ಅಡಿಕೆಯ ಕೃಷಿಯಲ್ಲಿ ಆಕ್ರಮಣಕಾರಿ ಕೀಟಗಳ ನಿರ್ವಹಣೆ

ಕಾಲಕ್ಕೆ ಅನುಸಾರವಾಗಿ ಹಾಗೂ ಸಮರ್ಪಕವಾಗಿ ನಿರ್ವಹಿಸುವುದರಿಂದ ಜೈವಿಕ ಹತೋಟಿ ಸಾಧ್ಯ. ಉಪಯುಕ್ತ ಕೀಟಗಳಾದ ಕಣಜದ ಹುಳುಗಳಂತಹಾ ಪ್ರಾಣಿಗಳನ್ನು ಕೊಲ್ಲುವುದರಿಂದ ಜೈವಿಕ ಸಂಕಲೆ ಏರುಪೇರಾಗಿ ಕೀಟಗಳ ಅನಿಯಂತ್ರಿತ ವೃದ್ಧಿ ಉಂಟಾಗುತ್ತದೆ. ರಾಸಾಯನಿಕ ಮಾರ್ಗ ಉಪಯೋಗಿಸುವಾಗ ಶಿಫಾರಸು ಮಾಡಲಾದ ಪ್ರಮಾಣ ಹಾಗೂ ಆವೃತ್ತಿಗಳನ್ನು ಅನುಸರಿಸುವುದು ಉತ್ತಮ.

ಅಡಿಕೆಯ ಕೃಷಿಯಲ್ಲಿ ಆಕ್ರಮಣಕಾರಿ ಕೀಟಗಳ ನಿರ್ವಹಣೆ ಈ ಕುರಿತಾದ ಕ್ಲಬ್ ಹೌಸ್ ಸಂವಾದ ಪಯಸ್ವಿನಿ ವೇದಿಕೆಯಲ್ಲಿ 12 ಸೆಪ್ಟೆಂಬರ್ 2021 ಭಾನುವಾರ ಸಂಜೆ 5 ಗಂಟೆಗೆ ಜರಗಿತು.
ನುರಿತ ಸಂಪನ್ಮೂಲ ವ್ಯಕ್ತಿಗಳು ಹಾಗೂ ಪ್ರಗತಿಪರ ಕೃಷಿಕರು ಭಾಗವಹಿಸಿದ್ದರು.

ಪ್ರಮುಖ ಸಂಪನ್ಮೂಲ ವ್ಯಕ್ತಿಗಳು:

ಡಾ. ಸುಮಂಗಲ, ಡೆಕ್ಸ್ಟ್ರೋಸ್ ಟೆಕ್ನಾಲಜೀಸ್, ಬೆಂಗಳೂರು. 09448592570
ಡಾ. ಸಚಿನ್ ಯು.ಎಸ್., ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರ 08095313797

