ಅಡಿಕೆ ಬೆಳೆಯ ಪೋಷಣೆ ಹಾಗೂ ಹಳದಿ ಎಲೆ ರೋಗ ನಿರ್ವಹಣೆ

ತಾರೀಕು 18, ಜುಲಾಯಿ 2021: ಅಡಿಕೆ ಬೆಳೆಯ ಪೋಷಣೆ ಹಾಗೂ ಹಳದಿ ಎಲೆ ರೋಗ ನಿರ್ವಹಣೆಯ ಕುರಿತಾದ ತಜ್ಞರ ಜೊತೆಗಿನ ಕೃಷಿಕರ ಸಂವಾದ ಕ್ಲಬ್ ಹೌಸ್ ಸಾಮಾಜಿಕ ಜಾಲ ಮಾಧ್ಯಮದಲ್ಲಿ ಜರಗಿತು. ಪಯಸ್ವಿನಿ.com ವೇದಿಕೆಯಿಂದ ಈ ಸಂವಾದ ಏರ್ಪಡಿಸಲಾಗಿತ್ತು.

ಸಂಪನ್ಮೂಲ ವ್ಯಕ್ತಿಗಳು:

  1. ಡಾ| ರವಿ ಭಟ್, ಮುಖ್ಯಸ್ಥರು, ಬೆಳೆ ಉತ್ಪಾದನೆ, CPCRI, ಕಾಸರಗೋಡು.
  2. ಡಾ| ಭವಿಷ್ಯ, ವಿಜ್ಞಾನಿ, ಬೆಳೆ ಉತ್ಪಾದನೆ, CPCRI ಪ್ರಾದೇಶಿಕ ಕೇಂದ್ರ, ವಿಟ್ಲ.
  3. ಡಾ| ವಿನಾಯಕ ಹೆಗಡೆ, ಮುಖ್ಯಸ್ಥರು, ಬೆಳೆ ಸಂರಕ್ಷಣೆ, CPCRI, ಕಾಸರಗೋಡು.

ಪೋಷಕಾಂಶಗಳ ನಿರ್ವಹಣೆ

ಪೋಷಕಾಂಶದ ಪ್ರತಿಫಲ ಪಡೆಯಲು ಎರಡರಿಂದ ಮೂರು ವರ್ಷಗಳ ಕಾಲ ಬೇಕಾಗುತ್ತದೆ. ಮರದ ಬೇಕು-ಬೇಡಗಳನ್ನು ಅರ್ಥಮಾಡಿಕೊಂಡು ಸುಸ್ಥಿರ ಕೃಷಿ ಮಾಡಬೇಕು. ಕರಾವಳಿಯ ಮುರಮಣ್ಣಿನಲ್ಲಿ ಪೋಷಕಾಂಶ ಹಿಡಿದಿಟ್ಟುಕೊಳ್ಳುವ ಗುಣ ಕಡಿಮೆ. ಇದರಿಂದಾಗಿ ಮಣ್ಣಿನಲ್ಲಿ ಪೊಟ್ಯಾಶ್, ಕ್ಯಾಲ್ಸಿಯಂ ಮತ್ತು ಲಘು ಪೋಷಕಾಂಶಗಳು ಕಮ್ಮಿಯಾಗುತ್ತವೆ. ಸಾಮಾನ್ಯವಾಗಿ ಎರಡು ಕೆಜಿ ಇಳುವರಿ ಕೊಡುವ ಮರಕ್ಕೆ 280 – 28.2 – 280 ಪ್ರಮಾಣದಲ್ಲಿ NPK ಬೇಕಾಗುತ್ತದೆ. 3ಕೆಜಿ ಇಳುವರಿ ಕೊಡುವ ಮರಕ್ಕೆ 380- 37.7 – 372 ಪ್ರಮಾಣದಲ್ಲಿ ಬೇಕಾಗುತ್ತದೆ. ಸಾಮಾನ್ಯವಾಗಿ NPK 140 -100 -140 ಒಂದು ಮರಕ್ಕೆ ವರ್ಷಕ್ಕೆ ಎರಡುಬಾರಿ ಬೇಕಾಗುತ್ತದೆ. ಅಂದರೆ ಲೆಕ್ಕಾಚಾರದಲ್ಲಿ 220 ಗ್ರಾಂ ಯೂರಿಯಾ,200 ಗ್ರಾಂ ರಾಕ್ ಫೋಸ್ಫೇಟ್ ಮತ್ತು 235 ಗ್ರಾಂ ಪೊಟ್ಯಾಶ್ ಕೊಡಬೇಕಾಗುತ್ತದೆ.

