2022ರಲ್ಲಿ ಭವಿಷ್ಯದ ಯೋಜನೆಗಳಿಗಾಗಿ ಕೃಷಿ ಆದಾಯದ ಆಂಶಿಕ ಹೂಡಿಕೆಯಿಂದ ಅಭಿವೃದ್ಧಿ

ಕೃಷಿತೋ ನಾಸ್ತಿ ದುರ್ಭಿಕ್ಷಂ ಎಂಬ ಧ್ಯೇಯವಾಕ್ಯವನ್ನು ಸಾಕಾರಗೊಳಿಸಲು ಈಗ ಸಾಕಷ್ಟು ಲಾಭದಾಯಕ ಆರ್ಥಿಕ ಹೂಡಿಕೆ ಆಯಾಮಗಳು ಲಭ್ಯವಿವೆ.

ಹಣದುಬ್ಬರವನ್ನು ಮೆಟ್ಟಿ ನಿಲ್ಲಲು ಆರ್ಥಿಕ ಹೂಡಿಕೆಗಳು ಕೃಷಿಕನಿಗೆ ವರದಾನವಾಗುತ್ತವೆ. ಕೃಷಿ ಸ್ಥಳದ ಕೊರತೆ ಹಾಗೂ ಸಂಪನ್ಮೂಲಗಳ ಸೌಲಭ್ಯದ ಕೊರತೆ, ಕೃಷಿ ವಿಸ್ತೀರ್ಣವನ್ನು ಹೆಚ್ಚಿಸಲು ತೊಡಕಾಗುವುದು. ಸರ್ಕಾರಿ ನಿಯಮ ಹಾಗೂ ಕಟ್ಟುಪಾಡುಗಳಿಂದ ನಿಶ್ಚಿತ ವ್ಯಾಪ್ತಿಗಿಂತ ಹೆಚ್ಚುವರಿ ಜಮೀನಿನ ಆಧಿಪತ್ಯಕ್ಕೆ ಉಂಟಾಗುವ ತೊಡಕುಗಳು, ಕಾರ್ಮಿಕರ ಕೊರತೆ ಇವುಗಳು ಕೃಷಿಕರನ್ನು ಕಾಡುತ್ತಿರುವಾಗ, ಇರುವ ಭೂಮಿಯಿಂದ ಬಂದ ಹೆಚ್ಚುವರಿ ಆದಾಯವನ್ನು ಹೂಡಿಕೆ ಮಾಡುವುದರಿಂದ ಆ ಹಣವು ಕೃಷಿಕನಿಗೋಸ್ಕರ ಅಭಿವೃದ್ಧಿ ಸಾಧಿಸುತ್ತದೆ. ಇದಕ್ಕಾಗಿ ನುರಿತ ಆರ್ಥಿಕ ತಜ್ಞರಿಂದ ಸಲಹೆಯನ್ನು ಪಡೆದುಕೊಂಡು ಹೂಡಿಕೆ ಮಾಡುವುದು ಉತ್ತಮ.

ಈ ವಿಷಯದಲ್ಲಿ ನಡೆದ ಕ್ಲಬ್ ಹೌಸ್ ಚರ್ಚೆಯಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀ ಮುರಳಿಧರ ಕೆ., ವೆಲ್ತ್ ವಿಷನ್, ಪುತ್ತೂರು (ಮೊಬೈಲ್: +919448260459), ಶ್ರೀ ಗಣೇಶ ಭಟ್, ಬೆಂಗಳೂರು (ಮೊಬೈಲ್: +919986510981), ಶ್ರೀ ಶಿವರಾಮ ಸಂಪತ್ತಿಲ (ಮೊಬೈಲ್: +919946353531) ಮುಂತಾದವರು ಭಾಗವಹಿಸಿದ್ದರು.

ಹಣದುಬ್ಬರಕ್ಕೆ ಮೀರಿ ಅಭಿವೃದ್ಧಿ ಸಾಧಿಸಲು ಕೇವಲ ಬ್ಯಾಂಕ್ ಖಾತೆಯಿಂದ ಸಾಧ್ಯವಿಲ್ಲ. ಅದಕ್ಕಾಗಿ ವಿವಿಧ ಆರ್ಥಿಕ ಹೂಡಿಕೆಯ ಆಯಾಮಗಳಿವೆ ಎಂದು ಸಂಪನ್ಮೂಲ ವ್ಯಕ್ತಿಗಳು ತಿಳಿಸಿಕೊಟ್ಟರು.