ಆಕ್ರಮಣಕಾರಿ ಕೀಟಗಳ ಪರಿಚಯ ನೀಡಿದ ಡಾ। ಸುಮಂಗಲ ಇವರು ವಿವಿಧ ಬೆಳೆಗಳಿಗೆ ಆಕ್ರಮಿಸುವ ಹಾಗೂ ವಿವಿಧ ಕ್ಷೇತ್ರಗಳನ್ನು ಆಕ್ರಮಿಸುವ ಕೀಟಗಳ ಬಗ್ಗೆ ಪರಿಚಯ ನೀಡಿದರು. ಇವುಗಳ ನಿರ್ವಹಣೆಗೆ ರಾಸಾಯನಿಕಗಳ ಬಳಕೆಯನ್ನು ಕಡಿಮೆಮಾಡಿ ಪರಿಸರಕ್ಕೂ ಮನುಷ್ಯರಿಗೂ ಹಾನಿಕಾರಕವಲ್ಲದ ನೈಸರ್ಗಿಕ ಸ್ನೇಹಿ ಕೀಟ ನಿರ್ವಹಣಾ ರೀತಿಯನ್ನು ಅನುಸರಿಸಲು ತಿಳಿಸಿದರು. ರಸ ಹೀರುವ ಕೀಟಗಳು ರಸ ಹೀರಿ ಗಿಡವನ್ನು ದುರ್ಬಲಗೊಳಿಸುತ್ತವೆ, ಇವುಗಳನ್ನು ರೋಗ ಹಾಗೂ ಅವುಗಳ ರೋಗಾಣುಗಳನ್ನು ಪ್ರಸರಣ ಮಾಡುವುದನ್ನು ಕಂಡುಕೊಳ್ಳಲಾಗಿದೆ. ಸಕಾಲಿಕವಾಗಿ ಇವುಗಳ ನಿಗ್ರಹಕ್ಕೆ ಸಸ್ಯಜನ್ಯ ವಾದ ಎಣ್ಣೆ ಹಾಗೂ ಸಸ್ಯ ಸಾರಗಳನ್ನು ಬಳಸಿ ಎಂದು ತಿಳಿಸಿದರು. ಅವರ ಸಂಸ್ಥೆಯಾದ ಡೆಕ್ಸ್ಟ್ರೋಸ್ ಟೆಕ್ನಾಲಜೀಸ್ ಈ ರೀತಿಯ ಉತ್ಪನ್ನವನ್ನು ಮಾರುಕಟ್ಟೆಗೆ ತಂದಿರುವುದಾಗಿಯೂ ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ ರಸ ಹೀರುವ ಕೀಟಗಳ ಹತೋಟಿಗೆ ಬಳಕೆಯಾಗುತ್ತಿರುವುದನ್ನು ತಿಳಿಸಿದರು. ಅಡಿಕೆಯ ರಸ ಹೀರುವ ಕೀಟಗಳಿಗೆ ಉತ್ಪನ್ನ ಬಳಕೆ ಮಾಡಬಹುದು. ಪ್ರಯೋಗ ಮಾಡಲು ಅವರನ್ನು ಸಂಪರ್ಕಿಸಬಹುದೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಇನ್ನೋರ್ವ ಸಂಪನ್ಮೂಲ ವ್ಯಕ್ತಿ ಬ್ರಹ್ಮಾವರ  ಡಾ। ಸಚಿನ್ ವಿವಿಧ ಅಡಿಕೆಯ ಕೃಷಿಗೆ ಹಾವಳಿ ಮಾಡುವ ಕೀಟಗಳ ಬಗ್ಗೆಯೂ ಅವುಗಳ ನಿರ್ವಹಣೆಯ ಬಗ್ಗೆಯೂ ತಿಳಿಸಿಕೊಟ್ಟರು.

ಎಲೆಗೆ ಬಾಧಿಸುವ ನುಸಿ

ಅಡಿಕೆಯ ಹೊಸ ತೋಟಗಳಲ್ಲಿ ಎಲೆಯನ್ನು ಬಾಧಿಸುವ ಚಿಕ್ಕ ಚಿಕ್ಕ ಚುಕ್ಕೆಯಂತೆ ಕಂಡುಬರುವ ನುಸಿಯಿಂದ ಎಲೆ ಹಳದಿಯಾಗುವುದು, ಇದನ್ನು ಹಳದಿ ಎಲೆ ರೋಗವಾಗಿ ತಪ್ಪಾಗಿ ತಿಳಿದುಕೊಳ್ಳುವುದು ಸಾಮಾನ್ಯ ಎಂದು ತಿಳಿಸಿದರು. ಕೀಟವನ್ನು ಗುರುತಿಸಲು ಎಲೆಯನ್ನು ಸವರಿದಾಗ ಅದರಡಿ ಬದಿಯಿಂದ ಕೆಂಪುಬಣ್ಣ ಕೈಗೆ ಮೆತ್ತಿಕೊಳ್ಳುತ್ತದೆ. ಇದನ್ನು ನಿರ್ವಹಿಸಲು ಹೊಂಗೆ ಎಣ್ಣೆ ಮಿಶ್ರಿತ ಸೋಪ್ ಅಥವಾ ಬೇವಿನೆಣ್ಣೆ ಮಿಶ್ರಿತ ಸೋಪ್ ಐದರಿಂದ ಹತ್ತು ಗ್ರಾಂ ಒಂದು ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸುವುದರಿಂದ ಹತೋಟಿ ಮಾಡಬಹುದೆಂದು ತಿಳಿಸಿದರು. ಗರಿಗಳ ಕೆಳಭಾಗಕ್ಕೆ ಸಿಂಪರಣೆಯನ್ನು ಮಾಡಿದರಿಂದ ಉತ್ತಮ ಹತೋಟಿ ಲಭಿಸುವುದು.

