






ಕೃಷಿಕರು ಲಾಭಾಪೇಕ್ಷೆಯನ್ನು ನೋಡದೆ ದೇಶಕ್ಕಾಗಿ ಸೇವಾ ನಿರತರಾಗಿದ್ದಾರೆ. ಆರ್ಥಿಕ ಹಿಂಜರಿಕೆ ಹಾಗೂ ವ್ಯವಹಾರಗಳಲ್ಲಿ ತೊಂದರೆಗಳು ಉಂಟಾದಾಗಲೆಲ್ಲ ದೇಶಕ್ಕೆ ಬೆನ್ನೆಲುಬಾಗಿ ಈ ಹಿಂದೆ ಕೃಷಿ ನಿಂತದ್ದಿದೆ. ಇದೀಗ ಕೋರೋನಾದಿಂದ ಉಂಟಾದ ಲಾಕ್ಡೌನ್ ಹಾಗೂ ಅದರ ಮೂಲಕವಾಗಿ ಉಂಟಾದ ಹಲವಾರು ತೊಂದರೆಗಳಿಂದಾಗಿ ಆದ ಹಿಂಜರಿಕೆಯನ್ನು ಮೆಟ್ಟಿನಿಲ್ಲಲು ಕೃಷಿಯ ಪಾತ್ರ ಬಲು ಮುಖ್ಯ.
ಆಹಾರ ಮತ್ತು ಕೃಷಿ
ಲೋಕದಾದ್ಯಂತ ಭಾರತದಂತೆಯೇ ಹಲವಾರು ಕೃಷಿಪ್ರಧಾನ ದೇಶಗಳಿವೆ. ಒಟ್ಟಾಗಿ ಲೋಕದಲ್ಲಿ 60 ಶತಾಂಶ ಕೃಷಿಯಾಧಾರಿತ ವ್ಯವಹಾರ ನಡೆಯುತ್ತಿದೆ. ಒಮ್ಮೊಮ್ಮೆ ಕೃಷಿಗೆ ಆಘಾತಗಳು ಉಂಟಾದಾಗ ಸರಕಾರಗಳು ಸಹಾಯ ಹಸ್ತ ಚಾಚುವುದು ಅದೇ ರೀತಿ ಕೃಷಿ ಸಹಾಯ ನೀಡುವುದು ಸಾಮಾನ್ಯ ವಿಚಾರ. ಆದರೆ ಇದೀಗ ಉಂಟಾದ ಕೊರೋನಾ ರೋಗದ ಸಂದರ್ಭದಲ್ಲಿ ಇನ್ನೇನು, ಹಲವಾರು ದೇಶಗಳು ನೆಲಕಚ್ಚಿವೆ. ಇನ್ನೂ ಹಲವಾರು ದೇಶಗಳು ನೆಲಕಚ್ಚಲಿವೆ. ಇನ್ನು ಪಾಕಿಸ್ತಾನದಂತಹ ದೇಶಗಳು ಉಳಿದರೆ ವಿಶೇಷ.
“ಇಂತಹ ಸಂದರ್ಭದಲ್ಲಿ ಕೃಷಿಯ ಪಾತ್ರ ದೇಶವನ್ನು ಉಳಿಸುವಲ್ಲಿ ಅತಿ ಮುಖ್ಯವಾದದ್ದು”.
ದೇಶಪ್ರೇಮದಲ್ಲಂತೂ ಕೃಷಿಕರು ಎಂದೆಂದೂ ಮುಂಚೂಣಿಯಲ್ಲಿದ್ದಾರೆ. ದೇಶಭಕ್ತಿಯಿಂದ ಧರ್ಮ ಕಾರ್ಯಂತೆ ನಡೆಸುತ್ತಿರುವ ಕೃಷಿಯಲ್ಲಿ ಸಾರ್ವಜನಿಕರಿಗೆ ಆಹಾರದ ಲಭ್ಯತೆ ಖಾತ್ರಿಯಾಗುವುದು ಸಾಧ್ಯವಾಗುತ್ತದೆ. ಭೂಮಿ ತಾಯಿಯ ಸೇವೆಯನ್ನು ಮಾಡಿದರಿಂದ ಭೂ ದೇವಿಯ ಕೃಪೆ ಕೃಷಿಕರ ಮೇಲೆ ಇರುತ್ತದೆ ಎಂಬ ನಂಬಿಕೆ ಇದೆ.
