ಸುಲಭ ಅಡಿಕೆ ಕೃಷಿಗಾಗಿ ಸರಳ ಯಂತ್ರೋಪಕರಣಗಳು

ಈ ವಿಷಯದಲ್ಲಿ ಸಂವಾದ ಕ್ಲಬ್ ಹೌಸ್ ಆ್ಯಪ್ ನಲ್ಲಿ ಪಯಸ್ವಿನಿ ವೇದಿಕೆಯಲ್ಲಿ 19 ಸೆಪ್ಟೆಂಬರ್ 2021 ಆದಿತ್ಯವಾರ ಸಂಜೆ 5 ಗಂಟೆಗೆ ನಡೆಯಿತು.

ಭಾಗವಹಿಸಿದ ಸಂಪನ್ಮೂಲ ವ್ಯಕ್ತಿಗಳು

  1. ಶ್ರೀ ನಿಟಿಲೆ ಮಹಾಬಲೇಶ್ವರ ಭಟ್ +919448330404
  2. ಶ್ರೀ ಗಣಪತಿ ಭಟ್, ಕೋಮಲೆ +919632774159
  3. ಶ್ರೀ ಗಣಪತಿ ಭಟ್ ಎಕ್ಕಡ್ಕ +919480015734
  4. ಶ್ರೀ ಕೈಲಾರು ಸುಬ್ರಹ್ಮಣ್ಯ ಭಟ್ +919448500866
  5. ಶ್ರೀ ವೆಂಕಟೇಶ್ವರ ಶರ್ಮ ಕತ್ತರಿಬೈಲು  +919686509185
  6. ಶ್ರೀ ಅನಂತ ಪ್ರಸಾದ ನೈತಡ್ಕ +919611543386
  7. ಶ್ರೀ ರಾಕೇಶ ಹೆಗಡೆ ಬೆಳ್ತಂಗಡಿ  +919964553455

ಪ್ರಸ್ತಾವನೆ

ಪ್ರಾಸ್ತಾವಿಕ ಮಾಹಿತಿ ನೀಡಿದ ಮುರಲಿಕೃಷ್ಣ ಎಡನಾಡು ಭಾರತದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುತ್ತಿರುವ ಈ ವರ್ಷ ನಾವು ಉಪಯುಕ್ತ ಕೃಷಿ ಸಲಕರಣೆಗಳಿಂದ ದೇಶದ ಕೃಷಿ ಉತ್ಪಾದನೆಯಲ್ಲಿ ಹೆಚ್ಚಳವನ್ನು ಮಾಡಬೇಕು. ಇದರಿಂದ ನಾವು ವಿವಿಧ ಸ್ಥರಗಳಲ್ಲಿ ಸಮೃದ್ಧಿಯನ್ನು ಕಾಣಬಹುದು.
ಕೃಷಿ ಅಭಿವೃದ್ಧಿಗಾಗಿ ಪ್ರಧಾನಮಂತ್ರಿಯವರ ಡೈರೆಕ್ಟ್ ಬೆನಿಫಿಟ್ ಸ್ಕೀಮ್ ನ ಮೂಲಕ ಕೃಷಿಕರಿಗೆ ಉಪಕರಣಗಳನ್ನು ಹಾಗೂ ಯಂತ್ರ ಗಳನ್ನು ಖರೀದಿಸಲು ಸಬ್ಸಿಡಿ ದರದಲ್ಲಿ ವ್ಯವಸ್ಥೆ ಮಾಡಿರುತ್ತಾರೆ. ಇದರಲ್ಲಿ ನೂರಾರು ಉಪಯುಕ್ತ ಉಪಕರಣಗಳು ಲಭಿಸುತ್ತವೆ. ಇವುಗಳನ್ನು ವರ್ಗೀಕರಿಸಿ ತಿಳಿಸುವುದಾದರೆ ಭೂಮಿಯ ತಯಾರಿಸುವಿಕೆ ಗೆ ಉಪಯೋಗಿಸುವ, ಕೃಷಿ ಕೆಲಸಗಳಿಗಾಗಿ ಉಪಯೋಗಿಸುವ, ಸಸ್ಯ ಸಂರಕ್ಷಣೆಗಾಗಿ, ಕೊಯ್ಲು ಮಾಡುವುದಕ್ಕಾಗಿ, ಕೊಯ್ಲಿನ ನಂತರದ ಸಂಸ್ಕರಣೆಗಾಗಿ, ಪ್ಯಾಕೇಜಿಂಗ್ ಉಪಕರಣಗಳು, ಅದೇ ರೀತಿ ಸಾಗಾಟ ಉಪಕರಣಗಳಾಗಿ ಮಾಡಬಹುದು. ನಾವು ದೈನಂದಿನ ಕಾಣುವ ಟಿಲ್ಲರ್, ಟ್ರ್ಯಾಕ್ಟರ್, ಡಿಗ್ಗರ್, ಪ್ಲಾಂಟರ್ ವೀಡರ್, ಸ್ಪ್ರೇಯರ್, ಡ್ರೈಯರ್, ರೋಸ್ಟರ್, ಗ್ರೈಂಡರ್, ಟ್ರೈಲರ್, ಕೈಗಾಡಿಗಳು ಮುಂತಾದ ಹಲವಾರು ಉಪಕರಣಗಳು ಇಂದು ಲಭ್ಯವಿವೆ.
ಇನ್ನು ಮುಂದೆ ರೋಬೋಟಿಕ್ ತಂತ್ರಜ್ಞಾನದ ಉಪಕರಣಗಳು ಕೂಡ ಬರುವ ಸಾಧ್ಯತೆಗಳಿವೆ. ಇವುಗಳನ್ನು ಕೃಷಿಕರು ಅವಶ್ಯಕತೆಗನುಸಾರವಾಗಿ ಬಳಸುವುದರಿಂದ ತಮ್ಮ ಕಷ್ಟ ಕಾರ್ಪಣ್ಯಗಳನ್ನು ಕಡಿಮೆ ಮಾಡಿಕೊಳ್ಳಬಹುದು ಎಂದು ಹೇಳಿದರು.