ಸುಳಿ ತಿಗಣೆ

ಇನ್ನೊಂದು ಕೀಟ ಸುಳಿ ತಿಗಣೆ, ಪ್ರೌಢ ಹಾಗೂ ಅಪ್ಸರಾವಸ್ಥೆಯಲ್ಲಿ ಬೇಸಿಗೆಯಲ್ಲಿ ಗಿಡಕ್ಕೆ ಹಾವಳಿ ನಡೆಸಿ ಹಾವಳಿ ಮಾಡುವುದು. ಇದರ ಲಕ್ಷಣ ಗರಿ ಬಿಚ್ಚಿದಾಗ ಕಾಣುವುದು. ಆಗ ಗರಿ ಕಂದು ಬಣ್ಣಕ್ಕೆ ತಿರುಗಿ ಒಣಗಿ ಹೋಗುತ್ತದೆ. ಇದನ್ನು ಆರಂಭದಲ್ಲಿ ಬೇವಿನ ಎಣ್ಣೆ ಎಕ್ಸ್ಟ್ರಾಕ್ಟ್  ಸ್ಪ್ರೇ ಮಾಡುವ ಮೂಲಕ ಅಥವಾ ರಾಸಾಯನಿಕ ಕೀಟನಾಶಕಗಳನ್ನು ಸೂಕ್ತ ಪ್ರಮಾಣದಲ್ಲಿ ಬಳಸುವುದರಿಂದ ನಿರ್ವಹಿಸಬಹುದು ಎಂದು ತಿಳಿಸಿದರು.

ಹೊಂಬಾಳೆ ಹುಳ

ಹೊಂಬಾಳೆ ತಿನ್ನುವ ಹುಳ ಅಥವಾ ಇನ್ಫ್ಲೋರಸೆನ್ಸೆ ಕ್ಯಾಟರ್ಪಿಲ್ಲರ್ ಇದು ಹೊಂಬಾಳೆಯನ್ನು ಕೊರೆಯುವುದರಿಂದ  ಹಾನಿಯುಂಟಾಗುವುದಾಗಿ ತಿಳಿಸಿದರು. ಇದಕ್ಕೆ ಬೇವಿನ ಎಣ್ಣೆಯ ಮಿಶ್ರಣ ಸಿಂಪರಣೆ ಮಾಡುವುದರಿಂದ ಹತೋಟಿ ಮಾಡಬಹುದು.

ಬಿಳಿ ಹಿಟ್ಟು ತಿಗಣೆ

ಅಡಿಕೆ ಗಿಡಗಳಲ್ಲಿ ಎಲೆಯನ್ನು ಭಾದಿಸುವ ಬಿಳಿ ಹಿಟ್ಟು ತಿಗಣೆ ಇದರ ನಿರ್ವಹಣೆಗೆ ಬೇವಿನ ಎಣ್ಣೆ ಸೋಪ್ ಮಿಶ್ರಣ ಸಿಂಪರಣೆ ಉಪಯೋಗಿಸಬಹುದು. ಇದರಿಂದ ತಿಗಣೆಯ ಕವಚ ಹೋಗಿ ದುರ್ಬಲವಾಗುತ್ತದೆ.  ಇದರಿಂದ ಸಫಲ ನಿರ್ವಹಣೆ ಸಾಧ್ಯ.

ಪೆಂಟಾಟೋಮಿಡ್ ಬಗ್

ಅಡಿಕೆಯ ಎಳೆಯ ಅಳ್ಳಿ ಉದುರುವಿಕೆಗೆ ಪೆಂಟಾಟೋಮಿಡ್ ತಿಗಣೆ ಅಥವಾ ಬಗ್ ಹಾವಳಿಯನ್ನು ಮಾಡುತ್ತದೆ. ಇದನ್ನು ಗುರುತಿಸಲು ಸೂಜಿ ಚುಚ್ಚಿದ ರೀತಿಯನ್ನು ಕಾಣಬಹುದು. ಇದು ರಸ ಹೀರುವ ಮೂಲಕ ಅಳ್ಳಿಗಳಿಗೂ ಹಾನಿ ಮಾಡಿ ಉದುರಿ ಹೋಗಲು ಕಾರಣವಾಗುತ್ತವೆ. ಇದಕ್ಕೆ ಸೂಕ್ತ ಸಮಯದಲ್ಲಿ ಎರಡು ಮಿ.ಲೀ. ಬೇವಿನೆಣ್ಣೆ ಒಂದು ಲೀಟರ್ ನೀರಿಗೆ ಹಾಕಿ ಸಿಂಪರಣೆ ಮಾಡಿದಾಗ ನಿಯಂತ್ರಣ ಸಾಧ್ಯ.

ಶಲ್ಕ ಕೀಟಗಳು

ಶಲ್ಕ ಕೀಟಗಳು ಅಥವಾ ಸ್ಕೇಲ್ ಇನ್ಸೆಕ್ಟ್ ಗಳ ಹತೋಟಿಗೆ ಸ್ಪಿನೊಸಡ್ 0.5 ಮಿ.ಲೀ. ಒಂದು ಲೀಟರ್ ನೀರಿಗೆ ಹಾಕಿ ಬಳಸುವಂತೆ ಸೂಚಿಸಿದರು.

