ಹೆತ್ತತಾಯಿ, ಹೊತ್ತಮಾತೆ [ಭೂಮಾತೆ] ಅನುಗಾಲವೂ ಪೂಜನೀಯಳು. ನಮ್ಮ ಸಂಸ್ಕೃತಿಯಲ್ಲಿ ಹಿರಿಯರಿಂದ ಆಶೀರ್ವಾದ ಪಡೆಯುವಾಗ ಹಿರಿಯರ ಪಾದದ ಬುಡದಲ್ಲಿ ಭೂಮಿಗೆ ನಮ್ಮ ಕೈ ಸ್ಪರ್ಶಿಸಿ ಹಣೆಗೆ ಒತ್ತಿಕೊಳ್ಳುವುದು ಸಂಪ್ರದಾಯ. ಮಣ್ಣು ಎಂಬುದು ಹೊನ್ನಿಗೆ ಸಮ! ನೀರು ಎಂಬುದು ಗಂಗೆ!.ಸಸ್ಯ ಆಹಾರದ ಮೂಲ ಮಾತ್ರವಲ್ಲ ನಾವು ಉಸಿರಾಡುವ ಆಮ್ಲಜನಕದ ಸೃಷ್ಟಿಯೂ ಹೌದು!!
ಭೂಮಿತಾಯಿ ಮಾತೃದೇವಿಗೆ ಸಮಾನ. ಭೂದೇವಿಯ ಸಮಸ್ತ ಚರಾಚರ ವಸ್ತುಗಳು ಮಾನವನಿಗೆ ಒಂದಿಲ್ಲೊಂದು ವಿಧದಲ್ಲಿ ಉಪಕಾರಿ, ಸಹಕಾರಿ. ಬೀಜಕ್ಕೆ ಚೇತರಿಸಿಕೊಳ್ಳಲು ನೀರು,ಗೊಬ್ಬರ, ಆರೈಕೆಗಳು ಬೇಕಾದಂತೆ ಮನುಷ್ಯನಿಗೂ ಯೋಗ್ಯ ನಾಗರಿಕನಾಗಿ ಬೆಳೆಯಲು ಪರಿಸರ, ಸಜ್ಜನರ ಸಾನ್ನಿಧ್ಯ, ಇವುಗಳೆಲ್ಲ ಅಗತ್ಯ.
ವೃಕ್ಷಕ್ಕೆ ಜ್ಯೋತಿಶಾಸ್ತ್ರದಲ್ಲೂ ಪ್ರಮುಖ ಸ್ಥಾನವಿದೆ. ಇಪ್ಪತ್ತೇಳು ನಕ್ಷತ್ರಗಳಿಗೆ, ಹನ್ನೆರಡು ರಾಶಿಗಳಿಗೆ, ನವಗ್ರಹಗಳಿಗೆ ಇವುಗಳಿಗೆಲ್ಲ ಹೊಂದಿಕೊಂಡು ಒಂದೊಂದು ವೃಕ್ಷಗಳಿವೆ.
ಹಾಗೆಯೇ ಮರವೆಂಬ ವರದಿಂದ ಒಬ್ಬ ಬೇಡರವ ವಾಲ್ಮೀಕಿಯಾಗಿ, ಅವಿನಾಶಿಯಾದ ರಾಮಾಯಣವನ್ನೇ ಬರೆದ ಕಥೆ ನಮಗೆ ತಿಳಿದಿರುವುದೇ ಆಗಿದೆ. ಹಲಫಲವಿಲ್ಲದ ಭೂಮಿ ಬೆಲೆಬಾಳದು ಹಾಗೂ ನಿರರ್ಥಕ. ಮರಗಳಿಂದ ನೆರಳು, ಫಲಪುಷ್ಪ, ಉರುವಲು, ಗೊಬ್ಬರ, ಮೋಪು, ಮೊದಲಾದ ಪ್ರಯೋಜನಗಳಲ್ಲದೆ ಅಪಾರ ವನೌಷಧಿಗಳೂ ದೊರೆಯುತ್ತವೆ. ವನೌಷಧಿಗಳು ಮಾನವನ ರೋಗವನ್ನು ನೀಗಿ, ಆರೋಗ್ಯ ಕಾಪಾಡುವಲ್ಲಿ ಮಹತ್ತರ ಪಾತ್ರವಹಿಸುತ್ತವೆ.