ಸಂಕೀರ್ಣ ಗೊಬ್ಬರಗಳನ್ನು ಪ್ರಮಾಣದಲ್ಲಿ ಲೆಕ್ಕ ಮಾಡಿ ಹಾಕಬೇಕು.ಉದಾಹರಣೆಗೆ 15- 15- 15 ಗೊಬ್ಬರ ಕೊಡುವಾಗ ಒಂದೇ ರೀತಿಯಾಗಿ ಪ್ರತಿಸಲವೂ ಕೊಟ್ಟರೆ ರಂಜಕ ಹೆಚ್ಚಾಗುತ್ತದೆ. ರಂಜಕ ಹೆಚ್ಚಾದಾಗ ಸಮಸ್ಯೆಯಾಗುತ್ತದೆ. ಸತುವಿನ ಕೊರತೆ ಯಾಗುತ್ತದೆ. ಇದರಿಂದ ಮುಂಡು ತಿರಿ, ಚಂಡೆ ಬಾಗುವಿಕೆ ಇತ್ಯಾದಿ ಲಕ್ಷಣಗಳು ಕಾಣುತ್ತವೆ. ಸಂಕೀರ್ಣ ಪೋಷಕಾಂಶಗಳನ್ನು ಕೊಡುವಾಗ ಪೊಟ್ಯಾಶ್ ಬಗ್ಗೆ ಹೆಚ್ಚಿನ ಗಮನ ಕೊಡಬೇಕು. ಲಘು ಪೋಷಕಾಂಶಗಳಾದ ಸತು ಮತ್ತು ಬೋರಾನನ್ನು ನಿರ್ದಿಷ್ಟ ಪ್ರಮಾಣದಲ್ಲಿ ಕೊಡಬೇಕು. ಲಘು ಪೋಷಕಾಂಶಗಳು ಹೆಚ್ಚಾದರೂ ವಿಷವಾಗುತ್ತದೆ. ಲಘು ಪೋಷಕಾಂಶಗಳನ್ನು ಜಾಸ್ತಿ ಕೊಟ್ಟರೆ ಪೊಟ್ಯಾಶ್ ಕೊರತೆಯ ಲಕ್ಷಣಗಳು ಕಾಣುತ್ತದೆ.
ರಂಜಕ ಸರಿಯಾದ ಪ್ರಮಾಣದಲ್ಲಿ ಕೊಡದೆ ಇದ್ದರೆ ಅದು ಇತರ ಪೋಷಕಾಂಶಗಳು ಲಭ್ಯತೆಯನ್ನು ಇಲ್ಲದಂತಾಗಿಸುತ್ತದೆ. ಮಣ್ಣಿನಲ್ಲಿ ರಂಜಕ ಜಾಸ್ತಿಯಾದರೆ zinc ಸ್ಪ್ರೇ ಮಾಡಿದರೆ ಸರಿಯಾಗುತ್ತದೆ. ರಂಜಕದ ಅಂಶ ಕಮ್ಮಿಯಾದರೆ 10 ಗ್ರಾಂ ಸತು ಸಲ್ಫೇಟ್ ಕೊಡಬೇಕು. ಆಗ ಬ್ಯಾಲೆನ್ಸ್ ಆಗುತ್ತದೆ. ಬೋರೋನ್ ಕೊರತೆಯಾದರೆ ಕೊರತೆಯಾದ ಮರಕ್ಕೆ ಮಾತ್ರ 20 ಗ್ರಾಂ ಕೊಡಬೇಕು. ಎಲ್ಲಾ ಮರಗಳಿಗೆ 20 ಗ್ರಾಂ ನಂತೆ ಹಾಕಬಾರದು.

