ಸೆಪ್ಟಂಬರ್ ನಿಂದ ನವಂಬರ್ ತನಕ ಕೃಷಿ ನಿರ್ವಹಣೆ ಎಂಬ ವಿಚಾರದಲ್ಲಿ ಕ್ಲಬ್ ಹೌಸ್ ಸಂವಾದ ಪಯಸ್ವಿನಿ ವೇದಿಕೆಯಲ್ಲಿ ಸೆಪ್ಟೆಂಬರ್ 5 ರಂದು ಭಾನುವಾರ ಸಾಯಂ 5 ಗಂಟೆಗೆ ಜರಗಿತು.
ಮುಖ್ಯ ವಿಷಯಗಳು:
ನಾಟಿ ಹಾಗೂ ಪರಿಚರಣೆ
ಕೃಷಿ ಸಂರಕ್ಷಣೆ
ಇಳುವರಿಯ ಅಂದಾಜು ಹಾಗೂ ಕೊಯ್ಲು ಪ್ರಕ್ರಿಯೆ
ಭಾಗವಹಿಸಿದ ಸಂಪನ್ಮೂಲ ವ್ಯಕ್ತಿಗಳು:
- ಡಾ ಭವಿಷ್ಯ, ವಿಜ್ಞಾನಿ, ವಿಟ್ಲ
- ಡಾ ಎಸ್ ಶ್ರೀಕೃಷ್ಣಭಟ್, ಹಿರಿಯ ವಿಜ್ಞಾನಿ, ಸಕಲೇಶಪುರ
- ಶ್ರೀ ಪಿ ಜಿ ಎಸ್ ಎನ್ ಪ್ರಸಾದ್, ಪ್ರಗತಿಪರ ಕೃಷಿಕರು, ಸುಳ್ಯ
- ಡಾ ಅಂಕೇಗೌಡರು, ಹಿರಿಯ ವಿಜ್ಞಾನಿ, ಅಪ್ಪಂಗಳ, ಮಡಿಕೇರಿ.
ಪೋಷಕಾಂಶ ನಿರ್ವಹಣೆ
ಸೆಪ್ಟೆಂಬರ್ ತಿಂಗಳಲ್ಲಿ ಗೊಬ್ಬರ ನೀಡುವ ಸಮಯ, ಅದೇ ರೀತಿ ಮಣ್ಣಿನ ಸಮತೋಲನ ಕಾಪಾಡಲು ಕೃಷಿ ಸುಣ್ಣ ಅಥವಾ ಡೋಲೋಮೈಟ್ ಆವಶ್ಯಕತೆಗೆ ಅನುಗುಣವಾಗಿ ಹಾಕಬಹುದು.
ಮಣ್ಣು ಪರೀಕ್ಷೆಯ ನಂತರ ಮಣ್ಣಿನಲ್ಲಿ ಆಮ್ಲೀಯತೆ ಇದೆ, ಮಾರ್ಪಾಡು ಅಗತ್ಯವಿದೆ ಎಂದು ಕಂಡುಬಂದಲ್ಲಿ, ಕೊಳಕೆ ತೋಟದಲ್ಲಿ ಅರ್ಧ ಕೆಜಿ, ಅದೇ ರೀತಿ ಇತರ ಕಡೆಗಳಲ್ಲಿ 200ಗ್ರಾಂ, ಮರವೊಂದಕ್ಕೆ ಸುಣ್ಣ ಹಾಕಬಹುದು. ಹೆಚ್ಚಾದ ಕ್ಷಾರೀಯತೆಯು ಅಣಬೆ ರೋಗಕ್ಕೆ ಆಹ್ವಾನ ನೀಡುವುದು ಎಂಬಂಥ ಒಂದು ಸಂಕೀರ್ಣ ವಿಷಯ ಗಮನಕ್ಕೆ ಬಂದಿದೆ. ಆದ್ದರಿಂದ ಮಣ್ಣು ಪರೀಕ್ಷೆ ಮಾಡದೆ ಮರಗಳಿಗೆ ರಾಸಾಯನಿಕ ಗೊಬ್ಬರ ಹಾಕಬೇಡಿ.