ಜಟಿಲತೆಯನ್ನು ಬಿಡಿಸುವ ನಿಟಿಲೆಯ ಚಮತ್ಕಾರ

ಆರಂಭದಲ್ಲಿ ಮಾತನಾಡಿದ ಶ್ರೀ ಮಹಾಬಲೇಶ್ವರ ಭಟ್ ನಿಟಿಲೆಯವರು ತಮ್ಮ ಬಿಝೆಡ್ ಸಿ ಪದವಿ, ನಂತರದ ಗಲ್ಫ್ ಯಾತ್ರೆ ಹಾಗೂ ನಂತರದ ಉದ್ಯಮಶೀಲ ಕಲ್ಪನೆಗಳು ಮೂಡಿ ಬಂದ ಬಗ್ಗೆ ತಿಳಿಸಿದರು. ಅವರು ತಮ್ಮ ಕೆಲಸಗಳನ್ನು ಸುಲಭವಾಗಿಸಲು ತಯಾರಿಸಿದ ಕೃಷಿ ಸಲಕರಣೆಗಳು ಜನಪ್ರಿಯವಾದ ಬಗ್ಗೆ ವಿವರಿಸಿದರು. ಕಾಳುಮೆಣಸಿನ ಕಾಳು ಬೇರ್ಪಡಿಸುವ ದೊಡ್ಡ ಯಂತ್ರ ತಯಾರಿಸುವ ಸಂಸ್ಥೆಯು ಇವರ ಬೇಡಿಕೆಗೆ ತಕ್ಕಂತೆ ಚಿಕ್ಕ ಯಂತ್ರ ತಯಾರಿಸಲು ನಿರಾಕರಿಸಿದ್ದರ ಫಲ ಇವರ ಆವಿಷ್ಕಾರವಾದ ಈಗಿನ ಪೋರ್ಟೆಬಲ್ ಕಾಳುಮೆಣಸಿನ ಕಾಳು ಬಿಡಿಸುವ ಇಲೆಕ್ಟ್ರಿಕ್ ಮೋಟಾರ್ ಚಾಲಿತ ಯಂತ್ರ. ಒಮ್ಮೆ ತಯಾರಿಸಿದ ಯಂತ್ರವನ್ನು ಇತರರ ಆಗ್ರಹಕ್ಕೆ ತಕ್ಕಂತೆ ತಯಾರಿಸಿ ಕೊಡುವುದೂ ಅದರ ವಿನ್ಯಾಸವನ್ನು ಮುಕ್ತವಾಗಿ ಹಂಚಿಕೊಳ್ಳುವುದೂ ಶ್ರೀಯುತರ ವಿಶಾಲ ಮನೋಭಾವವಾಗಿದೆ. 2000 ನೇ ಇಸವಿಯ ನಂತರ ಉಂಟಾದ ತೀವ್ರ ಕೆಲಸಗಾರರ ಸಮಸ್ಯೆ ಇನ್ನೂ ಹೆಚ್ಚು ಉಪಕರಣಗಳನ್ನು ತಯಾರಿಸುವಲ್ಲಿ ನಾಂದಿಯಾಯಿತು ಎಂದರು.