ವಿವಿಧ ಆರ್ಥಿಕ ಹೂಡಿಕೆ ಗಳಾದ ಪೋಸ್ಟಲ್ ಆರ್ ಡಿ, ಸುಕನ್ಯಾ ಸಮೃದ್ಧಿ, ಡಿಪೋಸಿಟ್ ಸರ್ಟಿಫಿಕೇಟ್, FD, PPF, ಶೇರ್ ಗಳು, ಐಪಿಓ, ಬಾಂಡುಗಳು, ಮ್ಯೂಚುವಲ್ ಫಂಡ್, ಡೆಟ್ ಫಂಡ್, ಏಂಜಲ್ ಇನ್ವೆಸ್ತ್ಮೆಂಟ್, ಗೋಲ್ಡ್, ಗೋಲ್ಡ್ ಈಟೀಎಫ್, ಗ್ರಿಪ್ ಫಂಡ್, ರಿಯಲ್ ಎಸ್ಟೇಟ್, ಇತ್ಯಾದಿ, ಅವರವರಿಗೆ ಅನುಕೂಲವಾದಂತಹ ಹೂಡಿಕೆಗಳನ್ನು ಮಾಡಿ ಸಫಲರಾದವರು ಕೃಷಿಕರಲ್ಲಿ ವಿರಳವೇನಲ್ಲ.

ಕೃಷಿಕರಿಗೆ ಸಂಪೂರ್ಣ ಸುರಕ್ಷೆಯಿಂದ ಹಣ ಹೂಡಿಕೆಗೆ ಸಾಧ್ಯವಾಗುವಂತಹ ಆಯಾಮಗಳಲ್ಲಿ ಕೆಲವನ್ನು ಈ ಸಂವಾದದಿಂದ ಆಯ್ದು ಸಂಬಂಧಿತ ವಿವರಗಳೊಂದಿಗೆ ಈ ಕೆಳಗೆ ಕೊಡಲಾಗಿದೆ.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಹಿರಿಯ ಆರ್ಥಿಕ ಸಂಸ್ಥೆಯ ಮುಂದಾಳು, ಸುಕೋ ಬ್ಯಾಂಕ್ ಅಧ್ಯಕ್ಷರಾದ ಶ್ರೀ ಮನೋಹರ ಮಸ್ಕಿ ಇವರು ಶೇರು ವಹಿವಾಟು ಅದರಲ್ಲೂ ಭವಿಷ್ಯದ ದರದ ಮೇಲಿನ ಜೂಜಾಟ ಕೃಷಿಕರಿಗೆ ಅನುಕೂಲವಲ್ಲ ಎಂದು ಸೂಚಿಸಿದರು. ಅವರು ಸರ್ಕಾರಿ ಬಾಂಡ್ ಗಳು ಹಾಗೂ ರಿವರ್ಸ್ ಇ ಎಂ ಐ ಯಂತಹ ಸಿಸ್ಟಮ್ಯಾಟಿಕ್ ವಿಥ್ಡ್ರಾವಲ್ ಪ್ಲಾನ್ (SWP) ಹೂಡಿಕೆಗಳು ಉತ್ತಮ ಎಂದು ಸಲಹೆ ನೀಡಿದರು.

ಸ್ವತಃ ಕೆಲಸ ಮಾಡುವುದರ ಜೊತೆಗೆ ತಮಗಾಗಿ ಹಣವು ಕೂಡಾ ಸ್ವಲ್ಪ ಕೆಲಸ ಮಾಡುವುದನ್ನು ಸಮರ್ಥವಾಗಿ ನಿರ್ವಹಿಸುತ್ತಿರುವ ಪ್ರಗತಿಪರ ಕೃಷಿಕರು ಕೂಡ ಕಾರ್ಯಕ್ರಮದಲ್ಲಿ ಅನುಭವ ಹಂಚಿಕೊಂಡರು.

ಸುಕನ್ಯಾ ಸಮೃದ್ಧಿ ಯೋಜನೆ

ಹೆಣ್ಣು ಮಕ್ಕಳ ಹೆತ್ತವರಿಗೆ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಹೂಡಿಕೆ ಮಾಡಬಹುದು.
ಸುಕನ್ಯಾ ಸಮೃದ್ಧಿ ಯೋಜನೆ ಭಾರತ ಸರಕಾರದ ಯೋಜನೆಯಾಗಿದ್ದು ಪೋಸ್ಟ್ ಆಫೀಸ್ ಗಳಲ್ಲೂ ಬ್ಯಾಂಕ್ ಗಳಲ್ಲೂ ನಿಕ್ಷೇಪಿಸಲು ಅನುವು ಮಾಡಿಕೊಡುತ್ತದೆ. ವಾರ್ಷಿಕವಾಗಿ 10 ವರ್ಷಕ್ಕಿಂತ ಚಿಕ್ಕ ಹೆಣ್ಣು ಮಕ್ಕಳ ಹೆಸರಿನಲ್ಲಿ ಅವರ ಹೆತ್ತವರಿಗೆ ರೂ 250 ರಿಂದ 150000 ತನಕ ಹೂಡಿಕೆ ಮಾಡಬಹುದು. ಮುಂದಿನ 15 ವರ್ಷಗಳ ತನಕ ಅದಕ್ಕೆ 7.5% ಬಡ್ಡಿ ಸೇರುವುದು.

