ಕೃಷಿಯಲ್ಲಿ ಉದ್ಯಮಶೀಲತೆಗೆ ಒತ್ತು ಕೊಟ್ಟಾಗ ಹೆಚ್ಚು ಖುಷಿ—ಹೆಚ್ಚುವರಿ ಆದಾಯ

ಕೃಷಿಯಲ್ಲಿ ಉದ್ಯಮಶೀಲತೆಗೆ ಒತ್ತು ಕೊಟ್ಟಾಗ ಹೆಚ್ಚು ಖುಷಿ—ಹೆಚ್ಚುವರಿ ಆದಾಯ ಎಂಬ ವಿಷಯದಲ್ಲಿ ಪಯಸ್ವಿನಿ ಕ್ಲಬ್ ಹೌಸ್ ಯುಗಾದಿ ವಿಶೇಷ ಸಂವಾದ ಕಾರ್ಯಕ್ರಮ ಏಪ್ರಿಲ್ 3 ರಂದು ರವಿವಾರ ಸಂಜೆ 6 ಗಂಟೆಯಿಂದ ನಡೆಯಿತು. ಇದರಲ್ಲಿ ಇದೇ ವಲಯದ ಅನುಭವಿ ವಿಜ್ಞಾನಿ, ತಜ್ಞರು, ಕೃಷಿಕರು ಭಾಗವಹಿಸಿದರು.

  1. ಡಾ. ಎಂ ಆರ್ ದಿನೇಶ್, ಸಲಹೆಗಾರರು, ಬಯೋವರ್ಸಿಟಿ ಇಂಟರ್ನ್ಯಾಶನಲ್ ಹಾಗೂ ಪೂರ್ವ ನಿರ್ದೇಶಕರು, ಕೇಂದ್ರೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ, ಹೆಸರಘಟ್ಟ ಬೆಂಗಳೂರು
  2. ಶ್ರೀ ಚಂದ್ರಕಾಂತ ರಾವ್ ಉದ್ಯಮಶೀಲ ಕೃಷಿಕರು, ಇನ್ನಾ, ಕಾರ್ಕಳ.
  3. ಶ್ರೀ ಕೇಶವ ಡೋಂಗ್ರೆ, ಪ್ರಗತಿಪರ ಕೃಷಿಕರು, ಕಾರ್ಕಳ.
  4. ಶ್ರೀ ಅಶೋಕ್ ಕುಮಾರ್ ಕರಿಕ್ಕಳ, ಉದ್ಯಮಶೀಲ ಕೃಷಿಕರು, ಬೆಂಗಳೂರು.
  5. ಶ್ರೀ ಸುಬ್ರಹ್ಮಣ್ಯ ಭಟ್ ಕೈಲಾರು, ಇಳಂತಿಲ, ಉಪ್ಪಿನಂಗಡಿ.

ಉದ್ಯಮಶೀಲ ಕೃಷಿ (ಅಗ್ರಿಕಲ್ಚರಲ್ ಎಂಟರ್ಪ್ರೈಸ್), ಕೃಷಿ ಆಧಾರಿತ ಉದ್ಯಮ, ಕೃಷಿಯಲ್ಲಿ ಉದ್ಯಮಶೀಲತೆ (ಇಂಟರ್ಪ್ರೈಸಿಂಗ್ ಫಾರ್ಮಿನ್ಗ್), ಇವುಗಳ ಸುತ್ತ ಒಂದಷ್ಟು ವಿಚಾರ ವಿಮರ್ಶೆ ನಡೆಯಿತು.

ಸಸ್ಯೋತ್ಪಾದನೆಯಲ್ಲಿ ತಳಿ ಉತ್ಪಾದನಾ ಸಂಸ್ಥೆಯಿಂದ ಉದ್ಯಮಶೀಲ ವ್ಯಕ್ತಿಗಳಿಗೆ ತಳಿ ಹಸ್ತಾಂತರ ಮಾಡುವುದರಿಂದ ತಳಿಯ ವ್ಯಾಪಕತೆ ಆಗುವುದರ ಜೊತೆಗೆ ಒಬ್ಬ ಉದ್ಯಮಿಯನ್ನು ರೂಪಿಸುವಲ್ಲಿ ಹಾಗೂ ಸಂಸ್ಥೆಯ ಮಾನ್ಯತೆ ಹೆಚ್ಚಿಸಿಕೊಳ್ಳುವುದು ಸುಲಭವಾಗುತ್ತದೆ. ಇದೇ ರೀತಿ ಆಸಕ್ತ ವ್ಯಕ್ತಿಗಳಿಂದ ಬೀಜೋತ್ಪಾದನೆ ಯನ್ನು ಮಾಡಿಸಬಹುದು. ಇಂದಿಗೂ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ, ಹೇಸರಘಟ್ಟ, ಇಲ್ಲಿನ ತಳಿಗಳು SBI YONO app ನ ಕೃಷಿ ತಂತ್ರಾಂಶದಿಂದ ಖರೀದಿಸಿ ಕೊಳ್ಳಬಹುದು.

