ಕೊರತ್ತಿ ಭೂತ—ಮಕ್ಕಳ ಕತೆ

ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ತೀರಿಸಿ, ಊಟದ ಶಾಲೆಯ ಹೊರಗಿರುವ ಮರದ ನೆರಳಿನ ಕಲ್ಲುಬೆಂಚಿನಲ್ಲಿ ತುಸು ಹೊತ್ತು ಕೂರುವುದು ಹರ್ಷ ಮತ್ತು ಗುಂಪಿನ ಮೂವರು ಗೆಳೆಯರ ಅಭ್ಯಾಸ. “ಆನಂದ, ಸುಮುಖ, ಲೈಬ್ರೆರಿಗೆ ಹೋಗೋಣ್ವಾ?”, ಹರ್ಷ ಗೆಳೆಯರನ್ನು ಕರೆದ. ಮಾಮೂಲಿಯಂತೆ ತುಸು ಹೊತ್ತು ಅಲ್ಲಿ ಕುಳಿತಿದ್ದು ಮತ್ತೆ ಲೈಬ್ರೆರಿಗೋ ಒಳಗಿನ ಕ್ರೀಡೆಗಳಾದ ಚೆಸ್, ಕೇರಂ ಅಥವಾ ಲೂಡೊ ಆಡುವುದೋ ಅವರ ದಿನಚರಿಯಾಗಿತ್ತು. “ಬೇಡ ಕಣೋ, ನಿನ್ನೆ ನಿನ್ನ ಅಜ್ಜಿ ಹೇಳಿದ ಕತೆ ನಂಗೆ ಈಗ ಹೇಳೊ?” ಸುಮುಖನ ಆಗ್ರಹ! ಸ್ನೇಹಿತನ ಮಾತಿಗೆ ಹರ್ಷ, “ನಿನ್ನೆ ಅಜ್ಜಿ ಹೇಳಿದ ಕತೆ…, ಯಾವುದಪ್ಪಾ…, ಯಾವುದೋ ಆನಂದ?”. ಹರ್ಷನ ಅಜ್ಜಿ ಹೇಳುವ ಕತೆ ಕೇಳೋಕೆ ಪಕ್ಕದ ಮನೆಯವನೇ ಆದ ಆನಂದನಿಗೆ ಅವಕಾಶವಿತ್ತಾದರೂ ಇನ್ನೊಂದೂರಲ್ಲಿರುವ ಸುಮುಖ ಆ ಅವಕಾಶದಿಂದ ವಂಚಿತನಾಗಿದ್ದ. ಆದರೆ ತನಗದು ಸಿಗದ ಕೊರತೆಯ ಕೊರಗು ಸದಾ ಸುಮುಖನ ಮನಸ್ಸಿನ ಮೂಲೆಯಲ್ಲಿದೆ. ಅಂತಲೇ ಆತ ಹರ್ಷನ ಮುಂದೆ ತನಗೂ ಅದನ್ನು ಹೇಳೆಂದು ವರಾತ ಕುಟ್ಟುತ್ತಿರುತ್ತಾನೆ. “ಯಾವುದೋ ಇನ್ನೊಂದು ಭೂತದ ಕತೆಯಂತೆ! ಯಾವುದೆಂದು ಇಂದಿಗೇ ಮರೆತು ಬಿಟ್ಟಿಯಾ? ಅಥವಾ ನನಗೆ ಹೇಳೋದಕ್ಕೆ…..” ಮಾತು ಅರ್ಧಕ್ಕೇ ಕೊನೆಗೊಳಿಸಿ ಸಪ್ಪೆ ಮೋರೆ ಮಾಡಿದ ಆನಂದನನ್ನು ನೋಡುತ್ತಾ, ಪಾಪ…ಅಜ್ಜಿ ಇದ್ದರೂ ಅಜ್ಜಿಯ ಕತೆ ಈತನಿಗೆ ಸಿಗೋದಿಲ್ಲ! ತನಗೆ ಸಿಕ್ಕಿದ್ದನ್ನು ಸ್ನೇಹಿತನೊಂದಿಗೆ ಹಂಚಿಕೊಳ್ಳಲೇ ಬೇಕು. “ಬೇರೆಯವರೊಂದಿಗೆ ಹಂಚಿಕೊಂಡಷ್ಟೂ ಸಾಹಿತ್ಯ ಸರಸ್ವತಿಯು ಹೆಚ್ಚಾಗುತ್ತಾಳೆ” ಅಜ್ಜಿ ಯಾವತ್ತೋ ಹೇಳಿದ ಕಿವಿಮಾತು ಹರ್ಷನಿಗೆ ನೆನಪಾಗುತ್ತದೆ! ಚುರುಕಾಗಿ “ಹಾಂ…ಕೊರತ್ತಿ ಭೂತದ ಕತೆ, ಅಲ್ವೇನೊ ಆನಂದ?” ಹೌದೆಂದು ಉತ್ಸುಕನಾಗಿ ಹೇಳುವುದಕ್ಕೆ ರೆಡಿಯಾದ ಹರ್ಷ.

