ ಹಾಗೂ ಶಿಲೀಂದ್ರಗಳನ್ನು ಕುಗ್ಗಿಸುತ್ತದೆ. ಉಪಕಾರಿ ಬ್ಯಾಕ್ಟೀರಿಯಾ ಹಾಗೂ ಶಿಲೀಂಧ್ರಗಳನ್ನು ಅಭಿವೃದ್ಧಿ ಗೊಳಿಸುತ್ತದೆ. ಶ್ರೀ ಪ್ರಭು ಸ್ವದೇಶಿ ಅವರು ಹೇಳುವಂತೆ ಸೆಗಣಿ ಗೊಬ್ಬರವನ್ನು ಬಳಸುವುದರಿಂದ ವರ್ಷದಿಂದ ವರ್ಷಕ್ಕೆ ಬೆಳೆ ಅಭಿವೃದ್ಧಿ ಹೊಂದುವುದರಲ್ಲಿ ಸಂಶಯವಿಲ್ಲ. ಸೆಗಣಿಯಲ್ಲಿ ಸಾವಿರದಿನ್ನೂರು ಘಟಕಗಳನ್ನು ಕಂಡುಕೊಳ್ಳಲಾಗಿದ್ದು ಅವುಗಳು ಅತ್ಯಂತ ಪ್ರಭಾವಿ ಪರಿಸರಪೂರಕ ಒಳಸುರಿಗಳು. ಶ್ರೀಯುತರ ಮೇಲ್ನೋಟದಲ್ಲಿ ಗೋಕೃಪಾಮೃತ ಎಂಬ ಕೃಷಿ ಒಳಸುರಿ ಗೋಮೂತ್ರ ಒಳಗೊಂಡ ಪಂಚಕಗಳು ಹಾಗೂ 21 ಗಿಡಮೂಲಿಕೆಗಳ ಮಿಶ್ರಣವೇ ಈ ಗೋಕೃಪಾಮೃತ. ಶ್ರೀ ಸುಬ್ರಹ್ಮಣ್ಯ ಭಟ್ ಕೈಲಾರು ಇವರು ಹೇಳುವಂತೆ ಸೆಗಣಿಯ ಬಳಕೆಯಿಂದ ಉತ್ತಮ ಎರೆಗೊಬ್ಬರ ಪಡೆದುಕೊಳ್ಳಬಹುದು.

ಅನುಭವದ ಕಿವಿಮಾತುಗಳು

ಹಾಲು ಹಿಂಡಿದ ನಂತರ ಒಂದು ಗಂಟೆಯಷ್ಟು ಕಾಲ ದನವನ್ನು ಕೊಟ್ಟಿಗೆಯಲ್ಲಿ ಮಲಗಲು ಬಿಡಬಾರದು ಹಾಗಾದರೆ ದನಗಳಿಗೆ ಕೆಚ್ಚಲುಬಾವು ಬಾರದು ಎನ್ನುತ್ತಾರೆ ವಿಷ್ಣು ಭಟ್.
ಡೈರಿ ತಂತ್ರಜ್ಞಾನವನ್ನು ಕಲಿತು ಪಾಳೇಕರ್ ಕೃಷಿ ಪದ್ಧತಿಯನ್ನು ಅನುಸರಿಸಿ ಸುಸ್ಥಿರ ಕೃಷಿ ಮಾಡುತ್ತಿರುವ ಶ್ರೀ ಸತ್ಯಶಂಕರ ಇವರಿಗೆ ಟಾಟಾ ಸಂಸ್ಥೆ ಹಾಗೂ ಕೇರಳ ಸರಕಾರ ವಿವಿಧ ಪ್ರಶಸ್ತಿಗಳನ್ನು ನೀಡಿದ್ದಾರೆ. ಆದರೂ ಇಳಿವಯಸ್ಸಿನಲ್ಲಿ ಹೈನುಗಾರರಿಗೆ ಅವಶ್ಯಕ ಜೀವನಾಧಾರ ಇಲ್ಲ ಎಂಬ ಕೊರಗನ್ನು ಅವರು ವ್ಯಕ್ತಪಡಿಸಿದರು. ಹೆಡ್ಡನಾರಂಭ ಗೊಬ್ಬರದಿಂದ ಎನ್ನುವ ಶ್ರೀ ಸದಾಶಿವ ಇಪ್ಪತ್ತನಾಲ್ಕು ಹಸುಗಳು 6 ಎಕರೆ ಅಡಿಕೆ ತೋಟಕ್ಕೆ ಮೇಯುತ್ತಾ ಕಳೆ ಕೀಳುವುದಕ್ಕೆ ಮತ್ತು ಗೊಬ್ಬರ ಉಣಿಸಲು ಸಾಕು ಎನ್ನುತ್ತಾರೆ.

