ಪಯಸ್ವಿನಿ.ಕಾಂ ನಡೆಸಿಕೊಟ್ಟ 14 ನವೆಂಬರ್ 2021 ರ ಕ್ಲಬ್ ಹೌಸ್ ಚರ್ಚಾ ಕಾರ್ಯಕ್ರಮ ಉತ್ತಮವಾಗಿ ಮೂಡಿಬಂತು. ಅಡಿಕೆಯ ಹಳದಿ ಎಲೆ ರೋಗದ ಬಗೆಗಿನ ಈ ಕಾರ್ಯಕ್ರಮದಲ್ಲಿ ಡಾ.ಚೌಡಪ್ಪ, ಉಪ ಕುಲಪತಿ ಬೆಸ್ಟ್ IU, ಅನಂತಪುರ, ಆಂಧ್ರ ಪ್ರದೇಶ, ಇವರು ಅಧ್ಯಕ್ಷತೆ ವಹಿಸಿದ್ದರು.
ಡಾ ಚರಿತ ಅಡ್ಕಾರು, ಅಡ್ಜಂಕ್ಟ್ ಪ್ರೊಫೆಸರ್, ಕೆನಡಾ ಇವರು ಈಗ ನಡೆಯುತ್ತಿರುವ ಹಳದಿ ಎಲೆ ರೋಗ ನಿಯಂತ್ರಣಾ ಕಾರ್ಯಕ್ರಮದಲ್ಲಿ ಹಲವು ಸಂದೇಹಗಳನ್ನು ಮುಂದೊಡ್ಡಿದರು. ಪರಿಣಾಮವೆಂದರೆ ಈಗ ನಡೆಯುತ್ತಿರುವ ನಿಯಂತ್ರಣಾ ಕ್ರಮದೊಂದಿಗೆ ಚರಿತ್ ಅಡ್ಕಾರುರವರು ಸೂಚಿಸಿದ ಇನ್ನೊಂದು ಸಂಶೋಧನಾ ವಿಧಾನವನ್ನೂ ಕೈಗೆತ್ತಿಕೊಳ್ಳುವ ಮತ್ತು ಅದಕ್ಕಾಗಿ ಅಡಿಕೆ ಮಹಾಮಂಡಲದಿಂದ ಹಣಕಾಸು ವ್ಯವಸ್ಥೆಯನ್ನೂ ಮಾಡಿಸಿಕೊಡುವ ಭರವಸೆಯನ್ನು ಡಾ.ಚೌಡಪ್ಪನವರು ನೀಡಿದರು. ಆ ಪ್ರಯತ್ನ ಚರಿತ್ ಅಡ್ಕಾರುರವರೇ ಸಂಶೋಧನೆಯನ್ನು ನಿರ್ವಹಿಸಬೇಕು ಅಂತ ಅವರು ಅಭಿಪ್ರಾಯ ಪಟ್ಟರು.
ಹಳದಿ ಎಲೆ ರೋಗ ಹೆಚ್ಚು ಮಳೆ ಬೀಳುವ ಪ್ರದೇಶದಲ್ಲಷ್ಟೇ ಇರುವುದನ್ನು ಗಮನಿಸಬೇಕೆಂದು ಚೌಡಪ್ಪನವರು ಹೇಳಿದರು.ಆ ಕಾರಣಕ್ಕೆ ಮಳೆಗಾಲದಲ್ಲಿ ಮಣ್ಣಿನ ತೇವಾಂಶವನ್ನು ಕನಿಷ್ಟ ಮಟ್ಟಕ್ಕಿಳಿಸಲು ಪ್ಲಾಸ್ಟಿಕ್ ಮಲ್ಚಿಂಗ್ ಮಾಡಿದರೆ ಹಳದಿ ಎಲೆ ರೋಗ ನಿಯಂತ್ರಣಕ್ಕೆ ಬಂದೀತು ಅಂತ ಹೇಳಿದರು. ಡಾ.ಭವಿಷ್ಯರು ಪ್ರತಿಕ್ರಿಯಿಸಿ ರೋಗ ಆರಂಭದ ಹಂತದಲ್ಲಿ ಇರುವಾಗ ಪ್ಲಾಸ್ಟಿಕ್ ಮಲ್ಚಿಂಗ್ ರೋಗದ ಹತೋಟಿಗೆ ನೆರವಾಗುತ್ತದೆ, ನಂತರದ ಹಂತದಲ್ಲಿ ಅದು ಪ್ರಯೋಜನವಾಗುವುದಿಲ್ಲ. ಜೊತೆಗೆ ಇದು ರೋಗವನ್ನು ಗುಣ ಪಡಿಸುವುದಿಲ್ಲ, ಬದಲಾಗಿ ರೋಗದ ಬೆಳವಣಿಗೆಗೆ ತಡೆಯೊಡ್ಡುವುದು ಮಾತ್ರ ಅಂದರು. ಡಾ. ಅಂಕೇ ಗೌಡರು ಪ್ರತಿಕ್ರಿಯಿಸಿ ಅವರು ಭೇಟಿಕೊಟ್ಟ ಹಲವು ತೋಟಗಳಲ್ಲಿ ಪ್ಲಾಸ್ಟಿಕ್ ಮಲ್ಚಿಂಗಿನಿಂದಾಗಿ ಅಡಿಕೆಯ ಹಳದಿ ಎಲೆ ರೋಗದ ಜೊತೆ ಜೊತೆಗೆ ಕಾಳು ಮೆಣಸಿನ ಹಳದಿ ರೋಗವೂ ಹತೋಟಿಗೆ ಬಂದಿರುವುದನ್ನು