ಸರಕಾರೀ ಬಾಂಡ್

ದೇಶಿಯ ವಿಕಸನ ಬಾಂಡುಗಳು ಆರ್ಬಿಐ ಸುರಕ್ಷೆಯ ಒಂದಿಗೆ ಲಭ್ಯವಿವೆ. ಅವುಗಳಲ್ಲೂ ಹೂಡಿಕೆಯನ್ನು ಮಾಡಬಹುದು.
ಸರಕಾರೀ ಬಾಂಡ್ ಅಥವಾ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬಾಂಡ್ ಗಳಲ್ಲಿ ಹೂಡಿಕೆ ಮಾಡುವುದು ಉತ್ತಮ. ರೂ 1000 ಹಾಗು ಅದರ ಗುಣಕಗಳಲ್ಲಿ ಮಾಡುವ ಹೂಡಿಕೆಗೆ ಮಿತಿ ಇಲ್ಲ. ಅದೇ ರೀತಿ ಇದಕ್ಕೆ ಸಂಪತ್ತಿನ ತೆರಿಗೆಯೂ ಇಲ್ಲ. ವಾರ್ಷಿಕವಾಗಿ 7.15% ಬಡ್ಡಿ ಲಭಿಸುವುದು. ಈ ಹೂಡಿಕೆಯು ಆರು ವರ್ಷಗಳಲ್ಲಿ ಸಮಾಪ್ತವಾಗಿ ಮೊಬಲಗು ಪ್ರಾಪ್ತಿಯಾಗುವುದು.
ಇದನ್ನು ಖರೀದಿಸಲು ಸ್ಟಾಕ್ ಹೋಲ್ಡಿಂಗ್ಸ್ ಆಫ್ ಇಂಡಿಯಾದ (SHCIL) ಏಜೆನ್ಸಿಗಳ ಮುಖಾಂತರ ನಿವೇದನೆ ಸಲ್ಲಿಸಬೇಕು.

ಹೂಡಿಕೆಗೆ ಚಿನ್ನದ ಮೆರಗು

ಚಿನ್ನವನ್ನು ಲೋಹವಾಗಿಯೇ ಕೈಯಲ್ಲಿ ಇಟ್ಟುಕೊಳ್ಳದೆ ಡಿಜಿಟಲ್ ಚಿನ್ನ, ಗೋಲ್ಡ್ ಇಟಿಎಫ್, ಸವರಿನ್ ಬಾಂಡ್ ಮುಂತಾದ ಹೂಡಿಕೆಗಳು ಲಭ್ಯವಿವೆ.

ಸವರಿನ್ ಗೋಲ್ಡ್ ಬಾಂಡ್

ಇದು 24 ಕ್ಯಾರೆಟ್ ಚಿನ್ನದ ಒಂದು ಗ್ರಾಮ್ ಮೌಲ್ಯಕ್ಕೆ ತುಲ್ಯವಾದ ಮೊತ್ತದ ಒಂದು ಬಾಂಡ್. ಇಂತಹ ಬಾಂಡನ್ನು ಅಗತ್ಯವಿದ್ದಾಗ ಸರಕಾರ ತನ್ನ ಆರ್ಥಿಕ ಅಗತ್ಯಗಳಿಗಾಗಿ ಸಂಗ್ರಹಿಸುತ್ತದೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮೂಲಕ ಬಾಂಡ್ ಖರೀದಿಸಬಹುದು. ಗರಿಷ್ಠ ಮಿತಿ ಒಬ್ಬನಿಗೆ 4 ಕಿಲೋ ಗ್ರಾಂ ಆಗಿದೆ. ಕೊನೆಯಲ್ಲಿ ಚಿನ್ನದ ದರದಷ್ಟೇ ಹಣ ಬಾಂಡ್ ಗೆ ಬದಲಾಗಿ ಲಭಿಸುತ್ತದೆ. ಇದಕ್ಕೆ ಬಾಂಡಿನ ಆರಂಭಿಕ ಮೊಬಲಗಿನ ಮೇಲಿಂದ ವರ್ಷಕ್ಕೆ 2.5% ನಂತೆ ಬಡ್ಡಿಯು ಕೂಡಿಸಲಾಗುತ್ತದೆ.
ಈ ಬಾಂಡ್ ಕೊನೆಗೊಳ್ಳಲು 8 ವರ್ಷ ಕಾಲಾವಧಿ ಇದ್ದರೂ, 5, 6, 7 ನೇ ವರ್ಷಗಳಲ್ಲೂ ಹೂಡಿಕೆ ಹಿಂಪಡೆಯಲು ಅವಕಾಶವಿದೆ.

