ಸಾವಯವ ಕೃಷಿಯಲ್ಲಿ ನಿರೀಕ್ಷೆಗಳು ಮತ್ತು ತೊಡಕುಗಳು

ಗೋ ಆಧಾರಿತ, ವೃಕ್ಷಾಧಾರಿತ, ನೈಸರ್ಗಿಕ, ಜೈವಿಕ, ಸುಸ್ಥಿರ ಎಂಬೆಲ್ಲಾ ವಿವಿಧ ಹೆಸರುಗಳನ್ನು ಹೊಂದಿದ ಕೃಷಿರೀತಿಯು, ಹವಾಮಾನ, ಮಣ್ಣು, ನೀರು ಹಾಗೂ ಬಿಸಿಲಿನ ಲಭ್ಯತೆಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತದೆ.

ಕೃಷಿಕರ ಕ್ಲಬ್ ಹೌಸ್ ಸಂವಾದವು ಪಯಸ್ವಿನಿ ವೇದಿಕೆಯಲ್ಲಿ ನಡೆಯಿತು. ಈ ಕಾರ್ಯಕ್ರಮವು ಎರಡು ಸತ್ರಗಳಲ್ಲಿ 2021 ಆಗಸ್ಟ್ 22 ಹಾಗೂ 28ರಂದು ಜರಗಿತು. ಇದರಲ್ಲಿ ಮೊದಲ ಸತ್ರ ತಾರೀಕು 22 ರಂದು ನಡೆಯಿತು.

ಆಗಸ್ಟ್ 22ರಂದು ಭಾಗವಹಿಸಿದ ಸಂಪನ್ಮೂಲ ವ್ಯಕ್ತಿಗಳು:

1. ಶ್ರೀ ಪಿ ಸದಾಶಿವ ಮರಿಕೆ, ಪುತ್ತೂರು.
2. ಶ್ರೀ ಕೈಲಾರು ಸುಬ್ರಹ್ಮಣ್ಯ ಭಟ್.
3. ಶ್ರೀ ವಸಂತ ಕಜೆ.

ಇದರಲ್ಲಿ ಎರಡನೆಯ ಸತ್ರ ತಾರೀಕು 28 ರಂದು ನಡೆಯಿತು.

ಆಗಸ್ಟ್ 28ರಂದು ಭಾಗವಹಿಸಿದ ಸಂಪನ್ಮೂಲ ವ್ಯಕ್ತಿಗಳು:

1. ಶ್ರೀ ಮುರಲೀಕೃಷ್ಣ ಎಡನಾಡು
2. ಶ್ರೀ ಶಂಕರ ಭಟ್ ಬದನಾಜೆ.

ಷಡ್ರಸ ಭರಿತ ಆಹಾರ ಹೇಗೆ ಸ್ವಾದಿಷ್ಟ ಹಾಗೂ ಆರೋಗ್ಯಕರವೋ ಹಾಗೆಯೇ ವಿವಿಧ ರಸಭರಿತ ಸಾವಯವ ಮೇಳೈಕೆ, ಫಲವತ್ತಾದ ಮಣ್ಣು, ಉತ್ತಮ ಸಮಗ್ರ ಕೃಷಿಗೆ ಸಹಾಯಕವಾಗುವುದುಎಂಬ ಅರ್ಥಗರ್ಭಿತ ಮಾತು ಶ್ರೀ ಸದಾಶಿವ ಅವರಿಂದ ಕೇಳಿಬಂತು.

ಕೃಷಿಕರು ಸಾವಯವ ಕೃಷಿ ಯಿಂದ ದೂರವಾಗಿ ಆಧುನಿಕತೆಯನ್ನು ಅರಸಿಕೊಂಡು ರಾಸಾಯನಿಕಗಳ ಬಳಕೆಯಲ್ಲಿ ತೊಡಗಿದ್ದೂ ತದನಂತರ ತೊಂದರೆಗಳ ಸರಣಿ ಎದುರಾದಾಗ (ಉದಾಹರಣೆಗೆ ರೋಗಗಳು ಬಾಧಿಸುವಿಕೆ, ಪೊಳ್ಳಾದ ಭತ್ತ, ಸಾಯುತ್ತಿರುವ ಕಪ್ಪೆ ಮುಂತಾದ ಗದ್ದೆಯ ಪ್ರಾಣಿ ಸಂಕುಲಗಳು) ಇವನ್ನು ಕಂಡು ಮರುಗುವಂತಾದಾಗ ಬದಲಿ ವ್ಯವಸ್ಥೆಯ ಆಲೋಚನೆ ಸುಳಿಯಿತು.

