ಸಾವಯವ ಕೃಷಿಯಲ್ಲಿ ಸ್ಥಳೀಯವಾಗಿ ಸಂಪದ್ಭರಿತ ಎರೆಗೊಬ್ಬರ ತಯಾರಿ

ಕೃಷಿ ಭೂಮಿಯಲ್ಲಿ ಹಾಗೂ ಪರಿಸರದಲ್ಲಿ ಸಿಗುವಂತಹ ತ್ಯಾಜ್ಯಗಳನ್ನು ಸಾವಯವ ರೀತಿಯಲ್ಲಿ ಬಳಸುವುದರಿಂದ ಅದರ 70% ಪುನರ್ ಉಪಯೋಗ ಮಾಡಿ ವ್ಯರ್ಥವಾಗುವ ಕಸದಿಂದ ಆರ್ಥಿಕ ಗಳಿಕೆಗೆ ರಸ ಭರಿತ ಒಳಸುರಿ ಪಡೆದುಕೊಳ್ಳಬಹುದು ಎಂಬ ಅಭಿಪ್ರಾಯ ವ್ಯಕ್ತ ಪಡಿಸಲಾಯಿತು.

ಈ ಸಂವಾದ ಕಾರ್ಯಕ್ರಮಗಳು ಆಗಸ್ಟ್ 8 ಹಾಗೂ 15 ರಂದು ಪಯಸ್ವಿನಿ.com ವೇದಿಕೆಯಲ್ಲಿ ಕ್ಲಬ್ ಹೌಸ್ ಮೊಬೈಲ್ ಫೋನ್ ಮಾಧ್ಯಮದ ಮೂಲಕ ನಡೆಯಿತು. ಕೃಷಿಕರು ಸ್ವಕ್ಷೇತ್ರದಲ್ಲಿ ಅವರವರ ಸಂಪನ್ಮೂಲಗಳನ್ನು ಬಳಸಿಕೊಂಡು ಉತ್ತಮವಾದ ಎರೆಗೊಬ್ಬರ ತಯಾರಿ ಮಾಡಿಕೊಂಡು ಅಮೂಲ್ಯವಾದ ಸಾವಯವ ಕೃಷಿ ಒಳಸುರಿ ಉತ್ಪಾದನೆಯನ್ನು ಮಾಡಬಹುದು.

ಸಂಪನ್ಮೂಲ ವ್ಯಕ್ತಿಗಳಾಗಿ ಡಾ| ಹರೀಶ್ ಜೋಶಿ, ನಿವೃತ್ತ ಪ್ರಾಣಿಶಾಸ್ತ್ರ ಮುಖ್ಯಪ್ರಾಧ್ಯಾಪಕರು, ಸೈಂಟ್ ಅಲೋಶಿಯಸ್ ಕಾಲೇಜ್, ಮಂಗಳೂರು (ಮೊಬೈಲ್: 09900094951), ಶ್ರೀ ಬಾಲಕೃಷ್ಣ ವಿ. ಅಡ್ಕಸ್ಥಳ, ತಂತ್ರಜ್ಞಾನ ಅಧಿಕಾರಿ, ನಿವೃತ್ತರು ಸಿಪಿಸಿಆರ್ ಐ ಕಾಸರಗೋಡು (ಮೊಬೈಲ್: 09497137360),  ಶ್ರೀ ಬಾಲಕೃಷ್ಣ ಪೂಜಾರಿ, ಕೃಷಿ ಕ್ಷೇತ್ರ ನಿರ್ವಾಹಕರು, ಧರ್ಮಸ್ಥಳ (ಮೊಬೈಲ್: 07259721345) ಹಾಗೂ ಪ್ರೊ. ಸುಬ್ರಹ್ಮಣ್ಯ ಭಟ್ಟ, ಕೈಲಾರು, ಪ್ರಗತಿಪರ ಕೃಷಿಕರು ಇವರು ಭಾಗವಹಿಸಿದರು.

Bricks
Partitions
Cement

ಕಸದಿಂದ ರಸ ತಯಾರಿಸಿದ ನುರಿತ ವ್ಯಕ್ತಿಗಳ ಅನುಭವದ ಮಾತುಗಳು

ಸಿಪಿಸಿಆರ್ ಐ ಕಾಸರಗೋಡು ಇಲ್ಲಿ ನಡೆಸುವಂತಹ ಎರೆಗೊಬ್ಬರ ತಯಾರಿಸುವ ವಿಧಾನವನ್ನು ಶ್ರೀ ಬಾಲಕೃಷ್ಣ ತಿಳಿಸಿಕೊಟ್ಟರು. ತೆಂಗಿನತೋಟದ ಮುಖ್ಯ ತ್ಯಾಜ್ಯವಾದ ತೆಂಗಿನಗರಿಯಿಂದ ಎರೆಗೊಬ್ಬರ ಉತ್ಪಾದನಾ ರೀತಿ ಅದನ್ನು ಸಮರ್ಪಕವಾಗಿ 3-4 ತಿಂಗಳಿನಲ್ಲಿ ಸಂಪೂರ್ಣವಾಗಿ ಎರೆಗೊಬ್ಬರವಾಗಿ ಪರಿವರ್ತಿಸಲು ಮಾಡುವ ವಿಧಾನ ಇದರ ಬಗ್ಗೆ ವಿವರವಾದ ಮಾಹಿತಿಯನ್ನು ತಿಳಿಸಿಕೊಟ್ಟರು.

ತೆಂಗಿನ ಗರಿಗಳನ್ನು ಶೇಖರಿಸಿ ಕೂಡಿಹಾಕಿ ಅದು ಕಂಪೋಸ್ಟ್ ಆಗಲು ಆರಂಭವಾಗುವ ಸಂದರ್ಭದಲ್ಲಿ ಅದನ್ನು ಹೆಚ್ಚಿಹಾಕಿ ಸೆಗಣಿಯ ನೀರಿನೊಂದಿಗೆ ಮಿಶ್ರಮಾಡಿ ಸಿಪಿಸಿಆರ್ ಐ ಯವರಿಂದಲೇ ಸಂಗ್ರಹಿಸಿದ ಯುಡ್ರಿಲಸ್ ಜಾತಿಯ ರೈತನ ಮಿತ್ರ ಎರೆಹುಳದ ಮೂಲಕ ಸಮರ್ಪಕ ತೇವಾಂಶದಲ್ಲಿ ನಿಯಮಿತವಾಗಿ ಬೆರೆಸುತ್ತಾ ತಯಾರಿಸುವ ವಿಧಾನವನ್ನು ಹಂಚಿಕೊಂಡರು.