ವೈಟ್ ಫ್ಲೈ

ಬಿಳಿ ಸುರುಳಿ ಸುತ್ತುವ ನೊಣಗಳ ವ್ಯಾಪಕ ಪರಿಣಾಮ ತೆಂಗಿನ ಮರಗಳಿಂದ ಅಡಿಕೆ ಮರಕ್ಕೆ ಸ್ಥಳಾಂತರಗೊಂಡಿದ್ದು, ಇದು ಸ್ವಾಭಾವಿಕವಾಗಿ ಹತೋಟಿಗೆ ಬರಬಹುದು. ಇದಕ್ಕಾಗಿ ಹೆಚ್ಚಿನ ಆತಂಕ ಅಗತ್ಯವಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟರು.
ಇದು ಎಲೆಯ ಅಡಿಭಾಗದಲ್ಲಿ ಬೆಳ್ಳಗಿದ್ದು ನಂತರ ಕ್ರಮೇಣ ಅದರ ಹಿಕ್ಕೆ ಬೂಸುರಿಗೆ ಆಹ್ವಾನ ಕೊಟ್ಟು ಅಲ್ಲಿ ಕಪ್ಪು ಬಣ್ಣಕ್ಕೆ ತಿರುಗಿ, ಸೋಗೆಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ನರ್ಸರಿ ಗಿಡಗಳಿಗೆ ಬೇವಿನೆಣ್ಣೆ ಸೋಪ್ ಮಿಶ್ರಣವನ್ನು ಅಗತ್ಯ ಬಂದಲ್ಲಿ ಸಿಂಪಡಿಸಬಹುದು.

ಬಸವನಹುಳ

ಬಸವನಹುಳದ ನಿರ್ವಹಣೆಗೆ ಸಕಾಲಿಕ ಚಟುವಟಿಕೆಗಳ ಅಗತ್ಯ. ಇವು ಮಣ್ಣಿನಲ್ಲಿ ಎರಡು ವರ್ಷ ಇರುತ್ತವೆ. ಇದರ ಹತೋಟಿಗೆ ಒಂದು ಕೆಜಿ ಅಕ್ಕಿ ಧೂಳಿಗೆ 150 ಗ್ರಾಂ ಬೆಲ್ಲ 300 ಮೀ.ಲೀ. ನೀರು ಬೆರೆಸಿ 3 ದಿನ ಹಳಸಿದ ನಂತರ ಇದು ಬಸವನಹುಳವನ್ನು ಆಕರ್ಷಿಸುತ್ತದೆ ಹಾಗೂ ಅದಕ್ಕೆ ಒಂದಷ್ಟು ಕೀಟನಾಶಕ ಬೆರೆಸಿ ಬಸವನ ಹುಳ ನಿಗ್ರಹ ಮಾಡಬಹುದು.

ಕಣಜದ ಹುಳ

ಕಣಜದ ಹುಳದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರಿಂದ ಅವುಗಳ ಬಗ್ಗೆಯೂ ಒಂದಷ್ಟು ಚರ್ಚೆ ನಡೆಯಿತು. ಕಣಜದ ಹುಳಗಳು ಪರಾಗಸ್ಪರ್ಶಕ್ಕೆ ಅಗತ್ಯ ಅಷ್ಟೇ ಅಲ್ಲ ಇವು ಕೆಲವು ಕೀಟಗಳನ್ನು ಕೂಡ ಕೊಂದು ತಿನ್ನುತ್ತವೆ ಆದ್ದರಿಂದ ಇವುಗಳನ್ನು ಕೃಷಿಗೆ ಉಪಯುಕ್ತವಾಗಿದ್ದು ಇವುಗಳನ್ನು ಸಂಪೂರ್ಣವಾಗಿ ಅಳಿಸುವುದು ಸೂಕ್ತವಲ್ಲ. ಅವುಗಳನ್ನು ಗಮನಿಸಿ ಇವುಗಳಿಂದ ದೂರವಿರುವುದು ಒಳಿತು. ತೀರಾ ಕೆಳಬಾಗದಲ್ಲಿ ಇವುಗಳ ಗೂಡು ಇದ್ದಲ್ಲಿ ಅವುಗಳನ್ನು ರಾತ್ರಿಕಾಲದಲ್ಲಿ ಹೊಗೆ ಹಾಕಿ ಓಡಿಸುವುದರಿಂದ ನಿರ್ವಹಿಸಬಹುದು ಎಂದು ಅಭಿಪ್ರಾಯ ಉಂಟಾಯಿತು.