ಸಂಪನ್ಮೂಲ ವ್ಯಕ್ತಿ ಶ್ರೀ ಸದಾಶಿವ ಮರಿಕೆ ಇವರ ಆಯ್ದ ಕೆಲ ಸಂದೇಶಗಳು ಹೀಗಿವೆ:

 • ಬೆಂಡೆ ನಾಟಿ ತಳಿಗಳು ಸಾವಯವ ಕೃಷಿಗೆ ಸ್ಪಂದಿಸುತ್ತವೆ.
 • ಬೀಜಗಳ ಶೇಖರಣೆಯನ್ನು ಕೃಷಿಕರು ಸ್ವತಃ ತಮ್ಮ ಹೊಲದಲ್ಲಿಯ ಆರೋಗ್ಯವಂತ ಸಸಿಗಳಿಂದ ಮಾಡಬೇಕು.
 • ಕಾಸರಕನ ಸೊಪ್ಪಿನ ಕಷಾಯ ಬದನೆಯ ಹುಳಕ್ಕೆ ರಾಮಬಾಣ.
 • ಸಾವಯವವೇ ಇರಲಿ ಅಥವಾ ರಾಸಾಯನಿಕವೇ ಇರಲಿ ಕೆಲವು ಕೀಟಗಳು ಬಗ್ಗುವುದಿಲ್ಲ.
 • ಉದಾಹರಣೆಗೆ ತೆಂಗಿನ ಕಪ್ಪುತಲೆ ಹುಳು, ಅಡಿಕೆಯ ಕಜ್ಜಿ ಕೀಟ.
 • ಜೈವಿಕ ಸಂಕೋಲೆ ವ್ಯವಸ್ಥಿತವಾಗಿ ಇರುವುದು ಬಹು ಮುಖ್ಯ, ಉದಾಹರಣೆಗೆ ನರಿಗಳಿಲ್ಲದೆ ನವಿಲುಗಳು ಅತಿಯಾಗಿ ವೃದ್ಧಿಯಾಗುತ್ತಿವೆ.

ಐಟಿ ಟೀಮ್ ಮುಖ್ಯಸ್ಥ ರಾಗಿದ್ದ ಶ್ರೀ ವಸಂತ ಕಜೆ ಇವರು ಅದರ ಮಹತ್ವಕ್ಕಿಂತ ಅಧಿಕ ಮೌಲ್ಯವನ್ನು ಸಾವಯವ ಕೃಷಿ ಆಧಾರಿತ ಜೀವನದಲ್ಲಿ ಕಂಡುಕೊಂಡ ಬಗ್ಗೆ ತಿಳಿಸಿದರು. ಗೋ ಆಧಾರಿತ ಸುಸ್ಥಿರ ಕೃಷಿಯನ್ನು ಮಾಡುತ್ತಿರುವ ವಸಂತ ಅವರು ತಾವೇ ಸ್ವತಃ ದುಡಿಯುವುದರಲ್ಲಿ ಆನಂದ ವ್ಯಕ್ತಪಡಿಸುತ್ತಾರೆ. ಅವರ ಪ್ರಕಾರ ನಮಗೆ ಸಾಧ್ಯವಿರುವ ಮುಖ್ಯ ಸೇವೆ ಪರಿಸರವನ್ನು ಹಾಳುಮಾಡದೇ ಮುಂದಿನ ತಲೆಮಾರಿಗೆ ಹಸ್ತಾಂತರಿಸುವುದಾಗಿದೆ.