ಎರಡು ಒಳ್ಳೆಯ ನುಡಿಗಳು ಒಬ್ಬನನ್ನು ಯಾವ ರೀತಿ ಯಶಸ್ಸಿನತ್ತ ಕೊಂಡೊಯ್ಯುವುದೋ ಅದೇ ರೀತಿ ಕೆಡುಕಾದ ಮಾತು ಆತನ ಅವನತಿಯನ್ನು ಉಂಟುಮಾಡುತ್ತವೆ. ಆದ್ದರಿಂದ ತನ್ನನ್ನು ಪ್ರೋತ್ಸಾಹಿಸಿದವರೆಲ್ಲರಿಗೂ ಧನ್ಯವಾದ ಹೇಳಿಕೊಂಡರು.
ಈ ಕೆಳಗಿನವು ಇವರ ತಯಾರಿಸಿದ ಹಲವಾರು ಯಂತ್ರಗಳು ಹಾಗೂ ಸಲಕರಣೆಗಳು. ಅವರೇ ತೆಗೆದ ಚಿತ್ರಗಳನ್ನು ಇಲ್ಲಿ ಕಾಣಬಹುದು.

ಅಡಿಕೆ ಗೊನೆ ನೇತುಹಾಕುವ ಸ್ಟೇಂಡ್ ಗಳು
ಅಡಿಕೆ ಮಗಚುವ ಸಾಧನ
ಅಡಕೆ ಕೋಕಾ ಬೇರ್ಪಡಿಸುವ ಸಲಕರಣೆ
ನೀರು ಸಂಗ್ರಹಿಸುವ ತಗಡಿನ ಚೆಕ್ ಡ್ಯಾಂ
ಸರಳ ಸೋಲಾರ್ ಡ್ರಯರ್
ಹಣ್ಣು ಕೊಯ್ಯುವ ಸಲಕರಣೆ
ಕೊಕ್ಕೋ ಬೀಜ ಬಿಡಿಸುವ ಆರಂಭದ ಯಂತ್ರ
ಕಟ್ಟಿಗೆ ಚೈನ್ ಸಾ ದಿಂದ ಕತ್ತರಿಸಲು ಸ್ಟಾಂಡ್
© Copyrights reserved. Photos by Sri Mahabaleshwara Bhat Nitile.
ಗೊನೆಯಿಂದ ಅಡಿಕೆ ಬಿಡಿಸುವ ಯಂತ್ರ
ಕಾಳುಮೆಣಸು ಬೇರ್ಪಡಿಸುವ ಯಂತ್ರ
ಅಭಿವೃದ್ಧಿ ಪಡಿಸಿದ ಕಾಳುಮೆಣಸಿನ ಯಂತ್ರ
ಮೂರು ಚಕ್ರದ ಗಾಡಿ
ಕೊಕ್ಕೋ ಬೀಜ ಬಿಡಿಸುವ ಯಂತ್ರ
ಚಾಫ್ ಕಟ್ಟರ್ ಯಂತ್ರ

ಕೆಲವು ಯಂತ್ರಗಳ ಪ್ರವರ್ತಿಸುವ ರೀತಿಯನ್ನು ಈ ಕೆಳಗಿನ ವಿಡಿಯೋಗಳಲ್ಲಿ ನೋಡಬಹುದು. ಹೆಚ್ಚಿನ ಆವಿಷ್ಕಾರಗಳನ್ನು ತಿಳಿಯಲು ಈ ಫೇಸ್ ಬುಕ್ ಕೊಂಡಿ ಒತ್ತಿ.

