ಅಡಿಕೆ ಬೆಳೆಯಲ್ಲಿ ಬೇರುಹುಳ ಮತ್ತು ಬಸವನ ಹುಳಗಳ ನಿರ್ವಹಣೆ

ಕ್ಲಬ್ ಹೌಸ್ ಸಂವಾದ ಪಯಸ್ವಿನಿ ವೇದಿಕೆಯಲ್ಲಿ ಜರಗಿದ 01-08-2021 ರ ಕೃಷಿಕರ ಸಂವಾದದ ಮುಖ್ಯಾಂಶಗಳು:

ಸಂಪನ್ಮೂಲ ವ್ಯಕ್ತಿಗಳು:

ಶ್ರೀ ರಮೇಶ್ ದೇಲಂಪಾಡಿ, ಪ್ರಗತಿಪರ ಕೃಷಿಕರು, ಮರ್ಕಂಜ, ಸುಳ್ಯ.
ಡಾ| ಭವಿಷ್ಯ, ವಿಜ್ಞಾನಿ, ಸಿ ಪಿ ಸಿ ಆರ್ ಐ ಪ್ರಾದೇಶಿಕ ಕೇಂದ್ರ ವಿಟ್ಲ.
ಶ್ರೀ ರಮೇಶ್ ಕೊಲಾರ, ವಲಯ ಪ್ರಬಂಧಕರು, ಪಿ ಐ ಇಂಡಸ್ಟ್ರಿ.
ಡಾ| ಧನಂಜಯ ಬಿ. ಏನ್., ಮುಖ್ಯಸ್ಥರು, ಕೆ ವಿ ಕೆ, ಬ್ರಹ್ಮಾವರ ಉಡುಪಿ.

ಬೇರುಹುಳಗಳ ನಿರ್ವಹಣೆ

ಶ್ರೀ ರಮೇಶ್ ದೇಲಂಪಾಡಿಯವರು ಬೇರುಹುಳಗಳಿಂದ ತಮಗಾದ ನಷ್ಟ ಹಾಗೂ ಅದನ್ನು ತೊಡೆದು ಹಾಕಿ ಸಫಲತೆಯನ್ನು ಪಡೆದ ಪ್ರಯೋಗಗಳ ಯಶೋಗಾಥೆ ಮತ್ತು ಅನುಭವ ಕಥನವನ್ನು ವೇದಿಕೆಯಲ್ಲಿ ಹಂಚಿಕೊಂಡರು.ಇವರು ಪ್ರಗತಿಪರ ಕೃಷಿಕರಾಗಿದ್ದುಕೊಂಡು ಒಬ್ಬ ವಿಜ್ಞಾನಿಯಂತೆ ಈ ವಿಷಯದಲ್ಲಿ ಆಳವಾದ ಅಧ್ಯಯನದ ಮೂಲಕ ಒಬ್ಬ ಕೃಷಿಕನಾದವನು ಹೇಗೆ ಕೂಲಂಕುಷವಾಗಿ ಪರಿಶೀಲನೆ ನಡೆಸಬೇಕೆಂದು ತೋರಿಸಿ ಎಲ್ಲ ಕೃಷಿಕರಿಗೆ ಮಾದರಿಯಾಗಿದ್ದಾರೆ.

ಅವರ ಕಥನದಿಂದ ಆಯ್ದಭಾಗ ಇಂತಿದೆ:

ಬೇರುಹುಳವು ಒಂದು ರೀತಿಯ ದುಂಬಿ ಜಾತಿಗೆ ಸೇರಿದ ಕೀಟ. ಇದನ್ನು ಕರಾವಳಿ ಭಾಗದಲ್ಲಿ ಕುರುವಾಯಿ ಎಂದು ಕರೆಯುತ್ತಾರೆ. ಈ ಕೀಟದ ಲಾರ್ವವೇ ಬೇರುಹುಳ. ಇದರಲ್ಲಿ ಸಾಕಷ್ಟು ಹೆಚ್ಚು ಪ್ರಭೇದಗಳಿವೆ. ಇದರ ಸಮಸ್ಯೆಯು ಸ್ಥಳದಿಂದ ಸ್ಥಳಕ್ಕೆ ವ್ಯತ್ಯಾಸವಿರುತ್ತದೆ. ಹಾಗಾಗಿ ಒಂದು ಸ್ಥಳದಲ್ಲಿ ಕೈಗೊಳ್ಳುವ ಬೇರುಹುಳ ನಿರ್ವಹಣೆಯ ವಿಧಾನವು ಇನ್ನೊಂದು ಸ್ಥಳಕ್ಕೆ ಪರಿಣಾಮಕಾರಿಯಾಗದೇ ಇರಬಹುದು. ಸುಳ್ಯ ಭಾಗದಲ್ಲಿ Leucopholis burmeisteri ಎಂಬ ಜಾತಿಯ ಬೇರುಹುಳ ಹೆಚ್ಚಾಗಿ ಕಂಡುಬರುತ್ತದೆ. ಕರಾವಳಿ ಭಾಗದಲ್ಲಿ ಹಾಗೂ ಮಲೆನಾಡು ಭಾಗದಲ್ಲಿ Leucopholis coneophora ಎಂಬ ಜಾತಿಯ ಬೇರುಹುಳ ಹೆಚ್ಚಾಗಿ ಕಂಡುಬರುತ್ತದೆ. ಇನ್ನು ಕೆಲವೆಡೆ Leucopholis lepidophora ಕೂಡಾ ಕಂಡುಬರುತ್ತದೆ. ಬೇರುಹುಳ ಗಳಲ್ಲಿ ಏಕವಾರ್ಷಿಕ ಹುಳಗಳು ದ್ವಿವಾರ್ಷಿಕ ಹುಳಗಳು ಇರುತ್ತವೆ. ಅಂದರೆ ಕೆಲವು ಒಂದು ವರ್ಷ ಬದುಕುತ್ತವೆ. ಇವುಗಳು ಅಡಿಕೆ ಮರದ ಬೇರನ್ನು ತಿನ್ನುವುದರಿಂದ ಮರವು ನಿಧಾನವಾಗಿ ಸಾಯುತ್ತದೆ. ಇವುಗಳ ಸಂಖ್ಯೆ ಜಾಸ್ತಿಯಾದರೆ ಎಕರೆಗಟ್ಟಲೆ ತೋಟವೇ ನಾಶವಾಗುತ್ತದೆ.

ನಿಯಂತ್ರಣ:

ಬೇರು ಹುಳವನ್ನು ನಿಯಂತ್ರಿಸಲು ಅದರ ಜೀವನ ಚಕ್ರ (life cycle) ನ್ನು ಕಲಿಯಬೇಕು. ದುಂಬಿಯ ಹುಳಗಳು ಮಣ್ಣಿನ ಅಡಿಯಲ್ಲಿ ವಾಸವಾಗಿರುತ್ತವೆ. ಮೇ-ಜೂನ್ ತಿಂಗಳಲ್ಲಿ ಮಳೆ ಬಂದಮೇಲೆ ಹೊರಗೆ ಬರುತ್ತವೆ. ನಂತರ ಸಂತಾನೋತ್ಪತ್ತಿ ಮಾಡುತ್ತವೆ. ಮೊಟ್ಟೆ ಇಟ್ಟು ಒಂದು ತಿಂಗಳ ನಂತರ ಹುಳಗಳು ಹೊರಗೆ ಬರುತ್ತವೆ. ಇವುಗಳ ಬೆಳವಣಿಗೆ (development) ಮೂರು ಹಂತಗಳಲ್ಲಿ ನಡೆಯುತ್ತದೆ. ಪ್ರತಿಯೊಂದು ಹಂತದಿಂದ ಇನ್ನೊಂದು ಹಂತಕ್ಕೆ ಹೋಗುವಾಗ ಪೊರೆ ಕಳಚಿಕೊಳ್ಳುತ್ತವೆ. ಒಂದನೇ ಹಂತದಿಂದ ಎರಡನೇ ಹಂತಕ್ಕೆ ಹೋಗಲು ಸುಮಾರು ಒಂದು ತಿಂಗಳು ಸಮಯ ಬೇಕಾಗುತ್ತದೆ. ಈ ಹಂತದಲ್ಲಿ ಹುಳಗಳು ಅಗತ್ಯಕ್ಕಿಂತ ಹೆಚ್ಚಾಗಿ ಆಹಾರ ಸೇವಿಸುತ್ತವೆ. ಆದುದರಿಂದ ನಿರ್ವಹಣೆಯನ್ನು ಮೊದಲ ಹಂತದಲ್ಲಿ ಮಾಡಲು ಸುಲಭವಾಗುತ್ತದೆ. ಎರಡನೇ ಹಂತದಲ್ಲಿ ಅದು ಇನ್ನೂ ಭೂಮಿಯ ಆಳಕ್ಕೆ ಹೋಗುತ್ತದೆ ಮತ್ತು ಮೂರನೇ ಹಂತದಲ್ಲಿ ಮತ್ತೂ ಆಳಕ್ಕೆ ಹೋಗುತ್ತದೆ. ಸುಮಾರು 5 ಅಡಿ ಆಳದಲ್ಲಿಯೂ ಇರುತ್ತದೆ. ರೂಪಾಂತರ ಗೊಂಡು ಎರಡನೆಯ ಹಂತದಲ್ಲಿ ಆಹಾರ ಇಲ್ಲದಾಗ ಉಪವಾಸ ಇದ್ದು ಕೊಬ್ಬನ್ನು ಕರಗಿಸಿ ಕೊಳ್ಳುತ್ತವೆ. ಹಾಗಾಗಿ ಕೆಲವೊಮ್ಮೆ ವಿಷ ಹಾಕಿದರೂ ಸಾಯುವುದಿಲ್ಲ. ಇನ್ನೂ ಕೆಲವು ಎರಡು ವರ್ಷ ಬದುಕುತ್ತವೆ. ಬೇರು ಹುಳಗಳ ಸಮಸ್ಯೆ ಮರಳು ಮಿಶ್ರಿತ ಮಣ್ಣಿನಲ್ಲಿ ಹಾಗೂ ಗದ್ದೆಯ ಮಣ್ಣಿನಲ್ಲಿ ಹೆಚ್ಚಾಗಿರುತ್ತದೆ. ಮುರ ಅಥವಾ ಕಲ್ಲು ಮಿಶ್ರಿತ ಮಣ್ಣಿನಲ್ಲಿ ಹುಳಗಳ ಬಾಧೆ ಕಡಿಮೆ. ಈ ಹುಳಗಳು ಮಣ್ಣಿನ ಜಲ ಮಟ್ಟದಿಂದ ಮೇಲೆ ಇರುತ್ತವೆ.

ಗಮನಿಸಬೇಕಾದ ಅಂಶಗಳು:

 1. ಬೇರುಹುಳದ ದಾಳಿಗೆ ತುತ್ತಾದಲ್ಲಿ ಅಡಿಕೆ ಮರಗಳ ಶಿರಭಾಗ ಸಪುರವಾಗಿ, ಎಲೆಗಳ ಸಂಖ್ಯೆ ಕಡಿಮೆಯಾಗುತ್ತಾ, ಎಲೆಗಳು ಹಳದಿಯಾಗಿ ಕೊನೆಗೆ ಶಿರವೇ ಕಳಚಿ ಬೀಳುವುದು. ಆರೋಗ್ಯವಂತ ಮರಗಳಲ್ಲಿ ಎಂಟರಿಂದ ಹತ್ತರ ತನಕ ಎಲೆಗಳು ಇರುತ್ತವೆ. ಎಲೆಗಳು ಕಡಿಮೆಯಾಗಿ, ಸ್ವಲ್ಪ ಮಟ್ಟಿಗೆ ಹಳದಿಯಾಗಿದ್ದರೆ, ಶಿರ ಭಾಗ ಸಣಕಲಾಗುತ್ತಾ, ಹೂಗೊಂಚಲಿನಲ್ಲಿ ಕಾಯಿಗಳು ಉದುರುತ್ತದೆಯಾದರೆ ಅಗೆದು ಮಣ್ಣನ್ನು ಪರೀಕ್ಷಿಸಿದರೆ ಹುಳಗಳು ಕಾಣಸಿಗುತ್ತವೆ.
 2. ಅಡಿಕೆ ಮರಗಳ ಬುಡವನ್ನು ಸಂಜೆ ಹೊತ್ತಿನಲ್ಲಿ ಸುಮಾರು 1/2 ದಿಂದ 3/4 ಅಡಿ ತನಕ ಅಗೆದು ನೋಡಿದರೆ ಬುಡದಲ್ಲಿ ಹುಳ ಕಾಣಸಿಗುತ್ತದೆ.
 3. ಸಾಮಾನ್ಯವಾಗಿ ಸಪ್ಟೆಂಬರ್ ತಿಂಗಳಿನಿಂದ ನವೆಂಬರ್ ತಿಂಗಳ ತನಕ ಹುಳುಗಳು ಕಾಣಸಿಕ್ಕರೆ, ಮೇ ತಿಂಗಳಿನಿಂದ ಜೂನ್ ಜುಲಾಯಿ ತನಕ ದುಂಬಿಗಳು ಕಾಣಸಿಗುತ್ತವೆ.
 4. ಬೇರು ಹುಳಗಳು ನಿರಂತರವಾಗಿ ಸಸಿಯ, ಮರದ ಎಳೆ ಬೇರನ್ನು ತಿನ್ನುತ್ತಾ ಬದುಕುತ್ತದೆ. ಇದರಿಂದಾಗಿ ಮರ ಸಾಯುತ್ತದೆ.
 5. ಎಳೆಯ ಸಸಿಗಳಲ್ಲಿ ಮೂರು ವರ್ಷದ ತನಕ ಇದನ್ನು ಹೊರನೋಟಕ್ಕೆ ಗುರುತಿಸುವುದು ಕಷ್ಟವಾಗುತ್ತದೆ.
 6. ನೀರು ಕೆಳಗೆ ಹೋದಂತೇ ಹುಳಗಳು ಕೋಶಾವಸ್ಥೆಗೆ ಹೋಗುವ ಕಾರಣ ನಂತರ ಕಾಣಲು ಸಿಗುವುದು ಅಪರೂಪ. ಮೇ-ಜೂನ್ ತಿಂಗಳಿಗೆ ಒಂದು ಮಳೆ ಬಿದ್ದ ತಕ್ಷಣ, ಅವು ಕೋಶಾವಸ್ಥೆ ಬಿಟ್ಟು ಪ್ರೌಢ ಕೀಟಗಳಾಗುತ್ತವೆ. ಆ ಸಮಯದಲ್ಲಿ ದುಂಬಿಯಾಗಿ ಹೊರಗೆ ಹಾರಲಾರಂಭಿಸುತ್ತವೆ.

ಒಂದು ಹಂತದಿಂದ ಇನ್ನೊಂದು ಹಂತಕ್ಕೆ ಬದಲಾವಣೆ

ಮೂರರಿಂದ ನಾಲ್ಕು ವಿಧದಲ್ಲಿ ಬೇರುಗಳ ನಿರ್ವಹಣೆ

 1. ಕೀಟನಾಶಕದ ಮೂಲಕ: Imidacloprid ಅಥವಾ chlorpyrifos ನ್ನು ಮಣ್ಣಿಗೆ ಸಿಂಪಡಣೆ ಮಾಡುವುದರಿಂದ ತಕ್ಕಮಟ್ಟಿಗೆ ನಿರ್ವಹಣೆ ಮಾಡಬಹುದು. ತೋಟದ ತಟ್ಟಿನಲ್ಲಿರುವ ಮತ್ತು ಮರದ ಬುಡದಲ್ಲಿರುವ ಎಲ್ಲಾ ಕಸಕಡ್ಡಿಗಳನ್ನು ತೆಗೆದು ಸಿಂಪಡಣೆ ಮಾಡಬೇಕು. ನಂತರ ಪುನಹ ಬುಡಕ್ಕೆ ಗೊಬ್ಬರ ಹಾಕಬಹುದು. ಇಮಿಡಾಕ್ಲೋಪ್ರಿಡ್ ಕಾಲು ಲೀ ಹಾಗು ಫಿಪ್ರೋನಿಲ್ ಅರ್ಧ ಲೀ ದ್ರಾವಣ ಒಂದು ಎಕ್ರೆಗೆ ಬೇಕಾಗುವಷ್ಟು ಮಾಡಿ ಸಿಂಪಡಿಸುವುದು ಉತ್ತಮ.
 2. ಅಗತೆ ವಿಧಾನ: ಇಡೀ ತೋಟವನ್ನು ಅಗತೆ ಮಾಡಿ ಬೇರುಹುಳಗಳನ್ನು ಹಿಡಿದು ನಾಶಪಡಿಸಬೇಕು. ಇದು ಶ್ರಮದಾಯಕವಾದರೂ ಒಳ್ಳೆಯ ವಿಧಾನ. ಇದನ್ನು ನಿರಂತರ 2-3 ವರ್ಷ ಮಾಡಬೇಕು.
 3. ದುಂಬಿಯನ್ನು ಹಿಡಿಯುವುದು: ಮೇ ಅಥವಾ ಜೂನ್ ತಿಂಗಳಲ್ಲಿ ಮಣ್ಣಿನಿಂದ ಹೊರಗೆ ಹಾರುವ ದುಂಬಿ ಗಳನ್ನು ಹಿಡಿದು ನಾಶಪಡಿಸುವುದು.
 4. ಬಯೋ ಏಜಂಟ್ ಗಳ ಬಳಕೆ. ಅಂದರೆ ಎಂಟೋಮೋ ಪ್ಯಾಥೋಜೆನಿಕ್ ನೆಮಟೋಡುಗಳ ಬಳಕೆ.