ಕೋಳಿ ಗೊಬ್ಬರವನ್ನು ಉಪಯೋಗಿಸುವಗ ಅದರ ಆಮ್ಲಿಯತೆಯನ್ನು ಕುಗ್ಗಿಸಿ ಸರಿಯಾಗಿ ಡಿಕಂಪೋಸ್ ಮಾಡಿ ಉಪಯೋಗಿಸುವುದು ಒಳ್ಳೆಯದು. ಜೀವಾಮೃತವನ್ನು ವೆಂಚುರಿಸಿಸ್ಟಮ್ ನಂತಹ ನೀರಾವರಿ ಪೈಪ್ಲೈನ್ ಮೂಲಕ ನೀಡುವುದರಿಂದ ಕೆಲಸದ ಮಜೂರಿ ಖರ್ಚಿನ ಉಳಿತಾಯವಾಗುವುದಲ್ಲದೆ ಸಂಪದ್ಭರಿತ ಮಣ್ಣು ಪಡೆದುಕೊಂಡು ಸಫಲತೆ ಪಡೆದುಕೊಳ್ಳಬಹುದು ಹೀಗನ್ನುತ್ತಾರೆ ಶ್ರೀ ಯೋಗೇಶ್ ತುಮಕೂರು.

ಸುಭಾಷ್ ಪಾಳೇಕರವರ 5- ಪದರದ ಮಾದರಿ ಅನುಸರಿಸುವುದಾಗಿ ಶ್ರೀ ಗೋವಿಂದ ಪ್ರಕಾಶ್ ತಿಳಿಸಿದರು. ಕಳೆದ ಆರು ವರ್ಷದಿಂದ ಸಾವಯವ ಕೃಷಿಯಲ್ಲಿ, ತುಲನಾತ್ಮಕ ಅಧ್ಯಯನ ಮಾಡುತ್ತಿರುವುದಾಗಿಯೂ, ಹಳೆಯ ಅಡಿಕೆ ತೋಟದಲ್ಲಿ ಸುಮಾರು ೧೦೧೨ ಕ್ವಿಂಟಾಲ್ ಆಧಿಕ ಇಳುವರಿ ವಿಧಾನದಿಂದ ಕೈಗೂಡಿತೆಂದು ಗೋವಿಂದ ಪ್ರಕಾಶ್ ಅಭಿಪ್ರಾಯಪಟ್ಟರು.

ಪಾಳೇಕರ್ ಬಂಡವಾಳ ರಹಿತ ಕೃಷಿ ಪದ್ಧತಿಯ ಮಿಶ್ರಣಗಳ ವಿವರಣೆಯನ್ನೂ ಸಂದರ್ಭದಲ್ಲಿ ಶ್ರೀ ಮುರಲೀಕೃಷ್ಣ ಪ್ರಸ್ತುತಪಡಿಸಿದರು.

ಪಾಳೇಕರ್ ಬಂಡವಾಳ ರಹಿತ ಕೃಷಿ ಪದ್ಧತಿಯ ಮಿಶ್ರಣಗಳ ವಿವರಣೆ ಈ ಕೆಳಗಿನಂತಿದೆ.

1. ಪಾಳೇಕರ್ ಜೀವಾಮೃತ:

 1. ನೀರು 2 ಲೀಟರ್
 2. ಹಸುವಿನ ಸಗಣಿ ½ ಕೆ.ಜಿ.
 3. ಗೋಮೂತ್ರ ½ ಲೀ.
 4. ಮೇಲ್ಮಣ್ಣು 30g
 5. ಬೆಲ್ಲ 200g
 6. ಧಾನ್ಯದ ಹುಡಿ 200g

ಈ ಮಿಶ್ರಣವನ್ನು 48 ಗಂಟೆಗಳ ನಂತರ ಪ್ರತಿ ನಿತ್ಯ ಎರಡುಬಾರಿ ಮಿಶ್ರ ಮಾಡುತ್ತಾ, ಒಂದು ಬ್ಯಾರಲ್ ನಲ್ಲಿ 15 ದಿನಗಳ ಕಾಲ ಹುಳಿ ಬರಿಸಬೇಕು. ನಂತರ ಅರ್ಧ ಭಾಗ ತೆಗೆದುಕೊಂಡು ಅದಕ್ಕೆ 10 ಪಾಲು ನೀರು ಸೇರಿಸಿ ಬೆಳೆಗಳಿಗೆ ನೀಡಿ. ಉಳಿಸಿದ ಅರ್ಧ ಭಾಗಕ್ಕೆ ಅಷ್ಟೇ ನೀರು ಸೇರಿಸಿಟ್ಟು ಪುನಃ 15 ದಿನಗಳ ಬಳಿಕ ಉಪಯೋಗಿಸಬಹುದು. ಹೀಗೇ ಈ ಮಿಶ್ರಣ ಒಂದು ಸೀಸನ್ ಸಂಪೂರ್ಣ ಬಳಸಬಹುದು.