ಇದಕ್ಕಾಗಿ ಸಂಸ್ಥೆಯಲ್ಲಿ ತಂತ್ರಜ್ಞಾನ ಹಸ್ತಾಂತರಣ, ಅದೇ ರೀತಿ ತರಬೇತಿಯನ್ನು ಕೂಡಾ ನೀಡಲಾಗುತ್ತಿದೆ. ಸಾಕಷ್ಟು ಜನರು ಪ್ರಯೋಜನ ಪಡೆಯುತ್ತಿದ್ದಾರೆ ಎಂಬ ಬಗ್ಗೆ ತಿಳಿಸಿಕೊಟ್ಟರು.

ಎರೆಹುಳಗಳು ಕಾರ್ಯಪ್ರವೃತ್ತಿಯ ಬಗ್ಗೆ ಸವಿವರವಾಗಿ ತಿಳಿಸಿದ ಡಾ| ಹರೀಶ್ ಜೋಶಿ ಇವು ಯಾವ ರೀತಿ ಮಣ್ಣನ್ನು ಸಡಿಲಮಾಡಿ ಬೇರುಗಳಿಗೆ ಅನುವುಮಾಡಿಕೊಡುತ್ತದೆ ಅಷ್ಟೇ ಅಲ್ಲದೆ ಸಂಪೂರ್ಣ ಕಸವನ್ನು ಜೀರ್ಣಿಸಿ ಅದರ ಅನಪೇಕ್ಷಿತ ವಸ್ತುಗಳನ್ನು ಇಲ್ಲದಂತೆ ಮಾಡಿ ಕೃಷಿಗೆ ಯೋಗ್ಯವಾದ ಗೊಬ್ಬರವಾಗಿ ಪರಿವರ್ತಿಸಿ ಆರೋಗ್ಯವಂತ ಮಣ್ಣಿಗಾಗಿ ಕಪ್ಪು ಚಿನ್ನವೆಂಬ ಎರೆಗೊಬ್ಬರ ಕೊಡುತ್ತದೆ ಎಂಬುದನ್ನು ವಿವರಿಸಿ ಕೊಟ್ಟರು.

ಅವಶ್ಯಕ ಪ್ರಮಾಣದಲ್ಲಿ ಸಾರಜನಕ, ರಂಜಕ, ಪೊಟ್ಯಾಶ್, ಮೆಗ್ನೀಶಿಯಂ, ಕಬ್ಬಿಣ, ಕ್ಯಾಲ್ಸಿಯಂ, ಬೆಳವಣಿಗೆ ಹೆಚ್ಚಿಸುವಂತಹ ಉಪಯುಕ್ತ ಬ್ಯಾಕ್ಟೀರಿಯಾ, ಬೆಳವಣಿಗೆ ಪ್ರಚೋದಕ ಹಾರ್ಮೋನುಗಳು ಮುಂತಾದವುಗಳನ್ನು ಸಮತೋಲಿತ ಪ್ರಮಾಣದಲ್ಲಿ ಸಿಗುವಂತೆ ಮಾಡುವ ಒಂದು ಅತ್ಯುತ್ತಮ ಗೊಬ್ಬರವು ಎರೆಗೊಬ್ಬರ ಆಗಿದೆ. ಜೊತೆಗೆ ಈ ಗೊಬ್ಬರದಲ್ಲಿ ಇನ್ಯಾವುದೇ ಗೊಬ್ಬರದಲ್ಲಿ ಲಭಿಸದ ಹ್ಯೂಮಸ್ ನ ಪ್ರಮಾಣವು ಸಾಕಷ್ಟು ಇದೆ.

ಸಾಮಾನ್ಯವಾಗಿ ಇರುವಂತಹ ತ್ಯಾಜ್ಯದಲ್ಲಿ 70 ಶತಾಂಶ ಎರೆಗೊಬ್ಬರಕ್ಕೆ ಯೋಗ್ಯವಾದ ತ್ಯಾಜ್ಯ ಇರುವುದಾದರೆ ಅದರಲ್ಲಿ ಕೇವಲ 10 ಶತಾಂಶ ವನ್ನು ಎರೆಹುಳ ಹೀರಿಕೊಂಡು 90 ಸತ್ಯಾಂಶವನ್ನು ಉತ್ತಮ ಗೊಬ್ಬರವಾಗಿ ಪರಿವರ್ತನೆ ಮಾಡಿ ನೀಡುವುದು ಎಂದು ತಿಳಿಸಿದರು.

ತ್ಯಾಜ್ಯ ನಿರ್ವಹಣೆಯಲ್ಲಿ ಎರೆಗೊಬ್ಬರ ತಯಾರಿ ಘಟಕ ಉಪಯುಕ್ತವಾಗಬಲ್ಲದು ಹಾಗೂ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ವ್ಯವಸ್ಥೆಯನ್ನು ಮಾಡಬೇಕು ಎಂದು ಅಭಿಪ್ರಾಯಪಟ್ಟರು.