ಪೋಷಕಾಂಶಗಳನ್ನು ಕೊಡುವ ಸಮಯ

ಸೆಪ್ಟೆಂಬರ್-ಅಕ್ಟೋಬರ್ ತಿಂಗಳಲ್ಲಿ ಸಾವಯವ ಗೊಬ್ಬರ ಮತ್ತು ರಸಗೊಬ್ಬರ ಕೊಟ್ಟು ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ರಸಗೊಬ್ಬರ ಮಾತ್ರ ಕೊಡುವುದು ಒಳ್ಳೆಯದು. ಒಂದು ವರ್ಷಕ್ಕೆ ಒಂದು ಮರಕ್ಕೆ 12 ಕೆಜಿ ಹಟ್ಟಿಗೊಬ್ಬರ ಮತ್ತು 12 ಕೆಜಿ ಹಸಿರೆಲೆ ಗೊಬ್ಬರ ಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಪೊಟ್ಯಾಶನ್ನು ಹೆಚ್ಚುವರಿಯಾಗಿ ಕೊಡಬೇಕು. ತ್ಯಾಜ್ಯಗಳನ್ನು ಎರೆಹುಳ ಗೊಬ್ಬರವಾಗಿ ಪರಿವರ್ತಿಸಿ ಒಂದು ಮರಕ್ಕೆ4 ಕೆಜಿ ಕೊಟ್ಟರೆ ಬಹಳ ಒಳ್ಳೆಯದು. ಎರೆಹುಳ ಗೊಬ್ಬರ ಉತ್ಕೃಷ್ಟ. ಅಡಿಕೆ ಸಿಪ್ಪೆಗೆ ರಾಕ್ ಫೋಸ್ಪೇಟ್ ಮತ್ತು ಸುಣ್ಣ ಬೆರೆಸಿ ಕಂಪೋಸ್ಟ್ ಮಾಡಿದರೆ ಒಳ್ಳೆಯ ಗೊಬ್ಬರವಾಗುತ್ತದೆ. ಡ್ರಿಪ್ ಇರಿಗೇಷನ್ ನ ಮೂಲಕ ರಸಾವರಿ ಪದ್ಧತಿ ಯಲ್ಲಿ ಗೊಬ್ಬರವನ್ನು ಕೊಡುವುದು ಅತ್ಯಂತ ಸೂಕ್ತ ವಿಧಾನ. ಇದರ ಮೂಲಕ ಎರೆ ದ್ರವ್ಯ ಜೀವಾಮೃತ ಇತ್ಯಾದಿಗಳನ್ನೂ ಕೊಡಬಹುದು. ಡ್ರಿಪ್ ಇರಿಗೇಷನ್ ಮಾಡುವವರು ಡ್ರಿಪ್ಪರನ್ನು ಕಾಂಡದಿಂದ ಒಂದುವರೆ ಅಡಿ ಬಿಟ್ಟು ಹಾಕಬೇಕು. ಏಕೆಂದರೆ ಸೂಕ್ಷ್ಮ ಬೇರುಗಳು ದೂರದಲ್ಲಿರುತ್ತವೆ. ಡಿಸೆಂಬರ್ ನಿಂದ ಮೇ ತಿಂಗಳವರೆಗೆ ರಸಾವರಿ ಪದ್ಧತಿ ಯಲ್ಲಿ ಪ್ರತಿ 10 ದಿನಕ್ಕೊಮ್ಮೆ ಅಥವಾ 20 ದಿನಕ್ಕೊಮ್ಮೆ ಗೊಬ್ಬರ ಕೊಟ್ಟರೆ ಒಳ್ಳೆಯದು. ಶಿಫಾರಸು ಮಾಡಿದ ರಸಗೊಬ್ಬರದ ಪ್ರಮಾಣಕ್ಕಿಂತ 75 ಪರ್ಸೆಂಟ್ ಕಡಿಮೆ ಕೊಟ್ಟರೆ ಸಾಕಾಗುತ್ತದೆ. ಆದರೂ 11 ಪರ್ಸೆಂಟ್ ಇಳುವರಿ ಹೆಚ್ಚಾಗುತ್ತದೆ. 10 ದಿನದ ಅಂತರದಲ್ಲಿ ಕೊಡುವಾಗ 136 ಯೂರಿಯಾ 65 ಡಿಎಪಿ 175 ಪೊಟ್ಯಾಶ್ ಕೊಡಬೇಕು. ಹೀಗೆ 18 ಕಂತುಗಳನ್ನು ಕೊಡಬೇಕು. 20 ದಿನದ ಅಂತರದಲ್ಲಿ ಹೀಗೆ ಒಂಬತ್ತು ಕಂತನ್ನು ಕೊಡಬೇಕು. ಮಾರ್ಚ್-ಏಪ್ರಿಲ್ ತಿಂಗಳಿನಲ್ಲಿ ಪೊಟ್ಯಾಶ್ ನ ಕೊರತೆ ಕಾಡುತ್ತದೆ. ಅದೇ ಸಮಯದಲ್ಲಿ ಕಾಯಿಯ ಬೆಳವಣಿಗೆ ಜಾಸ್ತಿ ಇರುತ್ತದೆ. ಆದುದರಿಂದ ಈ ಸಮಯದಲ್ಲಿ ಪೊಟ್ಯಾಶ್ ಕಡಿಮೆಯಾಗಬಾರದು. ಡಿಸೆಂಬರ್ ನಿಂದ ಮೇ ತಿಂಗಳವರೆಗೆ ಪ್ರತಿ ಮರಕ್ಕೆ 25 ಗ್ರಾಂ ಯೂರಿಯಾ 25 ಗ್ರಾಂ ಪೊಟ್ಯಾಶ್ ತಿಂಗಳಿಗೊಮ್ಮೆ ಕೊಟ್ಟರೆ ಒಳ್ಳೆಯದು. ಮಣ್ಣು ಪರೀಕ್ಷೆ ಮಾಡಿ ಪೋಷಕಾಂಶಗಳನ್ನು ಕೊಡಬೇಕು. ಮಣ್ಣು ಪರೀಕ್ಷೆ ಮಾಡಿದಾಗ ಮಣ್ಣಿನ ರಸಸಾರ ಆರರಿಂದ ಏಳು ಇದ್ದರೆ ನ್ಯೂಟ್ರಲ್ ಎಂದರ್ಥ. ರಸಸಾರ ಕಡಿಮೆಯಾದರೆ ಕೆಲವು ಪೋಷಕಾಂಶಗಳು ಮಣ್ಣಿಗೆ ಸಿಗುವುದಿಲ್ಲ. ಆದುದರಿಂದ 6ರಿಂದ 6.5 ಒಳ್ಳೆಯದು. ಮಣ್ಣು ಪರೀಕ್ಷೆ ಮಾಡಿ ಸುಣ್ಣವನ್ನು ಕೊಡಬೇಕು.