ಗಮನಿಸಿರುವುದಾಗಿ ಹೇಳಿದರು. ಭಾಗವಹಿಸಿದ್ದ ಇನ್ನೋರ್ವ ವಿಜ್ಞಾನಿ ಪ್ರತಿಕ್ರಿಯಿಸಿ ತುಮಕೂರು ಭಾಗದಲ್ಲೂ ಅಡಿಕೆಯ ಹಳದಿ ಎಲೆ ರೋಗ ಉತ್ತಮ ಕೃಷಿ ವಿಧಾನದಿಂದ ಹತೋಟಿಗೆ ಬಂದಿದೆ ಎಂಬ ಆತಂಕಕಾರಿ ಮಾಹಿತಿ ನೀಡಿದರು. ಈ ತನಕ ಅಧಿಕೃತವಾಗಿ ತುಮಕೂರು ಭಾಗದಲ್ಲಿ ಅಡಿಕೆಗೆ ಹಳದಿ ಎಲೆ ರೋಗ ಬಂದ ವರದಿ ಇಲ್ಲ. ಆದರೆ ಪ್ರಸಕ್ತ ನಂಬಿಕೆಗೆ ವಿರುಧ್ಧವಾಗಿ ತುಮಕೂರು ಭಾಗದಲ್ಲೂ ಅಡಿಕೆಯ ಹಳದಿ ಎಲೆ ರೋಗ ಇದೆಯೇ ಎಂಬ ಸಂದೇಹ ಹುಟ್ಟುವಲ್ಲಿ ಅವರ ಹೇಳಿಕೆ ಕಾರಣವಾಯ್ತು. ಅಕಸ್ಮಾತ್ ತುಮಕೂರು ಭಾಗದಲ್ಲಿ ಅಡಿಕೆಯ ಹಳದಿ ಎಲೆ ರೋಗ ಇರುವುದು ನಿಜವೇ ಆಗಿದ್ದಲ್ಲಿ ಈ ರೋಗಕ್ಕೂ ಮಣ್ಣಿನ ತೇವಾಂಶಕ್ಕೂ ಸಂಬಂಧ ಕಲ್ಪಿಸುವ ವಾದ ಕುಸಿದು ಬೀಳುತ್ತದೆ.
ಡಾ.ಚೌಡಪ್ಪನವರ ಪ್ರಕಾರ ಮಣ್ಣಿನ ತೇವಾಂಶವನ್ನು ನಿಯಂತ್ರಿಸುವುದು, ಬೇರಿನ ಬೆಳವಣಿಗೆಯನ್ಬು ಪ್ರೋತ್ಸಾಹಿಸುವುದು ಮತ್ತು ಸೂಕ್ಷ್ಮ ಪೋಶಕಾಂಶಗಳ ಪೂರೈಕೆ ಸಮರ್ಪಕವಾಗಿ ನಿರ್ವಹಿಸುವುದು ಅಡಿಕೆಯ ಹಳದಿ ಎಲೆ ರೋಗವನ್ಬು ನಿಯಂತ್ರಿಸ ಬೇಕು.(ಗಮನಿಸಿ — ನಿಯಂತ್ರಣ ಅಂದರೆ ಗುಣಪಡಿಸುವುದು ಅಂತ ಅರ್ಥ ಅಲ್ಲ).
ಹಳದಿ ಎಲೆ ರೋಗ ಪೀಡಿತ ಪ್ರದೇಶದ ಕೃಷಿಕರು ಪರ್ಯಾಯ ಬೆಳೆಗಳ ಬಗ್ಗೂ ಚಿಂತಿಸ ಬೇಕು. ಬಿದಿರಿನ ಬೆಳೆ ಅಡಿಕೆಯಷ್ಟೇ ಆದಾಯ ಕೊಡಬಲ್ಲದು. ಜೊತೆಗೆ ಅವಕಾಡೊ, ರಾಂಬುಟಾನ್, ಇತ್ಯಾದಿ ಬೆಳೆಗಳನ್ಬು ಕೃಷಿಕರು ಪರಿಗಣಿಸಬೇಕು ಅಂತ ಡಾ.ಚೌಡಪ್ಪನವರು ಹೇಳಿದರು.
ಹಳದಿ ಎಲೆ ರೋಗ ನಿಯಂತ್ರಣದಲ್ಲಿ ರೋಗ ನಿರೋಧಕ ಜೀನ್ ಅನ್ನು ಗುರುತಿಸುವ ಅಗತ್ಯತೆ ಬಗ್ಗೆ ಚರಿತ್ ಅಡ್ಕಾರ್ ಗಮನ ಸೆಳೆದರು. ಅದು ಸಾಧ್ಯ ಎಂಬ ಅಭಿಪ್ರಾಯ ಚೌಡಪ್ಪನವರದ್ದು ಆಗಿತ್ತು.ಅಡಿಕೆ ಗಿಡವನ್ನು ಟಿಶ್ಯೂ ಕಲ್ಚರ್ ತಂತ್ರಜ್ಞಾನದ ಮುಖಾಂತರ ಬೆಳೆಸುವ ತಂತ್ರಜ್ಞಾನವನ್ನು ಸ್ಪಿಕ್ ಕಂಪನಿಗೆ 2018ನೇ ಇಸವಿಯಲ್ಲಿ ಕೊಟ್ಟಿರುವುದಾಗಿ ತಿಳಿಸಲಾಯ್ತು.
ವರದಿ: ಶ್ರೀ ರಮೇಶ್ ದೇಲಂಪಾಡಿ, ಕೃಷಿಕರು.