ಈ ಸಂದರ್ಭದಲ್ಲಿ ಡಾ. ದಿನೇಶ್ ಅವರು ಹಲಸಿನ ಬೀಜದ ಪುಡಿ ಹಾಗೂ ಹಲಸು ತಳಿಯ ಲಾಭದಾಯಕ ಕೃಷಿ ಬಗ್ಗೆ ಉಲ್ಲೇಖಿಸಿದರು. ನಿತ್ಯ ಹಲಸಿನ ಬೀಜದ ಹುಡಿ ಒಂದು ಕೃಷಿ ಆಧಾರಿತ ಸಫಲ ಉದ್ಯಮ, ಸಿದ್ದು ಹಲಸು ತಳಿಯ ಉತ್ತಮ ಕಸಿ ಗಿಡಗಳ ತಯಾರಿ ಉದ್ಯಮಶೀಲ ಕೃಷಿ ಎಂದು ದಿನೇಶ್ ಅಭಿಪ್ರಾಯ ವ್ಯಕ್ತಪಡಿಸಿದರು.

ಪ್ರಗತಿಪರ ಕೃಷಿಕ ಶ್ರೀ ಚಂದ್ರಕಾಂತ ರಾವ್ ಇನ್ನ ಅವರು ಐಐಎಚ್ಆರ್ ಅರ್ಕ ಕಿರಣ್ ತಳಿಯ ಸೀಬೆ ಗಿಡಗಳು ಮೂರನೇ ವರ್ಷದಲ್ಲಿ ಫಲ ನೀಡುತ್ತಿವೆ ಇವು ತುಂಬಾ ಆರೋಗ್ಯದಾಯಕ ಏಕೆಂದರೆ ಇವುಗಳಲ್ಲಿ ಆಂಟಿ ಕ್ಯಾನ್ಸರ್ ಸತ್ವವಿದೆ. ಹಣ್ಣುಗಳು ಅತ್ಯತ್ತಮ ರುಚಿಯಿಂದ ಕೂಡಿದ್ದು ಇವುಗಳು ಸ್ವಲ್ಪ ಕೆಂಪು ತಿರುಳು ಹಾಗು ಮೆದುವಾಗಿರುತ್ತವೆ ಹಾಗೂ ಮಾರುಕಟ್ಟೆಗೆ ಉತ್ತಮ ಗುಣಮಟ್ಟ ಹೊಂದಿವೆ ಎಂದರು.

ಕಿರಣ್ ನಂತಹ ತಳಿಯಿಂದ ಹಂದರ ಕೃಷಿ ಮಾಡಿ ಕ್ಲಸ್ಟರ್ ಕೃಷಿಯ ಮಾದರಿ ಅನುಸರಿಸಿ ಒಂದಷ್ಟು ವಿಸ್ತಾರವಾದ ಪ್ರದೇಶಗಳಲ್ಲಿ ಅರ್ಧ, ಒಂದು ಎಕ್ರೆಯಂತೆ ಖಾಲಿ ಕೃಷಿ ಯೋಗ್ಯ ಭೂಮಿ ಇರುವ ಹಲವಾರು ಕೃಷಿಕರು ಆಧುನಿಕ ಕ್ರಮ, ಶಿಫಾರಸು ಮಾಡಿದ ಪದ್ಧತಿಯಂತೆ ಕೃಷಿ ಮಾಡಿದಲ್ಲಿ ಪೇರಳೆ ಹಣ್ಣಿನ ಮಾರಾಟ, ಪಲ್ಪ್ ತಯಾರಿ, ಜ್ಯುಸ್ ಹಾಗು ಜಾಮ್ ತಯಾರಿಯಲ್ಲಿ ಲಾಭದಾಯಕ ಆದಾಯ ಪಡೆಯಬಹುದು. ಎತ್ತರಕ್ಕೆ ಹೋಗದಂತೆ ಪ್ರುನಿಂಗ್ ಮಾಡಿ ಚಾ ತೋಟದಂತೆ ಮಾಡುವುದರಿಂದ ಸ್ತ್ರೀಯರಿಗೆ ಕೂಡ ಕೃಷಿ ಮಾಡಬಹುದು. ಪೇರಳೆ ಚಿಗುರಿನಿಂದ ಪೇರಳೆ ಚಹಾ ತಯಾರು ಮಾಡಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಅವರ ಪ್ರಕಾರ ಪೇರಳೆ ಹಾಗೂ ರಂಬುಟಾನ್ ಗಳಿಗೆ ಹಕ್ಕಿಗಳ ಕಾಟ ಜಾಸ್ತಿ ಆದ್ದರಿಂದ ಅವುಗಳಿಂದ ಹಣ್ಣುಗಳನ್ನು ಉಳಿಸಿಕೊಳ್ಳಲು ಸರಿಯಾದ ಮಾರ್ಗೋಪಾಯ ಕಂಡುಹಿಡಿಯುವುದು ಅಗತ್ಯ. ಹಾಲಿನ ಶೇಖರಣೆಗೆ ಸಮಾನವಾದ ಉದ್ಯಮಶೀಲ ಕೃಷಿ ಮಾದರಿ ಅನುಸರಿಸಬಹುದು ಎಂದರು.