ಶ್ರೀ ರಮೇಶ್ ದೇಲಂಪಾಡಿಯವರು ಮಾಡಿದ ಪ್ರಯೋಗ ಹೀಗಿದೆ: ಒಂದು ಪ್ಲಾಸ್ಟಿಕ್ ಬುಟ್ಟಿಯಲ್ಲಿ ತೋಟದ ಮಣ್ಣನ್ನು ತೆಗೆದುಕೊಂಡು ಅದಕ್ಕೆ 20 ಬೇರು ಹುಳಗಳನ್ನು ಬಿಟ್ಟು ನಂತರ ಅದಕ್ಕೆ ನೆಮಟೋಡುಗಳನ್ನು ಸೇರಿಸಿದರು. ಎರಡನೇ ದಿನದಿಂದ ಹುಳಗಳು ಸಾಯಲು ಶುರುವಾದವು. ಎಲ್ಲಾ ಹುಳಗಳು ಸಾಯಲು ಬಹಳ ದಿನಗಳು ಹಿಡಿದರೂ ನೆಮಟೊಡುಗಳು ಬಹಳ ಒಳ್ಳೆಯ ನಿಯಂತ್ರಕಗಳು ಎಂದು ಕಂಡುಕೊಂಡರು.

 1. ಈಗ ಮಾರುಕಟ್ಟೆಯಲ್ಲಿ ಬಯೋ ಏಜಂಟಗಳ ಕ್ಯಾಪ್ಸೂಲ್ ಗಳು ಸಿಗುತ್ತವೆ. ಒಂದು ಗಿಡದ ಬುಡಕ್ಕೆ 4 ಕ್ಯಾಪ್ಸೂಲ್ ಹಾಕಿದರೆ ನಿಯಂತ್ರಣವಾಗುತ್ತದೆ ಎನ್ನುವ ಅಭಿಪ್ರಾಯ ಡಾ| ಶ್ರೀಕೃಷ್ಣ ಭಟ್ ವಿಜ್ಞಾನಿ, ಐ ಸಿ ಆರ್ ಐ ಸಕಲೇಶಪುರ ಇವರು ತಿಳಿಸಿದರು. ಮೆಟಾರೈಜಿಯಂ ಅನಯಿಸೋಪಿಲಿಯೇ ಎನ್ನುವ ಸಾವಯವ ಶಿಲೀಂಧ್ರ ಕೀಟನಾಶಕ ಕೂಡ ಕಹಿಬೇವಿನ ಹಿಂಡಿಯಲ್ಲಿ ಬೆರಸಿ ಬಳಕೆ ಮಾಡುತ್ತಾರೆ. ಹೆಚ್ಚಾಗಿ ಇದನ್ನು ಕಬ್ಬಿನ ಬೆಳೆಯಲ್ಲಿ‌ ಬಳಸುತ್ತಾರೆ.
 2. ಇಡೀ ತೋಟಕ್ಕೆ ಪ್ಲಾಸ್ಟಿಕ್ ಮಲ್ಚಿಂಗ್ ಮಾಡಿಯೂ ಬೇರು ಹುಳಗಳ ಹತೋಟಿ ಮಾಡಬಹುದು. ಇದು ದುಂಬಿಗಳು ಮಣ್ಣಿನಿಂದ ಮೇಲಕ್ಕೆ ಹಾರದಂತೆ ತಡೆಯುತ್ತದೆ. ಆದರೆ ಪ್ಲಾಸ್ಟಿಕ್ಕಿನ ಒಳಗೆ ನೀರು ಇಳಿಯುವುದಿಲ್ಲ ಮತ್ತು ಇದನ್ನು ತೆಗೆದ ಮೇಲೆ ನಿರ್ವಹಣೆಯು (disposal) ಬಹಳ ಕಷ್ಟ. ಗದ್ದೆ ಮಣ್ಣು ಅಥವಾ ಮರಳು ಮಣ್ಣಿನ ತೋಟವಾದರೆ ಚೂಪಾದ ಹರಳುಗಳುಳ್ಳ ಮುರ ಮಣ್ಣನ್ನು ಇಡೀ ತೋಟಕ್ಕೆ ಹಾಕುವುದರಿಂದ ನಿಯಂತ್ರಣ ಮಾಡಬಹುದೆಂಬ ಅಭಿಪ್ರಾಯವೂ ಇದೆ.