2. ಪಾಳೇಕರ್ ಬೀಜಾಮೃತ

 1. ನೀರು 2ಲೀಟರ್
 2. ಹಸುವಿನ ಸಗಣಿ ½ ಕೆ.ಜಿ.
 3. ಗೋಮೂತ್ರ ½ಲೀ.
 4. ಮೇಲ್ಮಣ್ಣು 30g

ಇದನ್ನು ತತ್ಕಾಲ ತಯಾರಿಸಿ ಬೀಜ, ಗಡ್ಡೆ, ಗಿಡ ಇತ್ಯಾದಿಗಳನ್ನು ಬಿತ್ತನೆ ಅಥವಾ ನೆಡುವುದಕ್ಕೆ ಮುಂಚಿತವಾಗಿ ಮುಳುಗಿಸಿ ಉಪಯೋಗಿಸುವುದು.

3. ಶಿಲೀಂದ್ರನಾಶಕ

 1. ಹುಳಿಮಜ್ಜಿಗೆ ½ ಲೀಟರ್
 2. ನೀರು 5ಲೀಟರ್

ಇದು ತಯಾರಿಸಿ ತತ್ಕಾಲ ಬಳಸಬಹುದು.

4. ನೀಮಾಸ್ತ್ರ ಕೀಟನಾಶಕ

 1. ಹಸುವಿನ ಸಗಣಿ ½ ಕೆ.ಜಿ.
 2. ಗೋಮೂತ್ರ 1ಲೀ.
 3. ಕಹಿಬೇವಿನ ಸೊಪ್ಪು 1ಕೆ.ಜಿ.

ಇದು ತಯಾರಿಸಿ ತತ್ಕಾಲ ಬಳಸಬಹುದು.

5. ಬ್ರಹ್ಮಾಸ್ತ್ರ ಕೀಟನಾಶಕ

 1. ಗೋಮೂತ್ರ 1ಲೀ.
 2. ಕಹಿಬೇವಿನ ಸೊಪ್ಪು 1ಕೆ.ಜಿ.
 3. ಹೊಗೆಸೊಪ್ಪು 300g
 4. ಬೆಳ್ಳುಳ್ಳಿ 300g

ಇದನ್ನು ಗೋ ಮೂತ್ರದಲ್ಲಿ ತಯಾರಿಸಿ 10 ದಿನಗಳ ಕಾಲ ಹುಳಿ ಬರಿಸಿ ಉಪಯೋಗಿಸಬೇಕು. ನಂತರ 300 ಮೀ.ಲೀ. 10 ಲೀ. ನೀರಿನಲ್ಲಿ ಬೆರಸಿ ಉಪಯೋಗಿಸಬೇಕು.

Neem leaves

ಶ್ರೀಮತಿ ವೇದಾ ಮನೋಹರ್ ಇವರ ಆಂಟಿಬಯೋಟಿಕ್ ರಹಿತ ಹೈನುಗಾರಿಕೆಯ ಬಗ್ಗೆ ಪ್ರಸ್ತಾವಿಸಿದ ಶ್ರೀ ಮನೋಹರ್ ಮಸ್ಕಿ ಇವರು ನೆದರ್ಲೆಂಡ್ ಗೆ ಭೇಟಿ ನೀಡಿ ಅಧ್ಯಯನ ನಡೆಸಿದ್ದನ್ನು ತಿಳಿಸಿದರು. ಕ್ರಮವಾಗಿ ರಾಸಾಯನಿಕಕ್ಕೆ ಬಿಡುಗಡೆ ನೀಡಿ ಸಾವಯವಕ್ಕೆ ಆದ್ಯತೆ ನೀಡಿದ ಯಶೋಗಾಥೆಯನ್ನು ಶ್ರೀಮತಿ ವೇದಾ ಮನೋಹರ್ ಹೇಳಿಕೊಂಡರು. ಅವರ ಪ್ರಕಾರ ಗಂಜಲ ಹಾಗೂ ಬೇವಿನ ಎಲೆಯ ರಸದ ಮಿಶ್ರಣವು ಭತ್ತದ ಸೈನಿಕ ಹುಳದ ಹತೋಟಿಗೆ ಸಹಾಯಕ ಹಾಗೂ ರಸ ಹೀರುವ ಕೀಟವನ್ನು ನಿಂಬಿಸಿಡಿನ್ ಮೂಲಕ ಹತೋಟಿ ಮಾಡುವುದು ಸಾಧ್ಯ ಎಂದು ತಮ್ಮ ಅನುಭವ ಹಂಚಿಕೊಂಡರು.