ಡಿಜಿಟಲ್ ಚಿನ್ನ

ನಾವು ಹೂಡುವ ಮೊಬಲಗಿಗೆ ಸಮಾನ ಮೌಲ್ಯದ ಚಿನ್ನವನ್ನು ಖರೀದಿಸಿ ಇಟ್ಟು ನಮಗೆ ರಶೀದಿ ನೀಡುವ ಜ್ಯೂವೆಲ್ಲರಿಗಳು ಹಾಗೂ ಕಂಪೆನಿಗಳು ಇವೆ. ಗರಿಷ್ಠವೆಂದರೆ ದಿನಕ್ಕೆ 2 ಲಕ್ಷ ಮೌಲ್ಯದ ಖರೀದಿ ಒಬ್ಬ ವ್ಯಕ್ತಿ ಮಾಡಬಹುದು. ಖರೀದಿಯ ಮೊತ್ತದ ಮೇಲೆ 3% ಜಿಎಸ್ ಟಿ ತೆರಬೇಕಾಗುತ್ತದೆ.
ಸಾಮಾನ್ಯವಾಗಿ ಆಭರಣಕ್ಕಾಗಿ ಚಿನ್ನ ಖರೀದಿ ಮಾಡುವುದಕ್ಕೆ ಬದಲಾಗಿ ಚಿನ್ನ ಹೂಡಿಕೆಗಾಗಿ ಖರೀದಿಸುವುದರಿಂದ, ಚಿನ್ನ ಕಂಪೆನಿಯ ಲಾಕರ್ನಲ್ಲೇ ಇರುತ್ತದೆ, ಲಾಕರ್ ಚಾರ್ಜ್ ಕೊಡುವ ಅವಶ್ಯಕತೆ ಇರುವುದಿಲ್ಲ. ಸವರಿನ್ ಬಾಂಡ್ ಗಿಂತ ಇಲ್ಲಿ ಕನಿಷ್ಠ 100 ರೂಪಾಯಿಯ ಚಿನ್ನವನ್ನೂ ಖರೀದಿಸಬಹುದು (ಸಂಕಲ್ಪಕ್ಕೆ).

ಚಿನ್ನ ಬಾರ್ ರೂಪದಲ್ಲಿ ಅಥವಾ ಕಾಯಿನ್ ರೂಪದಲ್ಲಿ ಪಡಕೊಳ್ಳಲು ಬಯಸಿದರೆ, ಖರೀದಿಸುವ ವ್ಯಕ್ತಿ ಅಗತ್ಯವಿದ್ದಾಗ ಸೇವಾ ಶುಲ್ಕ ನೀಡಿ ಡೆಲಿವರಿ ಪಡೆಯಬಹುದು.

ಚಿನ್ನದ ಮಾರ್ಕೆಟ್ ಹೂಡಿಕೆ (ಇಟಿಎಫ್)

ಡಿಮ್ಯಾಟ್ ಖಾತೆ ಇದ್ದವರಿಗೆ ಚಿನ್ನದ ಮಾರುಕಟ್ಟೆಯ ಮೊತ್ತದ ಆಧಾರದಲ್ಲಿ ಹೂಡಿಕೆ ಮಾಡಬಹುದು. ಇದು ಸಾಮಾನ್ಯ ದೃಷ್ಟಿಯಲ್ಲಿ ನೋಡಿದಾಗ ದೀರ್ಘಾವಧಿ ಶೇರ್ ಹೂಡಿಕೆಯಂತೆ ಇರುತ್ತದೆ.

ಪ್ರಾವಿಡೆಂಟ್ ಫಂಡ್

ಪಬ್ಲಿಕ್ ಪ್ರಾವಿಡೆಂಟ್ ಫಂಡ್ ನಲ್ಲಿ ಹೂಡಿಕೆಯಿಂದ ಆರ್ಥಿಕ ಪ್ರಗತಿ ಸಾಧಿಸಬಹುದು.
ಪ್ರಾವಿಡೆಂಡ್ ಫಂಡ್ ನಲ್ಲಿ ಹೂಡಿಕೆ ಮಾಡುವುದು ತುಂಬಾ ಹಿಂದಿನಂದಲೂ ಸಂಬಳದ ಆಧಾರದಲ್ಲಿ ಅಥವಾ ನಿಯಮಿತ ಹೂಡಿಕೆ ಮಾಡಲು ಇಚ್ಚಿಸುವವರ ಕಣ್ಮಣಿ ಆಗಿದೆ.

ಈಗ ಇದಕ್ಕೆ ರೂ 500 ರಿಂದ ರೂ 150000 ತನಕ ವಾರ್ಷಿಕ ಹೂಡಿಕೆ ಪೋಸ್ಟಲ್ ಕಛೇರಿ ಅಥವಾ ಬ್ಯಾಂಕ್ ಗಳಲ್ಲಿ ಮಾಡಬಹುದು. ಪ್ರಸ್ತುತ ಚಕ್ರಬಡ್ಡಿ 7.1% ವಾರ್ಷಿಕವಾಗಿ ಲಭಿಸುತ್ತದೆ.
ಮದುವೆ, ವಿದ್ಯಾಭ್ಯಾಸ, ಮನೆಕಟ್ಟುವುದು, ವೈದ್ಯಕೀಯ ಮುಂತಾದ ಅವಶ್ಯಕತೆಗಳ ಹೊರತಾಗಿ 15 ವರ್ಷ ಕಾಲಾವಧಿ ಪೂರ್ತಿ ಮಾಡಿಯೇ ನಿಕ್ಷೇಪ ಕೊನೆಗೊಳಿಸಬಹುದು.