ಅವಕಾಡೊ ಹಾಗೂ ಮ್ಯಾಂಗೋಸ್ಟಿನ್ ಮಿಶ್ರ ಬೆಳೆ ಪದ್ಧತಿ ಅನುಸರಿಸಬಹುದು ಎಂದು ಅವರು ಅಭಿಪ್ರಾಯಪಟ್ಟರು.

ಮಹತ್ವಾಕಾಂಕ್ಷೆಯ ಯೋಜನೆಗಳನ್ನಿಟ್ಟುಕೊಂಡಿರುವ ಇವರು ಎಳನೀರು ಮಿನಿಮಲ್ ಪ್ರೊಸೆಸಿಂಗ್, ಬಾಟ್ಲಿ ಎಳನೀರು, ಥಾಯ್ ಎಳನೀರು ತಳಿ ಗ್ರೂಪ್ ಫಾರ್ಮಿಂಗ್ ಮುಂತಾದ ಮಾದರಿಗಳ ವಿವರಣೆ ನೀಡಿದರು.

ಸಫಲ ತಿಳುವಳಿಕೆಗಳನ್ನು ಹಾಗು ಅನುಭವಗಳನ್ನು ಯಥಾವತ್ತಾಗಿ ಅನುಸರಿಸಿ ಲಾಭಗಳಿಸಿ.

ವೈವಿದ್ಯತೆಯನ್ನು ಬದಲಿ ಸ್ವರೂಪದ ಪರಿಚಯಿಸುವಿಕೆಯ ರೀತಿಯಲ್ಲಿ ನೀಡಿದಾಗ ಅದಕ್ಕೆ ಗ್ರಾಹಕರು ಲಭಿಸುತ್ತಾರೆ ಎಂಬ ಕಿವಿಮಾತನ್ನು ಚಂದ್ರಕಾಂತ ರಾವ್ ನೀಡಿದರು.

ಅಡಿಕೆ ಕೃಷಿಯಲ್ಲಿ ಉದ್ಯಮಶೀಲತೆ

ಅಡಿಕೆ ಕೃಷಿಕ ಮೆಟ್ಟುಕತ್ತಿಯಿಂದ ಯಂತ್ರ ಚಾಲಿತ ತ್ವರಿತ ಶಕ್ತಿಯತ್ತ, ಅದೇ ರೀತಿ ಇತರ ವಲಯಗಳಲ್ಲೂ ಚತುರ ರೀತಿಗಳನ್ನು ಅಳವಡಿಸಿಕೊಳ್ಳುವಂತಹ ಉದ್ಯಮಶೀಲತೆಯನ್ನು ನೆಚ್ಚಿಕೊಳ್ಳಬೇಕು, ತೋಟದಿಂದ ದಾಸ್ತಾನಿನ ತನಕ, ಅದೇ ರೀತಿ ತೋಟಕ್ಕೆ ಒಯ್ಯುವ ವ್ಯವಸ್ಥೆ ಸುಲಭ ವಾಹನಗಳ ಮೂಲಕ ಸ್ವಯಂ ಚಾಲಿತ ಆಗುವ ರೀತಿಯಲ್ಲಿ ಮುಂದುವರಿಯಬೇಕು. ವಿವಿಧ ಕೃಷಿ ರೀತಿ, ತಂತ್ರಜ್ಞಾನದ ಬಳಕೆಯಿಂದ ಉತ್ಪನ್ನದ ಗುಣಮಟ್ಟ ಹೆಚ್ಚಿಸಿಕೊಂಡು ಸಮಯ ಹಾಗು ಖರ್ಚು ಉಳಿಸಿ ಬೇಡಿಕೆ ಹಾಗೂ ಆದಾಯವನ್ನು ಹೆಚ್ಚಿಸಿ, ನಷ್ಟ ನಗಣ್ಯವಾಗುವ ವ್ಯವಸ್ಥೆಗಳನ್ನು ಕಂಡುಕೊಳ್ಳಬೇಕು ಎಂದು ಸಾವಯವ ಕೃಷಿಕ ಶ್ರೀ ಕೇಶವ ಡೋಂಗ್ರೆ ತಿಳಿಸಿದರು.