ಶ್ರೀಮತಿ ಸುಭಾಷಿಣಿ ಹಿರಣ್ಯ ಇವರು ಯುವ ಪೀಳಿಗೆ ರಹಿತ ಕೃಷಿಯ ಅಳಲು ತೋಡಿಕೊಂಡು, ತಂತ್ರಜ್ಞಾನಗಳು ಯುವಾಕರ್ಷಕ ರೀತಿಯಲ್ಲಿದ್ದಾಗ ಮುಂದಿನ ಪೀಳಿಗೆ ಕೃಷಿಯಲ್ಲಿರಲು ಸಾಧ್ಯವೆಂದು ನುಡಿದರು. ಇದಕ್ಕೆ ಧ್ವನಿಗೂಡಿಸಿದ ಶ್ರೀ ಮನೋಹರ್ ಮಸ್ಕಿಯವರು ಸರಕಾರದ ಯೋಜನೆಗಳು ಪರೋಕ್ಷವಾಗಿ ಜನತೆಯನ್ನು ಕೃಷಿಯತ್ತ ದಾರಿ ತೋರುವ ಪ್ರಯತ್ನದಲ್ಲಿವೆ ಎಂದರು. ಅವರು ಸರಕಾರದ ನಿಯಮಗಳ ಸಡಿಲಿಕೆ, ಪರಿವರ್ತನೆಯ ಹಾದಿ, ಸಾವಯವಕ್ಕೆ ಆದ್ಯತೆ ನೀಡಲು ಮುಂದಾಗುವಿಕೆ ಯನ್ನು ತಿಳಿಯಪಡಿಸಿದರು.

ತಾರೀಕು 28 ರಂದು ಮುಂದುವರಿದ ಕಾರ್ಯಕ್ರಮದಲ್ಲಿ ಮಣ್ಣಿನ ಸಮಗ್ರತೆಯು ಜೈವಿಕ ಚೈತನ್ಯದ ಆಗರಎಂಬ ಅರ್ಥ ಗರ್ಭಿತ ಮಾತು ಶ್ರೀ ಮುರಲೀಕೃಷ್ಣಅವರಿಂದ ಕೇಳಿ ಬಂತು.

ಮಣ್ಣಿನಲ್ಲಿರುವ ಸೂಕ್ಶ್ಮಾಣುಗಳ ಕಾರ್ಯ ಚಟುವಟಿಕೆಗಳಿಂದ ಮಣ್ಣಿನ ಫಲವತ್ತತೆ ಹೆಚ್ಹಗುವುದಲ್ಲದೆ, ಬೇರಿನ ವಲಯದಲ್ಲಿ ರೋಗ ಪ್ರತಿರೋಧಕತೆ ಹಾಗೂ ಸೂಕ್ಶ್ಮಾಣುಗಳ ಸಂಜ್ಞಾ ವಾಹಿನಿ ಕ್ರಿಯೆಗಳಿಂದ ಡೈನಾಮಿಕ್ ಪರಿಸರ ನಿರ್ಮಾಣವಗುತ್ತದೆ.