ಕ್ಲಸ್ಟರ್ ಫಾರ್ಮಿಂಗ್
ಕೃಷಿಕರಿಂದ ನಾಡಿಗಾಗಿ ನಡೆಸುವ ಈ ಕಾರ್ಯಕ್ರಮದಲ್ಲಿ ಒಗ್ಗಟ್ಟಿದ್ದರೆ ಜಯಕ್ಕೆ ಸಾಧ್ಯತೆ ಜಾಸ್ತಿ. ಹಾಗಾಗಿ ಕ್ಲಸ್ಟರ್ ಗಳ ನಿರ್ಮಾಣ ಹಾಗೂ ಕೃಷಿ ಕಾರ್ಯದಲ್ಲೂ ಒಂದುಗೂಡುವಿಕೆ ಉಪಯುಕ್ತ. ಒಗ್ಗಟ್ಟಿದ್ದರೆ ಬಲ ಎಂಬಂತೆ ಕ್ಲಸ್ಟರ್ ಗಳಿಗೆ ಬಲ ಜಾಸ್ತಿ. ಸರಕಾರಿ ಹಾಗೂ ರಾಜಕೀಯ ಸ್ತರಗಳಲ್ಲಿ ಹಿಡಿತವಿರುತ್ತದೆ. ಹಾಗಾಗಿ ಹಸಿವನ್ನು ನೀಗಿಸುವ ಈ ಕಾರ್ಯಕ್ರಮದಲ್ಲಿ ಸೋಲುಂಟಾಗದೆ ಇರುವಂತೆ ಕ್ಲಸ್ಟರ್ ಗಳಿಂದ ಸಾಧ್ಯವಾಗಬಹುದು.
ಆಹಾರದ ಅಗತ್ಯ ಇಡೀ ವಿಶ್ವಕ್ಕೆ ಇದೆ. ಹಲವಾರು ಉದ್ಯಮ ಶೀಲ ರಾಷ್ಟ್ರಗಳಲ್ಲಿ ಕೃಷಿಯ ಬಗ್ಗೆ ಕಡೆಗಣಿಕೆ ಇದ್ದುದರಿಂದ ಅವರಿಗೆ ಆಹಾರಕ್ಕಾಗಿ ಇನ್ನೊಬ್ಬರನ್ನು ಅವಲಂಬಿಸಬೇಕಾಗುತ್ತದೆ. ಕೊರೋನಾ ಮಹಾಮಾರಿಯಿಂದಾಗಿ ಎಲ್ಲೆಡೆ ಜಗತ್ತು ಹತ್ತು ವರ್ಷ ಹಿಂದುಳಿದಿರುವಾಗ, ಅಭಿವೃದ್ಧಿಗಾಗಿ ಕಾರ್ಯಕ್ರಮಗಳನ್ನು ನಡೆಸುವಾಗ ಆಹಾರದ ಕೊರತೆಯು ತಡೆಯಾಗಬಾರದು ಎಂಬುದು ಮುಖ್ಯ ವಿಚಾರ. ಆಹಾರದ ಕೊರತೆ ಉಂಟಾದಲ್ಲಿ ಅದರಿಂದಾಗಿ ಸ್ವಾತಂತ್ರ್ಯಹರಣ ಆದಂತಹ ಅನುಭವ ಉಂಟಾಗುವುದು. ಹಾಗಾಗಿ ಮೂಲಭೂತ ಆಹಾರದ ಪೂರೈಕೆಯ ಜವಾಬ್ದಾರಿ ದೇಶದಲ್ಲಿರುವ ಕೃಷಿಕ ಜನಾಂಗಕ್ಕೆ ಒಂದು ದೊಡ್ಡ ಸವಾಲು.