ಮ್ಯೂಚುವಲ್ ಫಂಡ್ಸ್

ಇತ್ತೀಚೆಗೆ ತುಂಬಾ ಜನಪ್ರಿಯವಾಗುತ್ತಿರುವ ಅಂತಹ ಹೂಡಿಕೆ ಮ್ಯೂಚುವಲ್ ಫಂಡ್ಸ್ ಆಗಿದೆ. ಇದರಲ್ಲಿ ಸಿಸ್ಟಮ್ಯಾಟಿಕ್ ಇನ್ವೆಸ್ಟ್ಮೆಂಟ್ ಪ್ಲಾನ್ (ಎಸ್ ಐ ಪಿ) ಹಾಗೂ ಸಿಸ್ಟಮ್ಯಾಟಿಕ್ ಟ್ರಾನ್ಸ್ಫರ್ ಪ್ಲಾನ್ (ಎಸ್ಟಿಪಿ) ಗಳನ್ನು ಕೈಗೊಳ್ಳಬಹುದು.

ಅನುಭವಿ ಹೂಡಿಕೆದಾರರು ಮ್ಯೂಚುವಲ್ ಫಂಡ್ಸ್ ಹೂಡಿಕೆ ಮಾಡುತ್ತಲೂ ಲಾಭಗಳಿಸುತ್ತಲೂ ಬಂದಿದ್ದಾರೆ. ಇಂತಹ ಅನುಭವಿಗಳು ಹಲವಾರು ಉತ್ತಮ ಶೇರ್ಗಳನ್ನು ಕಲೆಹಾಕಿ ಅವುಗಳಲ್ಲಿ ಹೂಡಿಕೆದಾರರ ಹಣವನ್ನು ಹೂಡಿಕೆಮಾಡಿ ಅದರ ಲಾಭಂಶವನ್ನು ಹಂಚಿಕೊಳ್ಳುತ್ತಾರೆ. ಇದುವೇ ಈಗ ಜನಪ್ರಿಯವಾಗುತ್ತಿರುವ ಮ್ಯೂಚುವಲ್ ಫಂಡ್ ಇನ್ವೆಸ್ಟ್ಮೆಂಟ್.

ಹತ್ತಾರು ಕಂಪೆನಿಗಳಿಂದ ನೂರಾರು ವಿಭಿನ್ನ ಶೇರ್ ಗಳ ಕಲೆಹಾಕುವಿಕೆಯಿಂದ ವ್ಯವಸ್ಥಿತ ಮ್ಯೂಚುವಲ್ ಫಂಡ್ ಗಳಿವೆ. ಇವುಗಳ ಕ್ಷಮತೆ ಹಾಗೂ ಏನ್ ಎ ವಿ ಹೆಚ್ಚು ಕಡಿಮೆ ಇರುತ್ತದೆ. ಆದ್ದರಿಂದ ಆರ್ಥಿಕ ಸಲಹಾಗಾರರಿಂದ ಸಲಹೆ ಪಡೆದು ಹೂಡುವಿಕೆ ಮಾಡುವುದು ಉತ್ತಮ.

ಇದೀಗ ಹಲವಾರು ಬಳಕೆದಾರ ಸ್ನೇಹೀ ಮೊಬೈಲ್ ಆಪ್ ಗಳು ಮ್ಯೂಚುಯಲ್ ಫಂಡ್ ಒಳಗೊಂಡಂತೆ ಹಲವಾರು ಹೂಡಿಕೆಗಳಿಗೆ ಸುಲಭ ಮಾಹಿತಿ ನೀಡುವುದರ ಜೊತೆಗೆ ಅವುಗಳ ಖರೀದಿ ಬ್ಯಾಂಕ್ ಖಾತೆಯಿಂದ ವರ್ಗಾವಣೆ ಮಾಡಿ ಮನೆಯಿಂದಲೇ ಖರೀದಿಸುವ ಸುರಕ್ಷಿತ ವ್ಯವಸ್ಥೆಯನ್ನು ಹೊಂದಿವೆ. ಹೀಗೆ ಈ ವಲಯ ಹೂಡಿಕೆದಾರರಿಗೆ ಅನುಕೂಲಕರ ಬೆಳವಣಿಗೆಯೊಂದಿಗೆ ಮುನ್ನುಗ್ಗುತ್ತಿರುವುದನ್ನು ಕಾಣಬಹುದು.

ಭಾರತೀಯ ಆರ್ಥಿಕ ವಹಿವಾಟು ಈಗ ಅಂತಾರ್ರಾಷ್ಟ್ರೀಯ ಆರ್ಥಿಕ ವ್ಯವಸ್ಥೆಯಿಂದ ಜಗ್ಗದ, ಕುಗ್ಗದ ಸ್ಥಿತಿಗೆ ಬಂದಿರುವುದು ನಮಗೆ ಹೆಮ್ಮೆಯ ವಿಷಯ.

