ಕುಟುಂಬದಲ್ಲಿ ಸಾಮರಸ್ಯದ ಅಗಾಧತೆ ಹೇಗೆ…

ಆತ್ಮೀಯರಲ್ಲಿಗೆ  ಅಪರೂಪಕ್ಕೆ ಹೋಗಿದ್ದೆ. ಹತ್ತಿಪ್ಪತ್ತು ಜನರಿದ್ದ ತುಂಬಿದ ಕುಟುಂಬ. ಮನೆ ಮಂದಿಯಲ್ಲಿ ಎಂಥಾ ಬಾಂಧವ್ಯ! ಒಡನಾಟ, ಸಾಮರಸ್ಯ! ಮನೆಯೊಳಗೆ ಪ್ರೀತಿ ತುಳುಕುವ ವಾತಾವರಣ. ಮನೆಮೆಂಬರಲ್ಲಿ ಯಾರ ನೆಂಟರೋ ಆತ್ಮೀಯರೋ ಅವರೇ ಮಾತನಾಡಿಸಲಿ, ಎಂಬ ಜಾಯಮಾನ ಅಲ್ಲಿಲ್ಲ. ಒಂಟಿತನ ನೀಗುವ ಪರಿಸರ! ಇದ್ದರೆ ಇಂತಹ ಕುಟುಂಬ ಇರಬೇಕು ಅನಿಸದ್ದು ಆಶ್ಚರ್ಯವಲ್ಲ. ಮನೆಯವರಲ್ಲಿ  ಹೆಚ್ಚಿನ ಮಹಿಳೆಯರೂ ಮಹನೀಯರೂ ಹೊರಗೆ ಹೋಗಿ  ದುಡಿಯುವವರು. ಪ್ರತಿಯೊಬ್ಬರಲ್ಲೂ ಮಾತನಾಡಿಸಿದಾಗ, ಕೂಡು ಕುಟುಂಬಕ್ಕೆ ಕಾರಣ ಕೇಳಿದಾಗ; ತಮ್ಮ-ತಮ್ಮ ಹೆಗ್ಗಳಿಕೆ ಹೇಳಿಕೊಳ್ಳದೆ ಇತರ ಮನೆಮಂದಿಯನ್ನು ಬೊಟ್ಟು ಮಾಡುವ ದೊಡ್ಡ ಗುಣ ಪ್ರತಿಯೊಬ್ಬರಲ್ಲೂ ಕಂಡೆ! ಅತ್ತೆಯನ್ನು ಮಾತನಾಡಿಸಿದರೆ ಸೊಸೆಯಂದಿರನ್ನು ಹೊಗಳಿದರೆ; ಸೊಸೆಯರಲ್ಲಿ ಪ್ರಸ್ತಾಪಿಸಿದಾಗ ಅತ್ತೆಯನ್ನು, ಮಾವನನ್ನೂ ತೋರಿಸುವ ಇವರಲ್ಲಿ; ನೆಮ್ಮದಿಯ ಚುಕ್ಕಾಣಿ ಯಾರ ಕೈಯೊಳಗೆ ಎಂಬುದು ಆಳಕ್ಕೆ ಹೋಗದೆ ಅರಿಯದು ಎಂದೆಣಿಸಿದೆ. ಈ ಕಾಲಘಟ್ಟದಲ್ಲಿ ಇಂತಹ ತುಂಬಿದ ಸಂಸಾರ ಮೌನವಾಗಿ ಉಸಿರಾಡುತ್ತಿದೆಯೇ! ಅನಿಸಿದ್ದು ಸುಳ್ಳಲ್ಲ! ಆದರೆ ಇದರ ಗುಟ್ಟು ಅರಿಯಲು;  ಮನೆಮಂದಿಯೊಂದಿಗೆ ಒಂದಾಗಿ ಒಂದು ದಿನವಾದರೂ ತಂಗಬೇಕೆಂದೂ ಅದಕ್ಕೂ ಕಾಲಕೂಡಿಬರಬೇಕಲ್ಲ ಎಣಿಸಿದ್ದು ಅವರ ನೆಂಟಸ್ತಿಕೆ,ಪರಿಚಯವಾದಾಗಿಂದ. ಅದುಇಂದಿಗೆ ಕೈಗೂಡಿತೆಂದು ನಿಶ್ಚೈಸಿ ತಳವೂರಿದೆ. ರಾತ್ರಿ ಊಟದ ಮೊದಲು ಎಲ್ಲರೂ ಸಭೆ ಸೇರುವ; ಅಂದಿನ ಆಗು-ಹೋಗುಗಳ ಬಗ್ಗೆ ಅವರವರ ಅನುಭವ, ಹಾಗೆಯೇ ಅದರ ವಿಮರ್ಶೆ ಬಿಚ್ಚಿಡುವ, ಆ ಸಮಯವನ್ನು ಸದುಪಯೋಗ ಮಾಡಿಕೊಳ್ಳುವ ಮನೋಭಾವ ಸಂಪ್ರದಾಯ, ಅಲ್ಲಿ ಕಂಡೆ.

“ನಾಳೆ ಸಣ್ಣ ಸೊಸೆಯ ತವರಲ್ಲಿ ಎಂಗೇಜ್ ಮೆಂಟ್ ಯಾರೆಲ್ಲ ಹೋಗೋಣ?” ಎಂದ ಅತ್ತೆ ಉಳಿದಿಬ್ಬರು ಸೊಸೆಯರಲ್ಲಿ ಸೂಚನೆ ನೀಡುತ್ತಾ“ ಹೋದ ಸಲ ಅಲ್ಲಿ ನಡೆದ ಪೂಜಾ ಕಾರ್ಯಕ್ರಮಕ್ಕೆ ನಾನು ಹೋಗಿದ್ದೆ ಈ ಬಾರಿ ನೀವಿಬ್ಬರೂ ಹೋಗಿ ಬನ್ನಿ. ಮನೆಯಲ್ಲಿ ಉಳಿಯುತ್ತೇನೆ” ಎಂದು ಅಂತಿಮವಾಗಿ ನುಡಿದರು. ಉಳಿದವರು ತಲೆದೂಗಿದರು. ಅವರ ಯಜಮಾನಿಯ ಈ ನಿಷ್ಟೆಯನ್ನು ನಾನು ಮನಸಾರೆ ಮೆಚ್ಚಿಕೊಂಡೆ.

ಸೊಸೆಯಂದಿರನ್ನು ಸೊಕ್ಕಿ-ಸತಾಯಿಸುವ ಅತ್ತೆ ಅಲ್ಲಿಲ್ಲ! ಹಾಗೆಯೇ ಅತ್ತೆಯನ್ನು ವಾರೆ ನೋಡಿ, ವಾರೆಗಿತ್ತಿಯರಲ್ಲಿ ಓರೆ ಸನ್ನೆ ಮಾಡಿ; ನಗುವ ಸೊಸೆಯಂದಿರನ್ನೂ ಕಂಡಿಲ್ಲ!! ಇದ್ದರೆ ಇರಲಿ ಇಂತಹ ಸಂಸಾರ.. ಮನದಲ್ಲೆ ಗುನುಗಿದೆ!!!

ವಿಜಯಾಸುಬ್ರಹ್ಮಣ್ಯ, ಕುಂಬಳೆ
vijikarthikeya@gmail.com

1 thought on “ಕುಟುಂಬದಲ್ಲಿ ಸಾಮರಸ್ಯದ ಅಗಾಧತೆ ಹೇಗೆ…”

Leave a Comment

Your email address will not be published. Required fields are marked *

Scroll to Top