ಆಹಾರಧಾನ್ಯದ ರಿಸರ್ವ್
ಇದೇ ರೀತಿ ಹೆಚ್ಚು ದಿವಸ ಮುಂದೆ ಹೋದಾಗ ಅಂತರ್ರಾಷ್ಟ್ರೀಯವಾಗಿ ಆಹಾರದ ಗೋದಾಮುಗಳು ಖಾಲಿ ಆಗುವುದರಲ್ಲಿ ಸಂಶಯವಿಲ್ಲ.
ಏನಿದ್ದರೂ ಬೆಳೆ ಬೆಳೆಯುವುದಕ್ಕೆ ಉತ್ತಮ ಸಮಯದ ಅಗತ್ಯವಿದೆ. ಹವಾಮಾನ ಬೆಳೆ ಬೆಳೆಯುವುದಕ್ಕೆ ಸರಿಯಾಗಿ ಒದಗಿ ಬರಬೇಕು. ಉತ್ತಮ ಮಳೆಯ ಲಭ್ಯತೆ ಇದ್ದರೆ ಬೆಳೆ ಉತ್ತಮವಾಗಬಹುದು ಎಂಬ ನಿರೀಕ್ಷೆ ಇರುತ್ತದೆ. ಹವಾಮಾನ ವೈಪರಿತ್ಯ ಈ ವರ್ಷ ಇರಲಾರದು ಎಂದು ನಂಬಿಕೊಳ್ಳೋಣ.
ಹಾಗಾಗಿ ಸಾಮಾನ್ಯಕ್ಕಿಂತ ಹೆಚ್ಚು ಬೆಳೆ ಬೆಳೆಯುವುದು ಒಂದೇ ದಾರಿ. ನಮ್ಮಲ್ಲಿರುವ ಭೂಮಿಯ ಯೋಗ್ಯತೆಗೆ ಅನುಸರಿಸಿಕೊಂಡು ಇರುವ ಪ್ರತಿಯೊಂದು ಭಾಗವನ್ನು ಸಮರ್ಪಕವಾಗಿ ಕೃಷಿಗಾಗಿ ಉಪಯೋಗಿಸಿಕೊಳ್ಳ ಬೇಕು ಎಂಬುದು ಒಂದು ಚಿಂತನೆ. ನಮ್ಮ ಗುರಿ ಹೆಚ್ಚು ಇದ್ದಾಗ ಉತ್ಪಾದನೆ ಹೆಚ್ಚಾದರೆ ಬೇಕಾದಷ್ಟನ್ನು ಉಳಿಸಿಕೊಂಡು ಮಿಕ್ಕಿದ್ದನ್ನು ಇನ್ನೊಬ್ಬರಿಗೆ ಹಂಚಿಕೊಳ್ಳಬಹುದು. ಹೀಗೆ ಕೃಷಿಯೊಂದೇ ಅಲ್ಲ ಎಲ್ಲಾ ಕ್ಷೇತ್ರಗಳಲ್ಲಿಯೂ ಭಾರತ ತನ್ನ ಗುರಿ ಸಾಧಿಸಿದರೆ ವಿಶ್ವದಲ್ಲಿ ಅಗ್ರಗಣ್ಯ ವಾಗುವುದರಲ್ಲಿ ಸಂಶಯವಿಲ್ಲ.
ತಂತ್ರಜ್ಞಾನಗಳ ಬಳಕೆ
- ನೂತನ ತಂತ್ರಜ್ಞಾನಗಳ ಬಳಕೆಯಿಂದ ಕೃಷಿ ಕೆಲಸಗಳು ಸುಲಭವಾಗುತ್ತದೆ.
- ಉತ್ತಮ ತಳಿಯ ಬೀಜಗಳು ಇದ್ದಲ್ಲಿ ಇತರರೊಂದಿಗೆ ಹಂಚಿಕೊಂಡು ಉತ್ಪಾದನೆ ಹೆಚ್ಚಿಸುವಲ್ಲಿ ಸಹಕಾರಿಯಾಗಬಹುದು.