ಧರ್ಮಸ್ಥಳದಲ್ಲಿ ಅಡುಗೆ ಶಾಲೆಯ ಉಳಿಕೆ ಆದಂತಹ ಸಾಕಷ್ಟು ಆಹಾರ ಉಳಿಕೆಗಳನ್ನು ಸಮರ್ಥವಾಗಿ ನಿರ್ವಹಿಸಿ ಅದನ್ನು ಬೇರೆಯೇ ಸಂಸ್ಕರಿಸಿ ಆಮೇಲೆ ಎರೆಗೊಬ್ಬರ ಉತ್ಪಾದನೆ ಬಳಸುವುದಾಗಿ ಶ್ರೀ ಬಾಲಕೃಷ್ಣ ಪೂಜಾರಿ ತಿಳಿಸಿದರು. ತ್ವರಿತವಾಗಿ ಕಂಪೋಸ್ಟ್ ತಯಾರಿಗಾಗಿ ಮೊದಲು ತ್ಯಾಜ್ಯಗಳನ್ನು ಅಡಿಕೆ ತೋಟದ ತ್ಯಾಜ್ಯಗಳನ್ನು ಕೂಡ ಪ್ರೊಸೆಸಿಂಗ್ ಮಾಡಿ ನಂತರ ಅವು ಹದಗೊಂಡ ಮೇಲೆ ಅದನ್ನು ಎರೆಗೊಬ್ಬರ ತೊಟ್ಟಿಗೆ ಸ್ಥಳಾಂತರಿಸಿ ಎರೆಗೊಬ್ಬರ ತಯಾರಿಸುವ ಅವರು ಕಳೆದ 18 ವರ್ಷದಿಂದ ಸಫಲವಾಗಿ ಎರೆಗೊಬ್ಬರ ತಯಾರಿಯನ್ನು ಮಾಡುತ್ತಿರುವುದಾಗಿಯೂ ಇದನ್ನು ನಿರ್ವಹಿಸಲು ತುಂಬಾ ಚಟುವಟಿಕೆ ಸಾಂದರ್ಭಿಕವಾಗಿರಬೇಕು ಎಂದು ತಿಳಿಸಿದರು. ಧರ್ಮಸ್ಥಳದ ಸಮೃದ್ಧಿಎರೆಗೊಬ್ಬರ ಘಟಕದಿಂದ 30 ತೊಟ್ಟಿಗಳಲ್ಲಿ ಗೊಬ್ಬರ ತಯಾರಿ ನಡೆಸಲಾಗುತ್ತಿದೆ ಹಾಗೂ ಕಳೆದ 18 ವರ್ಷಗಳಿಂದ ಕಾರ್ಯಕ್ರಮ ಸಕ್ರಿಯವಾಗಿ ನಡೆಯುತ್ತಿದೆಯೆಂಬ ಖುಷಿಯನ್ನು ಕೇಳುಗರೊಂದಿಗೆ ಹಂಚಿಕೊಂಡರು.

ಸಾಮಾನ್ಯ ವಿವರಣೆಯ ನಂತರ ಪ್ರಶ್ನೋತ್ತರ ಕಾರ್ಯಕ್ರಮ ನಡೆಯಿತು.

ಆಸಕ್ತರ ಸಂಶಯಗಳಿಗೆ ಅನುಭವೀ ತಜ್ಞರಿಂದ ಉಪಯುಕ್ತ ಸಲಹೆಗಳು

ಎರೆಗೊಬ್ಬರದ ಯಾರಿಗೆ ಬೇಕಾಗುವ ಸಾಮಾನ್ಯ ತ್ಯಾಜ್ಯಗಳು ಯಾವ್ಯಾವು?

ಸಸ್ಯಜನ್ಯ ವಾದ ಯಾವುದೇ ತ್ಯಾಜ್ಯವನ್ನು ಉಪಯೋಗಿಸ ಬಹುದು ಆದರೆ ನೀರಿನ ಅಂಶ ಕಡಿಮೆಯಿರುವ ಒಣತ್ಯಾಜ್ಯ ವಾದರೆ ಉತ್ತಮ. ತರಗೆಲೆಗಳು, ತೆಂಗಿನ ಗರಿ, ಅಡಿಕೆಯ ಸೋಗೆ, ಅಡುಗೆ ತ್ಯಾಜ್ಯಗಳು ಮುಂತಾದುವುಗಳನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ.

ಕೋಳಿ ಫಾರ್ಮಿನಲ್ಲಿ ಕೋಳಿಗಳನ್ನು ಮಾಂಸಕ್ಕಾಗಿ ಉಪಯೋಗಿಸಿ ನಂತರ ಉಳಿಯುವ ತ್ಯಾಜ್ಯವನ್ನು ಎರೆಗೊಬ್ಬರಕ್ಕೆ ಉಪಯೋಗಿಸಬಹುದೇ?

ಸಾಧ್ಯವಿಲ್ಲ. ಇಂತಹ ತ್ಯಾಜ್ಯಗಳನ್ನು ಅನೇರೋಬಿಕ್ ಡಿಕಂಪೋಸಿಷನ್ ನಿಗೆ ಆಗಿ ಪ್ರತ್ಯೇಕ ಕಾಂಪೋಸ್ಟ್ ಮಾಡಿ ಅದನ್ನು ಚೆನ್ನಾಗಿ ಮುಚ್ಚಿ ಸಂಸ್ಕರಣೆ ಮಾಡುವುದು ಉತ್ತಮ. ಎರೆ ಗೊಬ್ಬರಕ್ಕೆ ಈ ತ್ಯಾಜ್ಯ ಉಪಯೋಗವಿಲ್ಲ.

ಎರೆಗೊಬ್ಬರ ತಯಾರಿಸಲು ಬೇಕಾದ ಸೌಕರ್ಯಗಳು ಏನೇನು?

ಒಂದು ಗೊಬ್ಬರದ ತೊಟ್ಟಿ, ತ್ಯಾಜ್ಯ ಸಂಪನ್ಮೂಲ, ನೀರಾವರಿ ವ್ಯವಸ್ಥೆ, ಶ್ರಡ್ಡರ್ ಹಾಗೂ ಅತಿಯಾದ ಬಿಸಿಲು ಹಾಗೂ ಅತಿಯಾದ ಮಳೆಯಿಂದ ಸಂರಕ್ಷಣೆಗೆ ಮಾಡಿನ ವ್ಯವಸ್ಥೆ.

ಗೊಬ್ಬರದ ತೊಟ್ಟಿಯನ್ನು ಯಾವ ರೀತಿ ನಿರ್ಮಾಣ ಮಾಡಬಹುದು?

10 ಅಡಿ ಉದ್ದ x 4 ಅಡಿ ಅಗಲ x 3 ಅಡಿ ಎತ್ತರ ಇರುವಂತ ತೊಟ್ಟಿಗಳನ್ನು ನಿರ್ಮಿಸುವುದು ಉತ್ತಮ. ಇದನ್ನು ಸಿಮೆಂಟ್ ಅಥವಾ ಆವೆಮಣ್ಣಿನ ಇಟ್ಟಿಗೆಯಿಂದ ಕಟ್ಟುವುದು ಉತ್ತಮ.