ವಿಡಿಯೋ

https://www.youtube.com/channel/UC50vAaBHCqIHnyLYkbrNa7g

ನೈತ್ತಡ್ಕದವರ ಕಾರ್ಯ ಕುಶಲತೆ

ತಮ್ಮ ಕ್ರಿಯಾತ್ಮಕ ಚಟುವಟಿಕೆಗಳನ್ನು ಇತರರೊಂದಿಗೆ ಹಂಚಿಕೊಂಡು ಶ್ರೀ ಅನಂತ ಪ್ರಸಾದ ನೈತಡ್ಕ ಇವರು ಕೃಷಿಯಲ್ಲಿ ಎದುರಿಸುವ ಬವಣೆಗಳನ್ನು ಕಡಿಮೆಮಾಡಲು ನಡೆಸಿದ ಪ್ರಯತ್ನದ ಮಾಹಿತಿಯನ್ನು ಹಂಚಿಕೊಂಡರು. ತೋಟದ ಮಧ್ಯೆ ಜೀಪಿಗೆ ಓಡಾಡಲು ದಾರಿ ಅದೇ ರೀತಿ ಜೀಪಿಗೆ ಅಳವಡಿಸಲು ಟ್ರೈಲರ್, ಗೋಣಿಚೀಲವನ್ನು ಆಧರಿಸುವ ಕೊಕ್ಕೆ, ತೆಂಗಿನಕಾಯಿ ಕೊಬ್ಬರಿಗಾಗಿ ಇಬ್ಭಾಗಮಾಡುವ ಸಲಕರಣೆ, ವರ್ಕ್ ಟೇಬಲ್ ಗೆ ಅಳವಡಿಸುವ ಕಾಯಿ ತುರಿ ಮಾಡುವ ಯಂತ್ರಗಳು, ಡೀಪ್ ರೂಟ್ ಗಿಡಗಳ ವೀಡರ್ ಸಲಕರಣೆಗಳನ್ನು ಕೇಳುಗರಿಗೆ ಪರಿಚಯಿಸಿಕೊಟ್ಟರು. ಬಾರವಾದ ಸಲಕರಣೆಗಳು ಪ್ರಾಯೋಗಿಕವಲ್ಲದಿದ್ದುದರಿಂದ ಈ ವೀಡರ್ ಉಪಯೋಗ ಶೂನ್ಯವಾಯಿತು. ಮುಂದೆ ಅಭಿವೃದ್ಧಿಪಡಿಸಲು ಹಣಕಾಸಿನ ಅಡಚಣೆಯು ತೊಡಕಾಯಿತೆಂದೂ ಹೇಳಿದರು.

ಮುಂದೆ ಗೆರಟೆಯ ಮೊಬೈಲ್ ಸ್ಟಾಂಡ್, ಪೆನ್ ಗಳ ಸ್ಟಾಂಡ್ ದೊಡ್ಡ ಪ್ರಮಾಣದಲ್ಲಿ ಕರಕುಶಲ ಉತ್ಪನ್ನಗಳನ್ನು ತಯಾರಿಸುವ ಯೋಜನೆಯನ್ನು ತಿಳಿಸಿದರು.

ಕಾರ್ಯಕ್ರಮದ ಧ್ವನಿ ಮುದ್ರಿಕೆ ಈ ಲಿಂಕ್ ಒತ್ತಿ ಕೇಳಬಹುದು :

ಆಡಿಯೋ ದೀರ್ಘವಾಗಿದೆ (1ಗಂಟೆ 07ನಿಮಿಷ 37 ಸೆಕೆಂಡ್)

ಭಾರದ ಬವಣೆಗೆ ಬ್ರೇಕ್

ನಂತರ ಮಾತನಾಡಿದ ಎಕ್ಕಡ್ಕ ಗಣಪತಿ ಭಟ್ ಅವರು ತಾವು ತಯಾರಿಸಿದ ಭಾರದ ಚೀಲ ಎತ್ತುವ ಸ್ವಯಂಚಾಲಿತ ಪುಲ್ಲಿಯ ಬಗ್ಗೆ ತಿಳಿಸಿದರು.