- ಸ್ವತಃ ಕೃಷಿ ಮಾಡಲು ಅನಾನುಕೂಲವಿದ್ದರೆ ಕೃಷಿಭೂಮಿಯನ್ನು ಸಮೀಪದವರೊಂದಿಗೆ ಹಂಚಿಕೊಂಡು ಕೃಷಿ ಮಾಡಲು ಪ್ರೋತ್ಸಾಹಿಸಬಹುದು.
- ಮಣ್ಣಿನ ಪೋಷಕಾಂಶ ಕಂಡುಹಿಡಿಯಲು, ನೀರಾವರಿ ನಿರ್ವಹಿಸಲು, ರೋಗ ಪತ್ತೆಹಚ್ಚಲು, ಕೊಯ್ಲಿನ ಸರಿಯಾದ ಸಮಯ ನಿರ್ಣಯಿಸಲು, ಯಂತ್ರೋಪಕರಣಗಳ ಹಂಚಿಕೆಗೆ, ಹಲವಾರು ಮೊಬೈಲ್ ತಂತ್ರಾಂಶಗಳಿವೆ. ಅವುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬಹುದು.
- ಮಿಗಿತೆಯಾಗುವ ಆಹಾರಧಾನ್ಯಗಳನ್ನು ಸಂಸ್ಕರಿಸಿ ಮೌಲ್ಯವರ್ಧನೆ ಮಾಡುವುದು ಉತ್ತಮ. ಅದರಿಂದ ಅಧಿಕ ಆದಾಯ ಪಡೆಯಬಹುದು.
- ಆಹಾರ ಧಾನ್ಯಗಳನ್ನು ಹಾಳಾಗದಂತೆ ತಡೆಗಟ್ಟುವುದು ಒಂದು ಉತ್ತಮ ಕಾರ್ಯ.
- ಆಹಾರಧಾನ್ಯವನ್ನು ಬಳಸುವವರು ಕೃಷಿಕರನ್ನು ಸಮರ್ಪಕವಾಗಿ ಆದರಿಸುವುದು ಕೂಡ ಮುಖ್ಯ.
ಔಷಧೀಯ ಸಸ್ಯಗಳ ಬೆಳೆಯುವಿಕೆ
ಹಲವಾರು ಔಷಧಗಳನ್ನು ತಯಾರಿಸುವುದು ಸಸ್ಯಗಳಿಂದಲೇ ಆದ್ದರಿಂದ ಮನೆಮದ್ದು ಗಳಿಗೆ ಪ್ರಾಮುಖ್ಯತೆ ಕೊಡುವುದರಲ್ಲಿ ತಪ್ಪೇನಿಲ್ಲ. ಸಾಧ್ಯವಾಗುವ ಔಷಧೀಯ ಸಸ್ಯಗಳನ್ನು ನಮ್ಮ ನಮ್ಮ ಪರಿಸರದಲ್ಲಿ ಬೆಳೆಯುವುದರಿಂದ ಔಷಧಕ್ಕಾಗಿ ಅವಲಂಬನೆಯನ್ನು ಕಡಿಮೆ ಮಾಡಬಹುದು. ಹಲವಾರು ಮನೆಮದ್ದುಗಳನ್ನು ಒದಗಿಸುವ ಔಷಧೀಯ ಗಿಡಗಳನ್ನು ನೆನಪಿಸಿಕೊಳ್ಳಿ. ಇವುಗಳಲ್ಲಿ ಕೆಲವು ಖಂಡಿತವಾಗಿಯೂ ನಮ್ಮ ಪರಿಸರಕ್ಕೆ ಕೃಷಿಗೆ ಅನುಯೋಜ್ಯವಾವಾಗಿದೆ ಎಂಬುದನ್ನು ಮನಗಂಡು ಕೊಳ್ಳಬಹುದು. ಕೆಲವು ನಾಟಿ ವೈದ್ಯ ವಿಧಾನದಲ್ಲಿ ಫೈಟೋಕೆಮಿಕಲ್ ಗಳ ಸಂಸ್ಕರಣೆ ಹಾಗೂ ಸತ್ವ ಸಂಗ್ರಹಿಸುವಿಕೆ ತಿಳಿದಿರುವ ವಿಚಾರ. ಇವುಗಳನ್ನು ಪರಸ್ಪರ ಚರ್ಚೆ ಹಾಗೂ ಹಂಚಿಕೊಳ್ಳುವಿಕೆ ಮೂಲಕ ಉಪಯುಕ್ತ ಮಾಹಿತಿಗೆ ಪ್ರಚಾರ ನೀಡಬಹುದು.