ಮೇಲೆ ಹೇಳಿದ ಅಳತೆಯ ತೊಟ್ಟಿಯಲ್ಲಿ ಎಷ್ಟು ಗೊಬ್ಬರ ಮಾಡಬಹುದು?

ಇಂತಹ ತೊಟ್ಟಿಯಲ್ಲಿ ಸಾಮಾನ್ಯ ಒಂದು ಟನ್ ತ್ಯಾಜ್ಯವನ್ನು ಕಾಂಪೋಸ್ಟಿಂಗ್ ಮಾಡಲು ಸಾಧ್ಯ, ಇದರಿಂದ ಸುಮಾರು 600 ಕೆಜಿ ಎರೆಗೊಬ್ಬರ ಲಭಿಸುವುದು.

Earthworm
Composting Stage2
Earthworms Eudrilus
Vermicompost

ಎರೆಗೊಬ್ಬರ ಮಾಡಲು ಸೂಕ್ತ ಸಮಯ ಯಾವುದು?

ವರ್ಷದ ಎಲ್ಲಾ ಕಾಲದಲ್ಲೂ ಎರೆಗೊಬ್ಬರವನ್ನು ಮಾಡಬಹುದು. ಕೇವಲ ತೇವಾಂಶ ನಿರ್ವಹಣೆಯಷ್ಟೇ ಮುಖ್ಯ. ಯಾವಾಗ ಗೊಬ್ಬರ ನೀಡಬೇಕಾಗುತ್ತದೆ ಎಂಬುದನ್ನು ಮನಗಂಡು ಅದಕ್ಕೆ ಮೂರು ಅಥವಾ ನಾಲ್ಕು ತಿಂಗಳು ಮುಂಚಿತವಾಗಿ ಎರೆಗೊಬ್ಬರ ತಯಾರಿಕೆ ಹಚ್ಚಿದರೆ ನಮಗೆ ಸಕಾಲಕ್ಕೆ ಎರೆಗೊಬ್ಬರ ಲಭ್ಯವಾಗುತ್ತದೆ.

ಒಂದು ಬಾರಿ ಎರೆಗೊಬ್ಬರ ಮಾಡಲು ಎಷ್ಟು ಸಮಯ ಅವಶ್ಯಕತೆ ಇದೆ?

ಸಾಮಾನ್ಯವಾಗಿ ಬೇಗನೆ ಕೊಳೆಯುವಂತಹ ಪದಾರ್ಥಗಳು 3 ತಿಂಗಳಲ್ಲಿ ಸಂಪೂರ್ಣವಾಗಿ ಎರೆಗೊಬ್ಬರವಾಗಿ ಲಭಿಸುವುದು. ಗಟ್ಟಿಯಾದ ತೆಂಗಿನಗರಿಯಂತಹ ಎಲೆಗಳು ಹೆಚ್ಚು ಸಮಯ ತೆಗೆದುಕೊಳ್ಳುವ. ನಾಲ್ಕರಿಂದ ಆರು ತಿಂಗಳಿನವರೆಗೂ ಬೇಕಾಗಬಹುದು.

ಒಂದು ತೊಟ್ಟಿಗೆ ಎಷ್ಟು ಎರೆಹುಳ ಬೇಕಾಗುತ್ತದೆ?

ಒಂದು ಕೆಜಿ ತ್ಯಾಜ್ಯಕ್ಕೆ ಒಂದು ಹುಳದಂತೆ ಸಾಮಾನ್ಯ 1000 ಹುಳಗಳು ಬೇಕಾಗಬಹುದು. ಸರಾಸರಿ ಒಂದು ಬಾರಿ ಕಂಪೋಸ್ಟ್ ಮಾಡುವ ಸಂದರ್ಭದಲ್ಲಿ ಒಂದು ಹುಳ ಸುಮಾರು 34 ಕೆಜಿ ಜೈವಿಕ ತ್ಯಾಜ್ಯವನ್ನು ತಿನ್ನುತ್ತದೆ.

ಎರೆಗೊಬ್ಬರವನ್ನು ಹೇಗೆ ಶೇಖರಿಸುವುದು?

ಎರೆಗೊಬ್ಬರ ಶೇಖರಣೆಗೆ ಸುಮಾರು 10 ದಿನ ಮೊದಲೇ ನೀರಾವರಿ ಸ್ಥಗಿತಗೊಳಿಸಬೇಕು. ಹೆಚ್ಚಿನ ನೀರನ್ನು ತೊಟ್ಟಿಯ ಕೆಳ ಬದಿಯಿಂದ ಟ್ಯಾಪಿನ ಮೂಲಕ ಸೋಸಿ ತೆಗೆಯಬಹುದು. ಈ ಸೋಸಿ ತೆಗೆದ ನೀರು ವರ್ಮಿವಾಶ್ ಎಂಬ ಒಂದು ಅಮೂಲ್ಯ ಸಸ್ಯ ವರ್ಧಕ ಉತ್ಪನ್ನ. ಇದನ್ನು ತೆಳುವಾಗಿಸಿ (3%) ತರಕಾರಿ ಮುಂತಾದ ಕೃಷಿ ಸಸ್ಯಗಳಿಗೆ ಸಿಂಪಡಿಸಬಹುದು ಹಾಗೂ ಉತ್ತಮ ಇಳುವರಿ ಪಡೆಯಬಹುದು.

ಎರೆಗೊಬ್ಬರ ಶೇಖರಿಸಲು ಅದನ್ನು ತೊಟ್ಟಿಯಿಂದ ಕೈಗಳಿಂದಲೇ ತೆಗೆಯಬೇಕು. ಯಾವುದೇ ಪರಿಕರಗಳನ್ನು ಬಳಸಬಾರದು. ಲೋಹದ ಪರಿಕರಗಳನ್ನು ಬಳಸುವುದರಿಂದ ಹುಳಗಳಿಗೆ ಹಾನಿಯುಂಟಾಗುತ್ತದೆ. ಹೀಗೆ ಶೇಖರಿಸಿದ ಗೊಬ್ಬರವನ್ನು ಹೀಪಿಂಗ್ ಮಾಡುವುದರಿಂದ ಎರೆಹುಳಗಳು ತಳಭಾಗಕ್ಕೆ ಹೋಗುತ್ತವೆ. ರಾಶಿಯ ಮೇಲೆ ಬದಿಯಿಂದ ಎರೆಗೊಬ್ಬರವನ್ನು ತೆಗೆದು ಚೀಲಗಳಲ್ಲಿ ತುಂಬಿಸಬಹುದು. ಸಿಪಿಸಿಆರ್ ಐ ಯಲ್ಲಿ ಇದಕ್ಕಾಗಿ ನೂತನ ಪುಶ್ಪುಲ್ ತಂತ್ರಜ್ಞಾನ ಬಳಸುತ್ತಾರೆ.