ಕಣಜದ ಹುಳಗಳು ಬೇಸಿಗೆಯಲ್ಲಿ ಗೂಡುಕಟ್ಟಿ ಅನಂತರ ಮಳೆಗಾಲ ಮುಗಿದ ತಕ್ಷಣ ಬಿಟ್ಟುಹೋಗುತ್ತವೆ. ಆದ್ದರಿಂದ ಅಡಿಕೆ ಕೊಯ್ಲಿಗೆ ಇದರಿಂದ ತೊಂದರೆ ಉಂಟಾಗುವುದಿಲ್ಲ ಎಂದು ಅಭಿಪ್ರಾಯ ಬಂತು.

ಅದೇ ರೀತಿ ಮರಗಳಲ್ಲಿ ಇರುವೆ ಕಾಟ ಜಾಸ್ತಿಯಾಗಿ ಕಡಿಯುವ ಇರುವೆಗಳು ಕಾಳುಮೆಣಸಿನ ಕೊಯಿಲಿಗೆ ತೊಂದರೆ ಉಂಟು ಮಾಡುವ ಬಗ್ಗೆ ಆತಂಕ ಪ್ರಕಟಿಸಿದಾಗ, ಅದನ್ನು ಸ್ಥಳೀಯವಾಗಿಯೇ ನಿರ್ವಹಿಸಲು ಯಾವುದಾದರೂ ಕೀಟನಾಶಕವನ್ನು ಬಳಸುವುದರಿಂದ ಸಾಧ್ಯ ಎಂಬ ಅಭಿಪ್ರಾಯ ಪಡಲಾಯಿತು.

ಬೇರು ಹುಳದ ನಿರ್ವಹಣೆಗೆ ನೆಮೆಟೋಡ್ ಬಳಕೆ ಉತ್ತಮ ಆದರೂ ಅದು ಕ್ರಮೇಣ ದುಬಾರಿಯಾಗುತ್ತಿದೆ ಎಂದು ಕೃಷಿಕರು ಅಭಿಪ್ರಾಯಪಟ್ಟರು.

ಕೃಷಿಕರೊಬ್ಬರು 1995-96ರಲ್ಲಿ ಮಾಡಿದ ಅಡಿಕೆಯ ಕಜ್ಜಿ ಕೀಟದ ನಿರ್ವಹಣೆ ಬಗ್ಗೆ ತಿಳಿಸಿ ಅದಕ್ಕಾಗಿ ಪರೋಪಜೀವಿಗಳನ್ನು ವೃದ್ಧಿಪಡಿಸಿದುದರಿಂದ ಹತೋಟಿ ಸಾಧ್ಯವಾಗಿದ್ದರ ಬಗ್ಗೆ ಮಾಹಿತಿ ನೀಡಿದರು.

ಅಡಿಕೆಯ ಬಿಳಿನೊಣದಂತೆ ಕಪ್ಪು ನೊಣ ಕೂಡ ಕೆಲವೆಡೆ ಹಿಂದಿನಿಂದಲೇ ಕಂಡು ಬರುತ್ತಿದ್ದು ಇದಕ್ಕೆ ನೈಸರ್ಗಿಕ ಹತೋಟಿ ಸಾಧ್ಯ ಇದಕ್ಕೆ ತೀವ್ರತೆ ಇಲ್ಲದ್ದರಿಂದ ಆತಂಕಪಡಬೇಕಾಗಿಲ್ಲ ಎಂದು ಸಂಪನ್ಮೂಲ ವ್ಯಕ್ತಿಗಳು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಾಕಷ್ಟು ಅಡಿಕೆ ಬೆಳೆಗಾರರು ಹಾಗೂ ಪ್ರಗತಿಪರ ಕೃಷಿಕರು ಸಂಪನ್ಮೂಲ ವ್ಯಕ್ತಿ ತಜ್ಞರು ಕೂಡ ಭಾಗವಹಿಸಿ ವಿಚಾರವಿನಿಮಯ ಸಕ್ರಿಯವಾಗಿ ನಡೆಯಿತು.

1 thought on “ಅಡಿಕೆಯ ಕೃಷಿಯಲ್ಲಿ ಆಕ್ರಮಣಕಾರಿ ಕೀಟಗಳ ನಿರ್ವಹಣೆ”

Leave a Comment

Your email address will not be published. Required fields are marked *

Scroll to Top