ಹಣ್ಣು-ತರಕಾರಿಗಳ ಉತ್ಪಾದನೆ
ಹಣ್ಣುಗಳಲ್ಲಿ ಯುವಜನಾಂಗದ ಆಸಕ್ತಿ ಜಾಸ್ತಿ. ಅದೇ ರೀತಿ ತರಕಾರಿಗಳು ಪೋಷಕಾಂಶಭರಿತವಾಗಿಯೂ ನಾರು ಮುಂತಾದ ಆರೋಗ್ಯಕ್ಕೆ ಅಗತ್ಯವಾದ ವಸ್ತುಗಳನ್ನು ಪೂರೈಸಲು ಅತ್ಯಗತ್ಯವಾಗಿರುವುದರಿಂದ ಸದಾ ಖರೀದಿದಾರರಿದ್ದಾರೆ.
ಕಾರಣಾಂತರಗಳಿಂದ ಮಾರಾಟವಾಗದೇ ಉಳಿದರೆ ಸಂಸ್ಕರಣೆಗೆ ಅನುಯೋಜ್ಯವಾದ ತರಕಾರಿಗಳನ್ನು ಬೆಳೆಯುವುದರಿಂದ ಸಂದರ್ಭೋಚಿತವಾಗಿ ತೀರ್ಮಾನ ಕೈಗೊಳ್ಳಬಹುದು. ಒಣಗಿಸಿ, ಬೇಯಿಸಿ, ವಿಭಿನ್ನ ರೀತಿಯ ಮೌಲ್ಯವರ್ಧನೆ ಮಾಡುವುದರಿಂದ ಆದಾಯಕ್ಕೆ ಕತ್ತರಿ ಬೀಳುವುದಿಲ್ಲ.
ಸಮಗ್ರ ಕಾರ್ಯರೀತಿಯ ಚಿಂತನೆ ಅಗತ್ಯ
ನಮ್ಮ ದೇಶದ ಸಮಗ್ರ ಅಭಿವೃದ್ಧಿಗೆ ನಾವು ಎಲ್ಲರೂ ಕಾರ್ಯಪ್ರವೃತ್ತರಾಗುವುದು ಅತ್ಯಾವಶ್ಯಕವಾಗಿದೆ. ಸರ್ಕಾರಿ ಕಚೇರಿಗಳಿಂದ ನಿರ್ದೇಶನ ಸಿಗಲು ಕಾಯುವಂತಿಲ್ಲ. ಸ್ವಯಂಪ್ರವೃತ್ತರಾಗಿ ಕೃಷಿ ಕೆಲಸದಲ್ಲಿ ತೊಡಗಿಸಿಕೊಳ್ಳೋಣ. ಎಲ್ಲರೂ ಕೈಜೋಡಿಸಿ ಕೆಲಸ ಮಾಡುವುದರಿಂದ ಜನತೆ ಹತಾಶೆಗೊಳಗಾಗುವುದರಿಂದ ಪಾರಾಗಿಸಬಹುದು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಈ ರೀತಿ ಒಂದುಗೂಡಿ ಮುನ್ನಡೆಯದಿದ್ದರೆ ಮತ್ತೆ ಆಲೋಚಿಸುವುದು ವ್ಯರ್ಥ. ದುರಂತಕ್ಕೀಡಾದ ಆರ್ಥಿಕತೆಯನ್ನು ಎದುರಿಸುವಲ್ಲಿ ಸಮಗ್ರ ಪ್ರಯತ್ನ ಅತ್ಯಗತ್ಯ.