ಶ್ರೀ ಸುಬ್ರಹ್ಮಣ್ಯ ಭಟ್ ಕೈಲಾರು, ಕೊಯ್ಲಿನಿಂದ ದಾಸ್ತಾನಿನ ತನಕ ಬಳಸುವ ಲಘು ಯಂತ್ರೋಪಕರಣಗಳ ಬಳಕೆಯ ಅಗತ್ಯವನ್ನು ತಿಳಿಸಿಕೊಟ್ಟರು.

ಶ್ರೀ ಅಶೋಕ್ ಕುಮಾರ್ ಕರಿಕ್ಕಳ ಅವರು ಮಾರುಕಟ್ಟೆಯ ಏರಿಳಿತದ ವೈಖರಿಯನ್ನು ದೀರ್ಘ ಕಾಲದ ಅಂಕಿ ಅಂಶಗಳೊಂದಿಗೆ ಅಧ್ಯಯನ ಮಾಡಿ, ಮಾರುಕಟ್ಟೆಯ ಏಳು ಬೀಳುಗಳು ಸ್ವಾಭಾವಿಕ, ಸ್ವತಃ ದುಡಿಯುವ ಕೃಷಿಕನಿಗೆ ಅದರಲ್ಲಿ 50 ಶತಾಂಶದಷ್ಟು ಲಾಭದ ಪ್ರತೀಕ್ಷೆ ಬೇಕು. ಆದರೆ ಏರು ಮಾರುಕಟ್ಟೆಯನ್ನು ನೋಡಿ ಕೃಷಿ ಹೊಸತಾಗಿ ಆರಂಭಿಸುವುದು ಅಡಿಕೆಯಂತಹ ಇಳುವರಿ ಆರಂಭವಾಗಲು ದೀರ್ಘಾವಧಿ ಸಮಯ ತೆಗೆದುಕೊಳ್ಳುವ ಕೃಷಿಯಲ್ಲಿ ಬುದ್ಧಿವಂತಿಕೆಯಲ್ಲ ಎಂದರು. ಹಲಸಿನ ಕೃಷಿ ಹಾಗೂ ನೇರ ಉಪಯೋಗಕ್ಕೆ ಅನುಯೋಜ್ಯ ಉತ್ಪನ್ನ ಅದರ ಬಳಕೆಗೆ ಇನ್ಸ್ಟಂಟ್ ಆಗಿ ಉಪಯೋಗ ಆಗುವ ರೀತಿಯ ಪ್ಯಾಕೇಜಿಂಗ್ ಹಲಸಿನ ಹಣ್ಣಿನ ವ್ಯಾಪಾರದಲ್ಲಿ ಅಗತ್ಯ. ಹಲಸಿನ ಗಾತ್ರ ಹಾಗೂ ಮಯಣದ ಕಾರಣ ಅದನ್ನು ಸ್ವತಃ ಈಳಿಗೆ ಮಣೆಯಲ್ಲಿ ಕೊರೆಯಲು ಜನರು ಇಷ್ಟಪಡುವುದಿಲ್ಲ. ಒಟ್ಟಿನಲ್ಲಿ ಸುಯೋಜಿತ ಮಾರುಕಟ್ಟೆಗೆ ಒಗ್ಗುವ ಯಾವುದೇ ಕೃಷಿ ಉದ್ಯಮ ಲಾಭದಾಯಕ ಎಂದರು.

ಕೊನೆಯಲ್ಲಿ ವಿಚಾರ ವಿಮರ್ಶೆಗಳು ನಡೆದವು.

ವರದಿ: ಮುರಳಿಕೃಷ್ಣ ಎಡನಾಡು

Leave a Comment

Your email address will not be published. Required fields are marked *

Scroll to Top