ಸಂಪೂರ್ಣ ಯೋಜನೆಯೊಂದಿಗೆ ಭಾವೀ ಫಸಲನ್ನು ಖಾತರಿಪಡಿಸಲು ಸಮಗ್ರ ಪೋಷಕಾಂಶ ನಿರ್ವಹಣೆ ಫಲಪ್ರದವಾಗುತ್ತದೆ.
ಶಿಫಾರಸು ಮಾಡಿದ ಪೋಷಕಾಂಶಗಳನ್ನು ಮಣ್ಣಿಗೆ ನೀಡಬಹುದು.
ಮರಗಳ ಬುಡಕ್ಕೆ ಹಾಕಿದ ರಾಸಾಯನಿಕ ವಿಘಟನೆಯಾಗಿ ಸೂಕ್ಷ್ಮಣು ಪ್ರಕ್ರಿಯೆಗಳ ಮೂಲಕ ವಿಘಟನೆಯಾಗಿ ಬೇರುಗಳಿಂದ ಸಾರ ಹೀರಲು ಸಾಧ್ಯವಾಗುತ್ತದೆ.
ಗೊಬ್ಬರವನ್ನು ಕಂತುಗಳಲ್ಲಿ ನೀಡುವುದು ಮರದ ಬೆಳವಣಿಗೆಗೆ ಉತ್ತಮ.
ಬೋರಾನ್, ಮೆಗ್ನೀಷಿಯಂ ಸಲ್ಫೇಟ್ ಮುಂತಾದ ರಾಸಾಯನಿಕ ಗೊಬ್ಬರಗಳನ್ನು ಒಂದು ಬೆಂಕಿ ಪಟ್ಟಣದ ಅಂದರೆ ಸುಮಾರು 25 ಗ್ರಾಂ ಮರವೊಂದಕ್ಕೆ ನೀಡಿದರೆ ಸಾಕು.
ಅಡಿಕೆ ಗಿಡ ನೆಡುವಿಕೆ ಹಾಗೂ ಬಾಳೆಗಿಡಗಳ ನೆಡುವಿಕೆಯನ್ನು ಮಾಡಬಹುದು.
ಬೆಳೆ ಸಂರಕ್ಷಣೆ
ಕೊಳೆ ರೋಗ ನಿವಾರಣೆಗಾಗಿ ಬೋರ್ಡೋ ಮಿಶ್ರಣ ಸ್ಪ್ರೇ ಮುಂದುವರಿಸಬೇಕು. ಈ ಬಾರಿ ಸಂಪೂರ್ಣ ಕೊಬೆಯ ಭಾಗ ಕವರ್ ಆಗುವ ರೀತಿಯಲ್ಲಿ ಸಿಂಪರಣೆ ಮಾಡಬೇಕು.
ಕೊಳೆರೋಗದೊಂದಿಗೆ ಸುಳಿ ಕೊಳೆ ರೋಗ ಅದೇ ರೀತಿ ಬುಡ ಕೊಳೆ ರೋಗ ಕಾಣುವಂತಹ ಸಂದರ್ಭದಲ್ಲಿ ತ್ವರಿತವಾದ ನಿವಾರಣೋಪಾಯ ಕೈಗೊಳ್ಳುವುದು ಅಗತ್ಯ. ಸುಳಿಗಳು ಬೀಳುವುದು ಎಲೆಗಳು ಹಳದಿಯಾಗುವುದು ಕಂಡುಬಂದಲ್ಲಿ ತಕ್ಷಣ ಕಾರ್ಯಪ್ರವೃತ್ತರಾಗಬೇಕು.
ತಿಗಣೆಯ ಬಾಧೆ ತತ್ಕಾಲ ನಿವಾರಣೆ ಮಾಡಲು ಕೀಟನಾಶಕ ಅಗತ್ಯ ಇದಕ್ಕಾಗಿ ನಿಂಬಿಸಿಡಿನ್ ಅಥವಾ ರೋಗರ್ ಸಿಂಪರಣೆ ಮಾಡಬೇಕಾಗುತ್ತದೆ.