ಹುಳಗಳನ್ನು ಹೆಕ್ಕಿ ತೆಗೆದು ಅವಶ್ಯಕವಿದ್ದಷ್ಟು ಇನ್ನೊಂದು ತೊಟ್ಟಿಗೆ ಬಿಡಬಹುದು ಅಥವಾ ಹುಳಗಳನ್ನು ಅಗತ್ಯವಿದ್ದವರಿಗೆ ಮಾರಬಹುದು.

ಹೀಗೆ ಎರೆಗೊಬ್ಬರ, ಎರೆಜಲ ಹಾಗೂ ಎರೆಹುಳ ಎಂಬ ಮೂರು ರೀತಿಯ ಉತ್ಪನ್ನಗಳನ್ನು ವಾಣಿಜ್ಯವಾಗಿ ಆದಾಯಕರ ರೀತಿಯಲ್ಲಿ ನಿರ್ವಹಿಸಬಹುದು.

ಎರೆಹುಳಗಳು ಎಷ್ಟು ವಿಧ?

Eudrilus eugeniae, Eisenia fetida ಮತ್ತು Perionyx excavatus ಎಂಬ ಮೂರು ವಿಧದ ಹುಳ ಎರೆ ಗೊಬ್ಬರ ಮಾಡುತ್ತವೆ. ಇದರಲ್ಲಿ Eudrilus euginae ಉತ್ತಮ ಎಂಬ ಅಭಿಪ್ರಾಯ ಇದೆ.

ಕೆಲವು ಕಡೆ ಶಿಫಾರಸು ಮಾಡಲಾದ 5.5ಮೀಟರ್ x 2.7 ಮೀಟರ್ x 1 ಮೀಟರ್ ಅಳತೆಯ ಎಷ್ಟು ಸೂಕ್ತ?

ಈ ಅಳತೆ ಅಷ್ಟು ಸೂಕ್ತವಲ್ಲ. ಕಬ್ಬಿಣದ ಪರಿಕರಗಳನ್ನು ಬಳಸುವಂತೆ ಇಲ್ಲವಾದ್ದರಿಂದ ಕೈ ಚಾಚಿದಾಗ ನಿರೀಕ್ಷಿತ ರೀತಿಯಲ್ಲಿ ನಿರ್ವಹಣೆ ಮಾಡಲು ಸಾಧ್ಯವಾಗುವಂತೆ ಇರಬೇಕು. ಆದ್ದರಿಂದ ತೊಟ್ಟಿಯ ಉದ್ದವನ್ನು ಬೇಕಾದ ರೀತಿಯಲ್ಲಿ ಮಾಡಬಹುದಾದರೂ ಅಗಲ ನಾಲ್ಕು ಅಡಿ ಮೀರುವಂತಿಲ್ಲ. ಎತ್ತರವು ಕೂಡ 3ಅಡಿ ಮೀರಿದಾಗ ನಿರ್ವಹಣೆ ಕಷ್ಟಸಾಧ್ಯ. ಹೆಚ್ಚು ಎತ್ತರಕ್ಕೆ ತ್ಯಾಜ್ಯವನ್ನು ಸೇರಿಸುವುದರಿಂದ ಶಾಖದ ಪ್ರಮಾಣ ಹಾಗೂ ಒತ್ತಡ ಹೆಚ್ಚಾಗಿ ಹುಳಗಳು ಬದುಕುವುದು ಕಷ್ಟವಾಗುತ್ತದೆ. ಆದ್ದರಿಂದ ಎರೆಗೊಬ್ಬರ ಇಳುವರಿ ನಿರೀಕ್ಷಿತ ಪ್ರಮಾಣದಲ್ಲಿ ಸಿಗಲಾರದು.

ಉತ್ತಮ ನಿರ್ವಹಣೆಗೆ 10 ಅಡಿ ಉದ್ದ x 3.5 ಅಡಿ ಅಗಲ ಹಾಗೂ 2.5 ಅಡಿ ಎತ್ತರದ ತೊಟ್ಟಿಗಳು ಬಹಳ ಅನುಕೂಲ.

ಎರೆಗೊಬ್ಬರ ತಯಾರಿಕೆ ತೊಡಕುಗಳೇನು?

ಕಳಪೆ ಮಟ್ಟದ ತ್ಯಾಜ್ಯಗಳು ಎರೆಗೊಬ್ಬರ ತಯಾರಿಕೆ ತೊಡಕನ್ನುಂಟು ಮಾಡುತ್ತವೆ ಅದರಲ್ಲಿರುವ ಪ್ಲಾಸ್ಟಿಕ್ ರಾಸಾಯನಿಕ ಮುಂತಾದ ಸಾಮಗ್ರಿ ಹುಳಗಳನ್ನು ನಾಶಪಡಿಸುತ್ತವೆ. ಎರೆಹುಳ ಬಕ್ಷಕ ಸರಿಸೃಪಗಳು, ಇರುವೆಗಳು, ಹಕ್ಕಿಗಳು, ಹೆಗ್ಗಣ ಮುಂತಾದ ಪ್ರಾಣಿಗಳು ಅದೇ ರೀತಿ ಮಣ್ಣಿನ ಇತರ ಪರಭಕ್ಷಕ ಕೀಟಗಳು ಎರೆಹುಳಗಳನ್ನು ನಾಶಪಡಿಸುತ್ತವೆ. ಇದರ ಹತೋಟಿಗೆ ಹಾಗೂ ಉನ್ಮೂಲನಕ್ಕೆ ತಕ್ಷಣ ಕಾರ್ಯಪ್ರವೃತ್ತರಾಗಬೇಕು. ಗಮನಿಸದಿದ್ದರೆ ತಿಳಿಯದೆಯೇ ಎರೆಹುಳಗಳು ನಾಶಗೊಳ್ಳುತ್ತವೆ.