ಕೇವಲ ಸುಸ್ಥಿರ ಕೃಷಿಯ ಒಳಸುರಿಗಾಗಿ ಹಸುಗಳನ್ನು ಸಾಕುವವರು ಹಾಗೂ ಹಾಲಿನ ಕರೆಯುವಿಕೆ ಸರಿಹೊಂದದವರು ಹೋರಿಗಳನ್ನು ಕಟುಕರಿಂದ ಉಳಿಸಿ ಬೆಳೆಸಬಹುದೆಂಬ ಅಭಿಪ್ರಾಯವೂ ಮೂಡಿಬಂತು.

ನಾಟಿ ಗೋವಿನ ಗೋಮೂತ್ರ ಔಷಧೀಯ ಗುಣಗಳನ್ನು ಹೊಂದಿದೆ. ಗೋವುಗಳ ಒಡನಾಟದಿಂದ ಲಭಿಸುವ ಮಾನಸಿಕ ನೆಮ್ಮದಿ ಅವಿನಾಭಾವವಾಗಿದೆ ಎನ್ನುತ್ತಾರೆ ಪ್ರಸನ್ನ.

ಪಾಳೇಕರ್ ಪದ್ಧತಿಯ ಮಿಶ್ರಣಗಳನ್ನು ತಿಳಿಯಲು ಈ ಲೇಖನ ಓದಿ. ಕ್ಲಿಕ್ ಮಾಡಿ.

ಈ ಸೆಗಣಿಯಿಂದ ಊದು ಕಡ್ಡಿ, ವಿಭೂತಿ ಅಷ್ಟೇ ಅಲ್ಲ ಪರಿಸರಸ್ನೇಹಿ ಗೋಡೆಗಳು, ವಾಲ್ಸ್ ಕೊಟ್, ಇದರಿಂದ ಮಾಡಲಾಗುತ್ತಿದೆ ಎನ್ನುತ್ತಾರೆ ಉತ್ತರಕನ್ನಡದ ಶ್ರೀ ಪ್ರಸನ್ನ ಅವರು.

ಸಂಸ್ಥೆಗಳು

ಗೋ ಆಧಾರಿತ ಕೃಷಿ ವ್ಯವಸಾಯಗಳಿಗೆ ಹಲವಾರು ಸಂಸ್ಥೆಗಳು ತರಬೇತಿಯನ್ನು ನೀಡುತ್ತವೆ. ಅದರಲ್ಲಿ ಇಸ್ಕಾನ್, ಇಕ್ರಾ ಬೆಂಗಳೂರು, ರಾಮಚಂದ್ರಾಪುರ ಮಠ, ಹೊಸನಗರ, ಕಾಣೇರ ಮಠ, ಕೊಲ್ಲಾಪುರ ಮುಂತಾದವುಗಳು ಮುಖ್ಯವಾದವುಗಳು.

ಈ ಕಾರ್ಯಕ್ರಮದ ಸಂಪೂರ್ಣ ಧ್ವನಿ ಮುದ್ರಣ ಕೇಳಲು ಇಲ್ಲಿ ಒತ್ತಿ ಆಂಕರ್ ಅಥವಾ ಸ್ಪೋಟಿಫೈನಲ್ಲೂ ಪ್ಲೇ ಮಾಡಬಹುದು. ಕ್ಲಿಕ್ ಮಾಡಿ (2 ಗಂಟೆ: 15 ನಿಮಿಷದಷ್ಟು ದೀರ್ಘವಾಗಿದೆ).

ನಿಮ್ಮ ಬಳಿ ಹೆಚ್ಚಿನ ಮಾಹಿತಿ ಇದ್ದಾರೆ ಕೆಳಗಡೆ ಕಾಮೆಂಟ್ ಬಾಕ್ಸ್ ನಲ್ಲಿ ವಿವರಿಸಿರಿ ಅಥವಾ ಪ್ರತಿಕ್ರಿಯೆ ನೀಡಿ.

ವರದಿ: ಮುರಲೀಕೃಷ್ಣ ಎಡನಾಡು.

Leave a Comment

Your email address will not be published. Required fields are marked *