ಔಷಧಿ ಹಾಗೂ ಅಡುಗೆಯ ಆಗರ — ಕಾಡು ಕೊಡಗಸನ

ಮಾರ್ಚಿ, ಎಪ್ರಿಲ್ ತಿಂಗಳಲ್ಲಿ ಗುಡ್ಡೆ-ಕಾಡುಗಳಲ್ಲಿ ಯತೇಚ್ಛವಾಗಿ ಅರಳಿನಿಂತು ಕಾಣಸಿಗುವ ಕೊಡಗಸನ ಹೂ ಅಥವಾ ಕೊಡಸಿಗ (Holarrhena antidysenterica)  ವನದೇವಿಯ ಕೊಡುಗೆ! ಮನೆಮದ್ದು ಬಲ್ಲ ಹಿರಿಯರೂ ಆಯುರ್ವೇದ ತಜ್ಞರೂ ಈ ವನೌಷಧಿಯ ಆಗರವಾದ ಕಾಡು ಉತ್ಪತ್ತಿ ಕೊಡಗಸನ ಹೂವನ್ನು ಕಂಡರೆ ಬಿಡರು. ಅಷ್ಟೇ ಅಲ್ಲದೆ ಅದು ಅಡುಗೆಯಲ್ಲಿ ಬಳಸಲ್ಪಟ್ಟು ದೇಹಾರೋಗ್ಯವನ್ನೂ ಕಾಪಾಡುವುದಲ್ಲದೆ ವೈರಸ್ ನಿರೋಧಕ ಶಕ್ತಿಯೂ ಇದಕ್ಕಿದೆ.

ಅಡುಗೆಯಲ್ಲಿ ಕೊಡಗಸನ ಹೂವಿನ ತಂಬುಳಿ

ಬೇಕಾಗುವ ಸಾಮಾನು

ಒಂದು ಹಿಡಿಯಷ್ಟು ಒಳ್ಳೆಯ ಹೂವು, ನಾಲ್ಕು ದೊಡ್ಡ ಸ್ಪೂನ್ ತೆಂಗಿನಕಾಯಿತುರಿ, ಒಂದು ಕುಡುತೆಯಷ್ಟು ಮಜ್ಜಿಗೆ ಅಥವಾ ಮೊಸರು, ಒಂದು ಚಿಟಿಕೆ ಜೀರಿಗೆ, ಒಂದು ಸ್ಪೂನ್ ಉಪ್ಪು.

ಮಾಡುವ ವಿಧಾನ

ಹೂವನ್ನು ಆಯ್ದು, ತೊಳೆದು ಚೂರು ಬಿಸಿಮಾಡಿ ಬಾಡಿಸಿ, ತೆಂಗಿನತುರಿಯೊಂದಿಗೆ  ಜೀರಿಗೆ  ಉಪ್ಪು ಸೇರಿಸಿ, ಚೆನ್ನಾಗಿ ಅರೆದು; ಮೊಸರು ಬೆರೆಸಿ ತಂಬುಳಿಯ ಹದಕ್ಕೆಮಾಡಿಕೊಂಡರೆ; ಒಳ್ಳೆಯ ರುಚಿಕಟ್ಟಾದ ಪದಾರ್ಥ. ಆರೋಗ್ಯ ವರ್ಧಕ ಮಾತ್ರವಲ್ಲ ಬೇಸಿಗೆ ಕಾಲದಲ್ಲಿ  ಹೊಟ್ಟೆಗೂ ತಂಪು (ಇದಕ್ಕೆ ಒಗ್ಗರಣೆ ಅಗತ್ಯವಿಲ್ಲ). ಇದು  ಆಮಾತಿಸಾರ, ರಕ್ತಾತಿಸಾರ ಕಾಯಿಲೆಗೂ ಯೋಗ್ಯ ವ್ಯಂಜನ. 

ಕೊಡಗಸನ ಹೂವಿನ ಮೆಣಸುಕಾಯಿ
(ಒಂದು ಲೀಟರ್ ಅಳತೆಯ ಅಂದಾಜಿಗೆ)
ಎರಡು ಹಿಡಿ ಹೂವು, ದೊಡ್ಡ ನೆಲ್ಲಿಕಾಯಿ ಗಾತ್ರದಷ್ಟು ಹುಳಿ, ಹುಳಿಯ ಡಬ್ಬಲ್ ಬೆಲ್ಲ, ಎರಡು ಸ್ಪೂನ್ ಉಪ್ಪು,ಅರ್ಧ ಸ್ಪೂನ್ ಅರಸಿನಪುಡಿ,  ಎರಡು ಸ್ಪೂನ್ ತೆಂಗಿನೆಣ್ಣೆ (ಅಥವಾ ನೀವು ಅಡಿಗೆಗೆ ಬಳಸುವ ಎಣ್ಣೆ). ನಾಲ್ಕುಸ್ಪೂನ್ ಎಳ್ಳು, ಒಂದು ಚಿಟಿಕೆ ಉದ್ದಿನಬೇಳೆ, ಅಷ್ಟೇ ಮೆಂತೆ, ನಾಲ್ಕು ಮೆಣಸು.