ಸ್ಥಳೀಯಾಡಳಿತದ ಸದಸ್ಯರು ಸಾಧ್ಯವಾದಲ್ಲಿ ಕೈಜೋಡಿಸಿದರೆ ಸರ್ಕಾರಿ ಸೌಲಭ್ಯಗಳನ್ನು ಉಪಯುಕ್ತ ರೀತಿಯಲ್ಲಿ ಹಂಚಿಕೊಂಡು ಕೃಷಿಕರಿಗೆ ಸಹಾಯಹಸ್ತ ನೀಡಬಹುದು. ಇದರ ಅರ್ಥ ಆರ್ಥಿಕ ಸಹಕಾರವಲ್ಲ, ಸಂಪನ್ಮೂಲಗಳ ಸಹಕಾರ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಪ್ರಯೋಜನವನ್ನು ಕೃಷಿಗೆ ಒದಗಿಸುವುದರಲ್ಲಿ ತಪ್ಪೇನಿಲ್ಲ.
ಕಡಿಮೆ ವೆಚ್ಚದ ಕೃಷಿ
ಆಧುನಿಕ ತಂತ್ರಜ್ಞಾನಗಳನ್ನು ಬಳಸಿ ಕಡಿಮೆ ವೆಚ್ಚದ ಕೃಷಿಯನ್ನು ಮಾಡುವಲ್ಲಿ ಹೆಚ್ಚಿನ ಆಸಕ್ತಿಯನ್ನು ತೋರಬೇಕಾಗಿದೆ. ಸ್ಥಳೀಯ ಸಂಪನ್ಮೂಲಗಳನ್ನು ಬಳಸಿ ಮಾರುಕಟ್ಟೆಗೆ ಉಂಟಾಗುವ ಖರ್ಚನ್ನು ಕಡಿತಗೊಳಿಸಬೇಕಿದೆ. ಇನ್ನೊಂದು ದಾರಿಯೆಂದರೆ ಕೃಷಿಕನಿಗೆ ಇರುವಂತಹ ಇತರ ಖರ್ಚುಗಳು ಅದರಲ್ಲೂ ಮುಖ್ಯವಾಗಿ ಸಮಾರಂಭಗಳಿಗೆ ತಗಲುವಂತಹ, ವಾಹನಗಳು, ಅನಾವಶ್ಯಕ ಕಾರ್ಮಿಕರ ಖರ್ಚು ಮುಂತಾದವುಗಳನ್ನು ಕಡಿತಗೊಳಿಸಬಹುದು.
ಅಗ್ರಿಟೆಕ್ಚರ್ ಅಥವಾ ವರ್ಟಿಕಲ್ ಫಾರ್ಮಿಂಗ್
ಪಟ್ಟಣಗಳ ಬಹುಮಹಡಿಯ ಕಟ್ಟಡಗಳ ಮೇಲೆ, ಬಾಲ್ಕನಿ, ತಾರಸಿ ಮುಂತಾದವುಗಳಲ್ಲಿ ಕೃಷಿ ಮಾಡುವ ಬಗ್ಗೆ, ಸಾಕಷ್ಟು ಚಿಂತನೆ ವಾಸ್ತು ಶಿಲ್ಪಿಗಳು ಮಾಡಿ ಅದಕ್ಕೆ ಅಗ್ರಿಟೆಕ್ಚರ್ ಅಥವಾ ಬಹುಸ್ತರ ಕೃಷಿ ಎಂಬುದಾಗಿ ವಿಶ್ಲೇಷಿಸಿದ್ದಾರೆ. ಇದರ ಮೂಲಕ ಇರುವ ಸೌಲಭ್ಯ ಹಾಗೂ ಸಂಪನ್ಮೂಲಗಳ ಸದ್ಬಳಕೆ ಮಾಡಿ ಸ್ವಯಂಪ್ರಾಪ್ತಿ ಹೊಂದುವತ್ತ ಹೆಚ್ಚು ಹೆಚ್ಚು ಜನರು ಯೋಚಿಸಿದಾಗ ಪಟ್ಟಣದ ಮಾರುಕಟ್ಟೆಗಳ ಮೇಲಿರುವ ಒತ್ತಡ ಕಡಿಮೆಯಾಗಿ ಸಾಗಾಟ ಹಾಗು ಇಂಧನದ ಖರ್ಚು ಉಳಿಸಬಹುದು. ಇದಕ್ಕೆ ಸಮಾನವಾದ ಇತರ ಇಂಧನ ಉಳಿಕೆಯ ಹಲವಾರು ಮಾರ್ಗಗಳನ್ನು ಕಂಡುಕೊಂಡು ಪರಸ್ಪರ ವಿಚಾರವಿನಿಮಯ ಮಾಡಿಕೊಳ್ಳಬೇಕಿದೆ.