Temple

ಕೊರತ್ತಿ ಎಂಬ ಒಂದು ತುಂಡು ಭೂತ ಇದೆಯಂತೆ! ಮನೆಯ ಪಕ್ಕ ಇದ್ದ ಅಡಿಕೆ ಅಥವಾ ಇನ್ನಿತರ ತೋಟದ ಮಧ್ಯೆ ನೀರಿನಕೊಳ, ವನ, ಇದ್ದಲ್ಲಿ ಅದರ ವಾಸವಂತೆ. ಆ ತೋಟವನ್ನು ಕಳ್ಳ-ಕಾಕರಿಂದ ಕಾಯುವ ದೇವಿಯಂತೆ ಕೊರತ್ತಿ! ಹರ್ಷನ ಅಂತೆ!, ಕಂತೆ!, ಸಂತೆ!, ಕತೆಯನ್ನು ಕಿವಿ ನಿಮಿರಿಸಿ, ಬಾಯರಳಿಸಿ ಕೇಳುತ್ತಿದ್ದ   ಸುಮುಖನನ್ನೊಮ್ಮೆ, ಉತ್ಸಾಹಿಯಾಗಿ ಹೇಳುತ್ತಿದ್ದ  ಹರ್ಷನನ್ನೊಮ್ಮೆ, ನೋಡುತ್ತಿದ್ದ ಆನಂದ. 

ವಿಠಲ ಮಾವ ಎಂದು ಅಜ್ಜಿಯ ಸಂಬಂಧಿಯೊಬ್ಬರು ಇದ್ದರಂತೆ. ಅವರು ಭೂತ ಪಿಶಾಚಿಗಳನ್ನು ಜೋರು ನಂಬೋರಂತೆ. ಪ್ರಾಯಸ್ಥರಾದ ಅವರಿಗೆ ನಡು ರಾತ್ರಿ ಎಚ್ಚರವಾದರೆ ನಿದ್ದೆಯೇ ಇಲ್ಲವಂತೆ. ಮನೆಯ ಸುತ್ತು-ಮುತ್ತು ಗೆಜ್ಜೆ ಹಾಕ್ಕೊಂಡು ಓಡಾಡಿದಂತೆ ಶಂಖನಾದ ಕೇಳಿಸುವುದಂತೆ. ಅವರ ಮನೆ ಎತ್ತರ ಪ್ರದೇಶದಲ್ಲಿದ್ದರೆ, ತೋಟ, ಕೆರೆಯಿರುವ ಜಾಗ, ಹತ್ತು ಮೀಟರುಗಳಷ್ಟು ತಗ್ಗು ಪ್ರದೇಶ.