ಎರೆಗೊಬ್ಬರವನ್ನು ಎಷ್ಟು ಸಮಯ ಶೇಖರಿಸಬಹುದು?

ಸಾಮಾನ್ಯ ಎರಡು ತಿಂಗಳು ಯಾವುದೇ ಗುಣಮಟ್ಟದ ಕೊರತೆ ಇಲ್ಲದೆ ಶೇಖರಿಸಬಹುದು. ಉತ್ತಮ ರೀತಿಯಲ್ಲಿ ಶೇಖರಿಸಿದಲ್ಲಿ 6 ತಿಂಗಳಿನವರೆಗೆ ಮುಂದುವರಿಸಬಹುದು. ಶೇಖರಿಸುವ ಸಮಯದಲ್ಲಿ ಅತಿಯಾದ ತೇವಾಂಶ ಇರಬಾರದು ಇಪ್ಪತ್ತಕ್ಕಿಂತ ಹೆಚ್ಚು ತೇವಾಂಶ ವಿದ್ದಲ್ಲಿ ಗೊಬ್ಬರ ಹಾಳಾಗುತ್ತದೆ.

ಒಬ್ಬ ಉದ್ಯಮಶೀಲ ಯುವಕನಿಗೆ, 100ರಿಂದ 150 ಫ್ಲಾಟುಗಳಲ್ಲಿ, ಅಂದರೆ ಸುಮಾರು 8-10 ಕಾಂಪ್ಲೆಕ್ಸ್ ಅಥವಾ ಒಂದು ಟೌನ್ ಶಿಪ್ ನಿಂದ, ಸಾವಯವ ತ್ಯಾಜ್ಯಗಳನ್ನು ಶೇಖರಿಸಿ, ಸ್ವಂತ ಎರೆಗೊಬ್ಬರ ವ್ಯಾಲ್ಯೂ ಚೈನ್ ಮೂಲಕ ಎಷ್ಟು ವಾರ್ಷಿಕ ಆದಾಯ ಪಡೆಯಬಹುದು? ಇಂತಹ ಒಂದು ಸ್ವೋದ್ಯೋಗ ಮಾದರಿಗೆ ಎಷ್ಟು ಬಂಡವಾಳದ ಅಗತ್ಯ ಬರಬಹುದು?

ಇದು ಒಂದು ಸ್ವೋದ್ಯೋಯೋಗ ಮಾದರಿಯಾಗಿ ಮುಂದುವರೆಸುವುದು ಲಾಭದಾಯಕವಾಗದು. ಮನೆಯ ಅಡಿಗೆ ಕೋಣೆಯ ತ್ಯಾಜ್ಯ ಹಾಗೂ ಉದ್ಯಾನ ತ್ಯಾಜ್ಯಗಳನ್ನು ಒಂದು ಮೈಕ್ರೋ ವರ್ಮಿಕಾಂಪೋಸ್ಟಿಂಗ್ ಬಿನ್ ನ ಮೂಲಕ ಸ್ವಚ್ಛ ಭಾರತದ ಕಾಳಜಿಯಿಂದ ಗೃಹಬಳಕೆಗೆ ಉತ್ತಮವಾಗಿ ಗೊಬ್ಬರ ತಯಾರಿ ಮಾಡಿಕೊಳ್ಳಲು ಸೂಕ್ತ. ಇದರಿಂದ ಫ್ಲ್ಯಾಟ್ ಗಳಲ್ಲಿ ವಾಸಿಸುವವರಿಗೆ ಕೂಡ ಬಾಲ್ಕನಿ ಗಾರ್ಡನ್, ತಾರಸಿ ಕೃಷಿ ಹಾಗೂ ಉತ್ತಮ ತ್ಯಾಜ್ಯ ನಿರ್ವಹಣೆ ಸಾಧ್ಯ. ಒಂದು ಪಟ್ಟಣದಲ್ಲಿ ಹೆಚ್ಚು ಜನ ಇಂತಹ ಚಟುವಟಿಕೆ ಮಾಡುವುದರಿಂದ ಪೇಟೆಯ ಹೊರವಲಯದಲ್ಲಿ ತ್ಯಾಜ್ಯ ಕೂಡುವಿಕೆ ಹಾಗೂ ಇತರ ಕೊಳಚೆಯಿಂದ ಆಗುವ ತೊಂದರೆಗಳು ಕೂಡ ಉಂಟಾಗುವುದಿಲ್ಲ.

ಒಬ್ಬ ಯುವಕನಿಗೆ ಒಂದು ಗ್ರಾಮೀಣ ಕ್ಲಸ್ಟರ್ ನಿಂದ ಅಂದರೆ ಸುಮಾರು 20-30 ಎಕರೆ ತೋಟದ ಪ್ರದೇಶದಿಂದ, ತೆಂಗಿನ ಮರದ ಮಡಲು, ಅಡಕೆ ಮರದ ಸೋಗೆ, ಇತ್ಯಾದಿಗಳನ್ನು ಶೇಖರಿಸಿ, ಸ್ವಂತ ಎರೆಗೊಬ್ಬರ ಯೂನಿಟ್ ಮೂಲಕ ಎಷ್ಟು ವಾರ್ಷಿಕ ಆದಾಯ ಪಡೆಯಬಹುದು? ಇಂತಹ ಒಂದು ಮಾದರಿಗೆ ಎಷ್ಟು ಬಂಡವಾಳದ ಅಗತ್ಯವಿದೆ?