 3. ಹುಳದ ದುಂಬಿಗಳು ಹಾರಡಿ ಮೊಟ್ಟೆ ಇಡುವುದರಿಂದ, ವ್ಯಾಪಕವಾಗಿ ಒಂದು ಪ್ರದೇಶದ ಕೃಷಿಕರ ಪ್ರಯತ್ನ ಇವುಗಳ ಹತೋಟಿಗೆ ನಿರಂತರ ಎರಡು-ಮೂರು ವರ್ಷಗಳ ಕಾಲ ಸಂಯೋಜಿತವಾಗಿಯೂ ಸುಯೋಜಿತವಾಗಿಯೂ ನಡೆಸಬೇಕು.

  ಈ ಸಂದರ್ಭದಲ್ಲಿ ಶ್ರೀ ರಮೇಶ್ ದೇಲಂಪಾಡಿಯವರು, ಡಾ| ಎ ಆರ್ ವಿ ಕುಮಾರ್ ಕೀಟಶಾಸ್ತ್ರಜ್ಞರು, ಜಿಕೆವಿಕೆ ಬೆಂಗಳೂರು, ಡಾ| ಜೋಷಿ, ಕೀಟಶಾಸ್ತ್ರಜ್ಞರು, ಏನ್ ಬಿ ಐ ಎ ಆರ್ ಬೆಂಗಳೂರು ಹಾಗೂ ಡಾ। ಘೋಶ್, ಕೀಟಶಾಸ್ತ್ರಜ್ಞರು, ಪೆಸ್ಟ್ ಕಂಟ್ರೋಲ್ ಸಂಸ್ಥೆ ಇವರ ಮಾರ್ಗದರ್ಶನವನ್ನು ಸ್ಮರಿಸಿಕೊಂಡರು.

L. coneophora grub

Leucopholis burmustry and L. coneophora

ಬಸವನ ಹುಳ

ಬಸವನಹುಳ ಐದರಿಂದ ಹತ್ತು ವರ್ಷ ಬದುಕುತ್ತದೆ. ಹಳದಿಯ ಲೋಳೆ ಸೂಸುವ ಬಸವನಹುಳ ಹಾಗು ಬೆಳ್ಳಿಯ ಹೊಳಪಿನ ಲೋಳೆ ಸೂಸುವ ಶಂಖಚಿಪ್ಪು ಹುಳಗಳು ಬಾಧಿಸುವುದು ಕಂಡುಬರುತ್ತದೆ. ಇದು ಎಲೆಗಳ ಭಾಗವನ್ನು, ಕಳಿತ ಭಾಗವನ್ನು ತಿನ್ನುತ್ತದೆ. ಹಿಂಗಾರದ ಬುಡವನ್ನು ತಿಂದು ತೂತು ಕೊರೆಯುತ್ತದೆ. ಈ ತೂತಿನ ಮೂಲಕ ಬೇರೆ ಹುಳಗಳು ಒಳಗೆ ಹೋಗಲು ಅನುಕೂಲಮಾಡಿಕೊಡುತ್ತದೆ. ಕೊಳೆರೋಗದ ಶಿಲೀಂಧ್ರವಾದ ಫೈಟೋಪ್ಹ್ತೊರಾ ದ ಪ್ರಸರಣ ವಾಹಕವಾಗಿಯೂ ಕೆಲಸ ಮಾಡುತ್ತದೆ.