ಒಮ್ಮೆ ವಿಠಲ ಮಾವನ ಮಗ ಊರಿಗೆ ಬಂದಿದ್ದ. ಅವನಿಗೆ ಭೂತದ ಬಗ್ಗೆ ಬಲವಾದ ನಂಬಿಕೆಯೇನೂ ಇರಲಿಲ್ಲವಂತೆ. ಏನಿದು ಗೆಜ್ಜೆಯ ಸದ್ದು? ಎಂಬ ಕುತೂಹಲದಿಂದ ರಾತ್ರಿ ಆತ ಅಪ್ಪನಲ್ಲಿ ಹೇಳದೆ ನೀರಿನ ಕೊಳದ ಬಳಿಗೆ ನಡೆದನಂತೆ. ಗೆಜ್ಜೆಯ ಸದ್ದನ್ನ ಕೇಳಿ ಮಾತ್ರವಲ್ಲ ಕಣ್ಣಾರೆ ಕಂಡು ಬಂದನವ!. “ಅಪ್ಪಾ, ಕೊರತ್ತಿಯ ಗೆಜ್ಜೆ ಕುಣಿತವನ್ನ ನಾನು ನೋಡಿ ಬಂದೆ!” ಎಂದಾಗ ವಿಠಲ ಮಾವನಿಗೆ ಒಂದು ಕ್ಷಣ ಎದೆ ಧಸಕ್ಕೆಂದು ಬಿಡ್ತು.  “ಅಪ್ಪಾ, ಹೆದರ ಬೇಡ. ಅದು ಯಾವ ಭೂತವೂ ಅಲ್ಲ. ಏನೆಂದು ಹೇಳಬೇಕೇ? ರಾತ್ರಿ ಜೀರುಂಡೆ ಕೀಟ ಕೂಗಿದಾಗಲೆಲ್ಲ ನೀರಿನ ಝರಿಯ ಸದ್ದಿನೊಂದಿಗೆ ಸೇರಿ ಗೆಜ್ಜೆಯ ಕುಣಿತದಂತೆ ಕೇಳಿಸುತ್ತದೆ! ಅದು ಬಿಟ್ಟರೆ ಬೇರೇನೂ ಹೆದರುವ ಹಾಗಿಲ್ಲಪ್ಪ”, ಎಂದನವ.

ಇನ್ನೊಮ್ಮೆ  ಅಜ್ಜಿಯಲ್ಲಿ, ಅಡಿಕೆ ತೋಟ ಕಾಯುವ ಐತ್ತಪ್ಪನ ಹೆಂಡತಿ ಕೆಲಸದ ಕಮಲಿ,  ಒಂದು ದಿನ  “ಅಕ್ಕಾ, ನಮ ತೋಟೊಡು ಪುಲ್ಯಾಲೊಗು ಕೊರತ್ತಿ ಭೂತೊ ತೂತೆರಿಗೆ ಎನ ಕಂಡಣಿ” (ಅಕ್ಕಾ..,ನಮ್ಮ ತೋಟದಲ್ಲಿ  ಪ್ರಾತಃಕಾಲ ಕೊರತ್ತಿ ಭೂತವನ್ನು ನನ್ನ ಗಂಡ ನೋಡಿದ್ದಾರಂತೆ.) ಎಂದಾಗ ಅದು ಎಲ್ಲಿ? ತೋಟದ ಯಾವ ಭಾಗದಲ್ಲಿ? ವಿವರ ಕೇಳಿಕೊಂಡಳಂತೆ ಅಜ್ಜಿ.

– ವಿಜಯಾ ಸುಬ್ರಹ್ಮಣ್ಯ, ಕುಂಬಳೆ. 
ಈ-ಮೈಲ್: vijikarthikeya@gmail.com

1 thought on “ಕೊರತ್ತಿ ಭೂತ—ಮಕ್ಕಳ ಕತೆ”

  1. Vijayasubrahmanya

    ಧನ್ಯವಾದಗಳು ಪ್ರಕಟಿಸಿದ ಸಂಪಾದಕರಿಗೆ

Leave a Comment

Your email address will not be published. Required fields are marked *

Scroll to Top