ಏಂಜೆಲ್ ಇನ್ವೆಸ್ಟ್ಮೆಂಟ್

ಉದ್ದಿಮೆದಾರರ ಸ್ಟಾರ್ಟ್ ಅಪ್ ಬಂಡವಾಳಗಳಿಗೆ ಉಪಯುಕ್ತವಾದ ಏಂಜೆಲ್ ಇನ್ವೆಸ್ಟ್ಮೆಂಟ್ ಕೂಡ ಉತ್ತಮ ಹೂಡಿಕೆಯಾಗಿದೆ.
ಉದ್ದಿಮೆ ಮಾಡಲು ಯುವ ಪ್ರತಿಭೆಗಳು ಪ್ರಾರಂಭಿಸುವಾಗ ಅವರಿಗೆ ಬಂಡವಾಳ ಇರುವುದಿಲ್ಲ, ಸವಲತ್ತುಗಳೂ ಇರುವುದಿಲ್ಲ. ಕ್ರೆಡಿಟ್ ರೇಟಿಂಗ್ ಕಡಿಮೆ ಇರುತ್ತದೆ, ಇದರಿಂದಾಗಿ ಬ್ಯಾಂಕ್ ಗಳು ಇವರಿಗೆ ಹೆಚ್ಚಿನ ಮೊತ್ತ ಸಾಲ ನೀಡುವುದಿಲ್ಲ. ಅಂತಹ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಗರಿಷ್ಟ ಬಂಡವಾಳ ನೀಡಿ, ಲಾಭಾಂಶದಿಂದ ಬಡ್ಡಿ ಹಾಗೂ ಅಸಲನ್ನು ಹಿಂಪಡೆಯುವ ವ್ಯವಸ್ಥೆಯೇ ಏಂಜೆಲ್ ಇನ್ವೆಸ್ಟಿಂಗ್. ಇದು ಒಡಂಬಡಿಕೆಯ ಮೂಲಕ ನಡೆಯುವ ವ್ಯವಹಾರ. ಇಲ್ಲಿ ರಿಸ್ಕ್ ಜಾಸ್ತಿ ಇದ್ದರೂ ಇಂತಹ ಹೂಡಿಕೆಗಳಿಂದಲೇ ಇಂದಿನ ಹಲವಾರು ದಿಗ್ಗಜ ಸಂಸ್ಥೆಗಳು ಮೇಲೆ ಬಂದಿದೆ ಎಂದ ಮೇಲೆ ಇದು ಚಾಲ್ತಿಯಲ್ಲಿರುವ ಲಾಭದಾಯಕ ಹೂಡಿಕೆಯೇ ಆಗಿದೆ.

ಇವುಗಳಿಗೆ ನಿರ್ದಿಷ್ಟ ಮೊತ್ತ ಎನ್ನುವುದು ಇಲ್ಲ, ಗ್ಯಾರಂಟಿಗೆ ಮಾಡಬೇಕಾದ ಅಗ್ರಿಮೆಂಟ್ ಕಾನೂನು ಸಲಹೆಗಾರರ ಮುಖಾಂತರ ಸಿದ್ಧಪಡಿಸಬೇಕು. ಈಗ ಇದಕ್ಕಾಗಿಯೇ ಕೆಲಸ ಮಾಡುವ ಏಂಜೆಲ್ ಫಂಡ್ ಬ್ರೋಕರ್ ಏಜೆನ್ಸಿಗಳೂ ಇವೆ.

ಗ್ರಿಪ್ ಫಂಡ್

ಇಂದಿನ ತಂತ್ರಜ್ಞಾನದ ಅವಲಂಬಿತ ಜಗತ್ತಿನಲ್ಲಿ ಹಲವಾರು ಆವಿಷ್ಕಾರಗಳೂ, ಉತ್ಪಾದನೆಗಳೂ ಗೇಣಿಗೆ ಪಡೆದ ಕಟ್ಟಡ, ಸವಲತ್ತು, ವಾಹನ, ಮುಂತಾದವುಗಳನ್ನು ಅವಲಂಬಿಸಿ ತಯಾರಾಗುತ್ತವೆ. ಇಂತಹ ಬಾಡಿಗೆಯ ಸವಲತ್ತುಗಳ ಪೂರೈಕೆಗೇ ಈಗ ಏಜೆನ್ಸಿಗಳು ಆರಂಭವಾಗಿವೆ. ಈ ರೀತಿ ಬಾಡಿಗೆಯ ಸವಲತ್ತುಗಳ ವ್ಯವಸ್ಥೆ ಮಾಡಲು ಬಂಡವಾಳದ ಶೇಖರಣೆ ಮಾಡುವ ಕಂಪೆನಿಗಳ ಹೂಡಿಕೆ ಗ್ರಿಪ್ ಫಂಡ್ ಎಂದು ಅಭಿವುದ್ಧಿಗೊಳ್ಳುತ್ತಿದೆ. ಇದು ಒಂದು ಭವಿಷ್ಯದ ಹೂಡಿಕೆಯಾಗಿ ಬೆಳೆಯುತ್ತಿದೆ ಎಂದು ಹಣಕಾಸು ತಜ್ಞರ ಅಭಿಪ್ರಾಯ.