ಆದಾಯ ಹಾಗೂ ನಿರ್ವಹಣಾ ವೆಚ್ಚ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ವ್ಯತ್ಯಾಸವಾಗಬಹುದು ಆದರೆ ಇಂತಹ ಒಂದು ವ್ಯವಸಾಯ ಖಂಡಿತ ಲಾಭದಾಯಕವಾಗಿರುತ್ತದೆ. ಒಂದು ಪರಿಪೂರ್ಣ ಎರೆಗೊಬ್ಬರದ ಘಟಕವನ್ನು ನಿರ್ಮಿಸಲು ಸುಮಾರು 5ಲಕ್ಷ ಬಂಡವಾಳ ಬೇಕಾಗಬಹುದು. ಈ ಹಣವನ್ನು ಎರಡು ವರ್ಷಗಳ ಒಳಗಾಗಿ ತಿರುಗಿ ಪಡೆಯಬಹುದು. ನಂತರ ಕೇವಲ ಉತ್ಪಾದನಾ ವ್ಯವಸ್ಥೆಯ ವೆಚ್ಚ ಮಾತ್ರ ಇರುವುದಲ್ಲದೆ ಇತರ ನಿರ್ವಹಣಾ ವೆಚ್ಚಗಳು ಇರುವುದಿಲ್ಲವಾದ್ದರಿಂದ ಲಾಭದಾಯಕವಾಗಿ ಎರೆಹುಳ, ಎರೆಗೊಬ್ಬರ ಮತ್ತು ವರ್ಮಿವಾಶ್ ಮಾರಾಟ ಮುಂದುವರೆಯುವುದು. ಆದ್ದರಿಂದ ಯುವಕರಿಗೆ ಇದೊಂದು ಆಶಾದಾಯಕ ವ್ಯವಹಾರವಾಗಿದೆ.

ಒಂದು ಸ್ವಸಹಾಯ ಗುಂಪಿನಿಂದ ಒಂದು ಜಿಲ್ಲಾಪಂಚಾಯತ್ ಅಂದರೆ ಸುಮಾರು 8-10 ಚದರ ಕೀ. ಮೀ. ಪ್ರದೇಶದಿಂದ, ಸಾವಯವ ತ್ಯಾಜ್ಯಗಳನ್ನು ಶೇಖರಿಸಿ, ಸ್ವಂತ ಎರೆಗೊಬ್ಬರ ಪ್ಲಾಂಟ್ ಮೂಲಕ ಮಾಡಬಹುದೇ?

ಉದ್ಯಮಶೀಲ ಯುವಕರಿಗೆ ಇದೊಂದು ಉತ್ತಮ ಮಾದರಿಯಾಗಿದೆ. ಸಫಲತೆಗೆ ಯಾವಾಗಲೂ ಪೂರ್ವತಯಾರಿ ಅತ್ಯಗತ್ಯ. ಆದ್ದರಿಂದ ಇದಕ್ಕೆ ಸಮರ್ಪಕವಾದ ಯೋಜನೆಗಳನ್ನು ಹಾಕಿಕೊಂಡು ಮಾಡುವುದರಿಂದ ಉತ್ತಮ ಲಾಭವನ್ನು ಪಡೆಯಲು ಸಾಧ್ಯವಿದೆ. ಪೂರ್ವತಯಾರಿಯ ಭಾಗವಾಗಿ ಕಡಿಮೆಯೆಂದರೆ ನಾಲ್ಕರಿಂದ ಐದು ಎರೆಗೊಬ್ಬರ ತೊಟ್ಟಿಗಳನ್ನು ನಿರ್ಮಿಸಬೇಕು. ನಂತರ ಒಂದಾದರೂ ಹಸುವನ್ನು ಇರಿಸುವುದು ಇದರ ನಿರ್ವಹಣೆಗೆ ತುಂಬ ಉತ್ತಮ. ಇಂತಹ ಉದ್ಯಮಶೀಲ ವ್ಯಕ್ತಿಗಳಿಗೆ ಶ್ರೀ ಕ್ಷೇತ್ರದಲ್ಲಿ ಕೂಡ ತರಬೇತಿ ಕೊಡಬಹುದು. ಮುಂಚಿತವಾಗಿ ಸಂಪರ್ಕಿಸಿ ಅನುಮತಿ ಪಡೆದು ಕೊಳ್ಳುವುದು ಅಗತ್ಯ.

Coconut leaves
Gobar
Hay

ಎರೆಗೊಬ್ಬರ ತಯಾರಿಕೆ ತೊಟ್ಟಿಯನ್ನು ಯಾಕೆ ನಿರ್ಮಿಸಬೇಕು?

ತೆರೆದ ಜಾಗದಲ್ಲಿ ಕಂಪೋಸ್ಟ್ ತಯಾರಿಕೆಯಿಂದ ಅದಕ್ಕೆ ಸಾಕಷ್ಟು ಕ್ರಿಮಿಕೀಟಗಳು ಹಾಗೂ ಮೃಗಗಳ ಹಾವಳಿ ಜಾಸ್ತಿ. ಆದ್ದರಿಂದ ಎರೆಹುಳ ಪರಭಕ್ಷಕಗಳ ಹಾನಿಯಿಂದ ಜೋಪಾನವಾಗಿ ತಯಾರಿಸಲು ಕೇವಲ ತೊಟ್ಟಿಯಷ್ಟೇ ಅಲ್ಲ ಅದಕ್ಕೆ ಇರುವೆ, ಸರ್ಪ, ಹೆಗ್ಗಣ ಮುಂತಾದವುಗಳು ಪ್ರವೇಶಿಸದ ರೀತಿಯಲ್ಲಿ ನೀರ ದಂಡೆ, ಬಲೆ ಅಳವಡಿಸಿದ ಮುಚ್ಚಳ, ಬಿಸಿಲುಮಳೆಯಿಂದ ರಕ್ಷಣೆಗೆ ಸೋಗೆಯ ಚಾವಣಿಯನ್ನು ಕೂಡ ನಿರ್ಮಿಸಿಕೊಳ್ಳುವುದು ಉತ್ತಮ.

ತೋಟದಲ್ಲೆಲ್ಲಾ ಎರೆಹುಳುಗಳ ಸಾನ್ನಿಧ್ಯವಿದೆ ಆದರೂ ತೊಟ್ಟಿಯಲ್ಲಿ ಎರೆಗೊಬ್ಬರವನ್ನು ತಯಾರಿಸಿ ಯಾಕೆ ನೀಡಬೇಕು?