ಜೀವ ವೈವಿಧ್ಯದಿಂದ ಪರಿಸರ ಸಮತೋಲನ, ಗಿಡ ಗಂಟೆಗಳಾದ ಚೆಂಡು ಹೂವು, ಗರಿಕೆ, ಮಜ್ಜಿಗೆ ಹುಲ್ಲು, ಬೆಳ್ಳುಳ್ಳಿ, ಎಕ್ಕೆ ಗಿಡ (Calotropis), ನೆಕ್ಕಿ (Vitex), ಹರಳು ಗಿಡ, ಇವುಗಳಿಂದ ಬಯೋ ಎಂಜಿನಿಯರಿಂಗ್, ಕೀಟಾಪಕರ್ಷಕ ವೃಕ್ಷಗಳಾದ ಹೊಂಗೆ, ಕಹಿ ಬೇವು, ಅಣಲೆಕಾಯಿ, ನೆಲ್ಲಿ ಸೊಪ್ಪು, ಕಾಸರಕ, ಸಂಪಿಗೆ ಹೂವು ಇಂತಹವುಗಳ ಉಪಯೋಗದಿಂದ ರಾಸಾಯನಿಕ ರಹಿತ ಕೃಷಿ ಸಾಧ್ಯ ಎಂಬ ಆತೀ ಮುಖ್ಯ ಸೂಚನೆಗಳನ್ನು ನೀಡಿದರು.

ಸಂಪನ್ಮೂಲ ವ್ಯಕ್ತಿ ಶ್ರೀ ಶಂಕರ ಭಟ್ ಬದನಾಜೆ, ಅವರು ತಾವು ಕೈಗೊಂಡ ಸಂಶೋಧನಾತ್ಮಕ ಚಟುವಟಿಕೆಗಳು, ವಿಟ್ಲಾದ ಸಿಪಿಸಿಆರ್ ಐಯ ಹಿಂದಿನ ಕಾಲದ ಹಾಗು ಈಗಿನ ವಿಜ್ಞಾನಿಗಳ ಕೈಜೋಡಿಸುವಿಕೆ, ಸಹಕಾರಾತ್ಮಕ ಮನೋಭಾವನೆಗಳಿಂದ ಸಂಯೋಜಿತ ಚಟುವಟಿಕೆಗಳು, ಈಗ ನಡೆಸುತ್ತಿರುವ ಪ್ರಯೋಗಗಳು, ಮುಂತಾದವುಗಳನ್ನು ಕೇಳುಗರೊಂದಿಗೆ ಹಂಚಿಕೊಂಡರು.
ಅವರ ಮಾತುಗಳಿಂದ ಆಯ್ದ ಕೆಲವು ವಿಷಯಗಳು
ಗಂಡು ಹೂಗಳಿಂದ ಪರಾಗ 1 ಕಿಲೋ ಮೀಟರ್ ದೂರದವರೆಗೆ ಹರಡುತ್ತದೆ.
ಹರಳಿಗೆ ಮೆತ್ತಿಕೊಳ್ಳುತ್ತದೆ, ಪರಾಗಸ್ಪರ್ಶವಾಗದ ಹರಳುಗಳು 5 ದಿನ ರವರೆಗೆ ತೆರೆದಿರುತ್ತವೆ,
ಆಮೇಲೆ ಉದುರಿಹೋಗುತ್ತವೆ. ಕೀಟಗಳಿಂದ ನಳ್ಳಿ ಉದುರುವುದಕ್ಕೆ ಗೇರು ಎಣ್ಣೆ, ಇಂಗು, ಅರಿಶಿಣ, ನೊರೆಕಾಯಿ ಮುಂತಾದವುಗಳನ್ನು ಸೇರಿಸಿ ಮಿಶ್ರಣದ ಸಿಂಪರಣೆ, ಉಪಯುಕ್ತವಾಗಿವೆ ಎಂದು ತಿಳಿಸಿದರು. ಮಾವು ಹಾಗು ಗೇರು ಕೃಷಿಯಲ್ಲಿ ಇದನ್ನು ಉಪಯೋಗಿಸಿ ಹೆಚ್ಚು ಫಸಲು ಪಡೆಯಲು ಸಹಾಯಕವಾಗಿದೆ ಎಂಬ ವಿಷಯ ಹಂಚಿಕೊಂಡರು. ವಿದ್ಯಾರ್ಥಿಗಳ ಪ್ರಾಜೆಕ್ಟ್ ಗೆ ಉಪಯುಕ್ತ ವಿಷಯಗಳು ಹಾಗೂ ಸಹಾಯ ಸಲಹೆಗಳನ್ನು ನೀಡಲಾಗಿದೆ ಎಂದರು.