ಶೇರ್ ಮಾರುಕಟ್ಟೆ

ಶೇರ್ ಮಾರುಕಟ್ಟೆಯ ಅಭಿವೃದ್ಧಿಯನ್ನು ಪಡೆದುಕೊಳ್ಳಲು ಉತ್ತಮ ದೀರ್ಘಾವಧಿ ಶೇರುಗಳ ಖರೀದಿ ಮಾಡಬಹುದು. ಶೇರ್ ಮಾರುಕಟ್ಟೆಯಲ್ಲಿ ಬೆಳವಣಿಗೆ ಇದೆ. ನಿಫ್ಟಿ ಹಾಗು ಸೆನ್ಸೆಕ್ಸ್ ಏರುತ್ತಲೇ ಹೋಗುತ್ತಿವೆ. ಭಾರತದಲ್ಲಿ ಇನ್ನು ಒಂದು ದಶಕದಲ್ಲಿ ಅಭೂತಪೂರ್ವ ಬೆಳವಣಿಗೆ ಆಗಲಿದೆ. ಆದರೆ ಇದರಲ್ಲಿ ತಾತ್ಕಾಲಿಕ ಏಳು ಬೀಳುಗಳು ನಡೆಯುತ್ತಿರುತ್ತವೆ. ಆದ್ದರಿಂದ ಅನುಭವ ಹಾಗು ಸಮಯದ ಕೊರತೆಯಿಂದ, ಅದೇ ರೀತಿ ಮಾಹಿತಿಯ ಕೊರತೆಯಿಂದ ಹೂಡಿಕೆದಾರರು ಹಣ ಕಳಕೊಳ್ಳುತ್ತಾರೆ.

ಚೈತನ್ಯ ವಿನಿಮಯ ಹೂಡಿಕೆ (IEX)

ಎನರ್ಜಿ ಎಕ್ಸ್ಚೇಂಜ್ ಫಂಡ್ ಇನ್ವೆಸ್ತ್ಮೆಂಟ್ ಆರ್ಥಿಕ ಹೂಡಿಕೆಗೆ ಉತ್ತಮ ಅವಕಾಶ.
ರಿನೀವಬಲ್ ಎನರ್ಜಿ ಸರ್ಟಿಫಿಕೇಟ್, ಎನರ್ಜಿ ಸೇವಿಂಗ್ ಸರ್ಟಿಫಿಕೇಟ್, ಮುಂತಾದ ಹೂಡಿಕೆಗಳು ಉತ್ತಮ ಗಳಿಕೆಯನ್ನು ಒದಗಿಸುತ್ತವೆ. ಇದು ಎನರ್ಜಿ ಮಾರ್ಕೆಟ್ ನ ಏಳು ಬೀಳುಗಳಿಗೆ ಸ್ಪಂದಿಸುವ ಹೂಡಿಕೆಯಾಗಿದೆ. ಈ ಮಾರುಕಟ್ಟೆಯಲ್ಲಿ ಸಾವಿರಾರು ಗ್ರಾಹಕ ಕಂಪೆನಿಗಳು ಹಾಗೂ ಉತ್ಪಾದಕರ ಎನರ್ಜಿ ವಹಿವಾಟು ನಡೆಯುತ್ತದೆ.
ರಿನೀವಬಲ್ ಎನರ್ಜಿ ಹೂಡಿಕೆದಾರರಿಗೆ ಒಂದು ಮೆಗಾವ್ಯಾಟ್ ಗೆ ತುಲ್ಯವಾದ ಮೊತ್ತಕ್ಕೆ ಸರ್ಟಿಫಿಕೇಟ್ ಖರೀದಿಸಬಹುದು. ಎನರ್ಜಿ ಸೇವಿಂಗ್ ಹೂಡಿಕೆದಾರರಿಗೆ ಒಂದು ಮೆಟ್ರಿಕ್ ಟನ್ ತೈಲಕ್ಕೆ ತುಲ್ಯವಾದ ಮೊತ್ತಕ್ಕೆ ಸರ್ಟಿಫಿಕೇಟ್ ಖರೀದಿಸಬಹುದು. ಹೂಡಿಕೆಯನ್ನು ಆಹ್ವಾನಿಸುವಾಗ ಮಾತ್ರವೇ ಸರ್ಟಿಫಿಕೇಟ್ ಲಭ್ಯವಾಗುತ್ತದೆ. ಇದು ಮೂರು ವರ್ಷದ ಅವಧಿಯ ಆವೃತ್ತಿಯಲ್ಲಿ ಬದಲಾವಣೆಯ ಅವಕಾಶ ಹೊಂದಿರುತ್ತದೆ.

ನಿಯಮಿತ ಹಿಂಪಡೆತದ ಆದಾಯ ಪ್ಲಾನ್ (SWP)

ಇದರಲ್ಲಿ ಮ್ಯೂಚುಯಲ್ ಫಂಡ್ ಹೂಡಿಕೆಯನ್ನು ನೇರ SIP ಗೆ ವ್ಯತ್ಯಸ್ಥವಾಗಿ ಪ್ರತಿ ತಿಂಗಳು ಬೆಳವಣಿಗೆ ಹೊಂದಿದ ಲಾಭಾಂಶವನ್ನು ಅಥವಾ ಅಸಲು ಮತ್ತು ಲಾಭಾಂಶದ ನಿಯಮಿತ ಪಾಲನ್ನು ಹಿಂಪಡೆಯಬಹುದು. ಇದು ಉತ್ಪನ್ನ ಮಾರಾಟ ಮಾಡಿದಾಗ ಲಭಿಸುವ ದೊಡ್ಡ ಮೊತ್ತದ ಏಕಗಂಟಿನ ಹೂಡಿಕೆಯಿಂದ ಉತ್ತಮ ನಿಯಮಿತ ಆದಾಯಕ್ಕೆ ದಾರಿಮಾಡಿಕೊಡುತ್ತದೆ.