ಅದರಲ್ಲಿ ಗೋಣಿಚೀಲವನ್ನು ವಾಹನಕ್ಕೆ ಲೋಡಿಂಗ್ ಮಾಡಲು ಸಹಾಯಕವಾಗುವ ನೇರ ಹಾಗೂ ಅಡ್ಡಲಾಗಿ ಮಾಡುವ ವ್ಯವಸ್ಥೆ ಕೂಡ ಅಳವಡಿಸಿರುವ ವಿಚಾರ ಹೇಳಿಕೊಂಡರು. ಅವರು ತಾವು ತಯಾರಿಸಿದ ಸುಲಿದ ಅಡಿಕೆಯ ಕ್ಲೀನಿಂಗ್ ಮತ್ತು ಸಾರ್ಟಿಂಗ್ ಸಲಕರಣೆಯನ್ನು ಪರಿಚಯಿಸಿದರು. ಈ ಉಪಕರಣವನ್ನು ಇವರಿಂದ ಪಡೆದುಕೊಂಡು ಹಾಗೂ ಅದರ ವಿನ್ಯಾಸವನ್ನು ತಿಳಿದುಕೊಂಡೂ ಸುಮಾರು ೭೫ ಕ್ಕೂ ಹೆಚ್ಚು ಮಂದಿ ಇದನ್ನು ಬಳಸುತ್ತಿರುವುದಾಗಿ ಶ್ರೀಯುತರು ತಿಳಿಸಿದರು.
ಹಳೆಯ ಬೈಕಿನ ವೀಲ್ ಉಪಯೋಗಮಾಡಿ ಬ್ರೇಕ್ ಅಳವಡಿಸಿದ ಕೈಗಾಡಿಯ ಉಪಯುಕ್ತತೆಯನ್ನು ತಿಳಿಯಪಡಿಸಿದರು.
ಸಂರಕ್ಷಿತ ಕೃಷಿಗೂ ಉತ್ಪನ್ನಗಳ ಒಣಗಿಸುವಿಕೆಗೂ ಉಪಯೋಗೀ ಸೋಲಾರ್ ಗೂಡಿನ ತಯಾರಿಕೆಯಲ್ಲೂ ಸಫಲತೆಯಾ ಬಗ್ಗೆ ತಿಳಿಸಿದರು.

ಅವರ ಮನೆಯಲ್ಲಿ ತಯಾರಿಸಿದ ಬಹು ಉಪಯೋಗಿ ಪಾಲೀಹೌಸ್.

Solar dryer
ಬೇಸಗೆ ಕಾಲದಲ್ಲಿ ಅಡಿಕೆ ಒಣಗಿಸಲು ಹಾಗೂ ಮಳೆಗಾಲದಲ್ಲಿ ತರಕಾರಿ ಬೆಳೆಯುವ ನಿಟ್ಟಿನಲ್ಲಿ ಮಾಡಿದ ಪಾಲೀಹೌಸ್
Polyhouse interior
70 ಫೀಟ್ ಉದ್ದ, 30 ಫೀಟ್ ಅಗಲ ಹಾಗೂ 15 ಫೀಟ್ ಎತ್ತರದ ಸಂರಕ್ಷಿತ ಗೂಡು

ಸಮಯ ಹಾಗೂ ಖರ್ಚಿಗೆ ಕತ್ತರಿ

ಮುಂದೆ ಮಾತನಾಡಿದ ಶ್ರೀಯುತ ವೆಂಕಟೇಶ್ವರ ಶರ್ಮ ಇವರು ತಮ್ಮ ಅಡಿಕೆ ಹರಡುವ ರೋಲರ್ ನ ಬಗ್ಗೆ ತಿಳಿಸಿದರು. ಇದು ಬಹಳ ಸರಳವಾದ್ದರಿಂದ ನೈಪುಣ್ಯವಿಲ್ಲದ ಮಕ್ಕಳಿಗೂ, ಮಹಿಳೆಯರಿಗೂ ಬಳಸಬಹುದು ಹಾಗೂ ಬಹಳ ಸಮಯ ಉಳಿಸಬಹುದು. ಮಿಸ್ಟ್ ಸ್ಟ್ರೇಯರ್ ಚಿಕ್ಕ ಫೈಬರ್ ನೋಜಲ್ ರಂಧ್ರದ ಆವಿಷ್ಕಾರದ ಕುರಿತಾಗಿ ತಿಳಿಸಿದರು. ಸಿಂಪರಣೆ ದ್ರಾವಣ ಸುಮಾರು 60 ರಿಂದ 70 ಶತಾಂಶ ಕಡಿಮೆ ಸಾಕಾಗುತ್ತದೆ. ಆದರೆ ಇದು ಬೋರ್ಡೋ ದ್ರಾವಣದಂತಹ ಕೊಲ್ಲೊಯ್ಡ್ ದ್ರಾವಣಕ್ಕೆ ಅಷ್ಟು ಸೂಕ್ತವಲ್ಲ ಎಂದು ಹೇಳಿದರು.