ಬಾಧಿತ ಒಣಗಿದ ಹಿಂಗಾರವನ್ನು ತೆಗೆದು ಉರಿಸುವುದು ಅಗತ್ಯ.
ಇದರ ಬೂದಿಯನ್ನು ಅಡಿಕೆ ಮರದ ಬುಡಕ್ಕೆ ಹಾಕಲು ಉಪಯೋಗಿಸಬಾರದು.
ಅಕ್ಟೋಬರ್ ತಿಂಗಳಿನಲ್ಲಿ ಕಾಯಿ ಒಡೆಯುವಿಕೆ ಕಂಡುಬಂದಲ್ಲಿ ಅಥವಾ ಅಳ್ಳಿ ಉದುರುವಿಕೆ ಕಂಡುಬಂದಲ್ಲಿ ಅದನ್ನು ತಡೆಗಟ್ಟಲು ಬೋರಾನ್ ಬಳಸಬಹುದು.
ಪ್ರತಿ ಮರಕ್ಕೆ 20 ಕೆಜಿಗೆ ಕಡಿಮೆಯಾಗದಂತೆ ಸಾವಯವ ಗೊಬ್ಬರ ಕೊಡಿರಿ.
ಬಸವನಹುಳದ ಸಮಸ್ಯೆ ಈ ತಿಂಗಳುಗಳಲ್ಲಿ ಕಂಡುಬರುತ್ತದೆ. ಬಸವನ ಹುಳಗಳು ಅಡಿಕೆಯ ಮರದ ಮೇಲೆಕ್ಕೆ ಏರದಂತೆ ಕಾಂಡಕ್ಕೆ ಮೂರು ಗಂಟುಗಳಷ್ಟು ಭಾಗದಲ್ಲಿ ಬೋರ್ಡೋ ದ್ರಾವಣ ಬಳಿಯುವುದರಿಂದ ಮೇಲಕ್ಕೇರದಂತೆ ತಡೆಗಟ್ಟಲು ಸಾಧ್ಯವಾಗುತ್ತದೆ.



ಕಾಳುಮೆಣಸಿನ ಅಭಿವೃದ್ಧಿ
ಸೆಪ್ಟೆಂಬರ್ ನಿಂದ ನವಂಬರ್ ತಿಂಗಳಿನಲ್ಲಿ ಕಾಳುಮೆಣಸಿನ ಬೇರುಗಳ ಆರೋಗ್ಯದ ಬಗ್ಗೆ ಕಾಳಜಿ ಬಲು ಮುಖ್ಯ. ಹವಾಮಾನ ವೈಪರೀತ್ಯಕ್ಕೆ ಅನುಗುಣವಾಗಿ ನಿರ್ವಹಣೆಯ ಕಾರ್ಯ ಕಾಲಕ್ಕೆ ತಕ್ಕಂತೆ ಅತಿ ಅಗತ್ಯ.
ಉತ್ತಮ ಇಳುವರಿ ಪಡೆಯಲು ಉತ್ತಮ ತಳಿಯ ಕಾಳು ಮೆಣಸಿನ ಗಿಡ ಅಗತ್ಯ. ಅಡಿಕೆ ತೋಟಗಳಲ್ಲಿ ನಾವು ಹೆಚ್ಚಾಗಿ ಪನ್ನಿಯೂರು-1 ಜಾತಿಯ ಕಾಳುಮೆಣಸಿನ ಬಳ್ಳಿಯನ್ನು ನೆಡುವುದು ಕಾಣುತ್ತೇವೆ. ಆದರೆ ಇದು ದಟ್ಟ ನೆರಳಿಗೆ ಅಷ್ಟು ಅನು ಯೋಜ್ಯವಾದ ತಳಿಯಲ್ಲ.