ಪೋಷಕಾಂಶ ನಿರ್ವಹಣೆಯಲ್ಲಿ ಎರಡು ವಿಧ

  1. ಅಡಿಕೆ ಮರಕ್ಕೆ ಪೋಷಕಾಂಶ
  2. ಮಣ್ಣಿಗೆ ಪೋಷಕಾಂಶ

ಇವೆರಡನ್ನೂ ಕಂಡುಕೊಂಡು ಪೋಷಕಾಂಶಗಳ ನಿರ್ವಹಣೆಯನ್ನು ಮಾಡಬೇಕು. ಇದರ ಸರಿಯಾದ ನಿರ್ವಹಣೆ ಯಾಗಬೇಕಾದರೆ ಸಾವಯವ ಪದ್ಧತಿ ಮತ್ತು ರಾಸಾಯನಿಕ ಕೃಷಿ ಪದ್ಧತಿ ಎರಡನ್ನು ಜೊತೆಜೊತೆಗೆ ಮಾಡಬೇಕು. ಹೂವಿನ ಹುಟ್ಟಿನಿಂದ ಕಾಯಿ ಕಟ್ಟುವವರೆಗೆ ಪೋಷಕಾಂಶ ನಿರಂತರ ಕೊಡಬೇಕು. ಪೋಷಕಾಂಶಗಳನ್ನು ವಿಂಗಡಿಸಿ ಕೊಟ್ಟಷ್ಟು ಲಾಭ ಜಾಸ್ತಿ. ವಾರ್ಷಿಕ ಪೋಷಕಾಂಶವನ್ನು ಕನಿಷ್ಠಪಕ್ಷ ಎರಡು ಕಂತುಗಳಲ್ಲಿ ಕೊಡಬೇಕು. ಹೆಚ್ಚಿನ ಕಂತಿನಲ್ಲಿ ಕೊಟ್ಟರೆ ಇನ್ನೂ ಒಳ್ಳೆಯದು.