ಸ್ವಯಂಚಾಲಿತ ಕೈಲಾರು ತೋಟ

ತದನಂತರ ಮಾತನಾಡಿದ ಶ್ರೀ ಕೈಲಾರು ಸುಬ್ರಹ್ಮಣ್ಯ ಭಟ್ ಅವರು ತಮ್ಮ ತೋಟದಲ್ಲಿ ಇರುವಂತಹ ಮಿನಿವ್ಯಾನ್ ಓಡಾಡಲು ಮಾಡಿದ ವ್ಯವಸ್ಥೆ ಅದೇ ರೀತಿ ಅವರು ಅಂಗಳದಲ್ಲಿ ಅಡಿಕೆ ತಿರುವಲು ಬಳಸುವ ರೋಲರ್, ಅದೇ ರೀತಿ ಒಣಗಿದ ಅಡಿಕೆಯನ್ನು ಕಟ್ಟಕ್ಕೆ ಹಾಕಲು ಉಪಯೋಗಿಸುವ ಲಿಫ್ಟ್ (ಇಲೆಕ್ಟ್ರಿಕ್ ಹೋಯಿಸ್ಟ್), ತೋಟದಲ್ಲಿ ಓಡಾಡಬಲ್ಲ ಸ್ವಯಂಚಾಲಿತ ಮೋಟೋ ಕಾರ್ಟ್ ಮುಂತಾದುವುಗಳನ್ನು ಹೇಳಿಕೊಂಡರು.
ತಾವು ಉಪಯೋಗಿಸುತ್ತಿರುವ ಕಾರ್ಬನ್ ಫೈಬರ್ ದೋಟಿಯ (ಪೋಲ್) ಬಗ್ಗೆ ಹೊಗಳುತ್ತಾ ಇದು ಕೃಷಿಕರಿಗೆ ಒಂದು ಉತ್ತಮ ಸಲಕರಣೆ ಎಂದು ಅಭಿಪ್ರಾಯಪಟ್ಟರು.

ಮೋಟಾರ್ ಚಾಲಿತ ಕೈಗಾಡಿ
ಕೈಗಾಡಿಯ ಪೆಟ್ರೋಲ್ ಎಂಜಿನ್
ಇಲೆಕ್ಟ್ರಿಕ್ ಹೊಯಿಸ್ಟರ್
ಬಾಲ್ಕನಿಯಿಂದ ಹೊರಬದಿಗೆ ತಿರುಗಿಸಿ ಚಾಲನೆ

ಸಫಲ ವ್ಯವಸಾಯಿಕ ಅಂಗಡಿ

ಆಮೇಲೆ ಮಾತನಾಡಿದ ಶ್ರೀ ರಾಕೇಶ್ ಹೆಗ್ಡೆಯವರು ತಾವು ಕೃಷಿಯಲ್ಲಿ ತೊಡಗಿಸಿಕೊಂಡು ಮಾಡುತ್ತಿರುವಂತಹ ಯಂತ್ರೋಪಕರಣ ವ್ಯವಹಾರದ ಬಗ್ಗೆ ತಿಳಿಸಿ ಅವರು ಆಮದು ಮಾಡಿ ಕೃಷಿಕರಿಗೆ ಸುಲಭ ರೀತಿಯಲ್ಲಿ ಲಭ್ಯ ಮಾಡುತ್ತಿರುವ ಸಲಕರಣೆಗಳು ಹಾಗೂ ಹೈ ಟೆಕ್ ಡಂಪರ್ ಯಂತ್ರಗಳ ಬಗ್ಗೆ ತಿಳಿಸಿಕೊಟ್ಟರು.