ಪನ್ನಿಯೂರ್-2, ಪನ್ನಿಯೂರ್-5 ಪನ್ನಿಯೂರು-6 ಶ್ರೀಕರ, ಶುಭಕರ, ತೇವಂ, ಪಂಚಮಿ ಮುಂತಾದ ಆಧುನಿಕ ತಳಿಗಳು ಅಡಿಕೆಮರದ ಎಡೆ ಬೆಳೆಯಾಗಿ ಬೆಳೆಯಲು ಉತ್ತಮ. ಬಯಲುಸೀಮೆ ಪ್ರದೇಶದಲ್ಲಿ ಪನ್ನಿಯೂರು-1, ಪನ್ನಿಯೂರು 6&7 ಉಪಯುಕ್ತ ತಳಿಗಳು.
ನೀರಿನ ಕೊರತೆ ಇರುವ ಪ್ರದೇಶದಲ್ಲಿ ಪನ್ನಿಯೂರು-8, ಪನ್ನಿಯೂರ್-9, ಮುಂತಾದ ಕಾಳುಮೆಣಸಿನ ತಳಿಗಳನ್ನು ಬೆಳೆಯಬಹುದು.
ಕೊಳೆರೋಗ ಸಹಿಷ್ಟು ತಳಿಗಳಾದ IISR-ಶಕ್ತಿ ಸಿಗಂದಿನಿ, ಮುಂತಾದ ತಳಿಗಳನ್ನು ಕೂಡ ಬೆಳೆಯಬಹುದು. ಸಿಗಂದಿನಿ ದಪ್ಪ ಕಾಳು ಹಾಗೂ ಅಧಿಕ ಇಳುವರಿ ನೀಡುವ ಕೃಷಿಕರ ತಳಿಯಾಗಿದೆ.
ಪೌರ್ಣಮಿ ತಳಿ ಜಂತು ಹುಳ ಪ್ರತಿರೋಧಕ ತಳಿಯಾಗಿದೆ.
ತಳಿ ಅಭಿವೃದ್ಧಿಗೆ ನೆಲದ ಮೂಲಕ ಸಾಗುತ್ತಿರುವ ರನ್ನರ್ ಬಳ್ಳಿಗಳನ್ನು ಅಥವಾ ಬೇಗನೆ ಇಳುವರಿ ಪಡೆಯಲು ಮೇಲ್ಭಾಗದ ಬಳ್ಳಿಗಳನ್ನು ಬಳಸಬಹುದು.
ಉತ್ತಮ ಫಸಲು ಕೊಡುವ ಬಳ್ಳಿಗಳನ್ನು ಬಳಸಿರಿ.
ಪ್ರತಿಯೊಂದು ಗಂಟಿನಲ್ಲಿ ಬೇರು ಬರಿಸುವಂತಹ ಹೈಟೆಕ್ ವಿಧಾನ (ಸರ್ಪೆನ್ಟೈನ್ ವಿಧಾನ) ಹಾಗೂ ಬೇಗನೆ ಬೇರು ಬರಲು ಹಲವಾರು ಪ್ರಯೋಗಗಳು ನಡೆದಿವೆ. ಫಸಲು ಕೊಡುವ ಕವಲು ಬಳ್ಳಿಗಳಿಗೆ ಬೇರು ಬರಿಸಿ ಗಿಡ ಮಾಡಿದಾಗ ಪೊದೆ ಕಾಳುಮೆಣಸಿನ ಬಳ್ಳಿ ಅಥವಾ ಬುಶ್ ಪೆಪ್ಪರ್ ಲಭಿಸುತ್ತದೆ. ಇವುಗಳಲ್ಲಿ ಮುಖ್ಯವಾಗಿ ಸೊರಗು ರೋಗಕ್ಕೆ ತುತ್ತಾಗದೆ ಹೈಟೆಕ್ ನರ್ಸರಿಗಳಲ್ಲಿ ಗಿಡಗಳು ಬೆಳೆಯುವಿಕೆಗೆ ಪ್ರಾಮುಖ್ಯತೆ ನೀಡಲಾಗುತ್ತದೆ.