ನಿಯಂತ್ರಣ:
ಬಸವನಹುಳು ಮರಕ್ಕೆ ಏರದಂತೆ ಕಾಂಡಕ್ಕೆ ಸುಣ್ಣ ಮತ್ತು ಮೈಲುತುತ್ತ ಪೇಸ್ಟನ್ನು ಸುಮಾರು ಒಂದೂವರೆ ಅಡಿ ಎತ್ತರಕ್ಕೆ ಬಳಿಯಬಹುದು. ಇನ್ನೊಂದು ವಿಧಾನ ಎಂದರೆ SnailKill (ಮೆಟಾಲ್ಡಿಹೈಡ್) ಎಂಬ ಚಕ್ಕುಲಿ ಆಕಾರದ cake ಮಾರ್ಕೆಟ್ ನಲ್ಲಿ ಲಭ್ಯವಿದೆ. ಅದನ್ನು ಮರದ ಬುಡಕ್ಕೆ ಹಾಕಿದರೆ ಅದರ ವಾಸನೆಗೆ ಬಸವನ ಹುಳುಗಳು ಆಕರ್ಷಿತವಾಗಿ ಬಂದು ತಿಂದು ಸಾಯುತ್ತವೆ. ಆದರೆ ಇದನ್ನು ನಾಯಿ, ಬೆಕ್ಕು ಅಥವಾ ಇನ್ನಿತರ ಪ್ರಾಣಿಗಳು ತಿನ್ನದಂತೆ ಎಚ್ಚರವಹಿಸಬೇಕು. ಇದನ್ನು ರಾತ್ರಿ ಮಾತ್ರ ತೋಟದಲ್ಲಿ ಚಿಕ್ಕ ಚೀಲದಲ್ಲಿ ಆಕರ್ಷಕ ಎಲೆಗಳ ಜೊತೆ ಬೈಟ್ ಆಗಿ ಇಟ್ಟು ಮುಂಜಾನೆ ಸಂಗ್ರಹಿಸಿಯೂ ಕೊಲ್ಲಬಹುದು.

Disclaimer: ಕೀಟನಾಶಕಗಳ ಬಳಕೆಯಿಂದ ಇತರ ಸಂಕೀರ್ಣ ಅಡ್ಡ ಪರಿಣಾಮಗಳಿರುವುದರಿಂದಲೂ ಪರಿಸರ ಸಂರಕ್ಷಣೆಗೆ ಸರಕಾರೀ ನಿಯಮಗಳು ಸ್ಥಳೀಯ ಹಾಗು ಪ್ರಾದೇಶಿಕವಾಗಿ ವಿಭಿನ್ನವಾದ್ದರಿಂದಲೂ ಈ ಜಾಲತಾಣ ಯಾವುದೇ ಕೀಟನಾಶಕಗಳ ಶಿಫಾರಸು ಮಾಡುವುದಿಲ್ಲ. ಕೀಟನಾಶಕಗಳು ಜೇನುನೊಣ ಹಾಗು ಸಾಕುಪ್ರಾಣಿಗಳಿಗೆ ಹಾನಿಕಾರವಾದ್ದರಿಂದ ಮಿತವಾಗಿ ಮತ್ತು ಜಾಣ್ಮೆಯಿಂದ ಉಪಯೋಗಿಸಿ. ದಯವಿಟ್ಟು ಕೃಷಿ ತಜ್ಞರ ಸಲಹೆಯಂತೆಯೇ ಇವುಗಳ ಉಪಯೋಗ ಮಾಡಿರಿ.

ವರದಿ: ಗುರುರಾಜ ರಾವ್ ಹಾಗು ಮುರಳಿಕೃಷ್ಣ
ಫೋಟೋ: ರಮೇಶ್ ದೇಲಂಪಾಡಿ

Leave a Comment

Your email address will not be published. Required fields are marked *

Scroll to Top