ಏರು ಕಂಬದ ಸರದಾರ

ಅಲ್ಲಿ ಮಾತನಾಡಿದ ಶ್ರೀ ಕೋಮಲೆ ಗಣಪತಿ ಭಟ್ ಅವರು ಕೃಷಿಕರು ಅಡಿಕೆ ಮರ ಹಾಗೂ ತೆಂಗಿನಮರಕ್ಕೆ ಏರಲು ಪಡುತ್ತಿರುವಂತಹ ಕಷ್ಟ ಹಾಗೂ ಅದನ್ನು ನಿವಾರಿಸಲು ತಯಾರಿಸಿದ ಸ್ವಯಂಚಾಲಿತ ಯಂತ್ರದ ಬಗ್ಗೆ ವಿವರಣೆ ನೀಡಿದರು.
ಮರ ಏರುವ ಮನುಷ್ಯನಿಗೆ ಸಾಧ್ಯವಾದ ಎಲ್ಲಾ ಅಡಿಕೆ, ತೆಂಗು ಮರಗಳನ್ನೂ ಈ ಪೆಟ್ರೋಲ್ ಚಾಲಿತ ಏರು ಯಂತ್ರ ಏರಬಲ್ಲದು ಹಾಗೂ ಇದಕ್ಕೆ ಒಂದು ವರ್ಷದ ಗ್ಯಾರಂಟಿ ಇದೆ ಎಂದೂ ತಿಳಿಸಿದರು. ಆವಿಷ್ಕಾರಕ್ಕೆ ಪೂರಕ ಮಾಹಿತಿ ನೀಡುವ ಬಳಕೆದಾರರಿಗೆ ಯಂತ್ರದ ಅಭಿವೃದ್ಧಿ ಮೌಲ್ಯ ರಹಿತವಾಗಿ ಲಭಿಸುತ್ತದೆ ಎಂದೂ ತಿಳಿಸಿದರು.

ಸೈ ಎಂದ ಕೇಳುಗರ ಪ್ರೋತ್ಸಾಹ

ಭಾಗವಹಿಸಿದ ಕೇಳುಗರಲ್ಲಿ ಹಲವರು ಇದಕ್ಕೆ ಪ್ರೋತ್ಸಾಹಜನಕ ಪ್ರತಿಕ್ರಿಯೆ ನೀಡಿ ತಮ್ಮ ಕೆಲವು ಸಂಶಯಗಳನ್ನು ನಿವಾರಿಸಿಕೊಂಡರು. ಒಟ್ಟಿನಲ್ಲಿ ಕ್ರಿಯಾಶೀಲ ಹಾಗೂ ಸೃಜನಾತ್ಮಕ ಮನೋಭಾವವುಳ್ಳ ತಂತ್ರಜ್ಞಾನದಲ್ಲಿ ಆಸಕ್ತಿ ಇರುವಂತಹ ಕೃಷಿಕರು ತಾವು ತಮಗೋಸ್ಕರ ಹಾಗೂ ಸಂಪೂರ್ಣ ಸಮುದಾಯಕ್ಕೆ ಉಪಯೋಗವಾಗುವಂತಹ ಹಲವಾರು ಆವಿಷ್ಕಾರಗಳಿಂದ ಮಾಡಿದ ಉಪಕರಣಗಳನ್ನು ಸಿದ್ಧಪಡಿಸಿದ್ದರ ಕುರಿತು ಕಾರ್ಯಕ್ರಮ ಬೆಳಕು ಚೆಲ್ಲಿದೆ. ಈ ರೀತಿಯ ಅಭಿವೃದ್ಧಿಶೀಲ ಚಟುವಟಿಕೆಗಳಿಂದಾಗಿ ಸಂಪೂರ್ಣ ಕೃಷಿ ವಲಯಕ್ಕೆ ಉತ್ತೇಜನ ಸಿಗುತ್ತಿದೆ. ಈ ನಿಟ್ಟಿನಲ್ಲಿ ಅಭಿವೃದ್ಧಿಪರ ವಾತಾವರಣ ಸೃಷ್ಟಿ ಮಾಡುವಂತಹ ಸೃಜನಶೀಲ ವ್ಯಕ್ತಿಗಳ ಪಾತ್ರ ಮಹತ್ವಪೂರ್ಣವಾಗಿದೆ.

Leave a Comment

Your email address will not be published. Required fields are marked *

Scroll to Top