ಫೋಟೋ ಕೃಪೆ: ‘ಸಿಗಂದಿನಿ ನರ್ಸರಿ’, ಕೊಡಸಾರ, ಸಿದ್ದಾಪುರ, ಉ.ಕ., ವಾಟ್ಸಾಪ್: 09686713468. ಇಲ್ಲಿ ಸಿಗಂದಿನಿ ಹಾಗೂ ಸ್ಥಳೀಯ ಕಾಳುಮೆಣಸಿನ ತಳಿಯ ಗಿಡಗಳು ಯಥೇಚ್ಛವಾಗಿ ಲಭ್ಯವಿದೆ.
ಇತರ ಉತ್ತಮ ತಳಿಗಳು ಮಿತ ಪ್ರಮಾಣದಲ್ಲಿ IISR, ಅಪ್ಪಂಗಳ, ಕೊಡಗು, ಸ್ಪೈಸಸ್ ಬೋರ್ಡ ನರ್ಸರಿ, ಬೆಳಿಗೇರಿ, ಕೊಡಗು, IISR, ಪೆರುವಣ್ಣಾಮುಯಿ, ಕೋಯಿಕ್ಕೋಡ್, ಕೇರಳದಲ್ಲೂ ಲಭ್ಯವಿದೆ.
ಕಾಳುಮೆಣಸಿನ ಬಳ್ಳಿಗಳ ಸಂರಕ್ಷಣೆ
ನರ್ಸರಿಗಳಲ್ಲಿ ಹಾಗೂ ತೋಟಗಳಲ್ಲಿ ಸೊರಗು ರೋಗಕ್ಕೆ ತುತ್ತಾಗದಂತೆ ಬಳ್ಳಿಗಳನ್ನು ಸಂರಕ್ಷಿಸಲು ಕಾಪರ್ ಆಕ್ಸಿ ಕ್ಲೋರೈಡ್ 1% ದ್ರಾವಣ ಮಣ್ಣನ್ನು ತೋಯಿಸಲು ಬಳಸಬೇಕು.
ಸಾವಯವ ಕೃಷಿಕರು ಬೇವಿನಹಿಂಡಿ ಜೊತೆಗೆ ಟ್ರೈಕೊಡರ್ಮ ಮಿಶ್ರಮಾಡಿ ಬೇಸಿಗೆಯಲ್ಲಿ ಬುಡಕ್ಕೆ ಹಾಕಿ ಪ್ರತಿರೋಧಕತೆ ಉಂಟುಮಾಡಬಹುದು. ಸ್ಯುಡೋಮೋನಸ್, ಟ್ರೈಕೋಡರ್ಮ ಮಿಶ್ರಣವನ್ನು ಉಪಯೋಗಿಸಬಹುದು.
ತೋಟಗಳಲ್ಲಿ ಹತೋಟಿಗಾಗಿ ಎಕೊಮಿನ್ ಹ್ಯೂಮಿಕ್ ಆಮ್ಲ, ಮುಂತಾದವುಗಳನ್ನು ಬಳಸಬಹುದು.
ಉತ್ತಮ ಬೇರಿನ ಪರಿ ಚರಣೆ ಕಾಳುಮೆಣಸಿನ ಆರೋಗ್ಯಕ್ಕೆ ಮುಖ್ಯ.
ಸೊರಗು ರೋಗ ಎಲೆ ಚುಕ್ಕೆ ರೋಗಗಳ ಹತೋಟಿಗೆ ಕಾಪರ್ ಆಕ್ಸಿ ಕ್ಲೋರೈಡ್ ಹಾಗೂ ಮೇಟಲಕ್ಸಿಲ್+ಮಂಕೊಜೆಬ್ (ಕಂಪ್ಯಾನಿಯನ್) ಬಳಕೆ ಮಾಡಬಹುದಾಗಿದೆ.
ಕೊಲ್ಲೇಟೋಟ್ರೈಕಂ ಎಲೆ ಚುಕ್ಕೆ ರೋಗ ಹತೋಟಿಗೆ ಕಾರ್ಬೆನ್ದಾಝಿಮ್ ಮತ್ತು ಮಾಂಕೊಜೆಬ್ ಬಳಸಬಹುದು.