ಮಾಡುವ ವಿಧಾನ
ಹಸಿ ಹೂ ಆದರೆ ಸಣ್ಣ ಉರಿಯಲ್ಲಿ ಸ್ವಲ್ಪ ಬಾಡಿಸಿಕೊಂಡು ತಯಾರಿಸುವ ಪಾತ್ರೆಯಲ್ಲಿ ಹಾಕಿ ಅದಕ್ಕೆ ಹಾಕುವ ಉಪ್ಪು, ಹುಳಿ, ಬೆಲ್ಲ, ಅರಸಿನ ಹಾಕಿ ಸಣ್ಣ ಉರಿಯಲ್ಲಿ ಒಂದೆರಡು ನಿಮಿಷ ಬೇಯಿಸಬೇಕು. ಆ ಮೇಲೆ ಅದಕ್ಕೆ ಹೇಳಿದ ಸಾಂಬಾರ ಜೀನಸು+ಮೆಣಸನ್ನು ಎಣ್ಣೆ ಹಾಕಿ ಸಣ್ಣ ಉರಿಯಲ್ಲಿ ಸ್ವಲ್ಪ ಹುರಿದುಕೊಂಡು, ತೆಂಗಿನಕಾಯಿ ತುರಿಯೊಂದಿಗೆ ಮಿಕ್ಸಿಯಲ್ಲಿ ನಯವಾಗಿ ಅರೆದು ಬೆಂದ ಹೂವಿನ ಪಾಕಕ್ಕೆ ಹಾಕಿ; ಸಾಂಬಾರಿನ ಪಾಕದಂತೆ ಮಾಡಿ ಕುದಿಸಿಕೊಂಡು ಸಾಸಿವೆ, ಮೆಣಸು, ಎಣ್ಣೆಯಲ್ಲಿ ಒಗ್ಗರಣೆ ಬೇವಿನೊಂದಿಗೆ ಒಗ್ಗರಣೆ ಕೊಟ್ಟರೆ ಸ್ವಾದಿಷ್ಟ ಮೆಣಸುಕಾಯಿ ತಯಾರು.

ಕೊಡಗಸನ ಹೂವನ್ನು ಬೇಸಿಗೆಯ ಬಿಸಿಲಲ್ಲಿ ಒಣಗಿಸಿಟ್ಟುಕೊಂಡರೆ;  ಮೆಣಸುಕಾಯಿ ವ್ಯಂಜನವನ್ನು ನಾವು ಒಣಗಿಸಿಟ್ಟ ಕೊಡಗಸನ ಹೂವಿನಿಂದಲೂ ಮಾಡಬಹುದು. ಅದಲ್ಲದೆ ಮೇ,ಜೂನ್ ಟೈಮಲ್ಲಿ ಗಿಡದಲ್ಲಿ ಸಿಗುವ ಕೊಡಗಸನದ ಎಳೆಕೋಡನ್ನು ಹೆಚ್ಚಿ ಬೇಯಿಸಿಕೊಂಡು  ಇದೇ ರೀತಿಯಲ್ಲಿ ತಯಾರಿ ಮಾಡಬಹುದಾಗಿದೆ. 

ಔಷಧಿಯಾಗಿ ಕೊಡಗಸನ

ಹಾಗೆಯೇ ಒಣಗಿಸಿದ ಹೂವನ್ನು ಎರಡು ಸ್ಪೂನಿನಷ್ಟು ಬಾಣಲೆಯಲ್ಲಿ ಹಾಕಿ ಒಂದು ಸ್ಪೂನು ಆಕಳ ತುಪ್ಪದೊಂದಿಗೆ  ಗರಿಗರಿಯಾಗುವಷ್ಟು ಹುರಿದು ಊಟದ ಮೊದಲ ತುತ್ತು ಅನ್ನಕ್ಕೆ ಸೇರಿಸಿ ಊಟ ಮಾಡುವುದರಿಂದ ಪ್ರಥಮ ಹಂತದ ರಕ್ತಾತಿಸಾರ ವಾಸಿಯಾಗುತ್ತದೆ. ’ಕುಟಜಾರಿಷ್ಟ’ ಎಂಬ ಆಯುರ್ವೇದ ಔಷಧಿಯು ಕೊಡಗಸನ ವನಸ್ಪತಿಯ ಸಾರವಾಗಿದೆ.

ವಿಜಯಾಸುಬ್ರಹ್ಮಣ್ಯ, ಕುಂಬಳೆ
vijikarthikeya@gmail.com

Leave a Comment

Your email address will not be published. Required fields are marked *

Scroll to Top