ಅತ್ಯಮೂಲ್ಯ ಕೃಷಿ ಉತ್ಪನ್ನಗಳು
ಜನರ ಉಪಯೋಗಕ್ಕೆ ಬೇಕಾಗುವಂತಹ ಉತ್ತಮ ತಳಿಗಳನ್ನು ಅದೇ ರೀತಿಮಾರುಕಟ್ಟೆಯಲ್ಲಿ ಅತಿ ಹೆಚ್ಚು ಖರೀದಿಸಲ್ಪಡುವ ಉತ್ಪನ್ನಗಳ ಕೃಷಿ ಮಾಡುವುದರಿಂದ ಹೆಚ್ಚು ಆದಾಯ ಪಡೆಯಬಹುದು. ಇವು ಅರಿತ ವಿಚಾರಗಳು ಆದರೂ ಇವುಗಳ ಬಗ್ಗೆ ಸ್ವಲ್ಪ ಹೆಚ್ಚು ಚಿಂತನೆ ಅಗತ್ಯವಿದೆ. ನಮ್ಮಲ್ಲೇ ಬೆಳೆಯಬಹುದಾದಂತಹ ಅತ್ಯಮೂಲ್ಯವಾದ ಕೆಲವು ತಳಿಗಳು ನಾವು ಈಗಲೂ ಕೂಡ ಆಮದು ಮಾಡುತ್ತಿದ್ದೇವೆ.
ಒಟ್ಟಿನಲ್ಲಿ ಹೇಳುವುದಾದರೆ ಒಂದು ಸಮಗ್ರವಾದ ಚಿಂತನೆಯ ಅಗತ್ಯ ಕೃಷಿವಲಯದಲ್ಲಿ ನಡೆಯಬೇಕಿದೆ. ಕೃಷಿ ಕಾರ್ಯಕ್ರಮದ ಸುಸ್ಥಿರತೆಯೊಂದಿಗೆ ಕೃಷಿ ಮಾಡುವ ಕೃಷಿಕನಿಗೆ ಹಾಗೂ ದೇಶಕ್ಕೆ ಸುಸ್ಥಿರತೆಯನ್ನು ತಂದುಕೊಡುವಲ್ಲಿ ಕೃಷಿ ಬೆನ್ನೆಲುಬಾಗಿ ನಿಲ್ಲಬೇಕಾದಂತಹ ದಿನಗಳು ಮುಂದಿನವು. ಕೃಷಿ ವಲಯವು ಸಾಧನೆಯತ್ತ ಮುನ್ನಡೆದರೆ ಜಾಗತಿಕವಾಗಿ ಖಂಡಿತವಾಗಿಯೂ ಮುನ್ನಡೆ ಸಾಧಿಸಲು ಸಾಧ್ಯವಿದೆ. ನಾವೆಲ್ಲರೂ ಕೃತ ಸಂಕಲ್ಪರಾಗಿ ಮುನ್ನಡೆಯೋಣ.

– ಹಳೆಮನೆ ಮುರಳಿಕೃಷ್ಣ
hmkrishna@gmail.com
ಸಮಯೋಚಿತ ಲೇಖನ