ನರ್ಸರಿಗಳಲ್ಲಿ ಉತ್ತಮ ಬೆಳವಣಿಗೆಗೆ 10:26:26 ಪೋಷಕಾಂಶಯುಕ್ತ ರಸಗೊಬ್ಬರವನ್ನು ಎಲೆಗಳಿಗೆ ಸಿಂಪಡಿಸಬಹುದು. ಮಳೆಗಾಲದ ನಂತರ ಗಿಡಗಳಿಗೆ ಜಿಂಕ್ ಸಲ್ಫೇಟ್, ಮೆಗ್ನೀಷಿಯಂ ಸಲ್ಫೇಟ್, ಬೋರೋನ್ ಗಳನ್ನು ನೀಡಬಹುದು. ಇದರಿಂದ ಉತ್ತಮ ಬೆಳವಣಿಗೆ ಹಾಗೂ ರೋಗ ಪ್ರತಿರೋಧಕತೆ ಉಂಟಾಗುತ್ತದೆ.
ಕಾಳುಮೆಣಸಿನ ಕಜ್ಜಿ ಕೀಟಗಳ ನಿರ್ವಹಣೆಗೆ ಕೀಟನಾಶಕ ಡೈಮಿಥೋಯೇಟ್ ಅಥವಾ 0.2 ಪರ್ಸೆಂಟ್ ರೋಗರ್ ನೀಡಬಹುದು.
ಬೇರಿನ ಹಿಟ್ಟು ತಿಗಣೆ ಕಾಟ ತಡೆಗಟ್ಟಲು ಮುಂಚಿತವಾಗಿ ಬೇವಿನಹಿಂಡಿ ಬಳಸುವುದು ಉತ್ತಮ. ಕೀಟಬಾಧೆ ಉಂಟಾದ ಮೇಲೆ ಹತೋಟಿಗಾಗಿ ಕ್ಲೋರೋಪೈರಿಫಾಸ್ ಸಿಂಪರಣೆ ಮಾಡಬೇಕಾಗುತ್ತದೆ. ಕಾರ್ಬೋಫ್ಯೂರಾನ್ ಬಳಕೆ ಕೂಡ ಮಾಡುವುದಿದೆ.
ಕಾಳುಮೆಣಸಿನ ಕಟ್ಟಿಂಗ್ ಗಳನ್ನು ನರ್ಸರಿಗೆ ಹಾಕುವಾಗ ಅವನ್ನು ಶಿಲೀಂದ್ರನಾಶಕ ಮತ್ತು ಗೋಮೂತ್ರ ಮಿಶ್ರಣಕ್ಕೆ ಅದ್ದುವುದರಿಂದ ಅವುಗಳಲ್ಲಿ ಉತ್ತಮಬೇರು ಮೂಡುವಿಕೆ ಹಾಗೂ ಬೆಳವಣಿಗೆ ಉಂಟಾಗುತ್ತದೆ.


ಹವಾಮಾನ ಆಧಾರದ ಕೃಷಿ ಚಟುವಟಿಕೆಗಳು
ಹವಾಮಾನ ನಿರೀಕ್ಷಣೆಯ ಪ್ರಕಾರ ತಮ್ಮ ಅನುಭವಗಳನ್ನು ಹಂಚಿಕೊಂಡ ಶ್ರೀ ಪಿ ಜಿ ಎಸ್ ಎನ್ ಪ್ರಸಾದ್ ಅವರು ಇತ್ತೀಚೆಗೆ ಕೆಲವು ವರ್ಷಗಳಿಂದ ವ್ಯಾಪಕವಾಗಿ ಮಳೆ ಎಲ್ಲ ತಿಂಗಳುಗಳಲ್ಲಿ ಲಭಿಸುವುದು ಹವಾಮಾನ ವ್ಯತ್ಯಯ ಎಂದು ಅಭಿಪ್ರಾಯಪಟ್ಟರು. ಜಾಗತಿಕ ತಾಪಮಾನ ಏರಿಕೆಯಿಂದಲೂ ವಾತಾವರಣ ಮಲಿನೀಕರಣ ಆಗುವುದರಿಂದಲೂ ಈ ರೀತಿಯ ವ್ಯತ್ಯಯಗಳು ಉಂಟಾಗುವುದು ಆಗಿರಬಹುದು ಎಂದು ಅವರು ಅಭಿಪ್ರಾಯಪಟ್ಟರು. ಈ ರೀತಿ ಹವಾಮಾನ ವ್ಯತ್ಯಯಗಳಿಂದಾಗಿ ಕೃಷಿಕರಿಗೆ ನಿರೀಕ್ಷೆಗಿಂತ ಹೆಚ್ಚು ಖರ್ಚುವೆಚ್ಚಗಳನ್ನು ಭರಿಸಬೇಕಾಗುತ್ತದೆ ಅಷ್ಟೇ ಅಲ್ಲದೆ ಹಲವಾರು ರೋಗ ಮತ್ತು ಕೀಟಗಳನ್ನು ಎದುರಿಸಬೇಕಾಗುತ್ತದೆ ಎಂದು ತಿಳಿಸಿದರು.
