ಟೀಕೆಗೆ ಕಿವುಡರಾಗಿ ವರ್ತಿಸಿ—ಒಂದು ನುಡಿಮುತ್ತು

ಮ್ಮೆ ನಾವು ಕೆಲವು ಮಂದಿ ಮಹಿಳೆಯರು ಮಾತನಾಡುತ್ತಾ ಸಾಗುತ್ತಿದ್ದಾಗ, ಹಾದಿಯಲ್ಲಿ ಎದುರು ಸಿಕ್ಕಿದಾತ ಒಬ್ಬಾಕೆಯ ಕಿವಿಯಲ್ಲಿ ಏನೋ ಪಿಸುಗುಟ್ಟಿದ. ತುಸುಮುಂದೆ ಸಾಗಿದಾಗ ಆತ ಕಿವಿಗೂದಿದ್ದು ಅನ್ಯರು ಮಾಡಿದ ಟೀಕೆಯನ್ನು ಎಂಬುದಾಗಿ ತಿಳಿಯಿತು. ಆಕೆಯ ಮುಖ ವಿಕಾರದಿಂದ ಹಾಗೂ ಅವಳ ಮಾತಿನಿಂದ ಮನೋವೇದನೆ ಅರಿಯಿತು. ಅದು ನಮ್ಮ ಗುಂಪಿನ ಪ್ರತಿಯೊಬ್ಬರಿಗೂ ಹರಡಲು ತಡವಾಗಲಿಲ್ಲ. ಇತರರನ್ನು ಹೀನಾಯ ಶಬ್ದಗಳನ್ನು ಬಳಸಿ, ಒಬ್ಬರನ್ನು ಇನ್ನೊಬ್ಬರಲ್ಲಿ ವ್ಯಂಗ್ಯವಾಡುವುದನ್ನು ಎಲ್ಲೆಡೆ ಕಾಣುತ್ತೇವೆ. ಆಪ್ತರೆಂದು ಕರೆಸಿಕೊಳ್ಳುವವರೂ ಸುಳ್ಳು ಟೀಕೆ ಪ್ರಚಾರ ಮಾಡಿದಾಗ ಮನಸ್ಸು ಸಂಕಟ ಪಡುವುದು ಸಹಜ. ಮನದೊಳಗಿನ ದ್ವೇಷಾಸೂಯೆಗಳನ್ನು ಹೊರಹಾಕುವ ಒಂದು ಉಪಾಯವಿದು ಎನ್ನದೆ ವಿಧಿಯಿಲ್ಲ!

ಟೀಕೆಯಿಂದ ಗೆಲ್ಲುವ ಮನೋಭಾವ

ಸಮಾಜದಲ್ಲಿ  ಎಲ್ಲರೂ ಒಂದೇ ತೆರನಾಗಿರಲಾರರು. ನಮ್ಮ ಕೈಬೆರಳು ಕೂಡಾ ಒಂದೇ ತೆರನಾಗಿಲ್ಲ, ಅಂತೆಯೇ. ಇವುಗಳಲ್ಲಿ ಯತಾರ್ಥತೆಗೆ ಹೊರತಾಗಿ ಕಲ್ಪನಾತೀತವೇ ಅಧಿಕ ಎನ್ನಬಹುದು. ಇಂತಹ ಟೀಕೆಗಳಲ್ಲಿ ಅಸೂಯಾಪರ ಮನೋಭಾವವಿದ್ದು ಈ ಮೂಲಕ ಅಂಥವರು ತೃಪ್ತಿ ಪಡೆಯುತ್ತಿರಬಹುದು. ಹೆಚ್ಚಿನ ಟೀಕಾಕಾರರೂ ತಮಗೆ ದೊರೆಯದ ಅಥವಾ ತಾನು ಸಾಧಿಸಲಾಗದ್ದನ್ನು ಅನ್ಯರು ಸಾಧಿಸಿದರೆ, ವಿಕೃತ ಸಂತೋಷಿಗಳು ಈ ಮೂಲಕ ಸಮಾಧಾನ ಪಟ್ಟುಕೊಳ್ಳುತ್ತಾರೆ. ನಾವು ಯಾವುದೇ ಕೆಲಸವನ್ನ ಎಷ್ಟೇ ಸಮರ್ಥವಾಗಿ ಮಾಡಿದರೂ ಯಾವುದೋ ಒಂದು ಮೂಲೆಯಲ್ಲಿ ಟೀಕಿಸುವಾತ ಇಲ್ಲ ಎಂದು ಹೇಳಲಾಗದು. ಈ ರೀತಿಯ ದುಷ್ಟ ಹಂಚಿಕೆಗಳು ನಮ್ಮ ಮನ ನೋಯಿಸದೇ ಇರಲು ಸಾಧ್ಯವಿಲ್ಲ.

ಟೀಕೆಯು ನಾವು ಜಾಗೃತರಾಗಲು ಸಮಾಜ ನಿರ್ಮಿಸಿದ ಎಚ್ಚರಿಕೆಯ ಗಂಟೆ ಎಂಬುದಾಗಿ ನಾವು ತಿಳಿದುಕೊಂಡಲ್ಲಿ ನಮ್ಮ ಆರೋಗ್ಯಕ್ಕೂ ಹಿತವಾಗುವುದರೊಂದಿಗೆ ಆ ಮನೋಭಾವ ಬೆಳೆಸಿಕೊಳ್ಳುವುದು ಉತ್ತಮ. ದೇಹ ಮತ್ತು ಮನಸ್ಸುಗಳಿಗೆ ಕೆಟ್ಟ ಪರಿಣಾಮವಾಗದು.

ನಮ್ಮಲ್ಲಿ ಆತ್ಮವಿಶ್ವಾಸ ಬೆಳೆಸಿಗೊಂಡು ಅವುಗಳನ್ನು ಅಲ್ಲಗಳೆಯುವ ಅಥವಾ ಆ ತೆರನ ಮಾತುಗಳಿಗೆ ನಾವು ಕಿವುಡರಾಗಿ ವರ್ತಿಸುವ ಮನೋಭಾವ ಬೆಳೆಸಿಗೊಳ್ಳುವುದೇ ಉತ್ತಮ. ಜೀವನದಲ್ಲಿ ನಮಗೆ ಸಂತೋಷ ಪಡುವ ಹಕ್ಕಿದೆ. ಆದರೆ ಅನ್ಯರ ಸಂತೋಷ ಕಿತ್ತುಕೊಂಡಲ್ಲ ಎಂಬುದನ್ನು ಮರೆಯುವಂತಿಲ್ಲ.

ವಿಜಯಾಸುಬ್ರಹ್ಮಣ್ಯ, ಕುಂಬಳೆ
vijikarthikeya@gmail.com

Leave a Comment

Your email address will not be published. Required fields are marked *

Scroll to Top