ಅಡಿಕೆಯ ಹಳದಿ ಎಲೆ ರೋಗ

Phytoplasma ಎಂಬ ರೋಗಾಣುವಿನಿಂದ ಈ ರೋಗ ಬರುವುದು. ಇದರ ಪ್ರಸರಣ Proutista moesta ಎನ್ನುವ ರಸಹೀರುವ ಕೀಟ ದಿಂದ ಆಗುತ್ತದೆ. ಮರದಲ್ಲಿ ಹಳದಿಯಾದ ಎಲೆಯಿದ್ದರೆ ಅದೆಲ್ಲವೂ ಹಳದಿರೋಗವಲ್ಲ. ಕೆಳಭಾಗದ ಗರಿಗಳಿಂದ ಹಳದಿಯಾಗಿ ಕಂಡುಬಂದರೆ ಸಾಮಾನ್ಯವಾಗಿ ಸಾರಜನಕದ ಕೊರತೆಯಿಂದ ಎಂದು ತಿಳಿಯಬೇಕು. ಕೆಳಭಾಗದ ಎಲೆಯ ತುದಿಯಿಂದ ಹಳದಿಯಾಗುತ್ತಾ ಬಂದು ಕರಟಿದಂತಾದರೆ ಪೊಟ್ಯಾಶ್ ನ ಕೊರತೆಯಿಂದ ಎಂದು ಊಹಿಸಬಹುದು. ಕುಬೆಯ ಮಧ್ಯೆ ಎಲೆಗಳಲ್ಲಿ ತುದಿಯಿಂದ ಹಳದಿ ಆಗುತ್ತಾ ಬಂದರೆ ಅದು ಮಗ್ನೆಸಿಯಂ ಕೊರತೆಯಾಗಿರಲೂಬಹುದು. ಪೊಟ್ಯಾಶ್ ನ ಕೊರತೆಯಿಂದ ಹಳದಿ ಆದರೆ ಅಂತಹ ಮರಕ್ಕೆ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಮರಗಳ ಸದೃಢತೆ ಕಡಿಮೆಯಾಗುತ್ತದೆ.
ಹಳದಿ ಎಲೆ ರೋಗಕ್ಕೆ ಇಲ್ಲಿಯತನಕ ಯಾವುದೇ ನಿರ್ದಿಷ್ಟವಾದ ಪರಿಹಾರ ಇಲ್ಲ. CPCRI ಯವರು ರೋಗ ನಿರೋಧಕ ತಳಿಯನ್ನು ಅಭಿವೃದ್ಧಿಪಡಿಸುವ ಪ್ರಯೋಗ ನಡೆಸುತ್ತಿದ್ದಾರೆ. ಸಾಧಾರಣವಾಗಿ ಸಿಂಗಾಪುರ ತಳಿ, ಮಲೇಶಿಯಾ ತಳಿ ಎಂದು ಕರೆಯುವ Areca triandra ತಳಿಯಲ್ಲಿ ರೋಗನಿರೋಧಕ ಶಕ್ತಿ ಜಾಸ್ತಿ ಇರುತ್ತದೆ ಎಂದು ಕಂಡುಕೊಂಡಿದ್ದಾರೆ. ಅದಕ್ಕೆ ಕ್ರಾಸಿಂಗ್ ಮಾಡಿ ಪಡೆಯುವ ತಳಿ CPCRI ಯಲ್ಲಿ ಪ್ರಾಯೋಗಿಕ ಹಂತದಲ್ಲಿದೆ.

ವರದಿ: ಶ್ರೀ ಗುರುರಾಜ ರಾವ್ 

Leave a Comment

Your email address will not be published. Required fields are marked *

Scroll to Top