ಒಂದು ದಿನ ಮುಂಜಾನೆ
ಹೋದೆ ನಾ ಹೊಲದ ಬಳಿ
ಎಲ್ಲೆಲ್ಲು ತುಂಬಿರುವ ಹಸಿರುರಾಶಿ
ತಂಗಾಳಿಯೊಡನೆ ತುಯ್ದಾಡಿತು ತೆನೆ
ಆಹಾರ ಶೃಂಖಲೆಯ ಮೂಲ ಕೊಂಡಿ
ಪೈರಿನೆಡೆಯಲ್ಲೆಲ್ಲ ತುಂಬಿಕೊಂಡಿಹ ಕಳೆಯು
ಕಂಡಿತು ತೀರ ಬಳಿಸಾರಿದಾಗ
ಕಳೆಯ ಕಂಡಾಗಲೆಲ್ಲಾ ಕಿತ್ತೆಸೆಯ ಬೇಕೆಂಬ
ಹೆತ್ತವರ ಮಾತು ನೆನೆಯಿತು ಮನವು ಆಗ
ಕೆಸರು ಗದ್ದೆಗೆ ಇಳಿದು ಕಳೆಯಕೀಳಲು ನನಗೆ
ಆಲಸ್ಯದಾ ಜಾಡು ಬಿಡಲೇ ಇಲ್ಲ.
ಮನೆಯಲ್ಲಿ ಹೇಳಿದರೆ ಕಳೆ ಕೀಳೋ ಕೆಲಸ ಕೊಡುವರು
ಎಂಬ ಭಯದಲ್ಲಿ ಆ ವಿಷಯ ಉಸುರಲಿಲ್ಲ
ಕಳೆ ಬೆಳೆದು ಪೈರನ್ನು ಪೂರ್ತಿ ಆವರಿಸಿ
ಬೆಳೆಯೆಲ್ಲ ನಾಶವಾಗಿ ಅಪ್ಪ ಕುಸಿದಾಗ
ತಪ್ಪಿನರಿವಾಯ್ತೆನಗೆ ಏನು ಮಾಡುವುದೀಗ?
ಸರಿಯಾದ ಪಾಠವೊಂದನು ಕಲಿತೆ
ಇದರಿಂದ ಸೋಮಾರಿತನವೆಂದು ಕೃಷಿಕನಿಗೆ ಸಲ್ಲ!
ಕೈ ಕೆಸರಾದರೆ ಬಾಯಿ ಮೊಸರೆಂಬ
ಗಾದೆ ಮಾತೆಂದಿಗೂ ಸುಳ್ಳಲ್ಲವಲ್ಲ!!