ಮಣ್ಣಿನಲ್ಲಿ ಎರೆಹುಳಗಳು ಸಕ್ರಿಯವಾಗಿ ಕೆಲಸ ಮಾಡುತ್ತಿದ್ದರೆ ನೀವು ಆ ಬೆಳೆಗಳಿಗೆ ಎರೆಗೊಬ್ಬರವನ್ನು ನೀಡಬೇಕಾದ ಅವಶ್ಯಕತೆ ಇಲ್ಲ. ಆದರೆ ನಿಮ್ಮಲ್ಲಿ ಹೆಚ್ಚು ಜೈವಿಕ ತ್ಯಾಜ್ಯಗಳು ಅಲ್ಲಲ್ಲಿ ಉಳಿದುಕೊಂಡು ಕೊಳೆತು, ಹುಳಗಳ ವೃದ್ಧಿ ಹಾಗೂ ರೋಗ ವೃದ್ಧಿಗೆ ಕಾರಣವಾಗುವುದರಿಂದ ಅದನ್ನು ನೀವು ತೊಟ್ಟಿಯಲ್ಲಿ ಗೊಬ್ಬರ ತಯಾರಿಸುವುದರಿಂದ ನಿಮ್ಮ ತೋಟ ಸ್ವಚ್ಛವಾಗಿರಿಸಿ ಕೊಳ್ಳಬಹುದು. ಅಷ್ಟೇ ಅಲ್ಲ ಇನ್ನೊಂದು ಕಡೆ ನಿಮಗೆ ಈ ಗೊಬ್ಬರವನ್ನು ಇತರ ಬೆಳೆಗಳಿಗೆ ಉಪಯೋಗಿಸಬಹುದು ಅಥವಾ ಇತರರಿಗೆ ಮಾರಬಹುದು. ಇದರಿಂದ ತೊಂದರೆಗಳನ್ನು ನಿವಾರಿಸಿಕೊಳ್ಳಬಹುದಷ್ಟೇ ಅಲ್ಲ, ನಿಮ್ಮ ಆದಾಯ ಹೆಚ್ಚು ಮಾಡಿಕೊಳ್ಳಬಹುದು.

ನಮ್ಮ ಎರೆಗೊಬ್ಬರ ತೊಟ್ಟಿಯಲ್ಲಿ ಎರೆಹುಳಗಳು ನಾಶ ಹೊಂದಿವೆ. ನಾವು ಎಲ್ಲಾ ಉತ್ತಮ ರೀತಿಯ ನಿರ್ವಹಣೆಯನ್ನು ಮಾಡುತ್ತಿದ್ದೇವೆ. ಇದು ಯಾಕೆ ಹೀಗಾಗಿರಬಹುದು?

ಬಹುಶಃ ನಿಮ್ಮ ತೊಟ್ಟಿಯಲ್ಲಿ ಯಾವುದಾದರೂ ಹಾನಿಕಾರಕ ರಾಸಾಯನಿಕ ಬಿದ್ದಿರುವ ಸಾಧ್ಯತೆಯಿದೆ. ಕೆಲವೊಮ್ಮೆ ಕೊಳೆಯುವಾಗ ಉಂಟಾಗುವ ಅತಿಯಾದ ಶಾಖ ಹಾಗೂ ಮಿಥೇನ್ ಗ್ಯಾಸಿನ ಬಿಡುಗಡೆ ಎರೆಹುಳಗಳ ನಾಶಕ್ಕೆ ಕಾರಣವಾಗುತ್ತದೆ. ಕೆಲವೊಮ್ಮೆ ಅದಕ್ಕೆ ಹಾಕಲು ತಂದ ಸೆಗಣಿ ಖರೀದಿಸಿದ್ದರೆ ಅದರಲ್ಲಿ ಕೆಲವೊಮ್ಮೆ ಹುಳಗಳಿರುತ್ತವೆ. ಆ ಹುಳಗಳು ಎರೆಹುಳಗಳನ್ನು ತಿನ್ನುತ್ತವೆ. ಕೆಲವು ಮಾರಾಟಗಾರರು ಸೆಗಣಿಯಲ್ಲಿ ಹುಳ ಉಂಟಾಗದಂತೆ ಅದಕ್ಕೆ ಕೀಟನಾಶಕ ಬೆರೆಸಿರುತ್ತಾರೆ. ಇದು ಕೂಡ ಎರೆಹುಳದ ವಿನಾಶಕ್ಕೆ ಕಾರಣವಾಗಿರಬಹುದು.

ನನಗೊಂದು ಎರೆಗೊಬ್ಬರ ಘಟಕ ತಯಾರಿಸಬೇಕೆಂದು ಇದೆ. ನಾನು ಯಾವ್ಯಾವ ತ್ಯಾಜ್ಯಗಳನ್ನು ಬಳಸಬಹುದು?

ತರಗೆಲೆಗಳು, ತೆಂಗಿನ ಗರಿ, ಅಡಿಕೆ ಸೋಗೆ, ಹಸಿರೆಲೆಗಳು, ತರಕಾರಿಯ ತ್ಯಾಜ್ಯಗಳು, ಈ ರೀತಿ ಸಸ್ಯಜನ್ಯ ವಾದ ಯಾವುದೇ ಪದಾರ್ಥವನ್ನು ಬಳಸಬಹುದು. ಆದರೆ ಹೆಚ್ಚು ಪ್ರಮಾಣದಲ್ಲಿ ತರಕಾರಿ ಅಥವಾ ಬೇಗನೆ ಕೊಳೆಯುವ ವಸ್ತುಗಳನ್ನು ಉಪಯೋಗಿಸುವಾಗ ಅವುಗಳನ್ನೂ ಬೇರೆಯೇ ಸಂಸ್ಕರಣೆ ಮಾಡಿ ಕಂಪೋಸ್ಟ್ ತಯಾರಿಸಿ ಎರೆಹುಳಗಳಿಗೆ ನೀಡುವುದು ಉತ್ತಮ. ಹಸಿರೆಲೆ ಗೊಬ್ಬರ ಗಳನ್ನು ಕೂಡ ಇದೇ ರೀತಿ ನೀಡುವುದರಿಂದ ಅದರಿಂದ ಉಂಟಾಗುವ ಶಾಖ ಹಾಗೂ ವಿಷವಾಯು ಬಿಡುಗಡೆಯಿಂದ ಎರೆಹುಳಗಳನ್ನು ರಕ್ಷಿಸಬಹುದು.

ಕಾರ್ಯಕ್ರಮಗಳಲ್ಲಿ ಸುಮಾರು ಇನ್ನೂರು ಪ್ರಗತಿಪರ ಕೃಷಿಕರು ಭಾಗವಹಿಸಿದ್ದರು.

ವರದಿ: ಮುರಲಿಕೃಷ್ಣ ಎಡನಾಡು.

Leave a Comment

Your email address will not be published. Required fields are marked *

Scroll to Top