White Calotropis

ಶ್ರೀ ಶಂಕರ ಭಟ್ ಇವರ ವಿಚಾರ ವಿನಿಮಯದಿಂದ ಆಯ್ದ ಕೆಲ ಸಂದೇಶಗಳು ಹೀಗಿವೆ.

 • ಮಣ್ಣಿಗೆ ನೀಡುವ ಪೋಷಕಾಂಶಗಳು ಮೊದಲಿಗೆ ಸಿಗುವುದು ಸೂಕ್ಷ್ಮಾಣುಜೀವಿಗಳಿಗೆ.

 • ಅನನಾಸಿನ ಎಲೆಯನ್ನು ಅಡಿಕೆ ಮರಕ್ಕೆ ಕಟ್ಟಿಹಾಕಿ ಪ್ರತಿರೋಧಕಥೆಯನ್ನು ಹೆಚ್ಚುವಂತೆ ಮಾಡಬಹುದು.

 • ಸಾಸಿವೆ ಎಣ್ಣೆ ಗೆದ್ದಲು ನಾಶಪಡಿಸಲು ಉಪಯುಕ್ತವಾಗಿದೆ.

 • ಎಕ್ಕೆ ಸೊಪ್ಪು ಸ್ವಲ್ಪ ಪ್ರಮಾಣದ ಪಾದರಸವನ್ನು ಹೊಂದಿರುತ್ತದೆ. ಗದ್ದೆ ನೀರಾವರಿಯ ಜೊತೆಗೆ ಎಕ್ಕೆ ಸೊಪ್ಪನ್ನು ಸವರಿ ಹಾಕುವುದರಿಂದ ಕೀಟಗಳ ಅಪಕರ್ಷಣೆ ಸಾಧ್ಯ.

 • ವಿಭೂತಿಯನ್ನು ಬೀಜ ಸಂರಕ್ಷಕವಾಗಿ ಉಪಯೋಗಿಸಬಹುದು.

 • ಸಸ್ಯಗಳ ಚಿಗುರು ಬೇರು ಇವುಗಳಲ್ಲಿ ಕೆಲವು ಲೋಹದ ಅಂಶಗಳು ಇರುತ್ತವೆ

 • ತೆಂಗಿನ ಮಡಿಲಲ್ಲಿ ಪೊಟಾಸಿಯಂ ಲವಣದ ಅಂಶ ಹೆಚ್ಚಿರುತ್ತದೆ.

ಪೂರಕ ಮಾಹಿತಿಯನ್ನು ನೀಡಿದ ಡಾ ಶ್ರೀಕೃಷ್ಣಭಟ್, ಹೂಗಳಲ್ಲಿ ಮಾಲಿಬ್ಡಿನಮ್ ಅಂಶ ಇರುವುದಗಿಯು, ಉತ್ತಮ ಇಂಗಾಲದ ಅಂಶ ಮಣ್ಣಿನಲ್ಲಿ ಇದ್ದರೆ ಸಾವಯವ ಕೃಷಿಗೆ ಸುಲಭ ಎಂದು ತಿಳಿಸಿಕೊಟ್ಟರು.
ಶ್ರೀ ಪ್ರಭು ಸ್ವದೇಶಿ ಇವರು ಗೋಆಧಾರಿತ ಕೃಷಿಯ ಬಗ್ಗೆ ಹೆಚ್ಚು ಪ್ರೋತ್ಸಾಹಕ ಅಂಶಗಳನ್ನು ಹಂಚಿಕೊಂಡರು.

1 thought on “ಸಾವಯವ ಕೃಷಿಯಲ್ಲಿ ನಿರೀಕ್ಷೆಗಳು ಮತ್ತು ತೊಡಕುಗಳು”

 1. Pingback: ಗೋಆಧಾರಿತ ಕೃಷಿಯಿಂದ ಅಡಿಕೆ ತೋಟಕ್ಕೆ ರೋಗ ಕಡಿಮೆ — ಆದಾಯ ಹೆಚ್ಚು - Payaswini—Contemporary Spurts

Leave a Comment

Your email address will not be published. Required fields are marked *