ಬೆಳೆಯ ಸಂಸ್ಕರಣಾ ಗುಣಮಟ್ಟವು ಕೂಡ ಈ ರೀತಿ ಮಳೆ ಬರುವುದರಿಂದ ಕುಗ್ಗುತ್ತದೆ ಮಾತ್ರ ಅಲ್ಲ ಒಣಗಿಸುವುದಕ್ಕಾಗಿ ಶ್ರಮ ಹಾಗೂ ಹಣ ವಿನಿಯೋಗಿಸಬೇಕಾಗುತ್ತದೆ ಎಂದು ತಿಳಿಸಿದರು. ಈ ವರ್ಷ ಅಂದರೆ 2021ರಲ್ಲಿ ಬೇಸಿಗೆ ಮಳೆ ಮತ್ತು ವರ್ಷದ ಒಟ್ಟು ಮಳೆಯ ಪ್ರಮಾಣ ಸರಾಸರಿಗಿಂತ ಹೆಚ್ಚು ಲಭಿಸಿದೆ. ಆದರೆ ಜೂನ್-ಜುಲೈ ತಿಂಗಳುಗಳಲ್ಲಿ ಮಳೆ ಲಭಿಸಿದ್ದು ತೀರಾ ಕಡಿಮೆ ಎಂದು ತಿಳಿಸಿದರು. ಮುಂದಿನ ಸೆಪ್ಟೆಂಬರ್ ಅಕ್ಟೋಬರ್ ತಿಂಗಳುಗಳಲ್ಲಿ ಹೆಚ್ಚುವರಿ ಮಳೆ ಸರಾಸರಿಗಿಂತ ಹೆಚ್ಚು ಲಭಿಸುವ ಮುನ್ಸೂಚನೆಯಿದ್ದು ಅಡಿಕೆ ಮರಗಳಿಗೆ ಕೊಳೆರೋಗ ನಿಯಂತ್ರಣಕ್ಕೆ ಸಿಂಪರಣೆ ಮಾಡುವುದು ಉತ್ತಮ ಎಂದು ಶ್ರೀ ಪ್ರಸಾದ್ ಅಭಿಪ್ರಾಯಪಟ್ಟರು.
ಶ್ರೀ ಪಿ ಜಿ ಎಸ್ ಎನ್ ಪ್ರಸಾದ್ ಅವರ ಸಂವಾದದ ಸಂಪೂರ್ಣ ವಿವರ ಈ ಸುಳ್ಯ ಮಿರರ್ ಲಿಂಕ್ ನಲ್ಲಿದೆ.
https://sulliamirror.com/2021/09/rain-report/
ವರದಿ: ಮುರಲೀಕೃಷ್ಣ ಎಡನಾಡು
ಫೋಟೋಗಳು: ಅಧಿಕೃತ ವ್ಯಕ್ತಿಗಳಿಂದ. ಹಕ್ಕುಗಳು ಕಾಯ್ದಿರಿಸಲ್ಪಟ್ಟಿವೆ.