ಕಡಿಮೆ ಮಾತನಾಡಿ, ಮೆಲ್ಲಗೆ ಮಾತನಾಡಿ, ಯೋಚಿಸಿ ಮಾತನಾಡಿ, ಮಧುರವಾಗಿ ಮಾತನಾಡಿ, ಪ್ರೀತಿಯಿಂದ ಮಾತನಾಡಿ, ಗೌರವದಿಂದ ಮಾತನಾಡಿ. ಇದು ಮಾತಿನ ಬಗ್ಗೆ ಆರ್ಷ ಋಷಿಮುನಿಗಳು ನುಡಿದ ಬಿಂದುಗಳು. ಆದರೆ ಜನ ಸಾಮಾನ್ಯರು ಇದನ್ನು ಚಾ-ಚೂ ತಪ್ಪದೆ ಪಾಲಿಸುತ್ತಾರಾ? ಪಾಲಿಸುವುದಕ್ಕೆ ಆಗುತ್ತಾ? ಎಂದು ಕೇಳಿದರೆ; ಪ್ರಯತ್ನಮಾಡುವೆ. ಪ್ರಯತ್ನಿಸಿಯೂ ಆಗದಿದ್ದರೆ ಇಲ್ಲ ಎನ್ನದೆ ವಿಧಿಯಿಲ್ಲ. ಕೆಲವು ವೇಳೆ ಹೇಳಬೇಕೆಂದಿದ್ದ ಮಾತು ಮೌನ ವಹಿಸುತ್ತದೆ. ಹಾಗೆಯೇ ಮೌನ ವಹಿಸಬೇಕಾದ ಸಂದರ್ಭದಲ್ಲಿ ಮಾತು ಬಿಗಡಾಯಿಸಿ ಬಿಡುತ್ತದೆ. ಇನ್ನು, ಮಾತು ಮುರಿಯುವ ಸಂದರ್ಭವೂ ಇದೆ. ಮಾತನ್ನು ಅಲ್ಲಗಳೆಯುವಿಕೆಗೆ ಮಾತು ಮುರಿಯುವುದು ಎನ್ನುತ್ತಾರೆ. ಅದು ಮಾತ್ರ ಇಬ್ಬರ ನಡುವೆ ಒಮ್ಮೆ ಬಿಗಡಾಯಿಸಿ ಮತ್ತೆ ಶೀತಲ ಯುದ್ಧಕ್ಕೆಡೆಮಾಡುವ ಕ್ಷಣ.
ಗಂಡ-ಹೆಂಡಿರ ಜಗಳದಲ್ಲಿ, ಅಪ್ಪ-ಮಕ್ಕಳ ವಾಗ್ವಾದದಲ್ಲಿ, ಮಾತು ಮೌನ ವಹಿಸಿದರೆ ಲೇಸು. ಇಂತಹ ಸಂದರ್ಭದಲ್ಲಿ ಜಾಗ್ರತೆ ವಹಿಸಿದರೆ ಒಳ್ಳೆಯ ವಾತಾವರಣ ಸೃಷ್ಟಿಯಾಗುತ್ತದೆ. ಇಲ್ಲದೆ ಹೋದರೆ ಪುಟ್ಟ ಮಕ್ಕಳಿದ್ದಲ್ಲಿ ಅವುಗಳ ಮೇಲೆ ದುಷ್ಪರಿಣಾಮ ಆಗಿಯೇ ಆಗುತ್ತದೆ. ಉದಾಹರಣೆಗೆ ಹೇಳುವುದಾದರೆ, ಕುಡುಕರ ಮನೆಯ ಮಕ್ಕಳು ಇಂತಹ ವಾತಾವರಣದಲ್ಲಿ ಬೆಳೆದರೆ ಹೇಗೆ ತಾನೇ ಸಂಸ್ಕಾರವಂತರಾಗಲು ಸಾಧ್ಯ? ಪ್ರಾಯಕ್ಕೆ ಬಂದ ಮಗನಿಗೂ ಅಪ್ಪನಿಗೂ ಮಾತು-ಮಾತು ಬೆಳೆದು ಹದಮೀರಿದರೆ, ಪುಟ್ಟ ಮಕ್ಕಳಿದ್ದಲ್ಲಿ ಅವುಗಳೂ ಆ ನಡತೆಯನ್ನು ಅನುಕರಿಸುತ್ತವೆ ತಾನೇ? ಕ್ರೋಧವು ಬುದ್ಧಿಯನ್ನು ತಿನ್ನುತ್ತದೆಯಂತೆ. ಹಾಗೆಯೇ ಕುಡುಕನ ಪತ್ನಿ, ಪತಿಯ ದುರ್ಗುಣಕ್ಕೆ ಚಿಂತಿಸಿ; ತನ್ನ ಆರೋಗ್ಯ, ಆಯುಸ್ಸನ್ನು ಹಾಳುಮಾಡಿಕೊಳ್ಳುವುದು ಸಹಜ ತಾನೇ.
ಆತ್ಮೀಯರಲ್ಲೂ ಸಹ ಕೆಲವು ವೇಳೆ ಅಸಮಾಧಾನ ಏರ್ಪಟ್ಟು ಒಳಗೊಳಗೇ ಕತ್ತಿ ಮಸೆಯುವಂತಾಗುತ್ತದೆ. ಇಂತಹ ವೇಳೆ ಮೌನ ಮುರಿದು ಮೊದಲಿನ ಸ್ಥಿತಿಗೆ ಬರಲು ಹವಣಿಸುವುದು ಲೇಸು. ಒಳಗಿನ ಚಿಕ್ಕ-ಪುಟ್ಟ ಜಿದ್ದು ಹೊರಗೆ ತೋರ್ಪಡಿಸದೆ; ಅನ್ಯರಿಗೆ ಇವರು ಅದೆಷ್ಟು ಆತ್ಮೀಯರೆಂದು ಹುಬ್ಬೇರಿಸುವ ಸನ್ನಿವೇಶವೂ ಇಲ್ಲದಿಲ್ಲ. ಅನ್ಯೋನ್ಯತೆಯ ಒಂದು ಜೋಡಿ ದಂಪತಿಗಳಿದ್ದರು. ಯಾರಾದರೂ ಅಥಿತಿಗಳೋ ಆತ್ಮೀಯರೋ ಆಗಮಿಸಿದಲ್ಲಿ ಅವರ ಪರಸ್ಪರ ಸಂಭಾಷಣೆ; ಗಂಡ, ಹೆಂಡತಿಯನ್ನು ಹೊಗಳುವುದು, ಹೆಂಡತಿ, ಗಂಡನನ್ನು ಹೊಗಳುವುದು ಇದೇ ಪರಿಪಾಠ! ಆಗಂತುಕರಿಗೆ ಪತಿ-ಪತ್ನಿಯೆಂದರೆ ಹೀಗಿರಬೇಕು! ಅನ್ನಿಸಿದರೆ ಅತಿಶಯೋಕ್ತಿಯಲ್ಲ. ಬಂದವರು ನಿರ್ಗಮಿಸಿದ ತಕ್ಷಣ ಇವರ ಜಗಳ! ಹಿಂದೆ ಬಾಕಿಯಾದ್ದಕ್ಕೆಲ್ಲ ಬಡ್ಡಿಯನ್ನೂ ಸೇರಿಸಿ ಸಂದಾಯ!! — ಪ್ರಜ್ಞೆ ಇಲ್ಲದಿದ್ದಲ್ಲಿ ಪ್ರೀತಿ ವ್ಯರ್ಥ.