ಉತ್ಪನ್ನ ಮಾರುಕಟ್ಟೆ

ಉತ್ಪನ್ನ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಲಾಭ ಗಳಿಸಲು ಕಮಾಡಿಟಿ ಮಾರ್ಕೆಟ್ ನಲ್ಲಿ ಹೂಡಿಕೆ ಮಾಡಬಹುದು.
MCDX ಮಾರುಕಟ್ಟೆಯಲ್ಲಿ ಧಾನ್ಯಗಳು, ಚಿನ್ನ, ಲೋಹಗಳು, ಮುಂತಾದ ಗಳನ್ನು ಖರೀದಿಸಿ ಹೆಚ್ಚಿನ ಮೌಲ್ಯಕ್ಕೆ ಅದರಿಂದ ಲಾಭ ಗಳಿಸಬಹುದು ಎಂದು ತಿಳಿಸಲಾಯಿತು.

ಹೀಗೆ ಹಲವಾರು ಹೂಡಿಕೆ ಅವಕಾಶಗಳನ್ನು ಕೃಷಿಕರಿಗೆ ಸಂವಾದದ ಸಂದರ್ಭದಲ್ಲಿ ತಿಳಿಸಿಕೊಡಲಾಯಿತು.

ಬದಲಾವಣೆಗಳಿಗೆ ಒಗ್ಗುವಂತಹ ದೃಷ್ಟಿಕೋನ, ಬೆಳವಣಿಗೆಯ ಹಂಬಲ, ಸಮಾಲೋಚನೆ ಹಾಗೂ ತುಲನಾತ್ಮಕ ವೀಕ್ಷಣೆಯಿಂದ ಆರ್ಥಿಕ ಹೂಡಿಕೆ ಮಾಡುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಅಭಿವೃದ್ಧಿಯ ತಂತ್ರಜ್ಞಾನಗಳೂ ಕ್ರಾಂತಿಯನ್ನು ಸೃಷ್ಟಿಸುತ್ತಿವೆ. ಅದೇ ರೀತಿ ಈ ಬದಲಾವಣೆಗಳಿಗೆ ಸಮಾನವಾಗಿ ನಾವೂ ಬದಲಾವಣೆಯನ್ನು ಕಂಡುಕೊಳ್ಳಲು ಸ್ವಲ್ಪ ಅಧ್ಯಯನ, ಅನುಭವಸ್ಥರ ಮೇಲೆ ನಂಬಿಕೆ, ಹೊಸತನವನ್ನು ಸ್ವೀಕರಿಸುವ ಛಲ ಇದ್ದಲ್ಲಿ ಯಶಸ್ಸು ಖಂಡಿತ. ಕೃಷಿಕ ಯುವ ಪೀಳಿಗೆಯಲ್ಲೂ ಇಂತಹ ಆಶಾದಾಯಕ ಸಮೂಹ ಬೆಳೆದು ಬರುತ್ತಿರುವುದು ಭರವಸೆಯ ಸಂಕೇತ.

ಯಾವುದೇ ಆರ್ಥಿಕ ಹೂಡಿಕೆ ಮಾಡುವಾಗ ಅದರ ಕೂಲಂಕುಶ ತಿಳಿದುಕೊಂಡೆ ಹೂಡಿಕೆ ಮಾಡುವುದು ಹಾಗೂ ಅದರ ಭವಿಷ್ಯವನ್ನು ಖಾತ್ರಿ ಪಡಿಸಿಕೊಳ್ಳುವುದು ಪ್ರತಿಯೊಬ್ಬ ಕರ್ತವ್ಯ.
ಸಫಲರಾಗಿ ಹೂಡಿಕೆಯನ್ನು ಮಾಡುತ್ತಿರುವ ಕೃಷಿಕರನ್ನು, ಅದೇ ರೀತಿ ಆರ್ಥಿಕ ತಜ್ಞರನ್ನು ಸಂಪರ್ಕಿಸುವುದರಿಂದ ಉತ್ತಮ ಹೂಡಿಕೆ ಮಾಡಿ ಅಭಿವೃದ್ಧಿಯನ್ನು ಸಾಧಿಸಬಹುದು.
ಕೃಷಿಯಲ್ಲಿ ಲಭಿಸಿದ ಅಧಿಕ ಇಳುವರಿಯನ್ನು ತಾತ್ಕಾಲಿಕ ಐಷಾರಾಮಗಳಿಗೆ ಉಪಯೋಗಿಸುವುದರ ಬದಲಾಗಿ ಅದನ್ನು ಹೂಡಿಕೆ ಮಾಡುವುದರಿಂದ ಅಂದಾಜಿಗೆ ಮೀರಿ ಅಭಿವೃದ್ಧಿಯನ್ನು ಸಾಧಿಸಲು ಅವಕಾಶಗಳಿವೆ.

Leave a Comment

Your email address will not be published. Required fields are marked *

Scroll to Top